ಕಲಬುರಗಿ(ನ.14): ಸಚಿವ ಸ್ಥಾನ ನೀಡಬೇಕೆಂದು ತಾವು ಯಾರ ಬಳಿಯೂ ಭಿಕ್ಷೆ ಬೇಡಲ್ಲ, ತಮ್ಮನ್ನು ಎಂಎಲ್‌ಸಿಯನ್ನಾಗಿ ಮಾಡಿ ಎಂದು ಕೇಳುವ ಪರಿಸ್ಥಿತಿ ಇನ್ನೂ ಬಂದಿಲ್ಲ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಮಾಲೀಕಯ್ಯ ಗುತ್ತೇದಾರ್‌ ಹೇಳಿದ್ದಾರೆ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿಕಾರ ದಾಹ ತಮಗೆ ಹಿಂದೆಯೂ ಇರಲಿಲ್ಲ. ಈಗಲೂ ಇಲ್ಲ. ನನ್ನನ್ನು ಸಚಿವರನ್ನಾಗಿ ಮಾಡಿ ಎಂದು ಯಾರ ಬಳಿಯೂ ಕೇಳುವುದಿಲ್ಲ. ಯಾರ ಮನೆ ಬಳಿಯೂ ಹೋಗುವುದಿಲ್ಲ. ಈಗಾಗಲೇ ತಮಗೆ ಬಿಜೆಪಿ ರಾಜ್ಯ ಉಪಾಧ್ಯಕ್ಷ ಸ್ಥಾನ ನೀಡಲಾಗಿದೆ. ಇದರಲ್ಲಿ ಸಂತುಷ್ಟನಾಗಿದ್ದೇನೆ. ಪಕ್ಷ ಸಂಘಟನೆಯಲ್ಲಿ ತೊಡಗಿದ್ದೇನೆ ಎಂದರು.

ಬಸವಕಲ್ಯಾಣದಿಂದ ಸ್ಪರ್ಧೆ: ಬಿ. ವೈ. ವಿಜಯೇಂದ್ರ ರಿಯಾಕ್ಷನ್‌

ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗಬೇಕು. ಸಚಿವರ ಬಳಿ ಎರಡೆರಡು ಖಾತೆಗಳಿದ್ದರೆ ಅದನ್ನು ಹಂಚಿ ಬೇರೆಯವರಿಗೆ ಅವಕಾಶ ನೀಡಬೇಕು. ಕಲಬುರಗಿ ಜಿಲ್ಲೆಗೆ ಸಚಿವ ಸ್ಥಾನ ಸಿಕ್ಕಿಲ್ಲ. ಹಾಗಾಗಿ ಈಗಿರುವ ಶಾಸಕರಲ್ಲಿ ಯಾರಿಗಾದರೂ ಸಚಿವ ಸ್ಥಾನ ನಿಡಬೇಕು. ಆರೋಗ್ಯದ ಸಮಸ್ಯೆಯಿಂದ ಜಿಲ್ಲೆಗೆ ಗೋವಿಂದ್‌ ಕಾರಜೋಳ ಬರಕ್ಕಾಗುತ್ತಿಲ್ಲ. ಬೇರೆಯವರಿಗೆ ಜಿಲ್ಲಾ ಉಸ್ತುವಾರಿ ಜವಾಬ್ದಾರಿ ನೀಡಬೇಕು. ಯಾರೂ ಉತ್ತಮವಾಗಿ ಕೆಲಸ ಮಾಡುತ್ತಾರೋ ಅವರಿಗೆ ಉಸ್ತುವಾರಿ ನೀಡಲಿ. ಇಷ್ಟು ದಿನ ಸಚಿವ ಸ್ಥಾನದಲ್ಲಿದ್ದವರನ್ನು ಬಿಟ್ಟು ಹೊಸಬರಿಗೆ ಸಚಿವ ಸ್ಥಾನದ ಅವಕಾಶ ನೀಡಲಿ ಎಂದರು.

ದೇಶದಲ್ಲಿ ಕಾಂಗ್ರೆಸ್‌ ಧೂಳಿಪಟವಾಗಿದೆ. ಇತ್ತೀಚೆಗೆ ನಡೆದ ಉಪಚುನಾವಣೆ, ಬಿಹಾರ್‌ ರಾಜ್ಯದಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ತನ್ನ ಅಸ್ತಿತ್ವ ಕಳೆದುಕೊಂಡಿದೆ. ರಾಜ್ಯದ ಕಾಂಗ್ರೆಸ್‌ನಲ್ಲಿ ಕಚ್ಚಾಟ ನಡೆಯುತ್ತಿದೆ. ಹೀಗಾದರೆ ಪಕ್ಷ ಬೆಳೆಯಲು ಸಾಧ್ಯವೇ ಎಂದು ಪ್ರಶ್ನಿಸಿದ ಅವರು, ಕಾಂಗ್ರೆಸ್‌ಗೆ ಹಿಂದೆ ಹೈಕಮಾಂಡ್‌ ಇತ್ತು. ಈಗ ಲೋಕಮಾಂಡ್‌ ಆಗಿ ಸೊರಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ನಗರಾಧ್ಯಕ್ಷ ಸಿದ್ದಾಜಿ ಪಾಟೀಲ್‌, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್‌ ನರಿಬೋಳ ಇದ್ದರು.