Asianet Suvarna News Asianet Suvarna News

ನನ್ನನ್ನು ಕೆಣಕಿ ಮರ್ಯಾದೆ ಕಳ್ಕೋಬೇಡಿ: ಸಚಿವರೊಬ್ಬರಿಗೆ ಡಿಕೆಶಿ ಎಚ್ಚರಿಕೆ

ಕೇಂದ್ರದಿಂದ ರಾಜ್ಯಕ್ಕೆ ಉಚಿತವಾಗಿ ಬರುವ ಅಕ್ಕಿ ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎನ್ನುವ ವಿಚಾರಕ್ಕೆ ಸಂಬಂಧಿದಂತೆ ಡಿಕೆ ಶಿವಕುಮಾರ್ ಅವರು ಸಚಿವ ಕೆ.ಗೋಪಾಲಯ್ಯ ವಿರುದ್ಧ ಗುಡುಗಿದ್ದಾರೆ. 

KPCC President dk shivakumar warns to minister K Gopalaiah
Author
Bengaluru, First Published Apr 26, 2020, 4:05 PM IST

ಬೆಂಗಳೂರು, (ಏ.26): ನಾನು ಗೋಪಾಲಯ್ಯ ಅವರಿಗಿಂತ ಮುಂಚೆಯೇ ಮಂತ್ರಿಯಾದವನು. ಸರ್ಕಾರದ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತದೆ ಅಂತಾ ನನಗೆ ಚೆನ್ನಾಗಿ ಗೊತ್ತಿದೆ. ನನ್ನನ್ನು ಕೆಣಕಿ ಮರ್ಯಾದೆ ಕಳೆದುಕೊಳ್ಳಬೇಡಿ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಗೋಪಾಲಯ್ಯನವರಿಗೆ ಎಚ್ಚರಿಕೆ ನೀಡಿದ್ದಾರೆ.

ಇಂದು (ಭಾನುವಾರ) ಬೆಂಗಳೂರಿನ ಬಸವ ಭವನದಲ್ಲಿ ಭಾನುವಾರ ನಡೆದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಅವರು ಮಾಧ್ಯಮಗಳ ಜತೆ ಮಾತನಾಡಿದ ಡಿಕೆಶಿ, ‘ಗೋಪಾಲಯ್ಯನವರಿಗೆ ತಮ್ಮ ಅಧಿಕಾರಿಗಳನ್ನು ಮುಚ್ಚಿಟ್ಟುಕೊಳ್ಳಬೇಕಾದ ಅನಿವಾರ್ಯತೆ ಇದೆ. ನಮ್ಮ ವ್ಯವಸ್ಥೆಯಲ್ಲಿ ನ್ಯಾಯಬೆಲೆ ಅಂಗಡಿಯಲ್ಲಿ ದಿನಸಿ ಪದಾರ್ಥವನ್ನು ಸಂಗ್ರಹಿಸಬೇಕಾದರೆ ಅನೇಕ ಕಾನೂನು ಪ್ರಕ್ರಿಯೆಗಳಿವೆ. ಇಂತಹ ಸಂದರ್ಭದಲ್ಲಿ ಅನುಮತಿ ಇಲ್ಲದ ಕಡೆ ಅಷ್ಟು ದೊಡ್ಡ ಪ್ರಮಾಣದಲ್ಲಿ ಅಕ್ಕಿ ಸಂಗ್ರಹಿಸಿಟ್ಟುಕೊಂಡಿದ್ದು ಯಾಕೆ? ಸರ್ಕಾರ ನೂರಾರು ಗೋಡೌನ್, ಛತ್ರಗಳನ್ನು ಪಡೆದು ಅವುಗಳನ್ನು ದಿನಸಿ ಪದಾರ್ಥ ಸಂಗ್ರಹಕ್ಕೆ ಬಳಸಲಾಗುವುದು ಎಂದು ಘೋಷಿಸಿದ್ದೇಕೆ? ಅಷ್ಟು ಕಟ್ಟಡಗಳಲ್ಲಿ ಸಂಗ್ರಹಿಸಲು ಅವಕಾಶ ಇರುವಾಗ ಇಲ್ಲಿ, ಖಾಸಗಿ ಜಾಗದಲ್ಲಿ ಬಚ್ಚಿಟ್ಟುಕೊಂಡಿದ್ದೇಕೆ? ಎಂದು ಪ್ರಶ್ನಿಸಿದರು.

ಬಡವರ ಅಕ್ಕಿ ಮಾರಿಕೊಂಡ ಬಿಜೆಪಿ ಪ್ರಮುಖ ನಾಯಕ: ಸಿಎಂಗೆ ವಿಷ್ಯಾ ತಿಳಿಸಿದ ಡಿಕೆಶಿ

ಕೇಂದ್ರ ಸರ್ಕಾರ ಕೊಟ್ಟ ಅಕ್ಕಿಯನ್ನು ಎಷ್ಟು ಬೆಲೆಗೆ, ಯಾರು ಯಾರಿಗೆ ಮಾರುತ್ತಿದ್ದಾರೆ ಎಂಬ ಬಗ್ಗೆ ನನ್ನ ಬಳಿ ಸ್ಪಷ್ಟ ಮಾಹಿತಿ ಇದೆ. ನಾನು ಅವರಿಗಿಂತ ಮುಂಚೆ ಸಚಿವನಾಗಿದ್ದು, ವ್ಯವಸ್ಥೆ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬುದು ಚೆನ್ನಾಗಿ ಗೊತ್ತಿದೆ. ಸುಮ್ಮನೆ ನನ್ನನ್ನು ಕೆಣಕಿ ಮಾನ ಕಳೆದುಕೊಳ್ಳಬೇಡಿ ಎಂದು ಗುಡುಗಿದರು.

ಎಷ್ಟು ಅಧಿಕಾರಿಗಳ ಜತೆ ಏನೇನು ಮಾತುಕತೆ ಆಗಿದೆ? ಸರ್ಕಾರದ ಅಕ್ಕಿಯನ್ನು ಯಾರು ಎಲ್ಲಿ ಎಷ್ಟಕ್ಕೆ ಖರೀದಿಸಿದ್ದಾರೆ ಎಂಬುದೂ ನನಗೆ ಗೊತ್ತಿದೆ. ಈಗ ಜನರ ಆರೋಗ್ಯ ಕಾಪಾಡಿ, ಅವರ ಜೀವಗಳನ್ನು ಉಳಿಸೋಣ. ಜೀವ ಇದ್ದರೆ ನಂತರ ಉಳಿದದ್ದು. ಹೀಗಾಗಿ ಈಗ ಆರೋಗ್ಯ ವಿಚಾರವಾಗಿ ಮಾತ್ರ ಚರ್ಚೆ ಮಾಡೋಣ ಎಂದು ಹೇಳಿದರು.

ತಪ್ಪು ಮಾಡಿದ ಎಲ್ಲರಿಗೂ ಶಿಕ್ಷೆಯಾಗಲಿ ಎಂದ ಡಿಕೆಶಿ
ಕಾನೂನಿನಲ್ಲಿ ಎಲ್ಲರೂ ಒಂದೇ. ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ. ಕಾನೂನಿನ ಪ್ರಕಾರ ಯಾರೇ ತಪ್ಪು ಮಾಡಿದರೂ ಅವರಿಗೆ ಶಿಕ್ಷೆ ಆಗಬೇಕು. ಕಾನೂನು ಮಾಡುವ ನಾವು ತಪ್ಪು ಮಾಡಿದವರಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು ಎಂದರು

ಮಂಡ್ಯ, ಪಾದರಾಯನಪುರದಲ್ಲಿ ತಪ್ಪು ಮಾಡಿದವರಿಗೂ ಶಿಕ್ಷೆಯಾಗಬೇಕು. ಅದೇ ರೀತಿ ಮಂಗಳೂರಿನಲ್ಲಿ ಜನಪ್ರತಿನಿಧಿಗಳು ಏನು ಮಾಡಿದ್ರು, ಬಿಜಾಪುರದ ನಾಯಕ ಏನು ಹೇಳಿಕೆ ನೀಡಿದ್ರು, ಚಿಕ್ಕಮಗಳೂರು, ದಾವಣಗೆರೆಯಲ್ಲಿ ಹೇಗೆ ಪ್ರಚೋದನೆ ಮಾತನಾಡಿದರು ಎಂಬುದನ್ನು ಪರಿಗಣಿಸಿ ಅವರಿಗೆ ಶಿಕ್ಷೆ ನೀಡಬೇಕು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

Follow Us:
Download App:
  • android
  • ios