Asianet Suvarna News Asianet Suvarna News

ಸಾರಿಗೆ ನೌಕರನ ಆತ್ಮಹತ್ಯೆ ಯತ್ನ: ಚೆಲುವರಾಯಸ್ವಾಮಿ, ಎಚ್ಡಿಕೆ, ಸಿದ್ದು ಮಾತಿನ ಚಕಮಕಿ, ಕೋಲಾಹಲ

ಕೆಎಸ್ಸಾರ್ಟಿಸಿಯ ಚಾಲಕ ಕಂ ನಿರ್ವಾಹಕ ಜಗದೀಶ್‌ ಎಂಬುವರ ಆತ್ಮಹತ್ಯೆ ಯತ್ನ ಪ್ರಕರಣ ಸದನದಲ್ಲಿ ಪ್ರತಿಧ್ವನಿಸಿ ಕೋಲಾಹಲಕರ ಸನ್ನಿವೇಶ ಸೃಷ್ಟಿಸಿದೆ. ಈ ವಿಷಯದಲ್ಲಿ ಪ್ರತಿಪಕ್ಷ ಹಾಗೂ ಆಡಳಿತ ಪಕ್ಷದ ಸದಸ್ಯರ ನಡುವೆ ತೀವ್ರ ಮಾತಿನ ಚಕಮಕಿ, ಆರೋಪ-ಪ್ರತ್ಯಾರೋಪಗಳ ಸುರಿಮಳೆಯೇ ಆಗಿದೆ. 

mandya ksrtc driver case created a ruckus in the assembly session gvd
Author
First Published Jul 7, 2023, 6:03 AM IST | Last Updated Jul 7, 2023, 6:03 AM IST

ವಿಧಾನಸಭೆ (ಜು.07): ಕೆಎಸ್ಸಾರ್ಟಿಸಿಯ ಚಾಲಕ ಕಂ ನಿರ್ವಾಹಕ ಜಗದೀಶ್‌ ಎಂಬುವರ ಆತ್ಮಹತ್ಯೆ ಯತ್ನ ಪ್ರಕರಣ ಸದನದಲ್ಲಿ ಪ್ರತಿಧ್ವನಿಸಿ ಕೋಲಾಹಲಕರ ಸನ್ನಿವೇಶ ಸೃಷ್ಟಿಸಿದೆ. ಈ ವಿಷಯದಲ್ಲಿ ಪ್ರತಿಪಕ್ಷ ಹಾಗೂ ಆಡಳಿತ ಪಕ್ಷದ ಸದಸ್ಯರ ನಡುವೆ ತೀವ್ರ ಮಾತಿನ ಚಕಮಕಿ, ಆರೋಪ-ಪ್ರತ್ಯಾರೋಪಗಳ ಸುರಿಮಳೆಯೇ ಆಗಿದೆ. ಆತ್ಮಹತ್ಯೆ ಯತ್ನಕ್ಕೆ ಸಚಿವ ಚೆಲುವರಾಯಸ್ವಾಮಿ ಕಾರಣ ಎಂದು ಜಗದೀಶ್‌ ಪತ್ರ ಬರೆದಿಟ್ಟ ಕಾರಣ ಪ್ರತಿಪಕ್ಷಗಳು ಚೆಲುವರಾಯಸ್ವಾಮಿ ರಾಜೀನಾಮೆಗೆ ಪಟ್ಟು ಹಿಡಿದು ಇಡೀ ದಿನ ಧರಣಿ ನಡೆಸಿದರೆ, ಈ ಪ್ರಕರಣಕ್ಕೂ ಸಚಿವರಿಗೂ ಸಂಬಂಧವಿಲ್ಲ ಎಂದು ಆಡಳಿತ ಪಕ್ಷದ ಸದಸ್ಯರು ವಾದಿಸಿದ್ದಾರೆ.

ಅಂತಿಮವಾಗಿ ಈ ಪ್ರಕರಣ ಕುರಿತು ಗೃಹ ಇಲಾಖೆ ಮತ್ತು ಸಾರಿಗೆ ಇಲಾಖೆ ಜಂಟಿ ತನಿಖೆ ನಡೆಸುವುದಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಪ್ರಕಟಿಸಿದ ನಂತರ ಧರಣಿ ಹಿಂಪಡೆಯಲಾಗಿದೆ. ಆ ವೇಳೆಗೆ ಕಲಾಪದ ಬಹುತೇಕ ಅವಧಿ ಮುಗಿದಿತ್ತು. ಗುರುವಾರ ಶೂನ್ಯವೇಳೆಯಲ್ಲಿ ಬಿಜೆಪಿಯ ಬಸವರಾಜ ಬೊಮ್ಮಾಯಿ ವಿಷಯ ಪ್ರಸ್ತಾಪಿಸಿ, ನಾಗಮಂಗಲ ಬಸ್‌ ಡಿಪೋ ಚಾಲಕ ಕಂ ನಿರ್ವಾಹಕ ಜಗದೀಶ್‌ ಅವರನ್ನು ಮದ್ದೂರಿಗೆ ವರ್ಗಾವಣೆ ಮಾಡಲಾಗಿತ್ತು. ಅದಕ್ಕೆ ಸಚಿವ ಚೆಲುವರಾಯಸ್ವಾಮಿ ಅವರೇ ಕಾರಣ ಎಂದು ಸೂಸೈಡ್‌ ನೋಟ್‌ ಬರೆದು ವಿಷ ಸೇವಿಸಿದ್ದಾರೆ. 

ಹೊಲ ಉತ್ತಿ, ಬೀಜ ಬಿತ್ತಿ, ಬೆವರು ಹೊಳೆ ಹರಿಸಿ ಡಿಕೆಶಿ 'ಲುಲುಮಾಲ್' ಕಟ್ಟಿದ್ರಾ?: ಎಚ್‌.ಡಿ.ಕುಮಾರಸ್ವಾಮಿ

ಹೀಗಾಗಿ ಚೆಲುವರಾಯಸ್ವಾಮಿ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು ಹಾಗೂ ಪ್ರಕರಣದ ಕುರಿತಂತೆ ಸೂಕ್ತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು. ಧ್ವನಿಗೂಡಿಸಿದ ಎಚ್‌.ಡಿ.ಕುಮಾರಸ್ವಾಮಿ, ಜಗದೀಶ್‌ ಪತ್ನಿ ಕಾಂತಾಪುರ ಗ್ರಾಮ ಪಂಚಾಯತಿಯ ಸದಸ್ಯೆ. ಆ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆಯಲ್ಲಿ ಕಾಂಗ್ರೆಸ್‌ ಬೆಂಬಲಿತ ಸದಸ್ಯರು ಅಧ್ಯಕ್ಷ, ಉಪಾಧ್ಯಕ್ಷರಾಗಲು ಬೆಂಬಲ ನೀಡುವಂತೆ ಆಕೆಗೆ ತಿಳಿಸಲಾಗಿತ್ತು. ಬೆಂಬಲ ನೀಡದಿದ್ದರೆ ಜಗದೀಶ್‌ರನ್ನು ಬೇರೆ ಡಿಪೋಗೆ ವರ್ಗಾವಣೆ ಮಾಡುತ್ತೇವೆ ಎಂದು ಸ್ಥಳೀಯ ಕಾಂಗ್ರೆಸ್‌ ಮುಖಂಡರು ಬೆದರಿಕೆ ಹಾಕಿದ್ದರು. 

ಅದಕ್ಕೆ ಸಚಿವ ಚೆಲುವರಾಯಸ್ವಾಮಿ ಅವರ ಬೆಂಬಲವೂ ಇತ್ತು. ಇದಾದ ನಂತರ ಜಗದೀಶ್‌ರನ್ನು ನಾಗಮಂಗಲದಿಂದ ಮದ್ದೂರು ಘಟಕಕ್ಕೆ ವರ್ಗಾವಣೆ ಮಾಡಲಾಗಿದೆ ಎಂದು ಆರೋಪಿಸಿದರು. ಜತೆಗೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇನ್ನೂ ಎಫ್‌ಐಆರ್‌ ದಾಖಲಿಸಿಲ್ಲ. ಹೀಗಾಗಿ ಸಾಕ್ಷ್ಯ ನಾಶ, ದಾಖಲೆಗಳನ್ನು ತಿರುಚುವ ಕೆಲಸಗಳಾಗುತ್ತಿವೆ. ಕೂಡಲೆ ಎಫ್‌ಐಆರ್‌ ದಾಖಲಿಸಿ, ಸೂಕ್ತ ರೀತಿಯ ತನಿಖೆ ನಡೆಯಬೇಕು. ತನಿಖಾ ವರದಿ ಬರುವವರೆಗೆ ಚೆಲುವರಾಯಸ್ವಾಮಿ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿದರು. ಪ್ರತಿಕ್ರಿಯಿಸಿದ ಚೆಲುವರಾಯಸ್ವಾಮಿ, ಜಗದೀಶ್‌ ವರ್ಗಾವಣೆಗೆ ಸಂಬಂಧಿಸಿದಂತೆ ತಾನು ಯಾವುದೇ ಪತ್ರ ಅಥವಾ ದೂರವಾಣಿ ಕರೆ ಮಾಡಿಲ್ಲ. 

ಬದಲಿಗೆ ಜಗದೀಶ್‌ ಸಂಬಂಧಿ ನನ್ನ ಬಳಿಗೆ ಬಂದು ವರ್ಗಾವಣೆ ಬಗ್ಗೆ ತಿಳಿಸಿ, ಅದನ್ನು ತಡೆಯುವಂತೆ ಕೋರಿದರು. ಅದಕ್ಕಾಗಿ ನಾಗಮಂಗಲ ಡಿಪೋ ವ್ಯವಸ್ಥಾಪಕರಿಗೆ ಕರೆ ಮಾಡಿ ವರ್ಗಾವಣೆಗೆ ಕಾರಣ ಕೇಳಿದೆ. ಅದಕ್ಕೆ ಅವರು, ಮಹಿಳಾ ಪ್ರಯಾಣಿಕರೊಂದಿಗೆ ಅನುಚಿತವಾಗಿ ವರ್ತಿಸಿದ ಕಾರಣಕ್ಕಾಗಿ ವರ್ಗಾವಣೆ ಮಾಡಲಾಗಿದೆ ಎಂಬ ಮಾಹಿತಿ ನೀಡಿದರು. ಈ ಬಗ್ಗೆ ಇಲಾಖಾ ವಿಚಾರಣೆ ನಡೆಸಿ, ವರ್ಗಾವಣೆಯನ್ನು ತಡೆಹಿಡಿಯಿರಿ ಎಂದು ಹೇಳಿದ್ದೆ. ಅದಾದ ನಂತರವೂ ಜಗದೀಶ್‌ ಡಿಪೋದಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ವಿವರಿಸಿದರು. ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದ್ದ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಕುಟುಂಬದವರು ಮುಂದಾದರೂ ಎಚ್‌.ಡಿ.ಕುಮಾರಸ್ವಾಮಿ ಅವರೇ ಕುಟುಂಬದವರಿಗೆ ಕರೆ ಮಾಡಿ ನಾನು ಹೇಳುವವರೆಗೆ ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಡಿ ಎಂದಿದ್ದಾರೆ. ಇದು ಸರಿಯೇ? ರಾಜಕೀಯಕ್ಕಾಗಿ ಈ ಪ್ರಕರಣ ಬಳಸುತ್ತಿರುವುದು ಇದರಿಂದ ಸ್ಪಷ್ಟವಾಗುತ್ತಿದೆ ಎಂದು ಆರೋಪಿಸಿದರು.

ಕೊಲೆಗಡುಕ ರಾಜಕಾರಣ ಮಾಡಬೇಡಿ: ಅದಕ್ಕೆ ತೃಪ್ತರಾಗದ ಎಚ್‌.ಡಿ.ಕುಮಾರಸ್ವಾಮಿ, ರಾಜಕೀಯಕ್ಕಾಗಿ ವರ್ಗಾವಣೆ ಮಾಡುವುದನ್ನು ಬಿಡಿ. ನನ್ನ ಜೀವನದಲ್ಲಿ ಸಾಕಷ್ಟುಜನರ ಜೀವ ಉಳಿಸಿದ್ದೇನೆ. ಇವರ ತರಹ ಕೊಲೆಗಡುಕ ರಾಜಕಾರಣ ಮಾಡಿಲ್ಲ ಎಂದು ಆಕ್ರೋಶ ಹೊರಹಾಕಿದರು. ಇದನ್ನು ತೀವ್ರವಾಗಿ ಆಕ್ಷೇಪಿಸಿದ ಕಾಂಗ್ರೆಸ್‌ ಶಾಸಕರು, ಕೊಲೆಗಡುಕ ರಾಜಕಾರಣ ಎಂಬ ಪದವನ್ನು ಕಡತದಿಂದ ತೆಗೆಯುವಂತೆ ಸ್ಪೀಕರ್‌ರಲ್ಲಿ ಆಗ್ರಹಿಸಿದರು.

ತನಿಖೆಗೆ ಒತ್ತಾಯಿಸಿ ವಿಪಕ್ಷಗಳ ಧರಣಿ: ಮಧ್ಯಪ್ರವೇಶಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪ್ರಕರಣದ ಕುರಿತು ಇಲಾಖಾ ತನಿಖೆ ನಡೆಸುತ್ತೇವೆ. ಜಗದೀಶ್‌ ವರ್ಗಾವಣೆಗೂ ಸಚಿವ ಚೆಲುವರಾಯಸ್ವಾಮಿಗೂ ಸಂಬಂಧವಿಲ್ಲ. ಆಡಳಿತಾತ್ಮಕ ಕಾರಣದಿಂದ ವರ್ಗಾವಣೆ ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಿದರು.ಅದರಿಂದ ವಿಪಕ್ಷಗಳು ತೃಪ್ತರಾಗದೇ ಧರಣಿಗೆ ಇಳಿದವು. ಆಗ ಸ್ಪೀಕರ್‌ ಸದನವನ್ನು ಕೆಲಹೊತ್ತು ಮುಂದೂಡಿದರು.

ಜಂಟಿ ತನಿಖೆಗೆ ಆದೇಶ: ಸದನ ಮತ್ತೆ ಸಮಾವೇಶಗೊಂಡಾಗ ಜಗದೀಶ್‌ ಆತ್ಮಹತ್ಯೆ ಯತ್ನ ಪ್ರಕರಣವನ್ನು ಸಾರಿಗೆ ಇಲಾಖೆಯನ್ನೂ ಒಳಗೊಂಡು ಗೃಹ ಇಲಾಖೆಯು ಸಮಗ್ರ ತನಿಖೆ ನಡೆಸಿ ವರದಿ ನೀಡಲಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ತಿಳಿಸಿದರು. ಎಚ್‌.ಡಿ.ಕುಮಾರಸ್ವಾಮಿ ಮಾತನಾಡಿ, ಸ್ಪೀಕರ್‌ ಅವರ ಮನವಿ ಮೇರೆಗೆ ನಾವು ನಮ್ಮ ಧರಣಿ ವಾಪಸ್‌ ಪಡೆದಿದ್ದೇವೆ. ಆದರೆ, ನಿಷ್ಪಕ್ಷಪಾತ ತನಿಖೆ ಆಗಬೇಕು. ಇದರಲ್ಲಿ ಸ್ಥಳೀಯ ಮುಖಂಡರ ಪಾತ್ರ ಇದೆಯಾ, ಸ್ಥಳೀಯ ಅಧಿಕಾರಿಗಳ ಪಾತ್ರ ಇದೆಯಾ ಎಂಬುದು ಹೊರಗೆ ಬಂದು ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದರು.

ರಾಜಕೀಯದ ತೆವಲುಗಳಿಗೆ ಅಮಾಯಕರ ಜೀವದ ಜೊತೆ ಚೆಲ್ಲಾಟ: ಸರ್ಕಾರದ ವಿರುದ್ಧ ಎಚ್‌ಡಿಕೆ ಕಿಡಿ

ಜೊತೆಗೆ ಆತ್ಮಹತ್ಯೆಗೆ ಯತ್ನಿಸಿರುವ ವ್ಯಕ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವನ ಪೂರ್ಣ ಚಿಕಿತ್ಸಾ ವೆಚ್ಚ ಸರ್ಕಾರ ಭರಿಸಬೇಕು. ಅವರ ಕುಟುಂಬದ ಪರಿಸ್ಥಿತಿಯೂ ಸರಿ ಇಲ್ಲ. ಒಬ್ಬ ಮಗ ಹೃದ್ರೋಗದಿಂದ ಬಳಲುತ್ತಿದ್ದಾನೆ. ಆತನ ಪತ್ನಿಗೆ ಕಿಡ್ನಿ ಸಮಸ್ಯೆ ಇದ್ದು ಡಯಾಲಿಸಿಸ್‌ ಮಾಡಿಸುತ್ತಿದ್ದಾರೆ. ಇಂತಹ ಸ್ಥಿತಿಯಲ್ಲಿ ವರ್ಗಾವಣೆ ಮಾಡುವುದು ಸರಿಯಲ್ಲ. ಆ ವ್ಯಕ್ತಿಯ ವರ್ಗಾವಣೆ ರದ್ದುಪಡಿಸಿ ಹಿಂದೆ ಕೆಲಸ ಮಾಡುತ್ತಿದ್ದ ಸ್ಥಳದಲ್ಲೇ ಕಾರ್ಯನಿರ್ವಹಿಸಲು ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು. ಪರಿಶೀಲಿಸುವ ಭರವಸೆ ಸರ್ಕಾರದಿಂದ ದೊರೆತ ನಂತರ ವಿಷಯಕ್ಕೆ ತೆರೆ ಬಿತ್ತು.

Latest Videos
Follow Us:
Download App:
  • android
  • ios