Karnataka BJP ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಪಿಸುಮಾತು, ನನ್ನನ್ನು ಪಕ್ಷದಿಂದ ಹೊರಹಾಕಲಿ ಎಂದ ಸಚಿವ
* ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಪಿಸುಮಾತು
* ಬಿಜೆಪಿ ನಾಯಕರ ಗುಸುಗುಸು ಸುದ್ದಿ ವೈರಲ್
* ನನ್ನನ್ನು ಪಕ್ಷದಿಂದ ಹೊರಹಾಕಲಿ ಎಂದ ಸಚಿವ
ಬೆಂಗಳೂರು/ತುಮೂರು, (ಜ.06): ರಾಜ್ಯ ರಾಜಕಾರಣದಲ್ಲಿ ಆಗಾಗ ಈ ಪಿಸು-ಪಿಸು ಗುಸುಗುಸು ಭಾರೀ ಸದ್ದು ಮಾಡುತ್ತಿದೆ. ಇತ್ತೀಚೆಗೆ ಕಾಂಗ್ರೆಸ್ ನಾಯಕರ ಪಿಸುಮಾತು ಭಾರಿ ಸಂಚಲನ ಮೂಡಿಸಿತ್ತು. ಇದೀಗ ಬಿಜೆಪಿ(BJP) ನಾಯಕರ ಸರದಿ
ಹೌದು.... ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜುಗೆ ಸಂಸದ ಜಿ.ಎಸ್.ಬಸವರಾಜು(GS Basavaraju) ಅವರು ಸುದ್ದಿಗೋಷ್ಠಿಯಲ್ಲೇ ಜೆಸಿ ಮಾಧುಸ್ವಾಮಿ ವಿರುದ್ಧ ಚಾಡಿ ಹೇಳುತ್ತಿದ್ದ ಗುಸು-ಗುಸು ವೈರಲ್ ಆಗಿದೆ.
ಡಿಕೆಶಿ ಬಗ್ಗೆ ಪಿಸುಮಾತು: ಉಗ್ರಪ್ಪಗೆ ಕ್ಲೀನ್‌ಚಿಟ್?
ತುಮಕೂರು(Tumakuru) ನಗರದಲ್ಲಿ ವಿವಿಧ ಕಟ್ಟಡಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸುವ ಮುನ್ನ ಗುರುವಾರ ಸುದ್ದಿಗೋಷ್ಠಿಗೆ ಸಂಸದ ಜಿ.ಎಸ್.ಬಸವರಾಜು ಮತ್ತು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು ಆಗಮಿಸಿದ್ದರು. ಇಬ್ಬರೂ ಪಕ್ಕದಲ್ಲೇ ಕುಳಿತು ಕುಶಲೋಪರಿ ವಿಚಾರಿಸುತ್ತಾ ಗುಸುಗುಸು ಮಾತನಾಡಲು ಶುರು ಮಾಡಿದರು.
ಆ ವೇಳೆ ಸಚಿವರ ಕಿವಿಯಲ್ಲಿ ಪಿಸುಗುಟ್ಟಿದ ಜಿಎಸ್ಬಿ, 'ಈ ನನ್ ಮಗ, ನಮ್ ಮಂತ್ರಿ(ಜೆ.ಸಿ.ಮಾಧುಸ್ವಾಮಿ) ಹೇಂಗೆ ಗೊತ್ತಾ? ದಕ್ಷಿಣ ಕೋರಿಯಾದ ಕಿಂಗ್ ಪಿನ್ ಇದಾನಲ್ಲ ಅವನಂತೆ. ಕೆಟ್ಟ ನನ್ಮಗ. ಇವನಿಂದ ಜಿಲ್ಲೆಯಲ್ಲಿ ಒಂದು ಸೀಟ್ ಬರೋಲ್ಲ… ಹಾಳು ಮಾಡಿಬಿಟ್ಟಿದ್ದಾನೆ ನಮ್ಮ ಜಿಲ್ಲೆಯನ್ನ…' ಎಂದು ಚಾಡಿ ಹೇಳುತ್ತಾ ಬೈಯ್ಯುತ್ತಲೇ ಇದ್ದರು. 'ಸುಮ್ಮನಿರು ಆಮೇಲೆ ಮಾತಾಡೋಣ' ಎಂದು ಬೈರತಿ ಹೇಳಿದರೂ ಸಂಸದರು ಮಾತ್ರ ಬೈಯ್ಯುತ್ತಲೇ ಇದ್ದರು.
ಹಾಗೇ ಮುಂದುವರೆಸಿ ಹಾಳು ಮಾಡಿಬಿಟ್ಟಿದ್ದಾನೆ ನಮ್ಮ ಜಿಲ್ಲೆಯನ್ನ. ಒಂದು ಸೀಟ್ ಬರಲ್ಲ. ಮಾತು ಎತ್ತಿದ್ರೆ ಹೊಡಿ, ಬಡಿ, ಕಡಿ ಅಂತಾನೆ. ಅವನ್ಯಾರೋ ಎಕ್ಸಿಕ್ಯೂಟಿವ್ ಇಂಜಿನಿಯರ್ಗೆ ಹೆಂಡ್ತಿ ಸೀರೆ ಹೊಗೆಯೋಕೆ ಲಾಯಕ್ ನೀನು ಅಂತ ಈ ಮಿನಿಸ್ಟರ್ ಹೇಳ್ತಾನೆ. ಒಂದು ಹ್ಯಾಂಡ್ ಬಿಲ್ ಪ್ರಿಂಟ್ ಮಾಡಿಸಲ್ಲ. ಮೊನ್ನೆ ಸಾವಿರ ಕೋಟಿ ಡಿಕ್ಲೈರ್ ಮಾಡಿಕೊಂಡು ಬಂದವ್ನೆ. ನಮಗೆ ಯಾರಿಗೂ ಇನ್ವಿಟೇಶನ್ ಇಲ್ಲ, ಕರೆಯೋದು ಇಲ್ಲ' ಎಂದು ಸಚಿವ ಮಾಧುಸ್ವಾಮಿ ಅವರ ಹೆಸರೇಳದೆ ಸಂಸದರು ಚಾಡಿ ಹೇಳುತ್ತಿರುವ ದೃಶ್ಯ ಮಾಧ್ಯಗಳಲ್ಲಿ ರೆಕಾರ್ಡ್ ಆಗಿದೆ. ಇದು ಬಿಜೆಪಿಯಲ್ಲಿ ಸಚಲನ ಮೂಡಿಸಿದೆ.
ಮಾಧುಸ್ವಾಮಿ ಪ್ರತಿಕ್ರಿಯೆ
ಇದಕ್ಕೆ ಮಾಧುಸ್ವಾಮಿ ಪ್ರತಿಕ್ರಿಯಿಸಿದ್ದು, ತುಮಕೂರಿನಲ್ಲಿ ಬಿಜೆಪಿಗೆ ಒಂದೇ ಒಂದು ಸೀಟು ಬರಲ್ಲ ಎಂಬ ಸಚಿವ- ಸಂಸದರ ಮಾತಿಗೆ, ಆಯ್ತಪ್ಪ ಸಂತೋಷ, ಪಾರ್ಟಿಯಿಂದ ನನ್ನ ತೆಗೆದುಹಾಕಿ ಬಿಡಲಿ ಎಂದು ಖಾರವಾಗಿ ಮಾತನಾಡಿದರು.
ನಮಗೆ ಅಂತವರ ಬಗ್ಗೆ ಗೊತ್ತೂ ಇಲ್ಲ, ಅನುಭವವವೂ ಇಲ್ಲ. ಆವರು ಆಡಿರುವ ಪಾರ್ಟುಗಳಿದ್ದರೆ ಅವರು ಆಡಿರುತ್ತಾರೆ, ನನಗೆ ಸಂಬಂಧವಿಲ್ಲ ಎಂದು ಸಚಿವ ಮಾಧುಸ್ವಾಮಿ ಹೇಳಿದರು.
ಇನ್ನು ಕಾರ್ಯಕ್ರಮದಿಂದ ಅರ್ಧಕ್ಕೆ ಎದ್ದು ಬಂದಿರುವುದಕ್ಕೆ ಸ್ಪಷ್ಟನೆ ಕೊಟ್ಟಿರು ಮಾಧುಸ್ವಾಮಿ, ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿರುವ ಸಚಿವ ಜೆ.ಸಿ. ಮಾಧುಸ್ವಾಮಿ, ಸಚಿವ ಬೈರತಿ ಬಸವರಾಜ್ ಅವರದು ತುಮಕೂರು ಕಾರ್ಯಕ್ರಮ ಇತ್ತು. ನನಗೆ ಅವರು ಸುಮ್ನೇ ಉದ್ಘಾಟನೆ ಮಾಡಿ ಹೋಗೋಣ, ಕ್ಯಾಬಿನೆಟ್ ಮೀಟಿಂಗ್ ಇದೆ ಅಂತ ಹೇಳಿದ್ದರು.
ಆಗ ನಾನು, ನೋಡಪ್ಪ ಲೇಟ್ ಆಗುತ್ತೆ, ಫ್ಲೈಓವರ್ ಮೇಲೆ ಹೋಗೋದು 2 ಗಂಟೆ ತಡವಾಗುತ್ತದೆ, ಅದ್ಕೆ 9.30ಕ್ಕೆ ಹೋಗೋಣ ಅಂತ ಹೋದೆ. 9.30ರಿಂದ 10 ವರೆಗೂ ಕಾರ್ಯಕ್ರಮ ಆಗುತ್ತಿತ್ತು. ನಾನು ಭಾಷಣ ಮಾಡಲ್ಲ, ಭೈರತಿ ಅವರು ಮಾತನಾಡಲಿ ಸಾಕು ಎಂದು ಹೇಳಿ ಹೊರಟೆ.
ಅವನ್ಯಾರೋ ಅಧಿಕಾರಿ ಲೆಕ್ಕಪತ್ರ ಕೊಡಲು ಬಂದಾಗ ಇಲ್ಲಪ್ಪ, ಕ್ಯಾಬಿನೆಟ್‌ಗೆ ಲೇಟ್ ಆಗುತ್ತೆ ಅಂತ ಹೇಳಿ ಸಭೆಯಿಂದ ಎದ್ದು ಬಂದೆ. ಅದನ್ನು ಬಿಟ್ರೆ ಬೇರೆ ಏನೇ ವಿಷಯ ಏನೂ ಇಲ್ಲ. ಕಾರ್ಯಕ್ರಮ ಶುರುವಾದಾಗ ಏನೇನು ಮಾತನಾಡಿದಾರೋ ನನಗೆ ಗೊತ್ತಿಲ್ಲ, ಅದಕ್ಕೂ ನನಗೂ ಸಂಬಂಧವಿಲ್ಲ. ನಾನು ತುಮಕೂರಿನ ಸಭೆಯಿಂದ ಎದ್ದು ಬಂದಿರುವುದು ಇವತ್ತು 12ಕ್ಕೆ ಕ್ಯಾಬಿನೆಟ್ ಮೀಟಿಂಗ್ ಇದೆ ಅಂತ ಅಷ್ಟೇ ಎಂದರು.