Asianet Suvarna News Asianet Suvarna News

ಜೈಲಿಗೆ ಹೋಗಿ ಬಂದ ಕಾಂಗ್ರೆಸ್ಸಿಗರಿಂದ ಬಿಜೆಪಿಗೆ ನೈತಿಕ ಪಾಠ ಬೇಕಿಲ್ಲ: ಸಚಿವ ಕಾರಜೋಳ ವಾಗ್ದಾಳಿ

ಜೈಲಿಗೆ ಹೋಗಿ ಬಂದ ಕಾಂಗ್ರೆಸ್ಸಿಗರಿಂದ ಮಾಡುವ ನೈತಿಕ ಪಾಠ ಬಿಜೆಪಿಗೆ ಬೇಕಾಗಿಲ್ಲ. ಆಧಾರಗಳಿಲ್ಲದೆ ಆರೋಪ ಮಾಡುತ್ತಿರೋ ಕಾಂಗ್ರೆಸ್ ನವರು ಹತಾಶರಾಗಿ ಹುಚ್ಚು ಹಿಡಿದವರಂತೆ ಅಡ್ಡಾಡುತ್ತಿದ್ದಾರೆಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿಕಾರಿದರು.

Minister Govinda Karajola Slams on Congress Leaders in Bagalkote gvd
Author
Bangalore, First Published May 6, 2022, 7:14 PM IST

ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷಿಯಾನೆಟ್ ಸುವಣ೯ನ್ಯೂಸ್, ಬಾಗಲಕೋಟೆ.

ಬಾಗಲಕೋಟೆ (ಮೇ.06): ಜೈಲಿಗೆ ಹೋಗಿ ಬಂದ ಕಾಂಗ್ರೆಸ್ಸಿಗರಿಂದ (Congress) ಮಾಡುವ ನೈತಿಕ ಪಾಠ ಬಿಜೆಪಿಗೆ (BJP) ಬೇಕಾಗಿಲ್ಲ. ಆಧಾರಗಳಿಲ್ಲದೆ ಆರೋಪ ಮಾಡುತ್ತಿರೋ ಕಾಂಗ್ರೆಸ್‌ನವರು ಹತಾಶರಾಗಿ ಹುಚ್ಚು ಹಿಡಿದವರಂತೆ ಅಡ್ಡಾಡುತ್ತಿದ್ದಾರೆಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ (Govinda Karajola) ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿಕಾರಿದರು.

ಬಾಗಲಕೋಟೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಗರ ಮೇಲೆ ಕಾಂಗ್ರೆಸ್ ನಿರಂತರ ಆರೋಪ ಮಾಡುತ್ತಿರುವ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಪಿಎಸ್ಐ ಅಕ್ರಮ ನೇಮಕಾತಿ (PSI Recruitment Scam) ವಿಚಾರದಲ್ಲಿ ಈಗಾಗಲೇ ನಿಷ್ಪಕ್ಷಪಾತ ತನಿಖೆ ನಡೆಯುತ್ತಿದೆ, ಯಾಕಂದರೆ ಇಲಾಖೆಯಲ್ಲಿ ಕಾನ್ಸಟೇಬಲ್‌ನಿಂದ ಹಿಡಿದು ಡಿವೈಎಸ್ಪಿವರೆಗೆ ಒಳಗೆ ಹಾಕುವ ಕೆಲಸ ಮಾಡಿದ್ದೀವಿ. ರಾಜ್ಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರ ನೇತೃತ್ವದ ನಮ್ಮ ಬಿಜೆಪಿ ಸಕಾ೯ರ ನಿಷ್ಪಕ್ಷಪಾತ ತನಿಖೆ ಮಾಡುತ್ತಿದೆ. ಇಂತಹದ್ದನ್ನು ಸ್ವಾಗತಿಸುವುದನ್ನ ಬಿಟ್ಟು ಕಾಂಗ್ರೆಸ್ ಭಂಡತನದಿಂದ ಆರೋಪ ಮಾಡುತ್ತಿದೆ. 

ಕಾಂಗ್ರೆಸ್‌ನವರು ಹತಾಶರಾಗಿ ಹುಚ್ಚು ಹಿಡಿದವರಂತೆ ಅಡ್ಡಾಡುತ್ತಿದ್ದಾರೆ: ಕಾಂಗ್ರೆಸ್ ಪಕ್ಷದ ಆಡಳಿತ ಅವಧಿಯಲ್ಲಿ ಈ ಹಿಂದೆ ಪ್ರಶ್ನೆ ಪತ್ರಿಕೆ ಹಗರಣ ಎದ್ದಾಗ ಕಾಂಗ್ರೆಸ್ ರಾಜೀನಾಮೆ ಕೊಡಲಿಲ್ಲ. ಇದರಲ್ಲಿ ಆಗ 8 ಲಕ್ಷ ಜನ ಮಕ್ಕಳು ಅತಂತ್ರರಾದರು, ಯಾರೂ ಕೇಳಲಿಲ್ಲ. ಅಂದು ಮಂತ್ರಿಗಳು ಸಹ ರಾಜೀನಾಮೆ ನೀಡಲಿಲ್ಲ. ಇನ್ನು  ಕನಾ೯ಟಕ ವಿಶ್ವವಿದ್ಯಾಲಯ ಮತ್ತು ವಿಟಿಯು ಹಗರಣಗಳಾದಾಗ ತನಿಖೆ ಮಾಡಲಿಲ್ಲ. ಮೇಲಾಗಿ ಅವರಿಗೆ ಶಿಕ್ಷೆ ಸಹ ಆಗಲಿಲ್ಲ. ಈ ಮಧ್ಯೆ ಡಿವೈಎಸ್ಪಿ ಗಣಪತಿ  ಆತ್ಮಹತ್ಯೆ ಕೇಸ್ ನಡೆಯಿತು. ಅದೆಲ್ಲಾ ತನಿಖೆ ಆಯ್ತಾ ಎಂದ ಅವರು, ಅಂದಿನ ಮಂತ್ರಿ ಜಾರ್ಜ್ ಅವರ ಮೇಲೆ ಏನಾಯ್ತು ಎಂದು ಸಚಿವ ಕಾರಜೋಳ ಪ್ರಶ್ನಿಸಿ, ಹೀಗಾಗಿ ಕಾಂಗ್ರೆಸ್ ಆರೋಪಕ್ಕೆ ನೈತಿಕತೆ ಇಲ್ಲ ಎಂದರು. ಇಂತಹ ಆರೋಪಗಳಿಂದ ಕಾಂಗ್ರೆಸ್ ಲಾಭವಾಗುತ್ತೇ ಅನ್ನುವ ಭ್ರಮೆಯಿಂದ ಹೊರಗೆ ಬರಬೇಕು. ಇಂತಹ ಕೀಳು ಮಟ್ಟದ ರಾಜಕಾರಣದಿಂದ ಯಾವುದೇ ಲಾಭ ಇಲ್ಲ. ಮೇಲಾಗಿ ಇತ್ತೀಚಿನ ಪಂಚ ರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮುಖಭಂಗವಾಗಿದೆ. ಹೀಗಾಗಿ ಕಾಂಗ್ರೆಸ್‌ನವರು ಹತಾಶರಾಗಿ ಹುಚ್ಚು ಹಿಡಿದವರಂತೆ ಅಡ್ಡಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಜೆಡಿಎಸ್​​ ಅಡ್ಜೆಸ್ಟ್​ ಆಗಲ್ಲ, ಕಾಂಗ್ರೆಸ್​ ಅಷ್ಟಕ್ಕಷ್ಟೇ, ಬಿಜೆಪಿಯತ್ತ ಇಬ್ಬರು ಮಾಜಿ ಶಾಸಕರು

ಮತ್ತೇ ಲೋಕಾಯುಕ್ತಕ್ಕೆ ಅಧಿಕಾರದ ಚಿಂತನೆ: ರಾಜ್ಯದಲ್ಲಿ ಲೋಕಾಯುಕ್ತಕ್ಕೆ ಮತ್ತೇ ಅಧಿಕಾರ ನೀಡುವ ಚಿಂತನೆ ಇದೆ. ಈ ಬಗ್ಗೆ ಸಕಾ೯ರದ ಮುಂದೆ ಪರಿಶೀಲನೆ ಇದೆ. ಹೀಗಾಗಿ ನಮ್ಮ ಸರ್ಕಾರ ಸುಧಾರಣೆ ತರಲು ಮುಂದಾಗುತ್ತದೆ ಎಂದ ಸಚಿವ ಕಾರಜೋಳ ಅವರು, ಕಾಂಗ್ರೆಸ್‌ನವರು ರಾಜ್ಯದಲ್ಲಿ  ಲೋಕಾಯುಕ್ತ ಸಂಸ್ಥೆಯ ಬದಲಾಗಿ ತಮ್ಮ ಮೂಗಿನ ನೇರಕ್ಕೆ ಇರುವ ಎಸಿಬಿ ಸಂಸ್ಥೆಯನ್ನು ಹುಟ್ಟು ಹಾಕಿದರು. ಇದರಿಂದ ಕಾಂಗ್ರೆಸ್ ಆಡಳಿತದಲ್ಲಿ ಸ್ವಜನಪಕ್ಷಪಾತ, ಭ್ರಷ್ಟಾಚಾರ ಮಿತಿ ಮೀರಿ  ಆಡಳಿತ ಅಧೋಗತಿ ಹೋಗಿತ್ತು. ಈಗ ಮತ್ತೇ ಲೋಕಾಯುಕ್ತಕ್ಕೆ ಅಧಿಕಾರ ನೀಡಬೇಕು ಅನ್ನೋ ಚಿಂತನೆ ಸಕಾ೯ರದ ಮಟ್ಟದಲ್ಲಿ ಚಿಂತನೆ ಇದೆ ಎಂದು ಸಚಿವ ಕಾರಜೋಳ ಹೇಳಿದರು.

ಈ ಜನ್ಮದಲ್ಲೇ ಕಾಂಗ್ರೆಸ್ ರಿವೈವಲ್ ಆಗಲು ಸಾಧ್ಯವಿಲ್ಲ: ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮುಂದುವರೆಸಿದ ಸಚಿವ ಕಾರಜೋಳ, ಸುಳ್ಳು ಆರೋಪ ಮಾಡುವುದನ್ನು ಬಿಡಿ, ಜನರ ಮುಂದೆ ಹೋಗಿ ನಿಲ್ಲಿ ಎಂದರಲ್ಲದೆ, ಪ್ರಧಾನಿ ಮೋದಿ ಅವರ ಆಡಳಿತಕ್ಕೆ ದೇಶವಲ್ಲದೆ, ವಿದೇಶದಲ್ಲೂ ಮೆಚ್ಚುಗೆ ವ್ಯಕ್ತವಾಗಿದೆ. ಸಕಾ೯ರದ ಮೇಲೆ ಗೂಬೆ ಕೂರಿಸುವ ಕೆಲಸವನ್ನು ಮಾಡಬೇಡಿ. ಈ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಮತ್ತೇ ರಿವೈವಲ್ ಗಗುವ ಪರಿಸ್ಥಿತಿಯಲ್ಲಿ ಇಲ್ಲ, ಈ ಮಧ್ಯೆ ಕಾಂಗ್ರೆಸ್ ನಲ್ಲಿ ಉತ್ತರಾಧಿಕಾರಿ ನಾಯಕರು ಸಹ ಸಿಗ್ತಿಲ್ಲ ಎಂದು ಕಾರಜೋಳ ವ್ಯಂಗ್ಯವಾಡಿದರು.

ಮುಂದೆ ಸಿಎಂ ಆಗುವ ಕನಸು ಹೊತ್ತ ಮಾಜಿ ಸಿಎಂ ಸಿದ್ದರಾಮಯ್ಯನವರಿಂದ ಇಲ್ಲಸಲ್ಲದ ಆರೋಪ: ರಾಜ್ಯದಲ್ಲಿ ವಿವಾದಕ್ಕೀಡಾಗಿರುವ ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಮಾಜಿ ಸಿಎಂ ಸಿದ್ದರಾಮಯ್ಯ ಒತ್ತಾಯಿಸಿರೋ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಕಾರಜೋಳ, ಸಿದ್ದರಾಮಯ್ಯ ತಮಗೆ ಬೇಕಾದ್ದಕ್ಕೆ ಪಟ್ಟು ಹಿಡಿಯುತ್ತಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಾಳೆ ಸಿಎಂ ಆಗುವ ಆಸೆಯಿಂದ ಇಂದು ಇಲ್ಲ ಸಲ್ಲದ ಆರೋಪ ಯಾರ ಮೇಲಾದ್ರೂ ಮಾಡುತ್ತಾ ಹೋದರೆ ಅದಕ್ಕೆ ಅಥ೯ ಇರುವುದಿಲ್ಲ. ಇಂತಹ ನಿರಂತರ ಆಧಾರ ರಹಿತ ಆರೋಪಕ್ಕೆ ಕವಡೆ ಕಾಸಿನ ಕಿಮ್ಮತ್ತೂ ಸಹ ಸಿಗೋದಿಲ್ಲ. ಇದೊಂದು ಕೀಳುಮಟ್ಟದ ರಾಜಕಾರಣ ಆಗುತ್ತೆ ಎಂದು ಕಾರಜೋಳ ಹೇಳಿದರು.

ಚಹಾ ಮಾರುವವರು ಪ್ರಧಾನಿಯಾದರೂ, ಸಾಮಾನ್ಯ ಮನುಷ್ಯ ರಾಷ್ಟ್ರಪತಿಯಾದರು, ಸಿಎಂ ಆದರು, ಇದು ಬಿಜೆಪಿಯಲ್ಲಿ ಮಾತ್ರ ಸಾಧ್ಯ: ಸಿಎಂ ಆಗಲು ಕೋಟಿ ಕೋಟಿ ಹಣ ಕೊಡಬೇಕು ಎಂದಿರೋ ಯತ್ನಾಳ ಹೇಳಿಕೆ ವಿಚಾರ‌‌ವಾಗಿ ಮಾತನಾಡಿ, ನಮ್ಮ ಪಾರ್ಟಿಯಲ್ಲಿ ಚಹಾ ಮಾರುವ ಒಬ್ಬ ವ್ಯಕ್ತಿ ಈ ದೇಶದ ಪ್ರಧಾನಿಯಾದರು. ಈ ವ್ಯವಸ್ಥೆ ಕಾಂಗ್ರೆಸ್‌ನಲ್ಲಿ ಇದೆಯಾ..? ಇಷ್ಟು ವಷ೯ವಾದ್ರೂ ನೀವು ಕಾಶ್ಮೀರಿ ಪಂಡಿತರಿಗೆ ಗಂಟು ಬಿದ್ದೀರಿ, 75 ವಷ೯ವಾದರೂ ನೆಹರು ಮನೆತನ ಬಿಟ್ಟು ಹೊರಗೆ ಬರಲಾಗಲಿಲ್ಲ, ಒಬ್ಬ ಸಾಮಾನ್ಯ ಮನುಷ್ಯ ಸಿಎಂ ಆಗೋ ವ್ಯವಸ್ಥೆ ಇರೋದು ನಮ್ಮಲ್ಲೇ ಎಂದರು. ಯಾರೋ ಆರೋಪ ಮಾಡಿದರೋ  ಬಿಟ್ಟರೋ ನಮಗೆ ಗೊತ್ತಿಲ್ಲ. ಸಾಮಾನ್ಯ ಮನುಷ್ಯ ಈ ದೇಶದ ರಾಷ್ಟ್ರಪತಿಗಳಾಗಿದ್ದಾರೆ. ಈ ವ್ಯವಸ್ಥೆ ಬಿಜೆಪಿ ಬಿಟ್ಟು ಯಾರಲ್ಲೂ ಇಲ್ಲ ಎಂದರು ಕಾರಜೋಳ.

ಪ್ರೀತಂಗೌಡಗೆ ಪ್ರತಿಸವಾಲು ಹಾಕಿದ ಕುಮಾರಸ್ವಾಮಿ, ಈ ಸಲ ಹಾಸನ ರಾಜಕೀಯ ರಣಾಂಗಣ ಗ್ಯಾರಂಟಿ

ಸಂಸದ ಜಿಗಜಿನ್ನಿ ಅವರ ಮಾತಿಗೆ ನಾನು ಪ್ರತಿಕ್ರಿಯೆ ಮಾಡೋಲ್ಲ, ಅವರನ್ನೇ ಕೇಳಿ: ಸಂಸದ ರಮೇಶ ಜಿಗಜಿನ್ನಿ ಅವರು ಗೋವಿಂದ ಕಾರಜೋಳ ಸಿಎಂ ಆಗಬೇಕು ಎಂದಿರೋ ವಿಚಾರವಾಗಿ ಮಾತನಾಡಿ, ಇದನ್ನು ಬಿಡಿ, ಇಲ್ಲವೇ ಅವರನ್ನೇ ಕೇಳಿ ಎಂದರು. ಅಲ್ಲದೆ ಅವರು ಯಾಕೆ ಹೇಳಿದರೋ, ಏನು ಹೇಳಿದರೋ ಅಂತ ಅವರನ್ನೇ ಕೇಳಿ ಎಂದರಲ್ಲದೆ, ಅವರು ಹೇಳಿದ್ದು ಸದುದ್ದೇಶವೋ, ದುರುದ್ದೇಶವೋ ನನಗೆ ಗೊತ್ತಿಲ್ಲ, ಹೀಗಾಗಿ ಆ ವಿಚಾರದಲ್ಲಿ ಅವರನ್ನೇ ಕೇಳಿ ಎಂದು ಕಾರಜೋಳ ಹೇಳಿದರು.

Follow Us:
Download App:
  • android
  • ios