ರಾಜ್ಯದಲ್ಲಿ ಆಡಳಿತ ಪಕ್ಷ ಭಾರೀ ಚುನಾವಣಾ ಅಕ್ರಮದಲ್ಲಿ ತೊಡಗುವ ಸಾಧ್ಯತೆ ಇದೆ. ಚುನಾವಣಾ ಆಯೋಗ ನಿಕ್ಷಪಕ್ಷಪಾತ ಚುನಾವಣೆ ನಡೆಸಲು ಮುಂದಾಗಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು. 

ಮೈಸೂರು (ಮಾ.30): ರಾಜ್ಯದಲ್ಲಿ ಆಡಳಿತ ಪಕ್ಷ ಭಾರೀ ಚುನಾವಣಾ ಅಕ್ರಮದಲ್ಲಿ ತೊಡಗುವ ಸಾಧ್ಯತೆ ಇದೆ. ಚುನಾವಣಾ ಆಯೋಗ ನಿಕ್ಷಪಕ್ಷಪಾತ ಚುನಾವಣೆ ನಡೆಸಲು ಮುಂದಾಗಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು. ಆಡಳಿತ ಪಕ್ಷ ಇರಲಿ ಅಥವಾ ಯಾವುದೇ ಪಕ್ಷ ಇರಲಿ. ಅಕ್ರಮ ಮಾಡಿದರೆ ಕ್ರಮ ಕೈಗೊಳ್ಳಬೇಕು. ಆಡಳಿತ ಪಕ್ಷಕ್ಕೊಂದು ವಿರೋಧ ಪಕ್ಷಗಳಿಗೊಂದು ನ್ಯಾಯ ಮಾಡಬಾರದು ಎಂದರು. ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್‌ ಪರ ಗಾಳಿ ಬೀಸುತ್ತಿದೆ. ಆದ್ದರಿಂದ ಟಿಕೆಟ್‌ಗೆ ಪೈಪೋಟಿ ಹೆಚ್ಚಾಗಿದೆ. 

Add Asianetnews Kannada as a Preferred SourcegooglePreferred

ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ದೊಡ್ಡ ಮಟ್ಟದಲ್ಲಿದೆ. ಒಂದೆರಡು ದಿನದಲ್ಲಿ ಕಾಂಗ್ರೆಸ್‌ನ 2ನೇ ಪಟ್ಟಿ ಬಿಡುಗಡೆ ಆಗಲಿದೆ. ಇಂದು ಸ್ಕ್ರೀನಿಂಗ್‌ ಕಮಿಟಿ ಸಭೆ ಇದೆ. ಸಭೆ ಮುಗಿಸಿ ಅದನ್ನು ಹೈಕಮಾಂಡ್‌ಗೆ ಕಳುಹಿಸುತ್ತೇವೆ. ಆ ನಂತರ ಪಟ್ಟಿಬಿಡುಗಡೆಯಾಗುತ್ತದೆ ಎಂದು ಹೇಳಿದರು. ಕಾಂಗ್ರೆಸ್‌ ಚುನಾವಣೆಗೆ ಸಿದ್ಧ: ಒಂದೇ ಹಂತದಲ್ಲಿ ರಾಜ್ಯ ವಿಧಾನಸಭಾ ಚುನಾವಣೆ ಘೋಷಿಸಿರುವುದು ಸ್ವಾಗತಾರ್ಹ. ನಾವು ಚುನಾವಣೆಗೆ ಸಿದ್ಧವಾಗಿದ್ದೇವೆ. ನಿಷ್ಪಕ್ಷಪಾತ, ಸ್ವತಂತ್ರ ಚುನಾವಣೆ ಮಾಡುವುದು ಆಯೋಗದ ಜವಾಬ್ದಾರಿ. ಇಡೀ ಚುನಾವಣೆ ವ್ಯವಸ್ಥೆ ಭ್ರಷ್ಟಗೊಳಿಸಿದ್ದು ಬಿಜೆಪಿ. 

ರಾಜ್ಯದಲ್ಲಿ ಬಿಜೆಪಿ-ಕಾಂಗ್ರೆಸ್‌ ಪಕ್ಷಗಳ ರಾಜಕೀಯ ಸ್ಥಿತಿ ಚಿಂತಾಜನಕ: ಸಿ.ಎಂ.ಇಬ್ರಾಹಿಂ

ದೇಶದಲ್ಲಿ ಆಪರೇಷನ್‌ ಕಮಲ ಮಾಡಿದ್ದೇ ಬಿಜೆಪಿ. ಪೊಲೀಸರು, ನಿಯೋಜನೆಗೊಂಡ ಅಧಿಕಾರಿಗಳನ್ನೇ ಬಳಸಿಕೊಂಡು ಅಕ್ರಮ ನಡೆಸುವ ಸಾಧ್ಯತೆ ಇದೆ. 300ಕ್ಕೂ ಹೆಚ್ಚು ಐಟಿ ಅಧಿಕಾರಿಗಳನ್ನು ನೇಮಿಸಿಕೊಂಡಿರುವುದು ಕಾಂಗ್ರೆಸನ್ನು ಕಟ್ಟಿಹಾಕಲು ಮಾಡಿಕೊಂಡಿರುವ ಯೋಜನೆ ಎಂದು ಸಿದ್ದರಾಮಯ್ಯ ಕಿಡಿಕಾರಿದರು. ಏ.9 ರಂದು ಮೈಸೂರಿನಲ್ಲಿ ಪ್ರಧಾನಿ ಮೋದಿ ಅವರು ಚುನಾವಣೆ ಪ್ರಚಾರದಲ್ಲಿ ಪಾಲ್ಗೊಳ್ಳಲು ಆಗಮಿಸಬಹುದೇ ಹೊರತು ಸರ್ಕಾರಿ ಕಾರ್ಯಕ್ರಮಕ್ಕೆ ಬರಲು ಆಗುವುದಿಲ್ಲ. ಈಗ ನೀತಿ ಸಂಹಿತೆ ಜಾರಿಯಲ್ಲಿದೆ. ಈಗ ಸರ್ಕಾರಿ ಕಾರ್ಯಕ್ರಮ ಹೇಗೆ ನಡೆಸುತ್ತಾರೆ ಎಂದು ಪ್ರಶ್ನಿಸಿದರು.

ಇದು ನನ್ನ ಕೊನೆ ಚುನಾವಣೆ: ಹುಟ್ಟೂರಿನ ಕ್ಷೇತ್ರದಿಂದಲೇ ಸ್ಪರ್ಧಿಸಿ ನಿವೃತ್ತಿ ಆಗಬೇಕು ಎಂಬುದು ನನ್ನ ಬಯಕೆ. ಹೀಗಾಗಿ ನಾನು ವರುಣ ಕ್ಷೇತ್ರದಿಂದ ಈ ಬಾರಿ ಸ್ಪರ್ಧೆ ಮಾಡುತ್ತಿದ್ದೇನೆ. ಇದೇ ನನ್ನ ಕೊನೇ ಚುನಾವಣೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು. ಬುಧವಾರ ಸುದ್ದಿಗಾರರ ಜತೆಗೆ ಮಾತನಾಡಿದ ಅವರು ಇದೇ ನನ್ನ ಕೊನೇ ಚುನಾವಣೆ, ಇದೇ ಕೊನೇ ಚುನಾವಣೆ ಎಂದು ಎರಡೆರಡು ಬಾರಿ ಪುನರುಚ್ಚರಿಸಿದರು. ಆ ಬಳಿಕ ರಾಜಕೀಯ ನಿವೃತ್ತಿಯಾಗುತ್ತೇನೆ ಎಂದರು. ಕಳೆದ ಬಾರಿ ಚಾಮುಂಡೇಶ್ವರಿ ಕ್ಷೇತ್ರದ ಬಗ್ಗೆ ನನಗೆ ಸ್ವಲ್ಪ ಅನುಮಾನ ಇತ್ತು. ಹೀಗಾಗಿ ಬಾದಾಮಿ ಕ್ಷೇತ್ರದಲ್ಲೂ ಸ್ಪರ್ಧಿಸಿದ್ದೆ. 

ಈ ಬಾರಿ ನನಗೆ ಯಾವ ಅನುಮಾನಗಳೂ ಇಲ್ಲ. ಆದರೆ ಕೋಲಾರದ ಜನ ಒತ್ತಾಯದಿಂದ ಕರೆಯುತ್ತಿರುವ ಕಾರಣ ಅಲ್ಲೂ ನಿಲ್ಲಲು ಟಿಕೆಟ್‌ ಕೊಡಿ ಎಂದು ಕೇಳಿದ್ದೇನೆ. ಈ ವಿಚಾರದಲ್ಲಿ ಅಂತಿಮ ತೀರ್ಮಾನ ಹೈಕಮಾಂಡ್‌ಗೆ ಬಿಟ್ಟದ್ದು. ನನಗೆ ಕ್ಷೇತ್ರ ಇಲ್ಲ ಎನ್ನುವುದೆಲ್ಲ ಅರ್ಥ ಇಲ್ಲದ ಮಾತು. ನನಗೆ 25 ಕ್ಷೇತ್ರದಲ್ಲೂ ಗೆಲ್ಲುವ ಅವಕಾಶ ಇರುವ ಕಾರಣ ನನ್ನನ್ನು ಆಹ್ವಾನಿಸುತ್ತಿದ್ದಾರೆ ಎಂದರು. ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

ಬಿಜೆಪಿ ಅಭ್ಯರ್ಥಿ ಪಟ್ಟಿ ಶೀಘ್ರವೇ ಘೋಷಣೆ: ನಳಿನ್‌ ಕುಮಾರ್‌ ಕಟೀಲ್‌

ಬಿಜೆಪಿ, ಜೆಡಿಎಸ್‌ ಮ್ಯಾಚ್‌ಫಿಕ್ಸಿಂಗ್‌: ವರುಣ ಕ್ಷೇತ್ರದಲ್ಲಿ ನನ್ನ ವಿರುದ್ಧ ಯಾರೇ ಸ್ಪರ್ಧಿಸಿದರೂ ಹೆದರುವುದಿಲ್ಲ. ಜೆಡಿಎಸ್‌ ಮತ್ತು ಬಿಜೆಪಿ ಕಳೆದ ಬಾರಿಯಂತೆ ಈ ಬಾರಿಯೂ ಮ್ಯಾಚ್‌ ಫಿಕ್ಸಿಂಗ್‌ ಮಾಡಿಕೊಳ್ಳುವ ಸೂಚನೆ ಇದೆ. ಹಳೇ ಮೈಸೂರು, ಹೊಸ ಮೈಸೂರು ಎಂದೇನಿಲ್ಲ. ಅವರು ಎಲ್ಲ ಕಡೆಯೂ ಫಿಕ್ಸಿಂಗ್‌ ಮಾಡಿಕೊಳ್ಳಬಹುದು. ನನ್ನ ವಿರುದ್ಧ ಯಾರೇ ಸ್ಪರ್ಧೆ ಮಾಡಿದರು ನಾನು ಅದಕ್ಕೆ ಹೆದರುವುದಿಲ್ಲ ಎಂದರು. ಕಳೆದ ಚುನಾವಣೆಯಲ್ಲಿ ಸೋತ ಮೇಲೆ ನಾನು ರಾಹು ಕೇತುಗಳು ಒಂದಾದವು ಎಂದು ಹೇಳಿದ್ದೆ. ಈಗ ನಾನು ಆ ಪದ ಬಳಸುವುದಿಲ್ಲ. ಬಳಸಿದರೆ ಅವರು ಈಗ ಸಿಟ್ಟಾಗುತ್ತಾರೆ. ನಾನು ಈ ಬಾರಿ ಗೆಲ್ಲುತ್ತೇನೆ. ಈಗ ಅದನ್ನು ಉಲ್ಲೇಖಿಸುವ ಅಗತ್ಯ ಇಲ್ಲ. ಜನ ನನ್ನ ಪರ ಇದ್ದಾರೆ ಎಂದು ಹೇಳಿದರು.