ತಾಯಿ ಸ್ಥಾನದಲ್ಲಿ ನಿಂತು ಕೆಲಸ ಮಾಡುವ ಡಬಲ್ ಎಂಜಿನ್ ಸರ್ಕಾರ: ಸಚಿವ ಕೋಟ ಶ್ರೀನಿವಾಸ ಪೂಜಾರಿ
ಸರ್ಕಾರಗಳು ತಾಯಿ ಸ್ಥಾನದಲ್ಲಿ ನಿಂತು ಜನರ ಕೆಲಸ ಮಾಡಬೇಕು. ನಮ್ಮ ಡಬಲ್ ಇಂಜಿನ್ ಸರ್ಕಾರ ಬಡವರ, ದೀನ ದಲಿತರ, ಹಿಂದುಳಿದ ವರ್ಗಗಳ ಮತ್ತು ಎಲ್ಲ ಜನರ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಕೆಲಸಮಾಡುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದರು.
ಕುಮಟಾ (ಮಾ.18): ಸರ್ಕಾರಗಳು ತಾಯಿ ಸ್ಥಾನದಲ್ಲಿ ನಿಂತು ಜನರ ಕೆಲಸ ಮಾಡಬೇಕು. ನಮ್ಮ ಡಬಲ್ ಇಂಜಿನ್ ಸರ್ಕಾರ ಬಡವರ, ದೀನ ದಲಿತರ, ಹಿಂದುಳಿದ ವರ್ಗಗಳ ಮತ್ತು ಎಲ್ಲ ಜನರ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಕೆಲಸ ಮಾಡುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದರು. ಪಟ್ಟಣದ ಮಣಕಿ ಮಹಾತ್ಮಾ ಗಾಂಧಿ ಮೈದಾನದಲ್ಲಿ ಶುಕ್ರವಾರ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಫಲಾನುಭವಿಗಳ ಸೌಲಭ್ಯ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ .19.35 ಕೋಟಿ ಮೊತ್ತದ ವಿವಿಧ ಕಾಮಗಾರಿಗಳಿಗೆ ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿದರು.
ಕರ್ನಾಟಕದ 31 ಜಿಲ್ಲೆಗಳಲ್ಲಿ ಫಲಾನುಭವಿಗಳ ಸಮಾವೇಶ ನಡೆಯುತ್ತಿದ್ದು, ರಾಜ್ಯದ ಎಲ್ಲ ಸಮಾವೇಶಗಳಿಗಿಂತಲೂ ಜಿಲ್ಲೆಯಲ್ಲಿ ಅರ್ಥಪೂರ್ಣವಾಗಿ ಫಲಾನುಭವಿಗಳ ಸಮಾವೇಶ ನಡೆಯುತ್ತಿರುವುದು ಹೆಮ್ಮೆಯ ಸಂಗತಿ ಎಂದರು. ಜಿಲ್ಲೆಯಲ್ಲಿ 20 ಸಾವಿರ ಫಲಾನುಭವಿಗಳಿಗೆ ವಿವಿಧ ಯೋಜನೆಗಳ ಸೌಲಭ್ಯ ವಿತರಿಸುತ್ತಿದ್ದೇವೆ. ಈಗಾಗಲೇ ಜಿಲ್ಲೆಯಲ್ಲಿ 80 ಸಾವಿರ ಕುಟುಂಬಗಳಿಗೆ ಜಲ ಜೀವನ ಮಿಷನ್ ಅಡಿ ಮನೆ ಮನೆಗೆ ಗಂಗೆ ಯೋಜನೆಯಲ್ಲಿ ಕುಡಿಯುವ ನೀರು ಕಲ್ಪಿಸುತ್ತಿದ್ದೇವೆ. ಕಿಸಾನ್ ಸಮ್ಮಾನ್ ಯೋಜನೆಯ ಮೂಲಕ ರಾಜ್ಯದ 1 ಲಕ್ಷ 68 ಸಾವಿರ ಫಲಾನುಭವಿಗಳಿಗೆ 168 ಕೋಟಿಯನ್ನು ಅರ್ಜಿ ಸಲ್ಲಿಸದೇ ಕೇಂದ್ರ ಸರ್ಕಾರದಿಂದ 6000 ಹಾಗೂ ರಾಜ್ಯ ಸರ್ಕಾರದಿಂದ .4000ನಂತೆ ನೇರ ಖಾತೆಗೆ ಜಮಾ ಮಾಡಲಾಗಿದೆ ಎಂದರು.
ಭೂಸನೂರ ಗೆಲ್ಲಿಸಿ, ಸಚಿವರಾಗುವಂತೆ ಹರಸಿ: ಸಚಿವ ಎಂಟಿಬಿ ನಾಗರಾಜ್
ಇಂಧನ ಸಚಿವ ಸುನಿಲಕುಮಾರ್ ಮಾತನಾಡಿ, ನಾವೆಲ್ಲ ಆಶ್ವಾಸನೆ ಕೊಡಲು ಬಂದಿಲ್ಲ. ಸರ್ಕಾರ ಮಾಡಿದ್ದನ್ನು ಕೊಡಲು ಬಂದಿದ್ದೇವೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಜಾರಿಗೆ ತಂದಿರುವ ವಿವಿಧ ಯೋಜನೆಗಳನ್ನು ಇಂದು ಸಾವಿರಾರು ಫಲಾನುಭವಿಗಳಿಗೆ ನೀಡುವ ಸಲುವಾಗಿ ಎಲ್ಲರನ್ನು ಒಂದು ಕಡೆ ಸೇರಿಸಿದ್ದೇವೆ. ಸರ್ಕಾರದಿಂದ ಜಾರಿಯಾದ ಯೋಜನೆಗಳಲ್ಲಿ ಶೇ.80 ಯೋಜನೆಗಳನ್ನು ಈಗಾಗಲೇ ಜನರಿಗೆ ತಲುಪಿಸಿದ್ದೇವೆ ಎಂದರು. ಕಾಂಗ್ರೆಸ್‌ನವರು ಗ್ಯಾರಂಟಿ ಹೆಸರಿನಲ್ಲಿ ಮನೆಮನೆಗೆ ಬರುತ್ತಿದ್ದಾರೆ. ಕಳೆದ 75 ವರ್ಷಗಳಲ್ಲಿ ಕೊಡಲಾಗದ್ದರ ಸುಳ್ಳು ಭರವಸೆಗೆ ಮರುಳಾಗಿ ಅಮೂಲ್ಯವಾದ ವೋಟರ್ ಐಡಿ, ಆಧಾರ ಕಾರ್ಡ ಕಳೆದುಕೊಳ್ಳಬೇಡಿ ಎಂದರು.
ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಆಹಾರಕ್ಕಾಗಿ ಪರದಾಡುತ್ತಿದ್ದೆವು ಇಂದು ನಾವು ಸ್ವಾವಲಂಬಿಯಾಗಿದ್ದೇವೆ. ಇದಕ್ಕಾಗಿ ದೇಶದ ರೈತರನ್ನು ಸ್ಮರಿಸಬೇಕು. ಪ್ರಧಾನಿ ಮೋದಿ ನೇತೃತ್ವದಲ್ಲಿ ದೇಶದಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಮಹತ್ತರ ಬದಲಾವಣೆಯಾಗಿದೆ. ಸೈನ್ಯದಲ್ಲೂ ಆತ್ಮವಿಶ್ವಾಸ ತುಂಬಿದೆ. ಸೇನಾ ಬಲವು ಸಶಕ್ತವಾಗಿದೆ. ಅಭಿವೃದ್ಧಿ ಪಥದತ್ತ ದೇಶ ಸಾಗುತ್ತಿದೆ ಎಂದರು. ಶಾಸಕ ದಿನಕರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಬಳಿಕ ವಿವಿಧ ಇಲಾಖೆಯಿಂದ ಫಲಾನುಭವಿಗಳಿಗೆ ಸೌಲಭ್ಯ ವಿತರಿಸಲಾಯಿತು.
ಕ್ರೆಡಿಟ್ ತೆಗೆದುಕೊಳ್ಳೋದು ಎಚ್ಡಿಕೆಗೆ ಹೊಸತೇನಲ್ಲ: ಸಿ.ಪಿ.ಯೋಗೇಶ್ವರ್
ಶಾಸಕರಾದ ರೂಪಾಲಿ ನಾಯ್ಕ, ಸುನೀಲ್ ನಾಯ್ಕ ಮಾತನಾಡಿದರು. ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ, ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಉಪವಿಭಾಗಾಧಿಕಾರಿ ರಾಘವೇಂದ್ರ ಜಗಲಾಸರ, ಪುರಸಭೆ ಅಧ್ಯಕ್ಷೆ ಅನುರಾಧ ಬಾಳೇರಿ, ಉಪಾಧ್ಯಕ್ಷೆ ಸುಮತಿ ಭಟ್ಟ, ಹೊನ್ನಾವರ ಪಪಂ ಅಧ್ಯಕ್ಷೆ ಭಾಗ್ಯಶ್ರೀ ಮೇಸ್ತ, ಡಿಎಫ್‌ಒ ರವಿಶಂಕರ ಸಿ., ಐಎಎಸ್ ಜುಬೀನ್ ಮಹೋಪಾತ್ರ ಇದ್ದರು. ಜಿಪಂ ಸಿಇಒ ಈಶ್ವರಕುಮಾರ ಸ್ವಾಗತಿಸಿದರು. ಸುದೇಶ ನಾಯ್ಕ, ಯೋಗೇಶ ಕೋಡ್ಕಣಿ, ಎಂ.ಎಂ. ನಾಯ್ಕ ನಿರ್ವಹಿಸಿದರು.