ದೇವೇಗೌಡರು ರಾಜ್ಯಕ್ಕೆ ಅವಲಕ್ಕಿಯನ್ನಾದ್ರೂ ಕೊಡಿಸಲಿ: ಸಚಿವ ಕೃಷ್ಣ ಬೈರೇಗೌಡ
ದೇವೇಗೌಡರು ಕೇಂದ್ರದ ಚೊಂಬನ್ನು ಅಕ್ಷಯಪಾತ್ರೆ ಎಂದು ಹೊಗಳಿದ್ದಾರೆ. ಕೆಲಸ ಆಗಬೇಕಾದರೆ ಹೊಗಳುವುದು ಸಾಮಾನ್ಯ. ಹಾಗೆ ಹೊಗಳಿ ನಮಗೆ ಮೃಷ್ಟಾನ್ನ ಬೇಡ ಕನಿಷ್ಠ ಅವಲಕ್ಕಿಯನ್ನಾದರೂ ಕೊಡಿಸಿ ಯಜಮಾನರೇ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಎಚ್.ಡಿ.ದೇವೇಗೌಡರ ಕಾಲೆಳೆದಿದ್ದಾರೆ.
ಬೆಂಗಳೂರು (ಏ.22): ದೇವೇಗೌಡರು ಕೇಂದ್ರದ ಚೊಂಬನ್ನು ಅಕ್ಷಯಪಾತ್ರೆ ಎಂದು ಹೊಗಳಿದ್ದಾರೆ. ಕೆಲಸ ಆಗಬೇಕಾದರೆ ಹೊಗಳುವುದು ಸಾಮಾನ್ಯ. ಹಾಗೆ ಹೊಗಳಿ ನಮಗೆ ಮೃಷ್ಟಾನ್ನ ಬೇಡ ಕನಿಷ್ಠ ಅವಲಕ್ಕಿಯನ್ನಾದರೂ ಕೊಡಿಸಿ ಯಜಮಾನರೇ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಎಚ್.ಡಿ.ದೇವೇಗೌಡರ ಕಾಲೆಳೆದಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬರ ಪರಿಹಾರ ಬಂದಿಲ್ಲ. ಭದ್ರಾಮೇಲ್ದಂಡೆ ಯೋಜನೆಯ 5300 ಕೋಟಿ ಬರಬೇಕು. ಮೇಕೆದಾಟು ಯೋಜನೆಗೆ ಅನುಮತಿ ನೀಡಿಲ್ಲ. ಮಂಡ್ಯದಲ್ಲಿ ಬೆಳೆ ಬೆಳೆಯಲೂ ಸಹ ನೀರಿಲ್ಲದಂತಾಗಿದೆ. ಮೇಕೆದಾಟಿಗೆ ಅನುಮತಿ ಕೊಡಿಸಿ ಅಕ್ಷಯಪಾತ್ರೆಯ ಟ್ರೈಲರ್ ತೋರಿಸಿ ಸ್ವಾಮಿ ಎಂದು ಮನವಿ ಮಾಡಿದರು.
ಬರ, ಕೋರ್ಟ್‌ನಿಂದಲೇ ನ್ಯಾಯ ಪಡಿತೀವಿ: ಕೇಂದ್ರ ಸರ್ಕಾರವು ರಾಜ್ಯಕ್ಕೆ ಬರ ಪರಿಹಾರ ನೀಡದೆ ಅನ್ಯಾಯ ಮಾಡಿರುವ ವಿರುದ್ಧ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದೇವೆ. ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿ ರಾಜ್ಯದ ಜನತೆಗೆ ನ್ಯಾಯ ಕೊಡಿಸುವ ವಿಶ್ವಾಸವಿದೆ. ನಾವು ನ್ಯಾಯಾಲಯದಲ್ಲೇ ಹೋರಾಟ ಮುಂದುವರೆಸುತ್ತೇವೆ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.
ಬರ ಪರಿಹಾರಕ್ಕಾಗಿ ಕೇಂದ್ರಕ್ಕೆ ಸಾಲು ಸಾಲು ಪತ್ರ ಬರೆದಿದ್ದೇವೆ. ಮುಖ್ಯಮಂತ್ರಿಗಳು ಪತ್ರ ಬರೆದಿರುವುದನ್ನೂ ಈವರೆಗೆ ಅಲ್ಲಗೆಳೆಯುತ್ತಿದ್ದರು. ಸುಪ್ರೀಂ ಕೋರ್ಟ್ ಮೊರೆ ಹೋದ ಬಳಿಕ ಈಗ ಕೇಂದ್ರದಿಂದ ಮುಖ್ಯಮಂತ್ರಿಗಳ ಪತ್ರ ತಲುಪಿದೆ ಎಂಬ ಉತ್ತರ ಬಂದಿದೆ. ಈಗಲಾದರೂ ಪರಿಹಾರ ಬಿಡುಗಡೆ ಮಾಡಬಹುದಲ್ಲ? ಎಂದು ಕಿಡಿ ಕಾರಿದರು.
ಮೇಕೆದಾಟು ಡ್ಯಾಂಗೆ ಅನುಮತಿ ನೀಡಿ, ಬೆಂಗಳೂರಿನ ನೀರಿನ ಸಮಸ್ಯೆ ಬಗೆಹರಿಸ್ತೀವಿ: ಸಿಎಂ ಸಿದ್ದರಾಮಯ್ಯ
ಸುಪ್ರೀಂ ಕೋರ್ಟ್ ಅರ್ಜಿ ವಿಚಾರಣೆಗೆ ಎರಡು ವಾರಗಳ ಗಡುವು ನೀಡಿತ್ತು. ಏ.22ಕ್ಕೆ ಗಡುವು ಮುಗಿಯಲಿದ್ದು ರಾಜ್ಯದ ಪರ ವಕೀಲರು ವಾದ ಮಂಡಿಸಲಿದ್ದಾರೆ. ಕೇಂದ್ರದಿಂದ ಆಗಿರುವ ಅನ್ಯಾಯವನ್ನು ಎಳೆ ಎಳೆಯಾಗಿ ಬಿಚ್ಚಿಡಲಿದ್ದೇವೆ. ಜತೆಗೆ ಸಂಕಷ್ಟದಲ್ಲಿರುವ ರಾಜ್ಯದ ಜನರಿಗೆ ಪರಿಹಾರ ನೀಡುವಂತೆ ಸುಪ್ರೀಂ ಕೋರ್ಟ್ ಮುಂದೆ ಮನವಿ ಮಾಡಿ ನ್ಯಾಯ ಪಡೆಯಲಿದ್ದೇವೆ ಎಂದರು.