ಮುಖ್ಯಮಂತ್ರಿ ಬದಲಾವಣೆ: ಎಂಟಿಬಿ ನಾಗರಾಜ್ ಪ್ರತಿಕ್ರಿಯೆ
2023ರ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಸ್ಪಷ್ಟ ಬಹುಮತ ಪಡೆದು ಸರ್ಕಾರ ರಚನೆ ಮಾಡಲಿದೆ
ಹೊಸಕೋಟೆ(ಆ.12): ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಎನ್ನುವುದು ಕೇವಲ ಊಹಾಪೋಹ, ಕಾಂಗ್ರೆಸ್‌ನವರು ವಿನಾಕಾರಣ ಜನರ ದಿಕ್ಕುತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್ ತಿಳಿಸಿದರು. ನಂದಗುಡಿ ಹೋಬಳಿಯ ಬೀರಹಳ್ಳಿ, ಬಂಡಹಳ್ಳಿ, ಕೊರಟಿ ಗ್ರಾಮಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಪಕ್ಷದ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರ ನೇತೃತ್ವದಲ್ಲೇ 2023ರ ವಿಧಾನಸಭಾ ಚುನಾವಣೆ ನಡೆಯಲಿದೆ. ಸಿಎಂ ಬದಲಾವಣೆ ಎನ್ನುವ ವಿಚಾರ ಕೇವಲ ಕಾಂಗ್ರೆಸ್ ಪಕ್ಷದವರ ಊಹಾಪೋಹ ಮಾತು. ಆದ್ದರಿಂದ, ಬಿಜೆಪಿ ಕಾರ್ಯಕರ್ತರು ಹಾಗೂ ರಾಜ್ಯದ ಜನ ಊಹಾಪೋಹಕ್ಕೆ ಕಿವಿಗೊಡಬಾರದು. 2023ರ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಸ್ಪಷ್ಟಬಹುಮತ ಪಡೆದು ಸರ್ಕಾರ ರಚನೆ ಮಾಡಲಿದೆ. ಬಸವರಾಜ್ ಬೊಮ್ಮಾಯಿ ಅವರು ಮತ್ತೊಮ್ಮೆ ಮುಖ್ಯಮಂತ್ರಿ ಆಗಲಿದ್ದಾರೆ ಎಂದರು.
ಸಿಎಂ ಬೊಮ್ಮಾಯಿ ಬದಲಾವಣೆ ಬಗ್ಗೆ ನಂಗೊತ್ತಿಲ್ಲ: ಸಿದ್ದರಾಮಯ್ಯ
ರಾಜ್ಯದಲ್ಲಿ ಆಡಳಿತಾರೂಢ ಬಿಜೆಪಿ ಸರ್ಕಾರ ಗ್ರಾಮಗಳ ಸರ್ವತೋಮುಖ ಅಭಿವೃದ್ಧಿ ದೃಷ್ಠಿಯಿಂದ ಅಗತ್ಯ ಅನುದಾನಗಳನ್ನು ನಿರಂತರ ಒದಗಿಸಿಕೊಡುತ್ತಿದ್ದು, ಜನಪರ ಆಡಳಿತ ನೀಡುವಲ್ಲಿ ಯಶಸ್ವಿಯಾಗಿದೆ. ತಾಲೂಕಿನಲ್ಲಿ ನಂದಗುಡಿ ಹೋಬಳಿಯ ಎಲ್ಲ ಗ್ರಾಮಗಳಿಗೂ ಅಗತ್ಯ ಅನುದಾನ ನೀಡುವ ಮೂಲಕ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ ಎಂದರು.
ಪಕ್ಷ ಸೇರ್ಪಡೆ:
ಹೆತ್ತಕ್ಕಿ ಗ್ರಾಪಂ ವ್ಯಾಪ್ತಿಯ ಬಂಡಹಳ್ಳಿ ಗ್ರಾಮದಲ್ಲಿ ಹಲವಾರು ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡ ಇಪ್ಪತ್ತಕ್ಕೂ ಹೆಚ್ಚು ಕಾರ್ಯಕರ್ತರು ಸಚಿವ ಎಂಟಿಬಿ ನಾಗರಾಜ್ ಅವರ ನೇತೃತ್ವದದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು. ಬಿಜೆಪಿ ಶಾಲು ಹಾಕಿ ಪಕ್ಷಕ್ಕೆ ಬರಮಾಡಿಕೊಂಡ ಸಚಿವ ಎಂಟಿಬಿ ನಾಗರಾಜ್ ಮಾತನಾಡಿ, ಕ್ಷೇತ್ರದಲ್ಲಿ ನನ್ನ ಅಭಿವೃದ್ಧಿ ಕಾರ್ಯಗಳನ್ನು ಕಂಡು ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆ ಆಗುತ್ತಿದ್ದಾರೆ. ಪಕ್ಷಕ್ಕೆ ಯಾರೇ ಬಂದರೂ ಸ್ವಾಗತ ಎಂದು ಸಚಿವ ಎಂಟಿಬಿ ನಾಗರಾಜ್ ತಿಳಿಸಿದರು.
ತಾಲೂಕು ಬಿಜೆಪಿ ಅಧ್ಯಕ್ಷ ಹುಲ್ಲೂರು. ಕೆ.ಸತೀಶ್, ನಗರ ಅಧ್ಯಕ್ಷ ಡಾ.ಸಿ.ಜಯರಾಜ್, ಎಸ್ಸಿ ಮೋರ್ಚಾ ಅಧ್ಯಕ್ಷ ದೊಡ್ಡಹರಳಗೆರೆ ನಾಗೇಶ್, ಯುವ ಮೋರ್ಚಾ ಅಧ್ಯಕ್ಷ ತವಟಹಳ್ಳಿ ರಾಮು, ಬಿಎಂಆರ್‌ಡಿಎ ಮಾಜಿ ಅಧ್ಯಕ್ಷ ಸಿ.ನಾಗರಾಜ್ ಸೇರಿದಂತೆ ಹಲವಾರು ಗಣ್ಯರು ಇದ್ದರು.