ಕಾಂಗ್ರೆಸ್‌ನಿಂದ 50 ಲಕ್ಷ ಸದಸ್ಯತ್ವದ ಟಾರ್ಗೆಟ್
- ರಾಜ್ಯ ಕಾಂಗ್ರೆಸ್ ವತಿಯಿಂದ 50 ಲಕ್ಷ ಸದಸ್ಯತ್ವ ನೋಂದಣಿಯ ಮಹತ್ವಾಕಾಂಕ್ಷೆಯೊಂದಿಗೆ ಹಮ್ಮಿಕೊಂಡಿರುವ ಕಾಂಗ್ರೆಸ್ ಸದಸ್ಯತ್ವ ನೋಂದಣಿ ಅಭಿಯಾನ
- ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಚಾಲನೆ
ಬೆಂಗಳೂರು (ನ.15): ರಾಜ್ಯ ಕಾಂಗ್ರೆಸ್ (Congress) ವತಿಯಿಂದ 50 ಲಕ್ಷ ಸದಸ್ಯತ್ವ ನೋಂದಣಿಯ ಮಹತ್ವಾಕಾಂಕ್ಷೆಯೊಂದಿಗೆ ಹಮ್ಮಿಕೊಂಡಿರುವ ಕಾಂಗ್ರೆಸ್ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ (Randeep Singh Surjwewala) ಅವರು ಭಾನುವಾರ ಚಾಲನೆ ನೀಡಿದ್ದು, ರಾಜ್ಯದ ಮೂಲೆ-ಮೂಲೆಯಲ್ಲೂ ಸದಸ್ಯತ್ವ ನೋಂದಣಿ ಯಶಸ್ವಿಗೊಳಿಸುವ ಮೂಲಕ 2023ರಲ್ಲಿ ಕಾಂಗ್ರೆಸ್ ಪಕ್ಷವನ್ನು ಶತಾಯ ಗತಾಯ ಅಧಿಕಾರಕ್ಕೆ ತರಬೇಕು ಎಂದು ಕರೆ ನೀಡಿದರು.
ಭಾನುವಾರ ನಗರದ ಅರಮನೆ ಮೈದಾನದಲ್ಲಿ (Palace Ground ) ನಡೆದ ಕಾರ್ಯಕ್ರಮದಲ್ಲಿ ಸುರ್ಜೇವಾಲಾ ನೇತೃತ್ವದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (DK Shivakumar), ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah), ಕೆಪಿಸಿಸಿ (KPCC) ಕಾರ್ಯಾಧ್ಯಕ್ಷರು ಹಾಗೂ ಹಿರಿಯ ನಾಯಕರು ವೇದಿಕೆಯ ಮೇಲೆ ಸದಸ್ಯತ್ವ ನೋಂದಣಿ ಅರ್ಜಿ ತುಂಬುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಸುರ್ಜೇವಾಲಾ, ದೇಶದ ಪಾಲಿಗೆ ಸಂವಿಧಾನವೇ ಧರ್ಮ. ಸಂವಿಧಾನಕ್ಕಿಂತ ದೊಡ್ಡ ಧರ್ಮ ಬೇರೊಂದಿಲ್ಲ. ಸಂವಿಧಾನ ಇಂದು ಅಪಾಯದಲ್ಲಿದ್ದು, ಅದರ ರಕ್ಷಣೆಗೆ ರಾಜ್ಯ ಹಾಗೂ ದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು. ಇದಕ್ಕಾಗಿ ಸದಸ್ಯತ್ವ ನೋಂದಣಿಯನ್ನು ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದರು.
50 ಲಕ್ಷ ಸದಸ್ಯತ್ವ:
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತನಾಡಿ, 2023ರಲ್ಲಿ ಪಕ್ಷವನ್ನು ಶತಾಯ ಗತಾಯ ಅಧಿಕಾರಕ್ಕೆ ತರಲು ಕಾಂಗ್ರೆಸ್ ಪಕ್ಷ ಎಲ್ಲಾ ರೀತಿಯ ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ. ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಪಕ್ಷವನ್ನು ಗಟ್ಟಿಗೊಳಿಸಲು ರಾಜ್ಯಾದ್ಯಂತ ಆನ್‌ಲೈನ್ (Online) ಹಾಗೂ ಆಫ್‌ಲೈನ್ (Offline) ಮೂಲಕ 50 ಲಕ್ಷ ಮಂದಿಗೆ ಕಾಂಗ್ರೆಸ್ ಸದಸ್ಯತ್ವ ಮಾಡಿಸಬೇಕು. ಯುವ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್ ಹಾಗೂ ಇನ್ನಿತರ ಮುಂಚೂಣಿ ಘಟಕಗಳಿಂದ ತಲಾ 1 ಲಕ್ಷ ಸದಸ್ಯತ್ವ ಮಾಡಿಸಬೇಕು. ಪ್ರತಿ ಮನೆ-ಮನೆಗೂ ಹೋಗಿ ಜನರ ಹೃದಯ ಗೆಲ್ಲಬೇಕು ಎಂದು ಕರೆ ನೀಡಿದರು. ಇದೇ ವೇಳೆ ನಕಲಿ ಸದಸ್ಯತ್ವ ಪತ್ತೆಯಾದರೆ ಸಂಬಂಧಪಟ್ಟಬ್ಲಾಕ್ ಅಧ್ಯಕ್ಷರನ್ನು ವಜಾಗೊಳಿಸುವುದಾಗಿ ಎಚ್ಚರಿಕೆ ನೀಡಿದರು.
ಮೋದಿ ಮೌಢ್ಯ ಪ್ರತಿಪಾದಕ:
ವಿಧಾನಸಭೆ ವಿರೋಧ ಪಕ್ಷದ (assembly) ನಾಯಕ ಸಿದ್ದರಾಮಯ್ಯ (Siddaramaiah) ಮಾತನಾಡಿ, ಜವಹಾರಲಾಲ್ (Jawaharlal Neharu) ನೆಹರೂ ಅವರು ದೇಶವನ್ನು ವೈಜ್ಞಾನಿಕತೆಯತ್ತ ಕೊಂಡೊಯ್ದು ವಿಶ್ವದ ಇತರೆ ಮುಂದುವರೆದ ರಾಷ್ಟ್ರಗಳ ಸಾಲಿಗೆ ತಂದು ನಿಲ್ಲಿಸಿದರು. ಆದರೆ, ಈಗಿನ ಪ್ರಧಾನಮಂತ್ರಿ ನರೇಂದ್ರ ಮೋದಿ (Prime minister narendra modi) ಜನರಲ್ಲಿ ಮೌಢ್ಯ ಬಿತ್ತುವ ಕೆಲಸ ಮಾಡುತ್ತಿದ್ದಾರೆ. ಮಹಾಮಾರಿ ಕೊರೋನಾ (Corona) ಓಡಿಸಲು ಚಪ್ಪಾಳೆ ತಟ್ಟಿ, ಶಂಖ, ಜಾಗಟೆ ಬಾರಿಸಿ ಎನ್ನುತ್ತಾರೆ. ಮೋದಿಯಂತೆ ಗೊಡ್ಡು ಸಂಪ್ರದಾಯ ಹಾಗೂ ಮೌಢ್ಯ ಪ್ರತಿಪಾದಿಸುವವರು ಮತ್ತೊಬ್ಬರು ಸಿಗುವುದಿಲ್ಲ ಎಂದು ಕಿಡಿಕಾರಿದರು.
ಕಾರ್ಯಕ್ರಮದಲ್ಲಿ ‘ವ್ಯಾಕ್ಸಿನೇಟ್ ಕರ್ನಾಟಕ’ ಅಭಿಯಾನದಲ್ಲಿ ವಿಜೇತರಾದ 20 ಮಂದಿ ಮಕ್ಕಳಿಗೆ ಟ್ಯಾಬ್ ಉಡುಗೊರೆಯಾಗಿ ನೀಡಲಾಯಿತು. ಕೆಪಿಸಿಸಿ ಮಾಜಿ ಅಧ್ಯಕ್ಷರಾದ ಡಾ.ಜಿ. ಪರಮೇಶ್ವರ್ (Dr G Parameshwar), ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ. ಶ್ರೀನಿವಾಸ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ರಾಮಲಿಂಗಾರೆಡ್ಡಿ, ಸಲೀಂ ಅಹಮದ್ ಸೇರಿ ಹಲವರು ಹಾಜರಿದ್ದರು.
ಪಕ್ಷ ಬಿಟ್ಟು ಹೋದವರಿಗೆ ಕಾಂಗ್ರೆಸ್ಸಿನಲ್ಲೇ ಮೋಕ್ಷ!
ಕಾಂಗ್ರೆಸ್ ಬಿಟ್ಟು ಹೋದವರಿಗೆ ಕಾಂಗ್ರೆಸ್ಸಿನಿಂದಲೇ ಮೋಕ್ಷ. ಹಿಂದೆ ಬಾಬು ಜಗಜೀವನ್ ರಾಮ್ ಅವರು ಪಕ್ಷ ಬಿಟ್ಟು ಬೇರೆ ಪಕ್ಷ ಸ್ಥಾಪಿಸಿ ಸಾಯುವಾಗ ಕಾಂಗ್ರೆಸ್ ಸದಸ್ಯನಾಗಿ ಸಾಯಬೇಕು ಎಂದು ಬಂದರು. ಪಕ್ಷ ಬಿಟ್ಟು ಹೋದವರೆಲ್ಲರೂ ವಾಪಸ್ಸು ಪಕ್ಷಕ್ಕೆ ಬಂದರೇನೆ ಮೋಕ್ಷ. ಅಂತಹ ಇತಿಹಾಸ ಹೊಂದಿರುವ ಪಕ್ಷ ಕಾಂಗ್ರೆಸ್ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
ನಿಜವಾದ ಕಾಂಗ್ರೆಸ್ಸಿಗರು ಮದ್ಯಪಾನ ಮಾಡಲ್ಲ: ಮೊಯ್ಲಿ
ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ ಮಾತನಾಡಿ, ನಿಜವಾದ ಕಾಂಗ್ರೆಸ್ಸಿಗರು ಮದ್ಯಪಾನ ಮಾಡುವುದಿಲ್ಲ, ಮಾಡಬಾರದು. ಕಾಂಗ್ರೆಸ್ಸಿನಲ್ಲಿರುವವರು ಈವರೆಗೆ ಮಾಡುತ್ತಿದ್ದರೂ ಇನ್ನು ಮುಂದೆ ಮದ್ಯಪಾನ ತ್ಯಜಿಸುತ್ತೇವೆ ಎಂಬ ಪ್ರತಿಜ್ಞೆ ಮಾಡಿ ಎಂದು ಹೇಳಿದರು. ಮಾಜಿ ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ಮಾತನಾಡಿ ಮಹಾತ್ಮಾ ಗಾಂಧೀಜಿ ಹೆಸರು ಹೇಳುವವರು, ಗಾಂಧೀಜಿ ಹೇಳಿರುವ ಏಳರಲ್ಲಿ ಒಂದಾದರೂ ಸತ್ಯ ವ್ರತ ಪಾಲಿಸಬೇಕು. ನಾನು ಮದ್ಯ ಸೇವಿಸಿಲ್ಲ, ಸೇವಿಸಲ್ಲ ಎಂದರು.
ರಾಜ್ಯಾದ್ಯಂತ ಜನಜಾಗೃತಿ ಯಾತ್ರೆ: ಡಿಕೆಶಿ
ರಾಜ್ಯಾದ್ಯಂತ ಜನರಿಗೆ ಬೆಲೆ ಏರಿಕೆ, ಬಿಜೆಪಿ ದುರಾಡಳಿತದ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ಜಿಲ್ಲೆ ಹಾಗೂ ತಾಲ್ಲೂಕು ಮಟ್ಟದಲ್ಲಿ 3-4 ಕಿ.ಮೀ.ಪಾದಯಾತ್ರೆ ನಡೆಸುವ ಮೂಲಕ ಜನಜಾಗೃತಿ ಯಾತ್ರೆ ಹಮ್ಮಿಕೊಳ್ಳಲಾಗುವುದು ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.