*   ಕಾಂಗ್ರೆಸ್‌ ಪಕ್ಷಕ್ಕೆ ಜೆಡಿಎಸ್‌ ನಾಯಕ ಆಗ್ರಹ*  ನಮ್ಮ ಬಳಿ 32 ಮತಗಳಿದ್ದು, ಹೆಚ್ಚುವರಿಯಾಗಿ 4-5 ಮತಗಳು ಬೇಕಾಗಿವೆ*  ನಮಗೂ ಮತ್ತು ಅವರಿಗೂ ಕೋಮುವಾದಿ ಪಕ್ಷವನ್ನು ದೂರ ಇಡಬೇಕು ಎಂಬ ಉದ್ದೇಶ 

ಬೆಂಗಳೂರು(ಜೂ.04): ಕೋಮುವಾದಿ ಪಕ್ಷವನ್ನು ದೂರ ಇಡಬೇಕು ಎಂಬ ಉದ್ದೇಶ ಕಾಂಗ್ರೆಸ್‌ಗಿದ್ದರೆ ನಮ್ಮ ಪಕ್ಷದ ಅಭ್ಯರ್ಥಿಗೆ ಮತ ಹಾಕಬೇಕು. ಇಲ್ಲವೇ ಕೋಮುವಾದಿಗಳನ್ನು ಅಧಿಕಾರಕ್ಕೆ ತರುವುದಾದರೆ ಅವರಿಗೆ ಮತಹಾಕಿ ಎಂದು ಜೆಡಿಎಸ್‌ನಾಯಕ ಹಾಗೂ ಮಾಜಿ ಸಚಿವ ಎಚ್‌.ಡಿ.ರೇವಣ್ಣ ಹೇಳಿದ್ದಾರೆ.

‘ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರು ಕಾಂಗ್ರೆಸ್‌ನಾಯಕಿ ಸೋನಿಯಾಗಾಂಧಿ ಜತೆ ಮಾತನಾಡಿದ್ದರು. ಅವರು ಕರ್ನಾಟಕ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ಗೆ ಹೇಳುತ್ತೇನೆ, ಅವರು ರಾಜ್ಯದ ನಾಯಕರ ಜತೆ ಮಾತನಾಡುತ್ತಾರೆ ಎಂದಿದ್ದರು. ಕುಪೇಂದ್ರ ರೆಡ್ಡಿ ಅವರಿಗೆ ಕಾಂಗ್ರೆಸ್‌ನ ಪ್ರಭಾವಿ ನಾಯಕರೊಬ್ಬರು ಕರೆ ಮಾಡಿ ನೀವೇ ಸ್ಪರ್ಧಿಸಿದರೆ ಮತ ಹಾಕುತ್ತೇವೆ ಎಂದು ತಿಳಿಸಿದ್ದರು. ಆದರೆ ಈಗ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜೆಡಿಎಸ್‌ಮತ ಬೇಡ ಎಂದಿದ್ದಾರೆ. ಯಾರು ಯಾರ ಜತೆ ಸಂಪರ್ಕದಲ್ಲಿದ್ದಾರೆ ಗೊತ್ತಿಲ್ಲ. ಜೂ.10ರವರೆಗೆ ಕಾಲಾವಕಾಶ ಇದೆ. ಜೆಡಿಎಸ್‌ಗೆ ಬೆಂಬಲ ನೀಡಲಿ’ ಎಂದರು.

ಸರ್ಕಾರದ ಸ್ಪಷ್ಟ ಆದೇಶ, ಮೇಲುಗೈ ಸಾಧಿಸಿದ ಪ್ರೀತಂ ಗೌಡ, ರೇವಣ್ಣಗೆ ಹಿನ್ನಡೆ

‘ಕಳೆದ ಭಾನುವಾರ ಚನ್ನರಾಯಪಟ್ಟಣಕ್ಕೆ ಮದುವೆ ಕಾರ್ಯಕ್ರಮಕ್ಕೆ ಹೋಗಿದ್ದ ವೇಳೆ ಸಿದ್ದರಾಮಯ್ಯ ಬಂದಿದ್ದರು. ಆಗ ನಿಮ್ಮ ಜತೆ ಮಾತನಾಡಬೇಕು ಎಂದು ಹೇಳಿದೆ. ಅದಕ್ಕೆ ಅವರು ಬನ್ನಿ ಎಂದಿದ್ದರು. ಆದರೆ, ಮರುದಿನವೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದರು. ನಾನು ಅವರ ಭೇಟಿಗೆ ತೆರಳುವುದಕ್ಕೂ ಮೊದಲೇ ಅಭ್ಯರ್ಥಿಯನ್ನು ಹಾಕಿದರು. ಅಭ್ಯರ್ಥಿಯನ್ನು ಹಾಕಿದ ಮೇಳೆ ನಾನು ಹೇಗೆ ಅವರನ್ನು ಭೇಟಿ ಮಾಡಲಿ, ಚುನಾವಣೆಯವರೆಗೂ ಸಮಯ ಇದೆ’ ಎಂದು ನುಡಿದರು.

ಶುಕ್ರವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಾಂಗ್ರೆಸ್‌ನವರು ಕೋಮುವಾದಿ ಬಿಜೆಪಿಯನ್ನು ದೂರ ಇಡಬೇಕು ಎನ್ನುತ್ತಾರೆ. ಕೋಮುವಾದಿಗಳನ್ನು ದೂರ ಇಡಬೇಕೆಂದರೆ ಜೆಡಿಎಸ್‌ಗೆ ಮತ ನೀಡಬೇಕು. ನಮ್ಮ ಬಳಿ 32 ಮತಗಳಿದ್ದು, ಹೆಚ್ಚುವರಿಯಾಗಿ 4-5 ಮತಗಳು ಬೇಕಾಗಿವೆ. ನಮ್ಮ ಪಕ್ಷದ ಎಲ್ಲಾ 32 ಮತಗಳು ಬೀಳುವ ಸಂಪೂರ್ಣ ವಿಶ್ವಾಸ ಇದೆ. ನಮಗೂ ಮತ್ತು ಅವರಿಗೂ ಕೋಮುವಾದಿ ಪಕ್ಷವನ್ನು ದೂರ ಇಡಬೇಕು ಎಂಬ ಉದ್ದೇಶ ಇರುವಾಗ ಜೆಡಿಎಸ್‌ಅಭ್ಯರ್ಥಿಯ ಗೆಲುವಿಗಾಗಿ ಮತಗಳನ್ನು ನೀಡಬೇಕು’ ಎಂದರು.