Asianet Suvarna News Asianet Suvarna News

ಮಂಡ್ಯದಲ್ಲಿ ಕಮಲಕ್ಕೆ ಸಿಕ್ತು ಯುವಶಕ್ತಿ, ಜೆಡಿಎಸ್‌ನ ಯುವನಾಯಕರು ಬಿಜೆಪಿ ಸೇರ್ಪಡೆ

* ಮಂಡ್ಯದಲ್ಲಿ ಬಿಜೆಪಿಗೆ ಸಿಕ್ತು ಯುವಶಕ್ತಿ.
* ಜೆಡಿಎಸ್‌ನ ಯುವನಾಯಕರು ಬಿಜೆಪಿ ಸೇರ್ಪಡೆ.
* ಮಾಜಿ ಸಚಿವ ಎಸ್‌ಡಿ ಜಯರಾಂ ಪುತ್ರ ಅಶೋಕ್ ಹಾಗೂ ಮಾಜಿ ಐಆರ್‌ಎಸ್ ಅಧಿಕಾರಿ ಬಿಜೆಪಿಗೆ

Mandya JDS Youth Leaders Joins BJP rbj
Author
Bengaluru, First Published May 7, 2022, 4:27 PM IST

ವರದಿ : ನಂದನ್ ರಾಮಕೃಷ್ಣ, ಏಷ್ಯಾನೆಟ್ ಸುವರ್ಣ ನ್ಯೂಸ್, ಮಂಡ್ಯ

ಮಂಡ್ಯ, (ಮೇ.07) :
2023ರ ವಿಧಾನಸಭಾ ಚುನಾವಣಗೆ ಒಂದು ವರ್ಷ ಬಾಕಿ ಇದೆ. ರಾಜ್ಯದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರ ಹಿಡಿಯಲು ಈಗಾಗಲೇ ತಂತ್ರಗಾರಿಕೆ ಆರಂಭಿಸಿದೆ. ಬಿಜೆಪಿಯ ಪಾಲಿಗೆ ಇದುವರೆಗೂ ಮರೀಚಿಕೆಯಾಗೇ ಉಳಿದಿರುವ ಹಳೆ ಮೈಸೂರು ಭಾಗದಲ್ಲಿ ಮತಬೇಟೆಗಾಗಿ ಯುವಕ ಮೇಲೇ ಬಿಜೆಪಿ ಕಣ್ಣಿಟ್ಟಿದೆ.

ನೆಲೆಯಿಲ್ಲದ ಕ್ಷೇತ್ರಗಳನ್ನೇ ಬಿಜೆಪಿ ನಾಯಕರು ಟಾರ್ಗೆಟ್ ಮಾಡ್ತಿದ್ದು, ಮಂಡ್ಯದಲ್ಲಿ ಬೇರೆ ಪಕ್ಷಗಳ ನಾಯಕರನ್ನ ತನ್ನತ್ತ ಸೆಳೆಯುತ್ತಿದ್ದಾರೆ. ಮಂಡ್ಯ, ಮೈಸೂರು, ಚಾಮರಾಜನಗರ ಸೇರಿದಂತೆ ಹಳೇ ಭಾಗದಲ್ಲಿ ಬಿಜೆಪಿ ಪಕ್ಷ ತನ್ನ ಬಲವರ್ಧನೆಗೆ ಪ್ಲಾನ್ ಮಾಡಿದೆ. ನೆಲೆಯಿಲ್ಲದ ಕ್ಷೇತ್ರಗಳಲ್ಲಿ ಗೆಲ್ಲುವ ಭರವಸೆ ಇರುವ ಅನ್ಯ ಪಕ್ಷದ ನಾಯಕರುಗಳನ್ನ ತಮ್ಮ ಪಕ್ಷಕ್ಕೆ ಸೆಳೆಯುತ್ತಿದೆ. ಪ್ರಮುಖವಾಗಿ ಜೆಡಿಎಸ್ ಭದ್ರಕೋಟೆ ಮಂಡ್ಯದಲ್ಲಿ ಜೆಡಿಎಸ್ ನಾಯಕರನ್ನೇ ಬಿಜೆಪಿ ಟಾರ್ಗೆಟ್ ಮಾಡ್ತಿದೆ. ಹೆಚ್ಚಾಗಿ ಯುವ ನಾಯಕರನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಳ್ಳುವ ಮೂಲಕ ಮಂಡ್ಯದಲ್ಲಿ ಭದ್ರವಾಗಿ ಬಿಜೆಪಿ ಕಟ್ಟಲು ಮುಂದಾಗಿದೆ. 

ಮಂಡ್ಯದಲ್ಲಿ ಬಿಜೆಪಿ ಬಿಗ್ ಆಪರೇಷನ್, ಗರಿಗೆದರಿದ ರಾಜಕೀಯ!

ಮಾಜಿ ಸಚಿವರ ಪುತ್ರ ಬಿಜೆಪಿ ಸೇರ್ಪಡೆ
ಮಾಜಿ ಸಚಿವ ಎಸ್‌ಡಿ ಜಯರಾಂ ಪುತ್ರ ಅಶೋಕ್ ಜಯರಾಂ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಇಂದು(ಶನಿವಾರ) ಮಾಜಿ ಸಚಿವ ಲಕ್ಷಣ ಸವದಿ ನೇತೃತ್ವದಲ್ಲಿ ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಪಕ್ಷ ಸೇರ್ಪಡೆಯಾಗಿದ್ದಾರೆ.

ಮಂಡ್ಯ ಜೆಡಿಎಸ್‌ನ ಪ್ರಮುಖ ನಾಯಕರುಗಳಲ್ಲಿ‌ ಒಬ್ಬರಾಗಿದ್ದ ಅಶೋಕ್ ಜಯರಾಂ. ಜೆಡಿಎಸ್‌ನಲ್ಲಿ ಸೂಕ್ತ ಸ್ಥಾನ ಮಾನ ಸಿಗದ ಹಿನ್ನೆಲೆ ಬಿಜೆಪಿಯತ್ತ ಮುಖ ಮಾಡಿದ್ದಾರೆ. ಕಳೆದ ಒಕ್ಕಲಿಗರ ಸಂಘದ ಚುನಾವಣೆಯಲ್ಲಿ ಅಧಿಕ ಮತಗಳೊಂದಿಗೆ ನಿರ್ದೇಶಕರಾಗಿ ಆಯ್ಕೆಯಾಗಿರುವ ಅಶೋಕ್ ಜಯರಾಂ. ಹೊಸ ಹುಮ್ಮಸ್ಸಿನೊಂದಿಗೆ ಮಂಡ್ಯ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಲು ಭರ್ಜರಿ ಸಿದ್ಧತೆ ನಡೆಸಿದ್ದಾರೆ. 

ಕಮಲ ಮುಡಿದ ಮಾಜಿ ಐಆರ್‌ಎಸ್ ಅಧಿಕಾರಿ
Mandya JDS Youth Leaders Joins BJP rbj

ಇನ್ನು ಇದೇ ವೇಳೆ ಜೆಡಿಎಸ್ ಪಕ್ಷದ ಮತ್ತೊರ್ವ ಯುವ ನಾಯಕಿ ಲಕ್ಷ್ಮೀ ಅಶ್ವಿನ್ ಗೌಡ ಕೂಡ ಬಿಜೆಪಿ ಸೇರ್ಪಡೆಯಾದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಲಕ್ಷ್ಮೀ   ಟಿಕೆಟ್ ಬಯಸಿದ್ದರು. ಆದ್ರೆ ಕಡೇ ಕ್ಷಣದಲ್ಲಿ ನಿಖಿಲ್ ಕುಮಾರಸ್ವಾಮಿ ಅಭ್ಯರ್ಥಿಯಾಗಿದ್ದರಿಂದ ನಿರಾಸೆಗೊಂಡಿದ್ದರು. ಮಾಜಿಪ್ರಧಾನಿ ದೇವೇಗೌಡರ ಸಲಹೆ ಮೇರೆಗೆ ಐಆರ್‌ಎಸ್ ಸ್ಥಾನಕ್ಕೆ ರಾಜಿನಾಮೆ ನೀಡಿ ರಾಜಕೀಯ ಪ್ರವೇಶಿಸಿದ್ದರು. ಆದ್ರೆ ನಿರೀಕ್ಷೆಯಂತೆ ಜೆಡಿಎಸ್‌ನಲ್ಲಿ ಅವಕಾಶಗಳು ಸಿಗದ ಹಿನ್ನೆಲೆ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಾಗಮಂಗಲ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಬಯಸಿದ್ದಾರೆ ಎನ್ನಲಾಗಿದೆ.

ಅಂಬರೀಶ್ ಪುತ್ರನ ಮೇಲೆ ಕಣ್ಣ 
ಮಂಡ್ಯದ ಮೇಲೆ ಈಗಾಗಲೇ ಕಣ್ಣಿಟ್ಟಿರುವ ಬಿಜೆಪಿ, ಅಂಬರೀಶ್ ಪುತ್ರ ಅಭಿಷೇಕ್ ಅವರನ್ನ ಸೇರಿಸಿಕೊಳ್ಳಲು ಪ್ಲಾನ್ ಮಾಡಿದ್ದು, ಈ ಬಗ್ಗೆ ಲೆಕ್ಕಾಚಾರ ಶುರುವಾಗಿವೆ.  ಯೋಗೇಶ್ವರ ಮೂಲಕ ದಾಳ ಉರುಳಿಸಲಾಗಿದೆ ಎಂದು ಹೇಳಲಾಗುತ್ತಿದೆ. ಅಭಿಷೇಕ್ ಪಕ್ಷ ಸೇರ್ಪಡೆಯಾದರೆ ಒಕ್ಕಲಿಗ ಮತಬ್ಯಾಂಕ್ ಸೆಳೆಯುವುದಕ್ಕೆ ಸಹಕಾರ ವಾಗಲಿದೆ ಎಂಬುದು ಬಿಜೆಪಿ ಲೆಕ್ಕಾಚಾರವಾಗಿದೆ.

ಹಳೆಮೈಸೂರು ಭಾಗದಲ್ಲಿ ಮತ ಸಂಗ್ರಹಣೆಗಾಗಿ ಸಿಎಂ ಬೊಮ್ಮಾಯಿ ಈಗಾಗಲೆ ಮಾಜಿ ಸಿಎಂ‌ ಎಸ್.ಎಂ.ಕೃಷ್ಣ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ಬೆಂಬಲಿಗರ ಮೂಲಕ ಬಿಜೆಪಿ ಸೇರ್ಪಡೆ ಬಗ್ಗೆ ಸುಮಲತಾ ಸುಳಿವು:
 ಕಳೆದ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿದ್ದ ನಿಖಿಲ್ ಕುಮಾರಸ್ವಾಮಿ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದ್ದ ಸಂಸದೆ ಸುಮಲತಾ ಯಾವ ಪಕ್ಷ ಸೇರುತ್ತಾರೆ ಎನ್ನುವ ಕುತೂಹಲ ಎಲ್ಲರಲ್ಲೂ ಇದೆ. ದಳಪತಿಗಳ ವಿರುದ್ಧವೇ ಸುಮಲತಾ ಸಂಸದೆಯಾಗಿ ಆಯ್ಕೆ ಆಗಿರುವುದರಿಂದ ಸದ್ಯ ಸುಮಲತಾ ಕಾಂಗ್ರೆಸ್ ಅಥವಾ ಬಿಜೆಪಿ ಸೇರಬಹುದು ಎನ್ನಲಾಗ್ತಿದೆ. ಆದರೆ ಸ್ವತಃ ಕಾಂಗ್ರೆಸ್ ನಾಯಕರಿಗೆ ಸುಮಲತಾ ಪಕ್ಷ ಸೇರ್ಪಡೆ ಇಷ್ಟವಿಲ್ಲ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಹಾಗಾಗಿ ಸಂಸದೆ ಸುಮಲತಾ ಮುಂದಿರುವ ಏಕೈಕ ಆಯ್ಕೆ ಬಿಜೆಪಿ ಎಂದು ಹೇಳಲಾಗ್ತಿದೆ. ಈ ಬಗ್ಗೆ ಎಲ್ಲಿಯೂ ತುಟಿಬಿಚ್ಚದ ಸಂಸದೆ ನಾನು ಯಾವ ಪಕ್ಷ ಸೇರಬೇಕು ಎಂಬುದನ್ನ ಜನರೇ ತೀರ್ಮಾನ ಮಾಡ್ತಾರೆ ಎಂದಿದ್ದಾರೆ. ಆದರೆ ಸುಮಲತಾ ಬೆಂಬಲಿಗರು ಮಾತ್ರ ಬಿಜೆಪಿ ಸೇರ್ಪಡೆಗೆ ಮನಸ್ಸು ಮಾಡಿದ್ದು, ಬೆಂಬಲಿಗರ ಮೂಲಕ ಬಿಜೆಪಿ ಸೇರ್ಪಡೆ ಬಗ್ಗೆ ಸುಮಲತಾ ಸುಳಿವು ನೀಡ್ತಿದ್ದಾರ ಎಂಬ ಅನುಮಾನ ಮೂಡಿವೆ.

Follow Us:
Download App:
  • android
  • ios