ಬಿಜೆಪಿಯಿಂದ ಧರ್ಮದ ವಿಷ ಬೀಜ ಬಿತ್ತನೆ: ಡಿ.ಕೆ.ಶಿವಕುಮಾರ್‌

ಬಿಜೆಪಿ ಮತ್ತು ಜೆಡಿಎಸ್‌ ಅಧಿಕಾರಾವಧಿಯಲ್ಲಿ ಜನಪರವಾಗಿ ಮಾಡಿದ ಕಾರ್ಯಗಳೇನು ಹಾಗೂ ಅಭಿವೃದ್ಧಿ ವಿಚಾರದಲ್ಲಿ ನಿರ್ಮಿಸಿದ ಸಾಕ್ಷಿ ಗುಂಡಗಳೇನು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಡಿಕೆ ಶಿವಕುಮಾರ್‌ ಪ್ರಶ್ನಿಸಿದರು. 

KPCC President DK Shivakumar Slams On BJP Govt gvd

ಮಳವಳ್ಳಿ (ಫೆ.12): ಬಿಜೆಪಿ ಮತ್ತು ಜೆಡಿಎಸ್‌ ಅಧಿಕಾರಾವಧಿಯಲ್ಲಿ ಜನಪರವಾಗಿ ಮಾಡಿದ ಕಾರ್ಯಗಳೇನು ಹಾಗೂ ಅಭಿವೃದ್ಧಿ ವಿಚಾರದಲ್ಲಿ ನಿರ್ಮಿಸಿದ ಸಾಕ್ಷಿ ಗುಂಡಗಳೇನು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಡಿಕೆ ಶಿವಕುಮಾರ್‌ ಪ್ರಶ್ನಿಸಿದರು. ಪಟ್ಟಣದಲ್ಲಿ ನಡೆದ ಪ್ರಜಾಧ್ವನಿ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್‌ ಪಕ್ಷ ಈ ದೇಶಕ್ಕೆ ಸ್ವಾತಂತ್ರ್ಯ, ಸಂವಿಧಾನ, ಬ್ಯಾಂಕ್‌ಗಳ ರಾಷ್ಟ್ರೀಕರಣ, ನರೇಗಾ ಯೋಜನೆ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಜಾರಿಗೊಳಿಸುವ ಮೂಲಕ ಕೊಡುಗೆ ನೀಡಿದೆ ಎಂದರು.

ರಾಜ್ಯದಲ್ಲಿ ಉಳುವವನಿಗೆ ಭೂಮಿ, ಬಿಸಿಯೂಟ, ಸ್ತ್ರೀಶಕ್ತಿ, ಹಾಲಿಗೆ ಪ್ರೋತ್ಸಾಹ ಜನ, ಶಾಲಾ ಮಕ್ಕಳಿಗೆ ಬೈಸಿಕಲ್, ಅನ್ನಭಾಗ್ಯ ಸೇರಿದಂತೆ ಇನ್ನೂ ಅನೇಕ ಕಾರ್ಯಕ್ರಮ ಜಾರಿಗೊಳಿಸಿ ಅಭಿವೃದ್ಧಿಯ ಹಾಗೂ ಜನಪ್ರಯೋಜನಗಳ ಸಾಕ್ಷಿ ಗುಡ್ಡೆಗಳನ್ನು ನಿರ್ಮಿಸಿದೆ. ಬಿಜೆಪಿ ಮತ್ತು ಜೆಡಿಎಸ್‌ ಯಾವ ಅಭಿವೃದ್ಧಿ ಸಾಧನೆಗಳನ್ನು ಜನರ ಮುಂದಿಟ್ಟು ಜನರ ಬಳಿ ವೋಟು ಕೇಳಲಿದ್ದಾರೆ. ಅವರಿಗೆ ವೋಟು ಕೇಳುವ ನೈತಿಕತೆಯೇ ಇಲ್ಲ ಎಂದರು. ಬೆಲೆ ಏರಿಕೆ, ನಿರುದ್ಯೋಗ, ಧರ್ಮದ ವಿಷ ಬೀಜ ಬಿತ್ತಿ ದೇಶವನ್ನು ಒಡೆದಿದ್ದು ಕೇಂದ್ರದ ಬಿಜೆಪಿ ಸಾಧನೆಯಾದರೆ, 40 ಪರ್ಸೆಂಟ್‌ ಭ್ರಷ್ಟಾಚಾರ, ನೇಮಕಾತಿಯಲ್ಲಿ ಅಕ್ರಮ, ಕೊರೋನಾ ಸಾಮಗ್ರಿಗಳ ಖರೀದಿಯಲ್ಲಿ ಅವ್ಯವಹಾರ ನಡೆಸಿದ್ದು ರಾಜ್ಯ ಬಿಜೆಪಿ ಸರ್ಕಾರದ ಸಾಧನೆಯಾಗಿದೆ ಎಂದು ಜರಿದರು.

2 ದಿನಗಳ ಭೇಟಿಗೆ ಮಂಗಳೂರಿಗೆ ಆಗಮಿಸಿದ ಸೂಪರ್ ಸ್ಟಾರ್ ರಜನಿಕಾಂತ್

ಕಾಂಗ್ರೆಸ್‌ ಸ್ಥಾಪಿಸಿದಂತಹ ಎಲ್ಲ ಕಾರ್ಖಾನೆಗಳನ್ನು ಮುಚ್ಚಿದ ಕೀರ್ತಿ ಬಿಜೆಪಿ ಸರ್ಕಾರಕ್ಕೆ ಸಲ್ಲುತ್ತದೆ. ಜಿಲ್ಲೆಯ ಪಿಎಸ್‌ಎಸ್‌ಕೆ ಕಾರ್ಖಾನೆಯನ್ನು ಖಾಸಗಿಯವರಿಗೆ ಮಾರಾಟ ಮಾಡಿದರು. ಮೈಷುಗಾರ ಕಾರ್ಖಾನೆಯನ್ನು ಮಾರಾಟ ಮಾಡುವ ಮುನ್ನಾರ ನಡೆಸುತ್ತಿದ್ದಾರೆ. ಭದ್ರಾವತಿಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯನ್ನು ಮುಚ್ಚುವುದಕ್ಕೆ ಹೊರಟಿದ್ದಾರೆ. ರೈತರು ಹಾಗೂ ಜನರ ಸಮಸ್ಯೆಗಳಿಗೆ ಪರಿಹಾರ ಹುಡುಕುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಹೀಗೆ ಬಿಜೆಪಿ ಸಮಾಜವನ್ನು ಕತ್ತರಿಸುವ ಕೆಲಸ ಮಾಡುತ್ತಿದ್ದರೆ ಕಾಂಗ್ರೆಸ್‌ ಪಕ್ಷ ಸೂಜಿಗೆ ದಾರ ಪೋಣಿಸಿಕೊಂಡು ಸಮಾಜವನ್ನು ಹೊಲಿಯುವ ಕೆಲಸ ಮಾಡುತ್ತಿದೆ ಎಂದರು.

ಜೆಡಿಎಸ್‌ ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಯಾವುದೇ ಸಾಧ್ಯತೆಗಳು ಇಲ್ಲ. ಕಾಂಗ್ರೆಸ್‌ ಜೆಡಿಎಸ್‌ನ ಕುಮಾರಸ್ವಾಮಿಗೆ ಅಧಿಕಾರ ಕೊಟ್ಟರು ಅದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಲಿಲ್ಲ. ಸಿಕ್ಕ ಅಧಿಕಾರವನ್ನು ಕೈ ಚೆಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದಕ್ಕೆ ಅವಕಾಶ ಮಾಡಿಕೊಟ್ಟರು ಎಂದು ದೂಷಿಸಿದರು.

ಕಾಂಗ್ರೆಸ್‌ ಆಡಳಿತದಲ್ಲಿ ತೊಂದರೆ ನೀಡಲಿಲ್ಲ: ಕೆಪಿಸಿಸಿ ಉಪಾಧ್ಯಕ್ಷ ಎನ್‌.ಚೆಲುವರಾಯಸ್ವಾಮಿ ಮಾತನಾಡಿ, ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಲು ಸಹಕರಿಸಿದ್ದ ಕಾಂಗ್ರೆಸ್‌ ಆಡಳಿತದ ವಿಷಯದಲ್ಲಿ ಯಾವುದೇ ತೊಂದರೆ ನೀಡಲಿಲ್ಲ. ಐದು ವರ್ಷಗಳ ಕಾಲ ಸಮರ್ಥವಾಗಿ ಆಡಳಿತ ನಡೆಸಲು ಎಲ್ಲ ರೀತಿಯ ಬೆಂಬಲ ನೀಡಲು ಸಿದ್ಧರಾಗಿದ್ದರು ಎಂದರು. ಲೋಕಸಭಾ ಚುನಾವಣೆಯಲ್ಲಿ ನಾವು ಮೌನವಾಗಿದ್ದರು ಡಿ.ಕೆ.ಶಿವಕುಮಾರ್‌ ಕುಮಾರಸ್ವಾಮಿ ಪರವಾಗಿ ನಿಂತು ಜೋಡೆತ್ತುಗಳಂತೆ ಅಭ್ಯರ್ಥಿ ಪರ ಚುನಾವಣಾ ಪ್ರಚಾರ ನಡೆಸಿದ್ದರು. ಆದರೆ, ಇಂದು ಕುಮಾರಸ್ವಾಮಿಯವರು ಡಿಕೆಶಿ ವಿರುದ್ಧವೇ ಮಾತನಾಡುತ್ತಿದ್ದಾರೆ. ಕೊಟ್ಟಅಧಿಕಾರವನ್ನು ಸಮರ್ಥವಾಗಿ ನಿಭಾಯಿಸಲಾಗದೆ ಜನರೆ ಎದುರು ಕಣ್ಣೀರು ಹಾಕುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಚುನಾವಣಾ ಸಮಯದಲ್ಲಿ ಅವರು ನೀಡಿದ್ದ ಭರವಸೆ ಜಾರಿಗೊಳಿಸಲೂ ಇಲ್ಲ. ಕಾಂಗ್ರೆಸ್‌ ಕಾರ್ಯಕ್ರಮಗಳನ್ನು ಸುಗಮವಾಗಿ ಕಾರ್ಯರೂಪಕ್ಕೆ ತರಲಿಲ್ಲ. ಅಧಿಕಾರ ಸಿಕ್ಕಾಗ ಏನು ಮಾಡಲಾಗದವರು ಮತ್ತೊಮ್ಮೆ ಅಧಿಕಾರ ಕೊಡಿ ಎಂದು ಜನರ ಬಳಿ ಕೇಳುತ್ತಿರುವುದಕ್ಕೆ ಅರ್ಥವಿದೆಯೇ ಎಂದು ಪ್ರಶ್ನಿಸಿದರು. ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮತದಾರರು ಹೆಚ್ಚಿನ ಬಲ ತುಂಬಿ ಅಧಿಕಾರಕ್ಕೆ ತರಲು ನೆರವಾಗಬೇಕು. ಕರ್ನಾಟಕದಿಂದ ಆರಂಭವಾಗುವ ಕಾಂಗ್ರೆಸ್‌ ವಿಜಯ ಯಾತ್ರೆ ಇಡೀ ರಾಷ್ಟ್ರವ್ಯಾಪಿ ವಿಸ್ತರಿಸಬೇಕು. ಕಾಂಗ್ರೆಸ್‌ನಲ್ಲಿ ಸಮರ್ಥ ನಾಯಕರಿಲ್ಲ ಎನ್ನುವವರಿಗೆ ಮಲ್ಲಿಕಾರ್ಜುನ ಖರ್ಗೆ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ಅವರ ಶಕ್ತಿ ಏನೆಂಬುದನ್ನು ತೋರಿಸಬೇಕಿದೆ ಎಂದರು.

ಸಚಿವ ಮುನಿರತ್ನ ಉದ್ಧಟತನದ ಮಾತು ನಿಲ್ಲಿಸಲಿ: ಶಾಸಕ ಕೆ.ಶ್ರೀನಿವಾಸ ಗೌಡ

ಬಿಜೆಪಿಯಲ್ಲಿ ನೂರೆಂಟು ಬಾಗಿಲು ಇದ್ದರೆ ಜೆಡಿಎಸ್‌ನಲ್ಲಿ ಹಾಸನ ಒಂದು ರಾಮನಗರ ಒಂದು ಎಂಬಂತಾಗಿದೆ. ಎಲ್ಲ ವರ್ಗದ ಜನರಿಗೆ ಭದ್ರತೆ ನೀಡುವ, ಜನಪರವಾದ ಕಾರ್ಯಕ್ರಮ ನೀಡುವ ಶಕ್ತಿ ಇರುವುದು ಕಾಂಗ್ರೆಸ್‌ಗೆ ಮಾತ್ರ ಎಂದು ವಿಶ್ವಾಸದಿಂದ ನುಡಿದರು. ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಚ್‌.ಎಂ.ರೇವಣ್ಣ, ಕಾಂಗ್ರೆಸ್‌ ವಕ್ತಾರ ವಿ.ಎಸ್‌.ಉಗ್ರಪ್ಪ, ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌.ಧ್ರುವ ನಾರಾಯಣ್‌, ಕೆಪಿಸಿಸಿ ಉಪಾಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ, ಮಾಜಿ ಶಾಸಕಿ ಮಲ್ಲಾಗಮ್ಮ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಎಸ್‌.ಶಿವಣ್ಣ, ಡಾ.ಮೂರ್ತಿ, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಸಿ.ಡಿ. ಗಂಗಾಧರ್‌ ಮಹಿಳಾಧ್ಯಕ್ಷೆ ಅಂಜನಾ ಶ್ರಿಕಾಂತ್‌ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

Latest Videos
Follow Us:
Download App:
  • android
  • ios