Asianet Suvarna News Asianet Suvarna News

Loksabha Elections 2024: ಬಿಜೆಪಿಯಲ್ಲಿ ಬೇಗುದಿ ತಣ್ಣಗೆ, ಸಂಸದ ಸಂಗಣ್ಣ ಕರಡಿ ನಿರಾಳ!

ವಿಧಾನಸಭಾ ಚುನಾವಣೆಯಲ್ಲಾದ ಮನಸ್ತಾಪಗಳಿಂದ ಕೊತ ಕೊತ ಕುದಿಯುತ್ತಿದ್ದ ಭಾರತೀಯ ಜನತಾ ಪಾರ್ಟಿಯಲ್ಲಿ ಕಳೆದ ನಾಲ್ಕಾರು ದಿನಗಳಿಂದ ಪರಿಸ್ಥಿತಿ ತಣ್ಣಗಾಗಿದೆ. ಕೊಪ್ಪಳ ಲೋಕಸಭಾ ಕ್ಷೇತ್ರದ ಟಿಕೆಟ್‌ಗಾಗಿ ಇದ್ದ ಪೈಪೋಟಿ ನಿಧಾನಕ್ಕೆ ಹೊಂದಾಣಿಕೆಯತ್ತ ಸಾಗುತ್ತಿದ್ದು, ಹಾಲಿ ಸಂಸದ ಸಂಗಣ್ಣ ಕರಡಿ ನಿರಾಳರಾಗುತ್ತಿದ್ದಾರೆ. 

Loksabha Elections 2024 Ticket Fight MP Sanganna Karadi is at ease gvd
Author
First Published Mar 9, 2024, 4:35 PM IST

ಸೋಮರಡ್ಡಿ ಅಳವಂಡಿ

ಕೊಪ್ಪಳ (ಮಾ.09): ವಿಧಾನಸಭಾ ಚುನಾವಣೆಯಲ್ಲಾದ ಮನಸ್ತಾಪಗಳಿಂದ ಕೊತ ಕೊತ ಕುದಿಯುತ್ತಿದ್ದ ಭಾರತೀಯ ಜನತಾ ಪಾರ್ಟಿಯಲ್ಲಿ ಕಳೆದ ನಾಲ್ಕಾರು ದಿನಗಳಿಂದ ಪರಿಸ್ಥಿತಿ ತಣ್ಣಗಾಗಿದೆ. ಕೊಪ್ಪಳ ಲೋಕಸಭಾ ಕ್ಷೇತ್ರದ ಟಿಕೆಟ್‌ಗಾಗಿ ಇದ್ದ ಪೈಪೋಟಿ ನಿಧಾನಕ್ಕೆ ಹೊಂದಾಣಿಕೆಯತ್ತ ಸಾಗುತ್ತಿದ್ದು, ಹಾಲಿ ಸಂಸದ ಸಂಗಣ್ಣ ಕರಡಿ ನಿರಾಳರಾಗುತ್ತಿದ್ದಾರೆ. ಟಿಕೆಟ್ ಸಿಗುವ ವಿಶ್ವಾಸದಿಂದ ಬೀಗುತ್ತಿದ್ದಾರೆ. ಹೌದು, ಕಳೆದೊಂದು ತಿಂಗಳಿಂದ ಕೊಪ್ಪಳ ಲೋಕಸಭಾ ಕ್ಷೇತ್ರದ ಟಿಕೆಟ್ ಈ ಬಾರಿ ಹಾಲಿ ಸಂಸದ ಸಂಗಣ್ಣ ಕರಡಿ ಅವರಿಗೆ ಕೈ ತಪ್ಪುವುದು ಪಕ್ಕಾ ಎನ್ನುವ ವದಂತಿ ಜೋರಾಗಿಯೇ ಇತ್ತು. ಆದರೆ, ಈಗಾಗುತ್ತಿರುವ ಬೆಳೆವಣಿಗೆಯಲ್ಲಿ ಮತ್ತೆ ಸಂಗಣ್ಣ ಕರಡಿ ಅವರ ಹೆಸರೇ ಮುಂಚೂಣಿಗೆ ಬಂದಿದೆ.

ಹಾಲಿ ಸಂಸದ ಸಂಗಣ್ಣ ಕರಡಿ ಅವರಿಗೆ 73 ವರ್ಷವಾಗುತ್ತಾ ಬಂದಿದೆ. ಹೀಗಾಗಿ, ಪಕ್ಷದಲ್ಲಿ ಅವರಿಗೆ ಟಿಕೆಟ್ ನೀಡುವುದಿಲ್ಲ ಎನ್ನುವ ಬಗ್ಗೆ ಚರ್ಚೆಯಾಗುತ್ತಿತ್ತು. ಹೀಗಾಗಿ, ಡಾ.ಕೆ. ಬಸವರಾಜ ಹೆಸರು ಮುಂಚೂಣಿಗೆ ಬಂದಿತ್ತು. ಜತೆಗೆ ಸಂಸದ ಸಂಗಣ್ಣ ಕರಡಿ ಕುರಿತು ಮಾಜಿ ಶಾಸಕರು ಮುನಿಸಿಕೊಂಡಿದ್ದು ಸಹ ಈ ಚರ್ಚೆಗೆ ಇಂಬು ನೀಡಿತ್ತು. ಈ ನಡುವೆ ಸಿ.ವಿ. ಚಂದ್ರಶೇಖರ ಮತ್ತೆ ಬಿಜೆಪಿಗೆ ಆಗಮಿಸುತ್ತಾರೆ, ಅವರಿಗೆ ಟಿಕೆಟ್ ಎನ್ನುವ ವದಂತಿಯೂ ಜೋರಾಗಿಯೇ ಇತ್ತು. ಆದರೆ, ಅವರು ಜೆಡಿಎಸ್ ಪಕ್ಷದಲ್ಲಿ ಇರುವುದರಿಂದ ಇದು ಹೇಗೆ ಎನ್ನುವ ಕುರಿತು ಅದೇ ಪಕ್ಷದವರು ಆಡಿಕೊಳ್ಳುತ್ತಿದ್ದರು.

ಕುಡಿಯುವ ನೀರಿನ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ ವಹಿಸಿ: ಸಚಿವ ಬೋಸರಾಜು

ಆದರೆ, ಕಳೆದ ನಾಲ್ಕು ದಿನಗಳ ಹಿಂದೆ ನಡೆಯುತ್ತಿರುವ ಬೆಳವಣಿಗೆಯಲ್ಲಿ ಸಂಸದ ಸಂಗಣ್ಣ ಕರಡಿ ಅವರನ್ನೇ ಮತ್ತೊಮ್ಮೆ ಅಖಾಡಕ್ಕೆ ಇಳಿಸಬೇಕು ಎನ್ನುವ ಪಕ್ಷದಲ್ಲಿನ ಚರ್ಚೆಗೆ ಇಂಬು ಸಿಕ್ಕಿದೆ. ಸಂಸದ ಸಂಗಣ್ಣ ಕರಡಿ ಅವರೊಂದಿಗೆ ಮುನಿಸಿಕೊಂಡಿದ್ದ ಮಾಜಿ ಸಚಿವ ಹಾಲಪ್ಪ ಆಚಾರ್ ಸಹ ತಣ್ಣಗಾಗಿದ್ದು, ಸಂಸದ ಸಂಗಣ್ಣ ಕರಡಿಯವರೊಂದಿಗೆ ಮಾತುಕತೆಯಾಡಿದ್ದಾರೆ ಎನ್ನಲಾಗುತ್ತಿದೆ. ಮಾಜಿ ಶಾಸಕ ಬಸವರಾಜ ದಢೇಸ್ಗೂರು ದೂರ ಸರಿದಿದ್ದರು. ಅವರು ಸಹ ಹತ್ತಿರ ಬಂದಿದ್ದು, ಬೆಂಬಲಿಸಿದ್ದಾರೆ ಎನ್ನುವುದು ಸಂಸದ ಸಂಗಣ್ಣ ಕರಡಿ ಅವರ ಟಿಕೆಟ್ ಕೂಗಿಗೆ ಬಲ ಬಂದಿದೆ.

ವಿಶ್ವಾಸದಲ್ಲಿ ಸಂಗಣ್ಣ: ಸಂಸದ ಸಂಗಣ್ಣ ಕರಡಿ ಟಿಕೆಟ್ ಸಿಗುವ ವಿಶ್ವಾಸದಲ್ಲಿದ್ದಾರೆ. ಕಳೆದೊಂದು ವಾರದಿಂದ ಚುನಾವಣೆಯ ಸಿದ್ಧತೆಯಲ್ಲಿ ತೊಡಗಿಕೊಂಡಿದ್ದಾರೆ. ಈ ಮೊದಲು ಟಿಕೆಟ್ ಸಿಕ್ಕಮೇಲೆ ನೋಡಿದರಾಯಿತು ಎನ್ನುವ ಬದಲಾಗಿ ಈಗಾಗಲೇ ತೆರೆಮರೆಯಲ್ಲಿ ಕಸರತ್ತು ಪ್ರಾರಂಭಿಸಿದ್ದಾರೆ. ದೂರ ಸರಿದವರೊಂದಿಗೆ ಇನ್ನು ಹತ್ತಿರ ಹತ್ತಿರ ಎನ್ನುವಂತೆ ಮಾತನಾಡುತ್ತಿದ್ದಾರೆ. ಮತ್ತೆ ಸ್ಪರ್ಧೆ ಮಾಡುವ ಕುರಿತು ಬಹಿರಂಗವಾಗಿಯೇ ಚರ್ಚೆ ಮಾಡುತ್ತಾ, ಅವರಿವರ ಬೆಂಬಲ ಕೋರುತ್ತಿದ್ದಾರೆ. ನಾನಾ ಕಾರಣಗಳಿಂದ ಬೇರೆ ಪಕ್ಷಕ್ಕೆ ಹೋದವರ ಕುರಿತು ಸಹ ಒಲವು ವ್ಯಕ್ತಪಡಿಸಿ, ಅವರನ್ನು ಮತ್ತೆ ಸೆಳೆಯುವ ದಿಸೆಯಲ್ಲಿ ಪ್ರತ್ಯೇಕ ಮಾತುಕಗಳನ್ನು ನಡೆಸಿದ್ದಾರೆ. ಬೇಗುದಿಗೆ ಬೆಣ್ಣೆ ಹಚ್ಚಿ, ತಣ್ಣಗೆ ಮಾಡುವ ಪ್ರಯತ್ನವನ್ನು ಸದ್ದಿಲ್ಲದೇ ಮಾಡುತ್ತಿದ್ದಾರೆ.

ಬಿಜೆಪಿ ಪಾಳೆಯದಲ್ಲಿ ಮತ್ತೆ ಸಂಸದ ಸಂಗಣ್ಣ ಕರಡಿಗೆ ಟಿಕೆಟ್ ಎನ್ನುವ ಮಾತು ಬಲವಾಗುತ್ತಿದೆ. ಅದರಲ್ಲೂ ಪಂಚಮಸಾಲಿ ಸಮುದಾಯಕ್ಕೆ ಟಿಕೆಟ್ ನೀಡಬೇಕು ಎನ್ನುವ ಕೂಗು ಬಲವಾಗಿ ಇರುವುದರಿಂದ ಟಿಕೆಟ್ ಪಂಚಮಸಾಲಿ ಸಮುದಾಯವನ್ನು ಕೈತಪ್ಪಿ ಹೋಗುವ ಸಾಧ್ಯತೆ ಇಲ್ಲ. ಆದರೆ, ಈ ನಡುವೆ ತೆರೆಮರೆಯಲ್ಲಿಯೇ ಡಾ.ಕೆ.ಬಸವರಾಜ ತಮ್ಮ ಕಸರತ್ತು ಮುಂದುವರೆಸಿದ್ದಾರೆ. ದೆಹಲಿಯ ಬೆಂಬಲ ಮತ್ತು ಸ್ಥಳೀಯ ನಾಯಕರು ದೆಹಲಿಗೆ ಬಂದು ನೀಡಿರುವ ಬೆಂಬಲದೊಂದಿಗೆ ನನಗೆ ಟಿಕೆಟೆ ಸಿಗುತ್ತದೆ ಎನ್ನುವ ವಿಶ್ವಾಸವೂ ಅವರಲ್ಲಿ ಇನ್ನೂ ಕಮ್ಮಿಯಾಗಿಲ್ಲ. ಸಂಸದ ಸಂಗಣ್ಣ ಕರಡಿ ಇದ್ಯಾವುದನ್ನೂ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಪೈಪೋಟಿ ಇರುವುದು ಸರ್ವೆ ಸಾಮಾನ್ಯವಾದರೂ ಹಿರಿತನದ ಆಧಾರದಲ್ಲಿಯೇ ನನಗೆ ಟಿಕೆಟ್ ಸಿಗುತ್ತದೆ ಎನ್ನುವ ನಂಬಿಕೆಯಲ್ಲಿದ್ದಾರೆ.

ಲೋಕಸಭೆ ಚುನಾವಣೆ ನಂತ್ರ ದಲಿತ ಸಿಎಂ ಬಗ್ಗೆ ದನಿ: ಸಚಿವ ಸತೀಶ್‌ ಜಾರಕಿಹೊಳಿ

ಅನೇಕರು ಟಿಕೆಟ್ ಅಕಾಂಕ್ಷಿಗಳು ಇರುವುದು ನಿಜ. ಆದರೆ, ನನಗೆ ಟಿಕೆಟ್ ಸಿಕ್ಕೇ ಸಿಗುತ್ತದೆ ಎನ್ನುವ ವಿಶ್ವಾಸವಿದೆ. ರಾಜ್ಯದ ಮೊದಲ ಪಟ್ಟಿಯಲ್ಲಿಯೇ ಕೊಪ್ಪಳ ಕ್ಷೇತ್ರದ ಟಿಕೆಟ್ ಘೋಷಣೆಯಾಗುತ್ತದೆ ಎನ್ನುವ ವಿಶ್ವಾಸ ನಮ್ಮದು.
-ಸಂಗಣ್ಣ ಕರಡಿ, ಸಂಸದ

Follow Us:
Download App:
  • android
  • ios