*  ಭಗತ್‌ ಸಿಂಗ್‌ ಕೈಬಿಟ್ಟಿಲ್ಲ ಎಂದು ಸ್ವತಃ ಶಿಕ್ಷಣ ಸಚಿವರೆ ಹೇಳಿದ್ದರೂ ವಿನಾಕಾರಣ ಗೊಂದಲ *  ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಪತ್ತೆಯ ವಿಚಾರ ಕೋರ್ಟ್‌ನಲ್ಲಿದೆ*  ಕೋರ್ಟ್‌ ಸೂಚನೆಯಂತೆ ಸರ್ವೇ ಮಾಡಲಾಗಿದೆ 

ಕೊಪ್ಪಳ(ಮೇ.20):  ಆರ್‌ಎಸ್‌ಎಸ್‌ ಬಗ್ಗೆ ಮಾತನಾಡದಿದ್ದರೆ ಮತ್ತು ಅವರ ತತ್ವ ವಿರೋಧ ಮಾಡದಿದ್ದರೆ ಕಾಂಗ್ರೆಸ್‌ ಪಕ್ಷದವರಿಗೆ ನಿದ್ರೆ ಬರಲ್ಲ. ವಿನಾಕಾರಣ ಆರ್‌ಎಸ್‌ಎಸ್‌ ಬಗ್ಗೆ ಮಾತನಾಡುತ್ತಾರೆ ಎಂದು ಸಚಿವ ಹಾಲಪ್ಪ ಆಚಾರ್‌ ಹೇಳಿದರು.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಹೆಗಡೇವಾರ್‌ ಅವರ ಕುರಿತು ಪಠ್ಯಪುಸ್ತಕದಲ್ಲಿ ಸೇರಿಸಿದರೆ ತಪ್ಪೇನು ಎಂದು ಪ್ರಶ್ನಿಸಿದರು. ಅವರು ರಾಷ್ಟಕ್ಕಾಗಿ ಸೇವೆ ಸಲ್ಲಿಸಿದ್ದಾರೆ. ಅವರ ಯಾವುದೇ ಪಂಗಡದ ಪರವಾಗಿ ಕೆಲಸ ಮಾಡಿಲ್ಲ. ರಾಷ್ಟ್ರಕ್ಕಾಗಿ ಸೇವೆ ಮಾಡಿದವರ ಕುರಿತು ಪಠ್ಯದ ಮೂಲಕ ಮಕ್ಕಳಿಗೆ ತಿಳಿಸಬಾರದು ಎಂದರೆ ಏನರ್ಥ ಎಂದು ಕಿಡಿಕಾರಿದರು.

'ವಿಶ್ವದಲ್ಲಿ ಭಾರತದ ಗೌರವ ಹೆಚ್ಚಲು ಮೋದಿ ಕಾರಣ'

ಭಗತ್‌ ಸಿಂಗ್‌ ಅವರನ್ನು ಪಠ್ಯದಿಂದ ಕೈಬಿಟ್ಟಿಲ್ಲ ಎಂದು ಸ್ವತಃ ಶಿಕ್ಷಣ ಸಚಿವರೆ ಹೇಳಿದ್ದರೂ ವಿನಾಕಾರಣ ಗೊಂದಲ ಸೃಷ್ಟಿಮಾಡಲಾಗುತ್ತದೆ. ಇದು ಸರಿಯಲ್ಲ. ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಪತ್ತೆಯ ವಿಚಾರ ಕೋರ್ಟ್‌ನಲ್ಲಿ ಇದೆ. ಕೋರ್ಚ್‌ ಸೂಚನೆಯಂತೆ ಸರ್ವೇ ಮಾಡಲಾಗಿದೆ. ಕೋರ್ಟ್‌ನಲ್ಲಿರುವ ವಿಚಾರದ ಕುರಿತು ನಾನೇನು ಹೇಳುವುದಿಲ್ಲ ಎಂದರು.

ಮಳೆಹಾನಿ ಕುರಿತು ವಾಸ್ತವಾಂಶದ ವರದಿ ಸಲ್ಲಿಸಿ; ಸಚಿವ ಆನಂದ್‌ ಸಿಂಗ್‌

ಕೊಪ್ಪಳ: ಮುಂಗಾರು ಆರಂಭವಾಗಿದ್ದು ಜಿಲ್ಲೆಯಲ್ಲಿ ಉಂಟಾಗುವ ಮಳೆ ಹಾನಿ ಬಗ್ಗೆ ಖುದ್ದು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಬೇಕು ಎಂದು ರಾಜ್ಯ ಪ್ರವಾಸೋದ್ಯಮ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌ ಸಿಂಗ್‌ ಅವರು ಜಿಲ್ಲೆಯ ಎಲ್ಲ ತಹಸೀಲ್ದಾರರಿಗೆ ಸೂಚನೆ ನೀಡಿದರು.

ಗುರುವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು. ಮಳೆಯಿಂದ ಜನ, ಜಾನುವಾರು, ಬೆಳೆ, ಮನೆಗಳಿಗೆ ಹಾನಿ ಉಂಟಾಗುತ್ತದೆ. ಹಾನಿ ಸ್ಥಳಕ್ಕೆ ಸಂಬಂಧಿಸಿದ ತಹಸೀಲ್ದಾರರು ಖುದ್ದಾಗಿ ಭೇಟಿ ನೀಡಿ, ಪರಿಶೀಲಿಸಿ ವಾಸ್ತವಾಂಸದ ವರದಿಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಬೇಕು. ಸಂತ್ರಸ್ತರ ನೆರವಿಗೆ ಧಾವಿಸುವುದು, ಅವರಿಗೆ ಪರಿಹಾರ ಒದಗಿಸುವುದು ನಮ್ಮೆಲ್ಲರ ಕರ್ತವ್ಯ. ಎಷ್ಟೋ ಬಡ ಕುಟುಂಬಗಳು ತಮ್ಮ ಮನೆಯನ್ನು ಕಳೆದುಕೊಂಡು, ಜಾನುವಾರು, ಬೆಳೆ ಹಾನಿಯಿಂದ ತೀವ್ರ ತೊಂದರೆಗೆ ಒಳಗಾಗುತ್ತಾರೆ. ಅಂತವರ ಮಾಹಿತಿಯನ್ನು ಕೂಡಲೇ ಸರ್ಕಾರಕ್ಕೆ ನೀಡಿ, ಅವರಿಗೆ ಶೀಘ್ರ ಪರಿಹಾರ ದೊರೆಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಅವರು ತಹಸೀಲ್ದಾರರಿಗೆ ತಿಳಿಸಿದರು.

ಜಿಲ್ಲಾಸ್ಪತ್ರೆಯಲ್ಲಿ ಸ್ವಚ್ಛತೆಯ ಕೊರತೆ ಇದ್ದು, ಸ್ವಚ್ಛತಾ ಕಾರ್ಯಕ್ಕಾಗಿ ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಂಡಿರುವ ಗ್ರೂಪ್‌ ಡಿ ಸಿಬ್ಬಂದಿ ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ. ಅಂತವರನ್ನು ಕೆಲಸದಿಂದ ತೆಗೆದು ಹಾಕಿ ಬೇರೆ ಏಜೆನ್ಸಿಯಿಂದ ಹೊಸದಾಗಿ ಸಿಬ್ಬಂದಿ ನೇಮಕ ಮಾಡಿಕೊಳ್ಳಿ. ಆಸ್ಪತ್ರೆಗೆ ಬರುವ ಸಾರ್ವಜನಿಕರಿಗೆ ಉತ್ತಮ ಆರೋಗ್ಯದೊಂದಿಗೆ ಆರೋಗ್ಯಯುತ ವಾತಾವರಣ ಕೂಡ ನಿರ್ಮಿಸಿಕೊಡಬೇಕು. ಜಿಲ್ಲಾಸ್ಪತ್ರೆಯಲ್ಲಿನ ಸಿಟಿ ಸ್ಕ್ಯಾ‌ನ್‌ ಯಂತ್ರವನ್ನು ಅಳವಡಿಸಿ, ಶೀಘ್ರ ಕಾರ್ಯಾರಂಭಗೊಳಿಸಿ. ಜಿಲ್ಲೆಯ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಎಂಬಿಬಿಎಸ್‌ ವೈದ್ಯರ ನೇಮಕಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ. ಜಿಲ್ಲಾಸ್ಪತ್ರೆ ಹಾಗೂ ಕಿಮ್ಸ್‌ನ ಯಾವುದೇ ವಿಭಾಗದ ವೈದ್ಯರು ಬೇಜವಾಬ್ದಾರಿ ತೋರಿದಲ್ಲಿ, ಸಾರ್ವಜನಿಕರಿಗೆ ಲಭ್ಯವಾಗದಿದ್ದಲ್ಲಿ ಅಂತವರ ವಿರುದ್ಧ ಸೂಕ್ತ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಅವರು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ತುಂಗಭದ್ರಾ ಜಲಾಶಯದ ಹಿನ್ನೀರು ಹಾಗೂ ಕಾಲುವೆ ನೀರನ್ನು ಕಾರ್ಖಾನೆಗಳಿಗೆ ನೀಡಲು ಸರ್ಕಾರದ ನಿಯಮಗಳಿವೆ. ಅದರಂತೆ ಕಾರ್ಖಾನೆಗಳು ತಾತ್ಕಾಲಿಕ ಹಾಗೂ ಶಾಶ್ವತ ಜಾಕ್ವೆಲ್‌ಗಳನ್ನು ಬಳಸಿ ಕಾರ್ಖಾನೆಗೆ ಜಲಾಶಯದ ನೀರನ್ನು ಬಳಸಿಕೊಳ್ಳುತ್ತವೆ. ಆದರೆ ಕಾರ್ಖಾನೆಗಳು ನಿಗದಿಪಡಿಸಿದ ಮಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಜಲಾಶಯದ ನೀರನ್ನು ಬಳಸಿಕೊಳ್ಳುತ್ತವೆ ಎಂಬ ದೂರುಗಳಿವೆ. ಆದ್ದರಿಂದ ತಂತ್ರಜ್ಞರನ್ನು ಕರೆಸಿ ಜಲಾಶಯದಿಂದ ನೀರನ್ನು ಪಡೆಯುವ ಪ್ರತಿ ಕಾರ್ಖಾನೆಗೂ ಮೀಟರ್‌ಗಳನ್ನು ಅಳವಡಿಸಬೇಕು. ಅದೇ ರೀತಿ ಸಂಬಂಧಿಸಿದ ಎಂಜಿನಿಯರ್‌ ಕಚೇರಿಯಲ್ಲಿ ಮೀಟರ್‌ ರೀಡಿಂಗ್‌ ದಾಖಲಾಗುವಂತೆ ವ್ಯವಸ್ಥೆ ಕಲ್ಪಿಸಬೇಕು. ಇದರಿಂದ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಪಡೆಯುವುದನ್ನು ನಿಯಂತ್ರಿಸಬಹುದು ಎಂದು ಅವರು ಸಬಂಧಿಸಿದ ಅಧಿಕಾರಿಗಳಿಗೆ ಸಲಹೆ ನೀಡಿದರು.

ಪ್ರಧಾನಿ ಮೋದಿ ಹೆಸರಲ್ಲೇ ಚುನಾವಣೆ ಗೆಲ್ತೇವೆ ಅನ್ನೋದು ಮೂರ್ಖತನ: ಬಿಜೆಪಿ ಸಂಸದ

ಅಳವಂಡಿ-ಬೆಟಗೇರಿ ಹಾಗೂ ಬಹದ್ದೂರಬಂಡಿ ನೀರವಾರಿ ಯೋಜನೆಗಳಿಗೆ ಚಾಲನೆ ನೀಡಿ ವರ್ಷಗಳೇ ಕಳೆದರೂ ಇನ್ನೂ ಕಾಮಗಾರಿ ಪೂರ್ಣಗೊಂಡಿಲ್ಲ. ಇವೆರಡೂ ಕಾಮಗಾರಿಗಳು ಇಂದಿನಿಂದ 40 ದಿನಗಳೊಳಗೆ ಪೂರ್ಣಗೊಳ್ಳಬೇಕು. ಇಲ್ಲದಿದ್ದಲ್ಲಿ ಕಾಮಗಾರಿ ಗುತ್ತಿಗೆದಾರರು ಹಾಗೂ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಅದರಂತೆ ಎಲ್‌ಟಿ ಸಂಸ್ಥೆಯಿಂದ ಅನುಷ್ಠಾನಗೊಳ್ಳುತ್ತಿರುವ ಜೆಜೆಎಂ ಕಾಮಗಾರಿ ಜೂನ್‌ ಅಂತ್ಯದೊಳಗೆ ಪೂರ್ಣಗೊಳ್ಳಬೇಕು. ಇಲ್ಲದಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಲ್‌ಟಿ ಸಂಸ್ಥೆಯ ಪ್ರತಿನಿಧಿಗಳಿಗೆ ಎಚ್ಚರಿಕೆ ನೀಡಿದರು.

ಸಭೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಹಾಲಪ್ಪ ಆಚಾರ್‌, ಸಂಸದ ಕರಡಿ ಸಂಗಣ್ಣ, ಶಾಸಕರಾದ ಕೆ. ರಾಘವೇಂದ್ರ ಹಿಟ್ನಾಳ್‌, ಪರಣ್ಣ ಮುನವಳ್ಳಿ, ಜಿಲ್ಲಾಧಿಕಾರಿ ವಿಕಾಸ್‌ ಕಿಶೋರ್‌ ಸುರಳ್ಕರ್‌, ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ. ಗೌಜಿಯಾ ತರನ್ನುಮ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ, ಅಪರ ಜಿಲ್ಲಾಧಿಕಾರಿ ಎಂ.ಪಿ. ಮಾರುತಿ, ಉಪವಿಭಾಗಾಧಿಕಾರಿ ಬಸವಣಪ್ಪ ಕಲಶೆಟ್ಟಿಸೇರಿದಂತೆ ಬೃಹತ್‌ ನೀರಾವರಿ, ಸಣ್ಣ ನೀರಾವರಿ, ಆರೋಗ್ಯ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.