ಬೆಂಗಳೂರು :  ಆಡಳಿತಾರೂಢ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಪ್ರಕಾರ ಸಮ್ಮಿಶ್ರ ಸರ್ಕಾರಕ್ಕೆ ಬಂದೊದಗಿದ್ದ ಆತಂಕ ದೂರವಾಗಿದ್ದರೂ ಪ್ರತಿಪಕ್ಷ ಬಿಜೆಪಿ ಪ್ರಕಾರ ಮಾತ್ರ ಇನ್ನೂ ಎಲ್ಲವೂ ಮುಗಿದಿಲ್ಲ. 

ಮಾಜಿ ಸಚಿವ ಹಾಗೂ ಶಾಸಕ ರಮೇಶ್ ಜಾರಕಿಹೊಳಿ ಸೇರಿದಂತೆ ಕಾಂಗ್ರೆಸ್ಸಿನ ಹಲವು ಅತೃಪ್ತ ಶಾಸಕರು ರಾಜೀನಾಮೆ ನೀಡುವ ಸಾಧ್ಯತೆ ಹೆಚ್ಚಾಗಿದ್ದು, ಸಮ್ಮಿಶ್ರ ಸರ್ಕಾರಕ್ಕೆ ಎದುರಾಗಿರುವ ಆಪತ್ತು ನಿವಾರಣೆಯಾಗಿಲ್ಲ ಎಂದು ಬಿಜೆಪಿಯ ಉನ್ನತ ಮೂಲಗಳು ತಿಳಿಸಿವೆ. ಅತೃಪ್ತ ಶಾಸಕರ ಪಾಳೆಯದಲ್ಲಿದ್ದ ಕೆಲವರು ಶುಕ್ರವಾರದ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಪಾಲ್ಗೊಳ್ಳುವ ಸಂಬಂಧ ವಾಪಸಾಗಿರಬಹುದು. ಹಾಗೆಂದ ಮಾತ್ರಕ್ಕೆ ಕಳೆದ ಹಲವು ದಿನಗಳಿಂದ ನಡೆದ ಬೆಳವಣಿಗೆ ಮುಕ್ತಾಯವಾಯಿತು ಎಂದರ್ಥವಲ್ಲ.

ಇನ್ನು ಮೇಲೆ ಆರಂಭವಾಗಲಿದೆ. ಕೆಲವು ಶಾಸಕರು ರಾಜೀನಾಮೆ ನೀಡುವುದು ನಿಶ್ಚಿತ. ಕಾದು ನೋಡಿ ಎಂಬ ವಿಶ್ವಾಸದ ಮಾತುಗಳು ಬಿಜೆಪಿ ಪಾಳೆಯದಿಂದ ಕೇಳಿಬಂದಿವೆ. ಬೇರೆ ಬೇರೆ ಕಾರಣಗಳಿಗಾಗಿ ಕಾಂಗ್ರೆಸ್ಸಿನ ಕೆಲವು ಅತೃಪ್ತ ಶಾಸಕರು ವಾಪಸ್ ಗೂಡು ಸೇರಿಕೊಂಡಿರಬಹುದು. ಅವರಿಗೆ ತರಹೇವಾರಿ ಆಮಿಷಗಳನ್ನೂ ಒಡ್ಡಲಾಗಿದೆ. 

ಹೀಗಾಗಿ, ಕಾಂಗ್ರೆಸ್ ಶಾಸಕಾಂಗ ಸಭೆಗೆ ಹಾಜರಾಗಿ ಸದ್ಯಕ್ಕೆ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳಬಹುದು. ಆದರೆ, ಅವರಲ್ಲಿರುವ ಅಸಮಾಧಾನ ತಣಿಸುವುದಕ್ಕೆ ಸಾಧ್ಯವಿಲ್ಲ. ಅನೇಕರು ಪಕ್ಷ ತೊರೆಯುವ ತೀರ್ಮಾನವನ್ನು ಕೈಗೊಂಡಿದ್ದಾರೆ ಎಂಬ ವಾದವನ್ನು ಬಿಜೆಪಿ ನಾಯಕರು ಮುಂದಿಡುತ್ತಿದ್ದಾರೆ. ಆದರೆ, ಬಿಜೆಪಿ ನಾಯಕರ ಈ ವಿಶ್ವಾಸದ ಮಾತುಗಳಿಗೆ ಯಾವುದೇ ಸ್ಪಷ್ಟ ಆಧಾರವಿಲ್ಲದಿದ್ದರೂ ಕಡ್ಡಿ ಮುರಿದಂತೆ ಹೇಳುತ್ತಿರುವುದು ಅನುಮಾನಕ್ಕೂ ಎಡೆ ಮಾಡಿಕೊಟ್ಟಿದೆ. 

ಒಂದೆಡೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಲ್ಲಿ ಸದ್ಯಕ್ಕೆ ಉದ್ಭವಿಸಿದ್ದ ಸಂಕಷ್ಟ ನಿವಾರಣೆಯಾಗಿದೆ ಎಂಬ ಸಂಭ್ರಮದ ವಾತಾವರಣ ಕಂಡುಬರುತ್ತಿರುವ ಮಧ್ಯೆಯೇ ಬಿಜೆಪಿ ಮಾತ್ರ ತನಗೆ ಸೋಲುಂಟಾಗಿಲ್ಲ ಎಂದು ಒಳಗೊಳಗೇ ಮೀಸೆ ತಿರುವುತ್ತಿದೆ. ತೆರೆಮರೆಯಲ್ಲಿ ಬಿಜೆಪಿ ಪ್ರಯತ್ನ ಕೈಬಿಟ್ಟಿಲ್ಲ ಎಂದು ತಿಳಿದು ಬಂದಿದೆ