ಸುಧಾಕರ್‌ ಮನೆಗೆ ಕೇಂದ್ರದ ಮಾಜಿ ಸಚಿವ ಮುನಿಯಪ್ಪ ಭೇಟಿ, ಸುದೀರ್ಘ ಸಭೆ, ಮುನಿಯಪ್ಪ ಬಿಜೆಪಿಗೆ ಬರುತ್ತಾರೆಂಬ ಆಶಾಭಾವನೆ ಇದೆ: ಸುಧಾಕರ್‌

ಬೆಂಗಳೂರು(ಸೆ.25): ‘ಕೇಂದ್ರದ ಮಾಜಿ ಸಚಿವ ಕೆ.ಎಚ್‌.ಮುನಿಯಪ್ಪ ಅವರು ನಮ್ಮ ಪಕ್ಷ ಸೇರುತ್ತಾರೆ ಎಂಬ ಆಶಾಭಾವನೆಯಲ್ಲಿ ನಾವೂ ಇದ್ದೇವೆ. ಮುನಿಯಪ್ಪನವರಷ್ಟೇ ಅಲ್ಲ ಕಾಂಗ್ರೆಸ್‌ನ ಬೇರೆ ಬೇರೆ ನಾಯಕರ ಜತೆ ನಾನು ಸಂಪರ್ಕದಲ್ಲಿದ್ದೇನೆ’ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಹೇಳಿದ್ದಾರೆ. ನಗರದಲ್ಲಿ ಶನಿವಾರ ತಮ್ಮನ್ನು ಭೇಟಿಯಾಗಿ ಮಾತುಕತೆ ನಡೆಸಿದ ಮಾಜಿ ಸಂಸದ ಕೆ.ಎಚ್‌. ಮುನಿಯಪ್ಪ ಅವರೊಂದಿಗಿನ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸುಧಾಕರ್‌ ಈ ಹೇಳಿಕೆ ನೀಡುವ ಮೂಲಕ ಮುನಿಯಪ್ಪ ಬಿಜೆಪಿ ಸೇರ್ಪಡೆ ಬಹುತೇಕ ಖಚಿತ ಎಂಬ ಸುಳಿವು ನೀಡಿದರು.

ತಮ್ಮ ಅನುಮತಿಯಿಲ್ಲದೆ ಮಾಜಿ ಶಾಸಕರನ್ನು ಕಾಂಗ್ರೆಸ್‌ ಪಕ್ಷಕ್ಕೆ ಸೇರಿಸಿಕೊಂಡ ಬಗ್ಗೆ ಅಸಮಾಧಾನಗೊಂಡಿರುವ ಮುನಿಯಪ್ಪ ಅವರು, ಕಳೆದ ಮೂರ್ನಾಲ್ಕು ತಿಂಗಳಿಂದ ಪಕ್ಷದ ಚಟುವಟಿಕೆಗಳಿಂದ ದೂರ ಉಳಿದಿದ್ದಾರೆ. ಬಳಿಕ ಸತತವಾಗಿ ಬಿಜೆಪಿ ಡಾ.ಕೆ.ಸುಧಾಕರ್‌ ಜತೆ ಸಂಪರ್ಕ ಹೊಂದಿರುವ ಅವರು ಶನಿವಾರವೂ ಸುಧಾಕರ್‌ ಅವರ ಸದಾಶಿವನಗರ ನಿವಾಸಕ್ಕೆ ಭೇಟಿ ನೀಡಿ ಸುದೀರ್ಘ ಮಾತುಕತೆ ನಡೆಸಿದರು.

ಕಾಂಗ್ರೆಸ್ಸಿನಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆ: ಸಿದ್ರಾಮೋತ್ಸವ ಮಾದರಿಯಲ್ಲೇ ದಲಿತೋತ್ಸವ..!

ಈ ಬಗ್ಗೆ ಮಾತನಾಡಿದ ಸುಧಾಕರ್‌, ಹಿರಿಯ ನಾಯಕ ಕೆ.ಎಚ್‌.ಮುನಿಯಪ್ಪ ಅವರೊಂದಿಗೆ ನನಗೆ ಉತ್ತಮ ವೈಯಕ್ತಿಕ ಸಂಬಂಧವಿದೆ. ಹೀಗಾಗಿ ಅವರನ್ನು ಭೇಟಿ ಮಾಡಲಾಗಿದೆಯೇ ಹೊರತು ಅದರಲ್ಲಿ ರಾಜಕೀಯ ಇಲ್ಲ. ಅವರು ಎಲ್ಲಿದ್ದರೂ ರಾಜಕೀಯ ಶಕ್ತಿಯಾಗಿಯೇ ಇದ್ದಾರೆ. ಆದರೆ, ಮುನಿಯಪ್ಪ ಅವರು ನಮ್ಮ ಪಕ್ಷ ಸೇರುತ್ತಾರೆ ಎಂಬ ಆಶಾಭಾವನೆ ಹೊಂದಿದ್ದೇನೆ. ಯಾವುದೇ ಒಳ್ಳೆಯ ನಾಯಕರು ಬಿಜೆಪಿಗೆ ಬಂದರೆ ಸ್ವಾಗತಿಸುತ್ತೇವೆ. ಮುನಿಯಪ್ಪ ಅವರು ಮಾತ್ರವಲ್ಲ ಕಾಂಗ್ರೆಸ್‌ನ ಅನೇಕ ನಾಯಕರ ಜತೆ ನಾನು ಸಂಪರ್ಕದಲ್ಲಿದ್ದೇನೆ ಎಂದು ಹೇಳಿದರು.

ಕಾಂಗ್ರೆಸ್‌ನಿಂದ ದೂರ ಉಳಿದ ಮುನಿಯಪ್ಪ:

ಕಾಂಗ್ರೆಸ್‌ ಪಕ್ಷವು ಮಾಜಿ ಶಾಸಕರಾದ ಕೊತ್ತೂರು ಮಂಜುನಾಥ್‌, ಡಾ.ಸುಧಾಕರ್‌ ಸೇರಿದಂತೆ ಹಲವರನ್ನು ಮುನಿಯಪ್ಪ ವಿರೋಧದ ನಡುವೆಯೇ ಪಕ್ಷಕ್ಕೆ ಸೇರಿಸಿಕೊಂಡಿತು. ಇದರ ಬೆನ್ನಲ್ಲೇ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದ ಮುನಿಯಪ್ಪ ಅವರು ಡಿ.ಕೆ.ಶಿವಕುಮಾರ್‌ ಹಾಗೂ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದಿದ್ದರು.

ನಂತರ ಪಕ್ಷದೊಂದಿಗೆ ಸಂಪರ್ಕ ಕಡಿದುಕೊಂಡ ಅವರು ಸಿದ್ದರಾಮಯ್ಯ ಜನ್ಮದಿನ, ಸ್ವಾತಂತ್ರ್ಯ ನಡಿಗೆ ಕಾರ್ಯಕ್ರಮ, ಐಕ್ಯತಾ ಯಾತ್ರೆ ಸಿದ್ಧತೆ ಸೇರಿದಂತೆ ಎಲ್ಲೂ ಭಾಗವಹಿಸುತ್ತಿಲ್ಲ. ಅಲ್ಲದೆ ಸುಧಾಕರ್‌ ಅವರನ್ನು ಸತತವಾಗಿ ಭೇಟಿಯಾಗುತ್ತಿರುವುದರಿಂದ ಮುನಿಯಪ್ಪ ಅವರು ಕಾಂಗ್ರೆಸ್‌ನಿಂದ ಒಂದು ಹೆಜ್ಜೆ ಹೊರಗಿಟ್ಟಿರುವುದು ಬಹುತೇಕ ಖಚಿತ ಎಂಬಂತಾಗಿದೆ.