Asianet Suvarna News Asianet Suvarna News

ಬಿಜೆಪಿ-ಜೆಡಿಎಸ್ ಮೈತ್ರಿ ವಿರುದ್ಧ ಸಿಡಿದೆದ್ದ ಕೆಸಿ ನಾರಾಯಣಗೌಡ ಶೀಘ್ರದಲ್ಲೇ ಕಾಂಗ್ರೆಸ್‌ಗೆ?

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ- ಜೆಡಿಎಸ್ ಮೈತ್ರಿ ವಿರುದ್ಧ ಮಾಜಿ ಸಚಿವ ಕೆ.ಸಿ.ನಾರಾಯಣಗೌಡ ಸಿಡಿದೆದ್ದಿದ್ದಾರೆ. ಮೊನ್ನೆಯಷ್ಟೇ ಮಂಡ್ಯ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡದೆ ಹಾಲಿ ಸಂಸದೆ ಸುಮಲತಾ ಅವರಿಗೆ ಟಿಕೆಟ್ ನೀಡುವಂತೆ ಪಟ್ಟು ಹಿಡಿದಿದ್ದ ನಾರಾಯಣಗೌಡರು ಇದೀಗ ಕಾಂಗ್ರೆಸ್ ಹೊಸ್ತಿಲಲ್ಲಿ ಬಂದು ನಿಂತಿದ್ದಾರೆ.

Loksabha election 2024 KC Narayana Gowda joins Congress party against BJP-JDS alliance at mandya rav
Author
First Published Feb 9, 2024, 12:42 PM IST

ಮಂಡ್ಯ (ಫೆ.9) : ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ- ಜೆಡಿಎಸ್ ಮೈತ್ರಿ ವಿರುದ್ಧ ಮಾಜಿ ಸಚಿವ ಕೆ.ಸಿ.ನಾರಾಯಣಗೌಡ ಸಿಡಿದೆದ್ದಿದ್ದಾರೆ. ಮೊನ್ನೆಯಷ್ಟೇ ಮಂಡ್ಯ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡದೆ ಹಾಲಿ ಸಂಸದೆ ಸುಮಲತಾ ಅವರಿಗೆ ಟಿಕೆಟ್ ನೀಡುವಂತೆ ಪಟ್ಟು ಹಿಡಿದಿದ್ದ ನಾರಾಯಣಗೌಡರು ಇದೀಗ ಕಾಂಗ್ರೆಸ್ ಹೊಸ್ತಿಲಲ್ಲಿ ಬಂದು ನಿಂತಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ರಹಸ್ಯವಾಗಿ ಭೇಟಿಯಾಗಿ ಮಾತುಕತೆ ನಡೆಸಿರುವುದು ರಾಜಕೀಯವಾಗಿ ಕುತೂಹಲ ಕೆರಳಿಸಿದೆ. ಕಳೆದ ವಿಧಾನಸಭಾ ಚುನಾವಣೆ ಸಮಯದಲ್ಲೇ ಕಾಂಗ್ರೆಸ್ ಸೇರುವುದಕ್ಕೆ ಕಾತರರಾಗಿದ್ದ ಕೆ.ಸಿ. ನಾರಾಯಣಗೌಡರು ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ವೇಳೆ ಸಿಎಂ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿರುವುದು ರಾಜಕೀಯ ಚರ್ಚೆಗೆ ಗ್ರಾಸವಾಗಿದೆ. ಇದು ನಾರಾಯಣಗೌಡರು ಬಿಜೆಪಿ ಬಿಡುವ ಮುನ್ಸೂಚನೆಯಾಗಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.

ಲೋಕಸಭಾ ಚುನಾವಣೆ: ಸುಮಲತಾರಿಗೆ ಟಿಕೆಟ್ ಕೇಳಿದ್ದರಲ್ಲಿ ತಪ್ಪೇನು? ಮಾಜಿ ಸಚಿವ ಕೆ.ಸಿ. ನಾರಾಯಣಗೌಡ

ಮಂಡ್ಯ ಜಿಲ್ಲೆಯೊಳಗೆ ಬಿಜೆಪಿ-ಜೆಡಿಎಸ್ ಮೈತ್ರಿ ವಿರುದ್ಧ ಬಹಿರಂಗ ಅಸಮಾಧಾನ ವ್ಯಕ್ತಪಡಿಸಿದ್ದ ನಾರಾಯಣಗೌಡರು, ಮಂಡ್ಯ ಕ್ಷೇತ್ರವನ್ನು ಯಾವ ಕಾರಣಕ್ಕೂ ಜೆಡಿಎಸ್‌ಗೆ ಬಿಟ್ಟುಕೊಡಬಾರದು ಎಂದು ಬಹಿರಂಗವಾಗಿಯೇ ಹೇಳಿಕೆ ನೀಡಿದ್ದರು. 

ಮಂಡ್ಯ ಕ್ಷೇತ್ರ ಜೆಡಿಎಸ್ ಪಾಲಾಗುವುದು ಬಹುತೇಕ ಖಚಿತವಾಗಿದ್ದು, ಐದು ವರ್ಷಗಳಿಂದ ಜೆಡಿಎಸ್ ಪಕ್ಷವನ್ನು ತೀವ್ರ ವಿರೋಧಿಸಿಕೊಂಡೇ ಬಂದಿರುವ ನಾರಾಯಣಗೌಡರು ಮೈತ್ರಿಯಲ್ಲಿ ಮುಂದುವರೆಯಲು ಇಷ್ಟಪಡದೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರುವ ನಿರ್ಧಾರ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಮಾತುಕತೆ ನಡೆಸಿರುವ ಕೆ.ಸಿ.ನಾರಾಯಣಗೌಡ ಅವರು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್‌ಗೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗುತ್ತಿದೆ. ಅವರ ಬೇಡಿಕೆಯನ್ನು ಮುಖ್ಯಮಂತ್ರಿಗಳು ತಿರಸ್ಕರಿಸಿದ್ದು, ಕಳೆದ ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್ ಸೇರಿದ್ದರೆ ಶಾಸಕನೋ, ಮಂತ್ರಿಯೋ ಆಗಿರುತ್ತಿದ್ದೆ.

ಸದ್ಯದ ಪರಿಸ್ಥಿತಿಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದ ಟಿಕೆಟ್ ನೀಡಲು ಆಗುವುದಿಲ್ಲ. ಮೊದಲು ಪಕ್ಷಕ್ಕೆ ಸೇರ್ಪಡೆಯಾಗು. ಆ ನಂತರ ಸೂಕ್ತ ಸ್ಥಾನ-ಮಾನ ಒದಗಿಸುವ ಭರವಸೆ ನೀಡಿದ್ದಾರೆ. ಇದಕ್ಕೆ ನಾರಾಯಣಗೌಡರು ಸಹಮತ ವ್ಯಕ್ತಪಡಿಸಿದ್ದು, ಶೀಘ್ರದಲ್ಲೇ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

೨೦೧೩ ಮತ್ತು ೨೦೧೮ರ ವಿಧಾನಸಭಾ ಚುನಾವಣೆಯಲ್ಲಿ ಕೆ.ಆರ್.ಪೇಟೆ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ವಿಧಾನಸಭೆ ಪ್ರವೇಶಿಸಿದ್ದ ಕೆ.ಸಿ.ನಾರಾಯಣಗೌಡರು, ಆಪರೇಷನ್ ಕಮಲಕ್ಕೆ ಒಳಗಾಗಿ ಜೆಡಿಎಸ್ ತೊರೆದು ಬಿಜೆಪಿ ಸೇರಿದ್ದರು. 

೨೦೧೯ರ ಕೆ.ಆರ್.ಪೇಟೆ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಗೆಲುವು ಸಾಧಿಸುವುದರೊಂದಿಗೆ ಮಂಡ್ಯ ಜಿಲ್ಲೆಯೊಳಗೆ ಮೊದಲ ಬಾರಿಗೆ ಬಿಜೆಪಿ ಖಾತೆ ತೆರೆದು ದಾಖಲೆ ನಿರ್ಮಿಸಿದ್ದರು. 

ಈ ಗೆಲುವಿನೊಂದಿಗೆ ಸತತ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದ ನಾರಾಯಣಗೌಡರು ಬಿಜೆಪಿ ಸರ್ಕಾರದಲ್ಲಿ ಕೃಷಿ, ರೇಷ್ಮೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದರು.

೨೦೨೩ರ ವಿಧಾನಸಭೆ ಚುನಾವಣೆಗೂ ಮುನ್ನ ಬಿಜೆಪಿ ತೊರೆದು ಕಾಂಗ್ರೆಸ್ ಸೇರುವುದಕ್ಕೆ ನಾರಾಯಣಗೌಡರು ಮುಂದಾಗಿದ್ದರು. ಕ್ಷೇತ್ರದ ಸ್ಥಳೀಯ ಕೆಲ ಮುಖಂಡರ ವಿರೋಧದ ನಡುವೆಯೂ ಕಾಂಗ್ರೆಸ್ ನಾಯಕರು ಒಪ್ಪಿಗೆ ಸೂಚಿಸಿದ್ದರು. 

ಮಂಡ್ಯ ಕ್ಷೇತ್ರವನ್ನ ಸುಮಲತಾಗೆ ಬಿಟ್ಟುಕೊಡಿ ಕುಮಾರಣ್ಣ; ಇಲ್ಲಿ ಬಿಜೆಪಿ ಗೆಲ್ಲಿಸ್ತೇವೆಂದ ನಾರಾಯಣಗೌಡ!

ಕೊನೆಯ ಹಂತದಲ್ಲಿ ಬಿಜೆಪಿ ವರಿಷ್ಠರ ಒತ್ತಡಕ್ಕೆ ಮಣಿದು ಅಲ್ಲೇ ಉಳಿದಿದ್ದರು. ಕೊನೆಗೆ ಚುನಾವಣೆಯಲ್ಲಿ ಕೆ.ಆರ್.ಪೇಟೆ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ನಾರಾಯಣಗೌಡರು ಜೆಡಿಎಸ್ ಅಭ್ಯರ್ಥಿ ಎಚ್.ಟಿ.ಮಂಜು ವಿರುದ್ಧ ಪರಾಭವಗೊಂಡಿದ್ದರು. ಜೆಡಿಎಸ್, ಬಿಜೆಪಿ ಪಕ್ಷಗಳ ಬಳಿಕ ಅವರ ರಾಜಕೀಯ ಯಾತ್ರೆ ಕಾಂಗ್ರೆಸ್ ಬಾಗಿಲಿಗೆ ಬಂದು ನಿಂತಿದೆ.

Follow Us:
Download App:
  • android
  • ios