ಕಾವೇರಿ, ಬರ ಸಮಸ್ಯೆ ಆಲಿಸುವುದಕ್ಕೆ ಕೇಂದ್ರ ನಿರಾಸಕ್ತಿ: ಚಲುವರಾಯಸ್ವಾಮಿ
ಕರ್ನಾಟಕದ ಕಾವೇರಿ ವಿವಾದ ಮತ್ತು ಬರಗಾಲ ಸಮಸ್ಯೆ ಆಲಿಸುವುದಕ್ಕೆ ಕೇಂದ್ರ ಸರ್ಕಾರ ನಿರಾಸಕ್ತಿ ವಹಿಸಿದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಟೀಕಿಸಿದರು.
ಮಂಡ್ಯ (ಅ.08): ಕರ್ನಾಟಕದ ಕಾವೇರಿ ವಿವಾದ ಮತ್ತು ಬರಗಾಲ ಸಮಸ್ಯೆ ಆಲಿಸುವುದಕ್ಕೆ ಕೇಂದ್ರ ಸರ್ಕಾರ ನಿರಾಸಕ್ತಿ ವಹಿಸಿದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಟೀಕಿಸಿದರು. ಮಳೆ ಕೊರತೆಯಿಂದ ರಾಜ್ಯದಲ್ಲಿ ಎದುರಾಗಿರುವ ನೀರಿನ ಸಂಕಷ್ಟ ಪರಿಸ್ಥಿತಿಯ ಕುರಿತು ಕೇಂದ್ರದ ಗಮನ ಸೆಳೆಯಲು ಸರ್ವ ಪಕ್ಷಗಳ ನಿಯೋಗವನ್ನು ಪ್ರಧಾನಿ ಬಳಿಗೆ ಕರೆದೊಯ್ಯಲು ಭೇಟಿಗೆ ಸಮಯ ಕೇಳಿದ್ದೆವು. ಆದರೆ ಅವರು ನೀಡಲಿಲ್ಲ.
ಕೇಂದ್ರ ಸರ್ಕಾರ ಕನಿಷ್ಠ ನಮ್ಮ ಅಹವಾಲನ್ನು ಆಲಿಸುವುದಕ್ಕೂ ಅವಕಾಶ ನೀಡಲಿಲ್ಲ. ಹೀಗಿರುವಾಗ ನಾವು ಏನು ಮಾಡಲು ಸಾಧ್ಯ. ಈ ಹಿನ್ನೆಲೆಯಲ್ಲಿ ಕಾನೂನು ಹೋರಾಟ ಮುಂದುವರಿಸಿದ್ದೇವೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ರಾಜ್ಯದಲ್ಲಿ ಭೀಕರ ಬರಗಾಲ ಪರಿಸ್ಥಿತಿ ಇದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು, ಕಂದಾಯ, ಸಹಕಾರ, ಕೃಷಿ ಸೇರಿದಂತೆ ಬೇರೆ ಬೇರೆ ಇಲಾಖೆಗಳ ಸಚಿವರು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿ ಪರಿಹಾರ ಕೇಳಲು ಹೋದರೂ ಅವರು ನಮಗೆ ಭೇಟಿಗೆ ಅವಕಾಶವನ್ನೇ ನೀಡಲಿಲ್ಲ.
ಭ್ರಷ್ಟಾಚಾರದಲ್ಲಿ ಚಲುವರಾಯಸ್ವಾಮಿ ಎರಡನೇ ರ‍್ಯಾಂಕ್: ಮಾಜಿ ಶಾಸಕ ಸುರೇಶ್ ಗೌಡ
ನಾವು ಕೊಟ್ಟ ಮನವಿಯ ಆಧಾರದ ಮೇಲೆ ಕೇಂದ್ರ ಸರ್ಕಾರ ಮೂರು ತಂಡಗಳನ್ನು ರಾಜ್ಯಕ್ಕೆ ಕಳುಹಿಸಿದೆ. ರಾಜ್ಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿರುವ ತಂಡಗಳು ಸೋಮವಾರ ವಾಪಸ್ಸು ತೆರಳುತ್ತಾರೆ. ನಂತರ ವರದಿ ನೀಡಿದ ಬಳಿಕ ನಾವು ಪರಿಹಾರ ಕೇಳಬಹುದಷ್ಟೇ. ಎನ್‌ಡಿಆರ್‌ಎಫ್ ನಿಯಮಾವಳಿಗಳನ್ನು ಸರಳೀಕರಣಗೊಳಿಸುವಂತೆ ಕೋರಿದರೂ ಸ್ಪಂದಿಸುತ್ತಿಲ್ಲ. ಕಾವೇರಿ ಮತ್ತು ಬರಪರಿಸ್ಥಿತಿ ವಿಚಾರದಲ್ಲಿ ಜನರು, ರೈತರ ಹಿತವನ್ನು ಕಡೆಗಣಿಸಿ ಬಿಜೆಪಿ ರಾಜಕೀಯವನ್ನಷ್ಟೇ ಮಾಡುತ್ತಿದೆ ಎಂದು ದೂರಿದರು.
ಅನುಮತಿ ಕೊಟ್ಟರೆ ನಾಳೆಯೇ ಶಂಕು: ಮೇಕೆದಾಟು ವಿಚಾರದಲ್ಲಿ ಕೇಂದ್ರ ಸರ್ಕಾರ ನಾಳೆಯೇ ಅನುಮತಿ ನೀಡಿದಲ್ಲಿ ಸೋಮವಾರದಿಂದಲೇ ನಾವು ಕೆಲಸ ಪ್ರಾರಂಭಿಸುತ್ತೇವೆ. ಇದರಲ್ಲಿ ಯಾವುದೇ ಅನುಮಾನವೂ ಇಲ್ಲ ಎಂದು ಸ್ಪಷ್ಟಪಡಿಸಿದರು. ಈಗಾಗಲೇ ಮೇಕೆದಾಟು ವಿಚಾರವನ್ನು ಸುಪ್ರೀಂ ಕೋರ್ಟಿನಲ್ಲಿ ಪ್ರಸ್ತಾಪ ಮಾಡಿದ್ದೇವೆ. ನ್ಯಾಯಾಲಯ ಸಹ ಅನಗತ್ಯವಾಗಿ ಸಮುದ್ರ ಪಾಲಾಗುವ ನೀರನ್ನು ಸಂಗ್ರಹಿಸಲು ನಿಮ್ಮ ತಕರಾರು ಏಕೆ ಎಂದು ತಮಿಳುನಾಡಿಗೆ ಪ್ರಶ್ನಿಸಿದೆ. ಅವರೂ ಸಹ ಇದರಿಂದ ನಮಗೆ ತೊಂದರೆಯಾಗಲಿದೆ ಎಂದು ತಿಳಿಸಿದ್ದಾರೆ. ಹಾಗಾಗಿ ಮತ್ತೆ ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸುವಂತೆ ನ್ಯಾಯಾಲಯ ಸೂಚನೆ ನೀಡಿದೆ ಎಂದರು.
ಈ ಹಿನ್ನೆಲೆಯಲ್ಲಿ ನಾವು ಸುಪ್ರೀಂ ಕೋರ್ಟ್ ಮತ್ತು ಕಾವೇರಿ ನದಿ ನಿರ್ವಹಣಾ ಸಮಿತಿ ಮುಂದೆ ಅರ್ಜಿ ಸಲ್ಲಿಸಿ ಮೇಕೆದಾಟು ವಿಚಾರದಲ್ಲಿ ಹೋರಾಟ ಮಾಡುತ್ತೇವೆ. ಒಂದು ವೇಳೆ ಕೇಂದ್ರಸರ್ಕಾರ ಮತ್ತು ಸುಪ್ರೀಂಕೋರ್ಟ್ ಇಂದೋ ಅಥವಾ ನಾಳೆಯೋ ಮೇಕೆದಾಟು ಅಣೆಕಟ್ಟೆ ನಿರ್ಮಾಣಕ್ಕೆ ಅನುಮತಿ ನೀಡಿದ ತಕ್ಷಣದಿಂದಲೇ ಕೆಲಸ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು. ಮೇಕೆದಾಟು ಅಣೆಕಟ್ಟೆ ನಿರ್ಮಾಣಕ್ಕೆ ಅಗತ್ಯವಾದ ಸಂಪನ್ಮೂಲ ನಮ್ಮ ಬಳಿ ಇದೆ. ಅದಕ್ಕೆ ಯಾವುದೇ ರೀತಿಯಲ್ಲೂ ಹಣಕಾಸಿನ ತೊಂದೆರೆಯಾಗುವುದಿಲ್ಲ. ಅನುಮತಿ ಬೇಕಷ್ಟೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ರಾಹುಲ್‌ಗೆ ಅಧಿಕಾರದಾಸೆ ಇಲ್ಲ: ನಮ್ಮ ನಾಯಕರಾದ ರಾಹುಲ್‌ಗಾಂಧಿ ಅವರಿಗೆ ಅಧಿಕಾರದ ಆಸೆ ಇಲ್ಲ. ಇದ್ದಿದ್ದರೆ 10 ವರ್ಷಗಳ ಕಾಲ ಡಾ. ಮನ್‌ಮೋಹನ್‌ಸಿಂಗ್ ಪ್ರಧಾನಿಯಾಗುತ್ತಿರಲಿಲ್ಲ. ಬಿಜೆಪಿಯವರಂತೆ ನಾವು ನಡೆದುಕೊಳ್ಳುವುದಿಲ್ಲ. ಅಡ್ವಾಣಿ ಅವರು ದೇಶದಾದ್ಯಂತ ಸಂಚರಿಸಿ ಪಕ್ಷವನ್ನು ಸಂಘಟಿಸಿದ್ದರು. ಆದರೆ ಅವರ ಪರಿಸ್ಥಿತಿ ಈಗ ಹೇಗಿದೆ ಎಂಬುದು ತಿಳಿದಿಲ್ಲವೇ, ಕನಿಷ್ಠ ಅವರಿಗೆ ಒಂದು ಜವಾಬ್ದಾರಿಯನ್ನಾದರೂ ನೀಡಬಹುದಿತ್ತು ಎಂದರಲ್ಲದೆ, ರಾಹುಲ್ ರಾಕ್ಷಸನಲ್ಲ, ಸಜ್ಜನ ರಾಜಕಾರಣಿ ಎಂದು ಬಣ್ಣಿ,ಸಿದರು.
ರಾಹುಲ್ ಬಗ್ಗೆ ಮಾತನಾಡಿದಷ್ಟಕ್ಕೆ ಅವರು ರಾಕ್ಷಸ ಅಥವಾ ರಾಮನಾಗುವುದಿಲ್ಲ. ಮುಂದೆ ಜನ ತಕ್ಕ ಉತ್ತರ ಕೊಡುತ್ತಾರೆ. ಈವರೆವಿಗೂ ಯಾವುದೇ ರಾಜಕಾರಣಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಭಾರತ್ ಜೋಡೋ ಪಾದಯಾತ್ರೆ ಮಾಡಿಲ್ಲ. ದೇಶದ ಉದ್ದಗಲಕ್ಕೆ ಪಾದಯಾತ್ರೆ ಮಾಡಿ ಸಮಸ್ಯೆಗಳನ್ನು ಆಲಿಸುವ ಕೆಲಸಕ್ಕೆ ಮುಂದಾಗಿಲ್ಲ. ರಾಹುಲ್ ಮಾಡಿದ್ದಾರೆ ಎಂದು ಹೇಳಿದರು.
ಕಾವೇರಿ ಸಂಕಷ್ಟ ಸೂತ್ರದ ಬಗ್ಗೆ ನಿಖರ ಅಂಕಿ-ಅಂಶಗಳಿಲ್ಲ: ಮಾಜಿ ಸಿಎಂ ಬೊಮ್ಮಾಯಿ ಹೇಳಿದ್ದೇನು?
ಹೆದ್ದಾರಿ ಅಭಿವೃದ್ಧಿಗೆ 110 ಕೋಟಿ ರು.: ಮಂಡ್ಯ, ಮದ್ದೂರು, ಶ್ರೀರಂಗಪಟ್ಟಣ ನಗರದಲ್ಲಿ ಹಾದುಹೋಗುವ ಮೈಸೂರು-ಬೆಂಗಳೂರು ಹೆದ್ದಾರಿ ಅಭಿವೃದ್ಧಿಗಾಗಿ 110 ಕೋಟಿ ರು. ಅನುದಾನವನ್ನು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ತಂದಿದ್ದೇವೆ. ಶೀಘ್ರ ಕಾಮಗಾರಿ ಪ್ರಾರಂಭವಾಗಲಿದೆ ಎಂದರು. ಮಂಡ್ಯ ಜಿಲ್ಲೆಯ ಎಲ್ಲಾ ರಸ್ತೆಗಳ ಅಭಿವೃದ್ಧಿಗಾಗಿ 250ರಿಂದ 300 ಕೋಟಿ ಅನುದಾನ ಬಿಡುಗಡೆಯಾಗಲಿದೆ. ಶ್ರೀರಂಗಪಟ್ಟಣ -ಪಾಂಡವಪುರ ಸೇರಿದಂತೆ ಮೂರ್ನಾಲ್ಕು ಬೈಪಾಸ್ ರಸ್ತೆಗಳ ನಿರ್ಮಾಣ ಆಗಲಿದೆ. ಇದರೊಂದಿಗೆ ಇಡೀ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಿದ್ದೇವೆ ಎಂದು ಹೇಳಿದರು.