Asianet Suvarna News Asianet Suvarna News

Karnataka Politics: ಇನ್ನೂ ಮಂತ್ರಿಗಿರಿ ಸಿಕ್ಕಿಲ್ಲ: ಈಶ್ವರಪ್ಪ ಅಸಮಾಧಾನ

ಬೆಳಗಾವಿ ಗುತ್ತಿಗೆದಾರನ ಆತ್ಮಹತ್ಯೆ ಪ್ರಕರಣದಲ್ಲಿ ದೋಷಮುಕ್ತರಾಗಿದ್ದರೂ ಮಂತ್ರಿ ಸ್ಥಾನ ಸಿಗದ ವಿಚಾರವಾಗಿ ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಮತ್ತೊಮ್ಮೆ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. 

ks eshwarappa express displeasure about government gvd
Author
First Published Oct 4, 2022, 3:25 AM IST

ಕಲಬುರಗಿ (ಅ.04): ಬೆಳಗಾವಿ ಗುತ್ತಿಗೆದಾರನ ಆತ್ಮಹತ್ಯೆ ಪ್ರಕರಣದಲ್ಲಿ ದೋಷಮುಕ್ತರಾಗಿದ್ದರೂ ಮಂತ್ರಿ ಸ್ಥಾನ ಸಿಗದ ವಿಚಾರವಾಗಿ ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಮತ್ತೊಮ್ಮೆ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಆರೋಪ ಮುಕ್ತನಾದ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷ್‌ ಅವರು ಕರೆ ಮಾಡಿ ಶುಭ ಹಾರೈಸಿದ್ದರು. ಸದ್ಯದಲ್ಲೇ ಸಂಪುಟಕ್ಕೆ ಮರಳಿ ಸೇರ್ಪಡೆ ಮಾಡುವ ಕುರಿತು ಮಾತನಾಡಿದ್ದರು. ಮುಖ್ಯಮಂತ್ರಿಗಳನ್ನು ಈ ವಿಚಾರವಾಗಿ ಕೇಳಿದ್ದೆ. ಈಗಲೂ ಅದೇ ಹೇಳುತ್ತಿರುವೆ. ಸಚಿವ ಸ್ಥಾನ ಸಿಗದ ವಿಚಾರವಾಗಿ ಆಗ ಅಸಮಾಧಾನ ಇತ್ತು.

ಆ ಅಸಮಾಧಾನ ಈಗಲೂ ನಿವಾರಣೆ ಆಗಿಲ್ಲ ಎಂದು ಸೋಮವಾರ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. ಮದುವೆಯಾಗಬೇಕು ಅಂತ ಬೇಡಿಕೆ ಇಟ್ಟರೆ ಮದುವೆ ಆದ ಮೇಲೆ ತಾನೆ ಸರಿ ಆಗೋದು? ಹೆಣ್ಣು ನೋಡ್ತಿದ್ದಾರೆ, ಏನಾಗುತ್ತೋ ನೋಡೋಣ ಎಂದ ಅವರು, ನಾನು ಸಚಿವ ಸ್ಥಾನದ ಬಗ್ಗೆ ತಲೆ ಹೆಚ್ಚು ಕೆಡಿಸಿಕೊಂಡಿಲ್ಲ. ಪಕ್ಷದ ನಾಯಕರು ಜವಾಬ್ದಾರಿ ಕೊಟ್ಟರೆ ಸಮರ್ಥವಾಗಿ ನಿಭಾಯಿಸುತ್ತೇನೆ. ಸಚಿವ ಸ್ಥಾನ ಸಿಗದಿದ್ದರೆ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಳ್ಳುತ್ತೇನೆ ಎಂದು ತಿಳಿಸಿದರು. ಸಚಿವ ಸ್ಥಾನ ಸಿಗದ ವಿಚಾರವಾಗಿ ಈಶ್ವರಪ್ಪ ಕೆಲ ದಿನಗಳಿಂದ ಬಹಿರಂಗವಾಗಿ ತಮ್ಮ ಅಸಮಾಧಾನ ಹೊರಹಾಕುತ್ತಿದ್ದಾರೆ.

ಪಿಎಫ್‌ಐ ನಿಷೇಧ: ಕೇಂದ್ರ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ ಸಚಿವ ನಿರಾಣಿ-ಮಾಜಿ ಸಚಿವ ಈಶ್ವರಪ್ಪ

ಸಿದ್ದು ಮುಸ್ಲಿಮರಿಗೆ ಹೀರೋ, ಹಿಂದೂಗಳಿಗೆ ವಿಲನ್‌: ಸಿದ್ದರಾಮಯ್ಯ ಅವರು ಮುಸ್ಲಿಂರಿಗೆ ಹೀರೋ ಆದರೆ, ಹಿಂದೂಗಳಿಗೆ ಮಾತ್ರ ವಿಲನ್‌ ಆಗಿದ್ದಾರೆ, ಒಟ್ಟಿನಲ್ಲಿ ಕರ್ನಾಟಕ ರಾಜ್ಯದ ಹಿಂದೂಗಳ ಏಕೈಕ ವಿಲನ್‌ ಅಂದರೆ ಅದು ಸಿದ್ದರಾಮಯ್ಯ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ ಲೇವಡಿ ಮಾಡಿದರು. ಹಿಂದುಳಿದ ವರ್ಗಗಳ ಜಾಗೃತಿ ಸಮಾವೇಶದಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯ ಡಿ.ಕೆ.ಶಿವಕುಮಾರ್‌ಗೆ ವಿಲನ್‌, ಕಾಂಗ್ರೆಸ್‌ಗೂ ವಿಲನ್‌, ಹಿಂದುಳಿದವರು, ದಲಿತರಿಗೂ ವಿಲನ್ನೇ. ಮುಸ್ಲಿಮರಿಗೆ ಮಾತ್ರ ಹೀರೋ ಎಂದು ಛೇಡಿಸಿದರು.

ಕರ್ನಾಟಕಕ್ಕೆ ಬಂದಿರುವ ರಾಹುಲ್‌ ಗಾಂಧಿ ಅವರನ್ನು ಸ್ವಾಗತ ಮಾಡುತ್ತೇನೆ. ಮೊದಲು ಕಾಂಗ್ರೆಸ್‌ ಪಕ್ಷದವರು ಡಿ.ಕೆ.ಶಿವಕುಮಾರ್‌ ಮತ್ತು ಸಿದ್ದರಾಮಯ್ಯ ಅವರನ್ನು ಒಂದು ಮಾಡಲಿ. ಏಕೆಂದರೆ, ಸಿದ್ದರಾಮಯ್ಯ ಕಾಡುಮೇಡಿಗೆ ಹೋಗಿ ಡಿ.ಕೆ.ಶಿವಕುಮಾರ್‌ ಅವರಿಗೆ ಟಾಂಗ್‌ ಕೊಟ್ಟು ರಾಹುಲ್‌ ಗಾಂಧಿ ಜೊತೆ ತಿಂಡಿ ತಿಂತಾರೆ, ಡಿ.ಕೆ.ಶಿವಕುಮಾರ್‌ ಆಮೇಲೆ ಹೋಗಿ ರಾಹುಲ್‌ ಗಾಂಧಿ ಭೇಟಿ ಮಾಡುತ್ತಾರೆ. ಮೊದಲು ರಾಹುಲ್‌ ಈ ಇಬ್ಬರು ನಾಯಕರನ್ನು ಒಂದು ಮಾಡಲಿ. ಆ ನಂತರ ಭಾರತ್‌ ಜೋಡೋ ಮಾಡಲಿ ಎಂದು ಸಲಹೆ ನೀಡಿದರು.

ಕಾಂಗ್ರೆಸ್‌ ಎಂದೂ ಒಂದಾಗದು: ಸಿದ್ದರಾಮಯ್ಯ ಕರ್ನಾಟಕದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಹಾಳು ಮಾಡಿದ್ದಾಯಿತು. ಮುಖ್ಯಮಂತ್ರಿ ಸ್ಥಾನವನ್ನು ಕಳೆದುಕೊಂಡಾಯ್ತು, ಎಷ್ಟೋ ಕಡೆ ಶಾಸಕ ಸ್ಥಾನಗಳನ್ನು ಕಳೆದುಕೊಂಡಿರುವ ಹೊತ್ತಿನಲ್ಲಿ, ಪಾರ್ಲಿಮೆಂಟ್‌​ನಲ್ಲಿ ಒಂದೇ ಒಂದು ಸೀಟ್‌ ಗೆದ್ದಿದ್ದಾರೆ, ಈಗಲೂ ಸಹ ನಿಮ್ಮ ಹಣೆಬರಹ ಬದಲಾಗೂ ಇಲ್ಲ, ನೀವೂ ಒಟ್ಟಾಗಿಯೂ ಇಲ್ಲ, ಹಾಗಾಗಿ ಕಾಂಗ್ರೆಸ್‌ ಜೋಡೋ ಮೊದಲು ಮಾಡಲಿ ಎಂದು ಸಲಹೆ ನೀಡಿದರು.

Karnataka Politics: ಈಶ್ವರಪ್ಪ ಮದುವೆಗೆ ಹೆಣ್ಣಿನವರು ಒಪ್ಪಬೇಕಲ್ವಾ?: ಪ್ರಿಯಾಂಕ್‌

ಕಾಂಗ್ರೆಸ್‌ ಎ​ಲ್ಲಿ​ದೆ?: ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವನ್ನು ಧೂಳಿಪಟ ಮಾಡಲು ರಾಜ್ಯದಲ್ಲಿ ಕಾಂಗ್ರೆಸ್‌ ಎಲ್ಲಿದೆ ಎಂದು ತೋರಿಸಲಿ, ಕಾಂಗ್ರೆಸ್‌ನವರ ಮಕ್ಕಳನ್ನು ಕೇಳಿದರೂ ಪ್ರಧಾನಮಂತ್ರಿ ನರೇಂದ್ರ ಮೋದಿ ಹೆಸರು ಹೇಳುತ್ತಾರೆ. ರಾಹುಲ್‌ ಗಾಂಧಿ ಹೆಸರನ್ನು ಒಬ್ಬರು ಹೇಳುತ್ತಾರಾ ಎಂದು ಟಾಂಗ್‌ ಕೊಟ್ಟಕೆ.ಎಸ್‌.ಈಶ್ವರಪ್ಪ, ಬ್ರಹ್ಮ ಬಂದರೂ ಬಿಜೆಪಿ ಧೂಳಿಪಟ ಮಾಡಲು ಸಾಧ್ಯವಿಲ್ಲ ಎಂದು ಗುಡುಗಿದರು.

Follow Us:
Download App:
  • android
  • ios