ಬೆಂಗಳೂರು(ಜ.23): ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷ ತೊರೆದು ಬಿಜೆಪಿಗೆ ಬಂದ ನಾವೆಲ್ಲರೂ ರಾಜಕೀಯ ಆತ್ಮಹತ್ಯೆ (ಪೊಲಿಟಿಕಲ್‌ ಸೂಸೈಡ್‌) ಪರಿಸ್ಥಿತಿಯಲ್ಲಿ ಗೆಲುವು ಸಾಧಿಸಿದ್ದೇವೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ತೀಕ್ಷ್ಣವಾಗಿ ಹೇಳಿದ್ದಾರೆ.

ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದಲ್ಲಿ ಬಿಜೆಪಿ ಶೇ.3ರಷ್ಟು ಮತ ಪಡೆದಿರಲಿಲ್ಲ. ಅಂತಹದ್ದರಲ್ಲಿ ನಾನು ಎಷ್ಟು ರಿಸ್ಕ್‌ ತೆಗೆದುಕೊಂಡು ಬಂದಿದ್ದೇನೆ ಎಂಬುದು ನನಗೆ ಗೊತ್ತಿದೆ. ಅದರಲ್ಲಿಯೂ ಎಂ.ಟಿ.ಬಿ.ನಾಗರಾಜ್‌ ತಮ್ಮ ಬಳಿ ಇದ್ದ ವಸತಿ ಖಾತೆ ಬಿಟ್ಟು ಬಂದರು. ಆದರೆ ಈಗ ಅವರಿಗೆ ಖಾತೆ ಹಂಚಿಕೆಯಲ್ಲಿ ಅನ್ಯಾಯ ಆಗಿದೆ. ಅವರ ರಕ್ಷಣೆ ನಮ್ಮ ಕರ್ತವ್ಯ. ಈ ಬಗ್ಗೆ ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡುತ್ತೇವೆ ಎಂದು ತಿಳಿಸಿದರು.

ಖಾತೆ ಬದಲಾವಣೆ: ಅತೃಪ್ತ ಸಚಿವರ ಮನವೊಲಿಕೆಗೆ ಅಖಾಡಕ್ಕಿಳಿದ ಬಿಜೆಪಿ ಟ್ರಬಲ್ ಶೂಟರ್ಸ್

ಗೋಪಾಲಯ್ಯ, ನಾರಾಯಣಗೌಡ ಅವರು ಅವರ ಇಲಾಖೆಯಲ್ಲಿ ಒಳ್ಳೆಯ ಕೆಲಸ ಮಾಡಿದ್ದರು. ಆದರೂ ಖಾತೆ ಬದಲಾವಣೆ ಮಾಡಲಾಗಿದೆ. ನಮಗೆ ಪಕ್ಷದ ಶಿಸ್ತು ಅತ್ಯಂತ ಮುಖ್ಯವಾದುದು. ಇಲ್ಲಿ ವೈಯಕ್ತಿಕ ಆಸೆ, ಆಕಾಂಕ್ಷೆ ಮುಖ್ಯವಲ್ಲ. ಕಂದಾಯ ಸಚಿವ ಆರ್‌.ಅಶೋಕ್‌ ಜತೆ ಮಾತನಾಡಿಲ್ಲ. ಆದರೆ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಜತೆಗೆ ಮಾತನಾಡಿದ್ದೇನೆ ಎಂದು ಹೇಳಿದರು. ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸುಧಾಕರ್‌, ಅನ್ಯ ಕೆಲಸದ ನಿಮಿತ್ತ ಗುರುವಾರ ನಡೆದ ಸಚಿವ ಸಂಪುಟ ಸಭೆಗೆ ಹೋಗಲು ಸಾಧ್ಯವಾಗಲಿಲ್ಲ. ಇದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಾಗಿಲ್ಲ ಎಂದು ಸ್ಪಷ್ಟನೆ ನೀಡಿದರು.