ಜೆಡಿಎಸ್‌ನ ಕೆಲ ಶಾಸಕರು ನಮ್ಮ ಟಚ್‌ನಲ್ಲಿದ್ದಾರೆ. ಆದರೆ, ಯಾರು ಅಂತಾ ಈಗಲೇ ಹೇಳಲ್ಲ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹೊಸ ಬಾಂಬ್‌ ಸಿಡಿಸಿದ್ದಾರೆ.

ಕೊಪ್ಪಳ (ಜೂ.28): ಜೆಡಿಎಸ್‌ನ ಕೆಲ ಶಾಸಕರು ನಮ್ಮ ಟಚ್‌ನಲ್ಲಿದ್ದಾರೆ. ಆದರೆ, ಯಾರು ಅಂತಾ ಈಗಲೇ ಹೇಳಲ್ಲ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹೊಸ ಬಾಂಬ್‌ ಸಿಡಿಸಿದ್ದಾರೆ. ತಾಲೂಕಿನ ಬಸಾಪುರ ಗ್ರಾಮದ ಬಳಿ ವಿಮಾನ ತಂಗುದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಜೆಡಿಎಸ್‌ ರಾಷ್ಟ್ರೀಯ ಪಕ್ಷ ಅಲ್ಲ. ಸ್ವಂತವಾಗಿ ಅಧಿಕಾರ ಹಿಡಿಯುವ ಸಾಮರ್ಥ್ಯ ಇಲ್ಲ. ಹಾಗಾಗಿ ಟಚ್‌ನಲ್ಲಿದ್ದಾರೆ ಎಂದರು. ಆದರೆ ಎಷ್ಟುಮಂದಿ ಸಂಪರ್ಕದಲ್ಲಿದ್ದಾರೆ ಮತ್ತು ಅವರು ಯಾರು ಯಾರು ಎಂದು ಮಾತ್ರ ಹೇಳಲಿಲ್ಲ ಎಂದರು. ಕುಮಾರಸ್ವಾಮಿ ಅವರು ಸಿಎಂ ಆಗುವ ಕುರಿತು ಹೇಳಿಕೆ ನೀಡಿದ್ದರೆ ಪಾಪ ಹೇಳಲಿ ಬಿಡಿ ಎಂದರು. 

ಇದೇ ವೇಳೆ ‘ಸಿಎಂ ಆಗುತ್ತೇನೆ ಎಂದು ನೀವೂ ಹೇಳಿ’ ಎಂದು ಪತ್ರಕರ್ತರ ಕಾಲೆಳೆದರು. ರಾಜನಾಗುತ್ತೇನೆ ಎಂದು ಹೇಳಿಕೊಳ್ಳಬಹುದು. ಆದರೆ ತೀರ್ಮಾನ ಮಾಡುವುದು ಜನ ಎಂದು ವ್ಯಂಗ್ಯವಾಡಿದರು. ಇನ್ನು ಸಚಿವ ಉಮೇಶ್‌ ಕತ್ತಿ ಅವರು ಪ್ರತ್ಯೇಕ ರಾಜ್ಯ ಹೇಳಿಕೆ ಬಗ್ಗೆ ಪ್ರತ್ರಿಕ್ರಿಯಿಸಿ, ಸಚಿವ ಉಮೇಶ ಕತ್ತಿ ಮೂರ್ಖ. ಕನ್ನಡದ್ರೋಹಿಯಾಗಿರುವುದರಿಂದಲೇ ಈ ರೀತಿಯಾಗಿ ಹೇಳಿಕೆ ನೀಡುತ್ತಿದ್ದಾರೆ. ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಅಂತಾ ಮಾತನಾಡುವುದೇ ದ್ರೋಹದ ಕೆಲಸ. ಅಂಥದ್ದರಲ್ಲಿ ಪ್ರತ್ಯೇಕ ರಾಜ್ಯ ಎಂದು ಮಾತನಾಡಿದರೆ ಹೇಗೆ ಎಂದು ವಾಗ್ದಾಳಿ ನಡೆಸಿದರು. ಏಕೀಕರಣದ ಉದ್ದೇಶ ಕತ್ತಿಗೆ ಗೊತ್ತಿದೆಯೆ ಎಂದು ಕಿಡಿಕಾರಿದರು.

ಸಿದ್ದರಾಮಯ್ಯ ಸಾಮರ್ಥ್ಯ ಡಬಲ್‌ ಎಂಜಿನ್‌ಗಿಲ್ಲ: ಡಿ.ಕೆ.ಶಿವಕುಮಾರ್‌

ಸಂಚಲನ ಮೂಡಿಸಿದ ಸಿದ್ದರಾಮಯ್ಯ, ಅನ್ಸಾರಿ ಚರ್ಚೆ: ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಮಾಜಿ ಸಚಿವ ಇಕ್ಬಾಲ್‌ ಅನ್ಸಾರಿ ಅವರು ಗುಸುಗುಸು ಮಾತನಾಡಿರುವುದು ಕಾರ್ಯಕರ್ತರಲ್ಲಿ ಸಂಚಲನ ಮೂಡಿಸಿತು. ಬಸಾಪುರದ ವಿಮಾನ ತಂಗುದಾಣಕ್ಕೆ ಆಗಮಿಸಿದ್ದ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್‌ ನಾಯಕರು ಸ್ವಾಗತಿಸಿದರು. ನಂತರ ಸಿದ್ದರಾಮಯ್ಯ ಮತ್ತು ಅನ್ಸಾರಿ ಅವರು 5ನಿಮಿಷಗಳ ಕಾಲ ಮಾತನಾಡಿದರು. ಬರುವ ವಿಧಾನಸಭೆಗೆ ಚುನಾವಣೆಗೆ ಸ್ಪರ್ಧೆ, ವಿಧಾನಪರಿಷತ್‌ ಮಾಜಿ ಸದಸ್ಯ ಎಚ್‌.ಆರ್‌. ಶ್ರೀನಾಥ ಕಾಂಗ್ರೆಸ್‌ ಸೇರ್ಪಡೆ, ಡಿಜಿಟಲ್‌ ಸದಸ್ಯತ್ವ ಸ್ಥಾನ ಸೇರಿದಂತೆ ಕಾಂಗ್ರೆಸ್‌ ಬೆಳವಣಿಗೆಯ ಬಗ್ಗೆ ಮಾತನಾಡಿದರು ಎನ್ನಲಾಗಿದೆ. ಅದರಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಜತೆ ಪ್ರತ್ಯೇಕ ಮಾತುಕತೆ ನಡೆಸಿರುವುದು ಕಾರ್ಯಕರ್ತರಲ್ಲಿ ಅಚ್ಚರಿ ಮೂಡಿಸಿದೆ.

ಪಟ್ಟಭದ್ರರಿಂದ ಮೀಸಲಿಗೆ ವಿರೋಧ: ಸಿದ್ದರಾಮಯ್ಯ ಕಿಡಿ

ದಲಿತ ಸಿಎಂ: ಕಾಂಗ್ರೆಸ್‌ ದಲಿತ ಸಿಎಂ ಮಾಡುವ ಕುರಿತು ಬಿಜೆಪಿ ಟ್ವೀಟ್‌ ಮಾಡುತ್ತಿದೆ. ಇದನ್ನೇಕೆ ಮಾಡುತ್ತಿದ್ದಾರೆ. ಬೇಕಾದರೆ ತಾವೇ ಮಾಡಿಕೊಳ್ಳಲಿ, ಯಡಿಯೂರಪ್ಪ ಅವರು ಬದಲಾಯಿಸಿದಾಗ ಗೋವಿಂದ ಕಾರಜೋಳ ಅವರನ್ನು ಸಿಎಂ ಮಾಡಬಹುದಿತ್ತಲ್ಲ. ಮಾಡಲಿಲ್ಲ ಯಾಕೆ? ಕಾಂಗ್ರೆಸ್‌ ಮಾತ್ರ ದಲಿತ ಸಿಎಂ ಮಾಡಲು ಸಾಧ್ಯ. ಇಂದಲ್ಲ, ನಾಳೆ ನಮ್ಮ ಪಕ್ಷವೇ ಮಾಡುತ್ತದೆಯೇ ಹೊರತು ಬಿಜೆಪಿ ಮಾಡುವುದಿಲ್ಲ ಎಂದರು. ಬೆಂಗಳೂರಲ್ಲಿ ವಾರ್ಡ್‌ಗಳ ವಿಂಗಡಣೆಯನ್ನು ಬಿಜೆಪಿ ಸರ್ಕಾರ ತನಗೆ ಬೇಕಾದಂತೆ ಮಾಡಿದೆ. ಆದರೂ ಚುನಾವಣೆಯಲ್ಲಿ ಗೆಲ್ಲುವುದು ನಾವೇ. ಬಿಜೆಪಿ ಕುರಿತು ಜನರು ಭ್ರಮನಿರಸನಗೊಂಡಿದ್ದಾರೆ ಎಂದರು. ಶಿವಸೇನೆ ಸಂಸದ ಸಂಜಯ ರಾವುತ್‌ ಅವರಿಗೆ ಇ.ಡಿ. ನೋಟಿಸ್‌ ಜಾರಿ ಮಾಡಿದ ಕುರಿತು ನನಗೆ ಮಾಹಿತಿ ಇಲ್ಲ. ಆದರೆ, ಕೇಂದ್ರ ಇ.ಡಿ.ಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಮಾತ್ರ ಸುಳ್ಳಲ್ಲ ಎಂದರು.