ಡಿಸೆಂಬರ್‌ನಲ್ಲಿ Mamata Banerjee ಬಂಧನ: ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ಭವಿಷ್ಯ
ಡಿಸೆಂಬರ್‌ನಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಂಧನವಾಗಲಿದ್ದಾರೆ. ಹಾಗೆ, ಟಿಎಂಸಿ ಸರ್ಕಾರ ಸಹ ಪತನವಾಗಲಿದೆ ಎಂದು ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ಹೇಳಿದ್ದಾರೆ.
ಕೋಲ್ಕತಾ: ತೃಣಮೂಲ ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿರುವ ಪಶ್ಚಿಮ ಬಂಗಾಳ (West Bengal) ಬಿಜೆಪಿ ಅಧ್ಯಕ್ಷ ಸುಕಾಂತ ಮಜುಮ್‌ದಾರ್, ‘ಡಿಸೆಂಬರ್‌ನಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಂಧನವಾಗಲಿದೆ’ ಎಂದು ತಿಳಿಸಿದ್ದಾರೆ. ‘ಟಿಎಂಸಿ (TMC) ಭ್ರಷ್ಟಾಚಾರದ ತನಿಖೆ ಈಗಾಗಲೇ ನಡೆಯುತ್ತಿದ್ದು, ಡಿಸೆಂಬರ್‌ನಲ್ಲಿ ಟಿಎಂಸಿ ಸರ್ಕಾರವು ಪತನವಾಗುತ್ತದೆ‘ ಎಂದು ಸುಕಾಂತ ಮಜುಮ್‌ದಾರ್ ಹೇಳಿದರು. ಈ ನಡುವೆ, ‘ಮುಂದಿನ ಆರು ತಿಂಗಳಲ್ಲಿ ಹೊಸ ಟಿಎಂಸಿ ಬರಲಿದೆ’ ಎಂದು ಆಡಳಿತ ಪಕ್ಷ ಹಾಕಿರುವ ಪೋಸ್ಟರ್ ಕುರಿತು ಟೀಕಿಸಿದ ವಿರೋಧ ಪಕ್ಷ ನಾಯಕ ಸುವೇಂದು ಅಧಿಕಾರಿ, ‘ಇಡಿ ಮತ್ತು ಸಿಬಿಐ ತಮ್ಮ ಕೆಲಸಗಳನ್ನು ಪ್ರಾಮಾಣಿಕವಾಗಿ ಮಾಡುತ್ತಿವೆ. ಟಿಎಂಸಿಗೆ ಡಿಸೆಂಬರ್‌ನಲ್ಲಿ ಕೊನೆಗಾಲ ಬರಲಿದೆ’ ಎಂದು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಟಿಎಂಸಿ ವಕ್ತಾರ ಶುವೊಮಾಯ್ ಬಸು ‘ನಮಗೆ ಪೋಲಿಸ್ ತನಿಖೆಯ ಮೇಲೆ ನಂಬಿಕೆಯಿದೆ. ಬಿಜೆಪಿ ಯಾವಾಗಲೂ ಸುಳ್ಳು ಆರೋಪಗಳನ್ನು ಮಾಡುತ್ತಿರುತ್ತದೆ’ ಎಂದು ಹೇಳಿದರು.
ಡಿಸೆಂಬರ್ ವೇಳೆಗೆ ಮಮತಾ ಬ್ಯಾನರ್ಜಿ ಅವರನ್ನು ಬಂಧಿಸಬಹುದು. 41 ಟಿಎಂಸಿ ನಾಯಕರ ಹೆಸರುಗಳು ಬಿಜೆಪಿ ಉನ್ನತ ನಾಯಕರ ಬಳಿ ಇದೆ. ಡಿಸೆಂಬರ್‌ನಲ್ಲಿ ಈ ಸರ್ಕಾರ ಪತನವಾಗಲಿದೆ”ಎಂದು ಸುಕಾಂತ ಮಜುಂದಾರ್ ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.
ಇದನ್ನು ಓದಿ: ನನ್ನ ಸಂಪರ್ಕದಲ್ಲಿ 21 TMC ಶಾಸಕರು: ಬಿಜೆಪಿ ನಾಯಕ Mithun Chakraborty
ಇನ್ನು, ಬಿಜೆಪಿ ನಾಯಕ ಮತ್ತು ಹಿರಿಯ ಚಲನಚಿತ್ರ ನಟ (Film Star) ಮಿಥುನ್ ಚಕ್ರವರ್ತಿ ಸಹ ಹಲವಾರು ಟಿಎಂಸಿ ಶಾಸಕರು ತನ್ನೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಹೇಳಿಕೊಂಡಿದ್ದರು. “ನಾನು ಮಮತಾ ಬ್ಯಾನರ್ಜಿಯವರ ಪಕ್ಷದ 21 ಶಾಸಕರೊಂದಿಗೆ ಸಂಪರ್ಕದಲ್ಲಿದ್ದೇನೆ, ನಾನು ಇದನ್ನು ಮೊದಲೇ ಮತ್ತು ಮತ್ತೆ ಹೇಳಿದ್ದೇನೆ, ನನ್ನ ಹೇಳಿಕೆಗೆ ನಾನು ಬದ್ಧನಾಗಿದ್ದೇನೆ. ಸ್ವಲ್ಪ ಸಮಯ ಕಾಯಿರಿ ಎಂದು ನಾನು ವಿನಂತಿಸುತ್ತೇನೆ” ಎಂದು ಮಿಥುನ್ ಚಕ್ರವರ್ತಿ ಒಂದೆರಡು ದಿನಗಳ ಹಿಂದೆ ಮಾಧ್ಯಮಗಳಿಗೆ ಹೇಳಿದ್ದರು.
ಇನ್ನೊಂದೆಡೆ, ಪಶ್ಚಿಮ ಬಂಗಾಳದ ಬಿಜೆಪಿ ಉಪಾಧ್ಯಕ್ಷ ದಿಲೀಪ್ ಘೋಷ್ ಕೂಡ "ಪಿತೃ ಪಕ್ಷ"ದ ಸಂದರ್ಭದಲ್ಲಿ ಮಮತಾ ಬ್ಯಾನರ್ಜಿ ದುರ್ಗಾ ಪೂಜೆಯ ಉದ್ಘಾಟನೆ ಮಾಡಿದ್ದಾರೆ ಎಂದು ಟೀಕೆ ಮಾಡಿದ್ದಾರೆ. ಮಮತಾ ಬ್ಯಾನರ್ಜಿ ಅವರು ಪಿತೃ ಪಕ್ಷದಲ್ಲಿ (Pitru Paksha) ಪೂಜೆಯನ್ನು ಉದ್ಘಾಟಿಸುವ ಮೂಲಕ ದುರ್ಗಾ ಪೂಜೆಯ (Durga Puja) ಪಾವಿತ್ರ್ಯತೆಯನ್ನು ಹಾಳು ಮಾಡುತ್ತಿದ್ದಾರೆ, ಮಮತಾ ಬ್ಯಾನರ್ಜಿಯವರ ಎಲ್ಲಾ ಕೆಲಸಗಳು ತಪ್ಪಾಗಿದೆ. ಅದಕ್ಕಾಗಿಯೇ ದುರ್ಗಾ ದೇವಿಯನ್ನು ಪೂಜಿಸುವಾಗ ಮಂತ್ರ ಪಠಿಸುವುದರಲ್ಲಿ ತಪ್ಪಾಗಿದೆ ಎಂದು ದಿಲೀಪ್ ಘೋಷ್ ಹೇಳಿದರು.
ಇದಕ್ಕೂ ಮುನ್ನ, ಪಶ್ಚಿಮ ಬಂಗಾಳದ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ, ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯದಲ್ಲಿ ಮುಂದಿನ ಆರು ತಿಂಗಳವರೆಗೆ ಸಹ ಉಳಿಯುವುದಿಲ್ಲ ಎಂದು ಹೇಳಿದರು. ಮುಂದಿನ ಆರು ತಿಂಗಳಲ್ಲಿ "ಹೊಸ ಮತ್ತು ಸುಧಾರಿತ ಟಿಎಂಸಿ" ಬರಲಿದೆ ಎಂದು ಆಡಳಿತ ಪಕ್ಷ ಪೋಸ್ಟರ್‌ಗಳನ್ನು ಹಾಕಿದ ನಂತರ ಸುವೇಂದು ಅಧಿಕಾರಿ ಈ ಟೀಕೆಗಳನ್ನು ಮಾಡಿದ್ದಾರೆ.
ಇದನ್ನೂ ಓದಿ: Mamata Banerjee ಗೆ ಬಿಗ್ ಶಾಕ್, ಸ್ಥಳೀಯ ಚುನಾವಣೆಯಲ್ಲಿ ಬಿಜೆಪಿಗೆ ಭರ್ಜರಿ ಗೆಲುವು!
“ಜಾರಿ ನಿರ್ದೇಶನಾಲಯ (Enforcement Directorate) (ಇಡಿ) ಮತ್ತು ಕೇಂದ್ರೀಯ ತನಿಖಾ ದಳ (Central Bureau of Investigation) (ಸಿಬಿಐ) ತಮ್ಮ ಕೆಲಸವನ್ನು ಮಾಡುತ್ತಿವೆ. ಈ ಪಕ್ಷವು (ಟಿಎಂಸಿ) ಆರು ತಿಂಗಳ ಕಾಲವೂ ಉಳಿಯುವುದಿಲ್ಲ, ಡಿಸೆಂಬರ್‌ವರೆಗೆ ಮಾತ್ರ ಅವರ ಗಡುವು ”ಎಂದು ಬಿಜೆಪಿ ನಾಕ ಸುವೇಂದು ಅಧಿಕಾರಿ ಪಶ್ಚಿಮ ಬಂಗಾಳದ ಪುರ್ಬಾ ಮೇದಿನಿಪುರ ಜಿಲ್ಲೆಯಲ್ಲಿ ಹೇಳಿದ್ದಾರೆ.