Karnataka Politics: ಸೌಹಾರ್ದತೆ ನಾಡಲ್ಲಿ ಬಿಜೆಪಿಯಿಂದ ಕೋಮು ದ್ವೇಷದ ಕಿಚ್ಚು: ಡಿಕೆ ಶಿವಕುಮಾರ್
ಬಿಜೆಪಿ ಸರ್ಕಾರ ರಾಜ್ಯದಲ್ಲಿ ಕಾನೂನು ವಿರೋಧಿ ಅನಗತ್ಯ ವಿಚಾರಗಳನ್ನು ಸಾರ್ವಜನಿಕವಾಗಿ ಪ್ರಸ್ತಾಪ ಮಾಡುತ್ತಾ ಕೋಮು ಸೌಹಾರ್ದತೆಗೆ ಧಕ್ಕೆ ತರುವ ಕೆಲಸ ಮಾಡುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆರೋಪಿಸಿದರು.
ಹಾಸನ (ಏ.07): ಬಿಜೆಪಿ ಸರ್ಕಾರ (BJP Government) ರಾಜ್ಯದಲ್ಲಿ ಕಾನೂನು ವಿರೋಧಿ ಅನಗತ್ಯ ವಿಚಾರಗಳನ್ನು ಸಾರ್ವಜನಿಕವಾಗಿ ಪ್ರಸ್ತಾಪ ಮಾಡುತ್ತಾ ಕೋಮು ಸೌಹಾರ್ದತೆಗೆ ಧಕ್ಕೆ ತರುವ ಕೆಲಸ ಮಾಡುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ (DK Shivakumar) ಆರೋಪಿಸಿದರು. ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಂತಿ ಸೌಹಾರ್ದತೆ ಪ್ರತೀಕವಾದ ಕರ್ನಾಟಕ ರಾಜ್ಯದಲ್ಲಿ (Karnataka) ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಸಹ ಕೋಮು ಸೌಹಾರ್ದತೆಗೆ ಧಕ್ಕೆ ತರುವಂತಹ ಕೆಲಸ ಮಾಡುತ್ತಿದೆ.
ಇದೀಗ ಚುನಾವಣೆ ಹತ್ತಿರವಿದ್ದಂತೆ ಮತಬ್ಯಾಂಕ್ ರಾಜಕೀಯ ಕೋಸ್ಕರ ಹಲಾಲ್, ಝಟ್ಕಾ ಕಟ್, ಹಿಜಾಬ್ ಇದೀಗ ಮಾವು ಹಣ್ಣಿನ ಸಂಬಂಧ ಗೊಂದಲ ಸೃಷ್ಟಿಮಾಡುತ್ತಿದೆ.ಇದರಿಂದ ರೈತರಿಗೆ ಮತ್ತು ಗ್ರಾಹಕರಿಗೆ ನಷ್ಟವಾಗಲಿದೆ ಹೊರತು ಸರಕಾರಕ್ಕೆ ಅಲ್ಲ. ರೈತರ ಬದುಕನ್ನು ಹಾಳುಮಾಡುತ್ತಾ ಅವರ ಕತ್ತುಹಿಸುಕಿ ಸಾಯಿಸುವ ಕೆಲಸವನ್ನು ಬಿಜೆಪಿ ಸರ್ಕಾರ ಮಾಡುತ್ತಿದೆ ಎಂದು ಕಿಡಿಕಾರಿದರು. ಬಿಜೆಪಿ ಸರ್ಕಾರ ಪ್ರತಿದಿನ ಹೊಸ ವಿವಾದಗಳನ್ನು ಸೃಷ್ಟಿಮಾಡುತ್ತ ನಾಡಿನಲ್ಲಿ ಅಶಾಂತಿಗೆ ಕಾರಣವಾಗುತ್ತಿದೆ ಇದಕ್ಕೆಲ್ಲ ಮುಂದಿನ ಚುನಾವಣೆಯಲ್ಲಿ ಜನರು ತಕ್ಕ ಉತ್ತರ ನೀಡಲಿದ್ದಾರೆ ಎಂದರು.
ಕಾಂಗ್ರೆಸ್ಸಲ್ಲಿ ನಕಲಿ ಸದಸ್ಯತ್ವ ನೋಂದಣಿ ಮಾಡಿಸಿದರೆ ಕಾರ‍್ಯಕರ್ತರು ಕಪ್ಪುಪಟ್ಟಿಗೆ
ರೈತರಿಗೂ ಬೆಲೆ ಏರಿಕೆ ಬರೆ: ಕೇಂದ್ರ ಬಿಜೆಪಿ ಸರ್ಕಾರ ದಿನದಿಂದ ದಿನಕ್ಕೆ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಮಾಡುತ್ತಲೇ ಇದೆ. ಜನರ ಸಮಸ್ಯೆಗೆ ಸ್ಪಂದಿಸಬೇಕಾದ ಸರ್ಕಾರ ಅವರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದೆ. ಅಲ್ಲದೇ ರೈತರಿಗೆ (Farmers) ಸಂಕಷ್ಟದಲ್ಲಿ ಇರುವಂತಹ ಸ್ಥಿತಿಯನ್ನು ಸರ್ಕಾರ ನಿರ್ಮಾಣ ಮಾಡಿದ್ದು ರಸಗೊಬ್ಬರ ಬೆಲೆಯನ್ನು ಸಹ ಏರಿಕೆ ಮಾಡುತ್ತಿದೆ ಎಂದು ಆರೋಪಿಸಿದರು. ರೈತರ ಬೆನ್ನೆಲುಬಾಗಿ ನಿಲ್ಲುವುದಾಗಿ ಹೇಳುವ ಸರ್ಕಾರ ರೈತ ಬೆಳೆದ ಬೆಳೆಗೆ ಬೆಂಬಲ ಬೆಲೆ ನೀಡುವಲ್ಲಿಯೂ ವಿಫಲವಾಗಿದೆ. ರಾಜ್ಯದಲ್ಲಿ ಬೆಂಬಲ ಬೆಲೆ ನೀಡುವ ಮೂಲಕ ರಾಗಿಯನ್ನು ಸಹ ಖರೀದಿ ಮಾಡುತ್ತಿಲ್ಲ ಉತ್ತರ ಕರ್ನಾಟಕದಲ್ಲಿ ತೊಗರಿ ಬೆಳೆಗೆ ಬೆಂಬಲ ಬೆಲೆ ನೀಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಕಿಡಿಕಾರಿದರು.
ಪ್ರತ್ಯೇಕ ಪ್ರಣಾಳಿಕೆ: ಮುಂದಿನ ಚುನಾವಣೆಯನ್ನು ಗುರಿಯಾಗಿಸಿಕೊಂಡು ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ಜಿಲ್ಲೆಗಳಿಗೆ ಪ್ರತ್ಯೇಕ ಪ್ರಣಾಳಿಕೆಯನ್ನು ಘೋಷಣೆ ಮಾಡಲಿದೆ ಮತ್ತು ಮಲೆನಾಡು-ಕರಾವಳಿ ಕಲ್ಯಾಣಕ್ಕಾಗಿ ವಿಶೇಷ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಿದೆ. ಅದರಲ್ಲೂ ಬೆಂಗಳೂರು ಅಭಿವೃದ್ಧಿಗೆ ವಿಶೇಷ ಪ್ರಣಾಳಿಕೆಯನ್ನು ಘೋಷಣೆ ಮಾಡುವುದಾಗಿ ಶಿವಕುಮಾರ್ ತಿಳಿಸಿದರು. ಈಗಾಗಲೇ ಚುನಾವಣೆ ಸಂಬಂಧ ರಾಜ್ಯದ ನಾನಾ ಜಿಲ್ಲೆಗಳಿಗೆ ಪಕ್ಷ ಸಂಘಟನೆ ಉದ್ದೇಶದಿಂದ ಪ್ರಚಾರದಲ್ಲಿ ಇದ್ದೇನೆ. ಆಯಾ ಕ್ಷೇತ್ರದ ಕಾರ್ಯಕರ್ತರ ಸ್ಥಳೀಯ ನಾಯಕರ ಅಭಿಪ್ರಾಯವನ್ನು ಸಂಗ್ರಹಿಸಿ ಅವರು ಸೂಚಿಸಿದ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗುವುದು ಈ ಸಂಬಂಧ ಅಲ್ಲಂ ವೀರಭದ್ರಪ್ಪ ನೇತೃತ್ವದಲ್ಲಿ ಸಮಿತಿಯನ್ನು ಸಹ ರಚಿಸಲಾಗಿದೆ ಎಂದು ಹೇಳಿದರು.
ಜೆಡಿಎಸ್‌ನವರು ಅರ್ಜಿ ಹಾಕಿದ್ದಾರೆ: ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸ್ಪಷ್ಟಬಹುಮತದೊಂದಿಗೆ ಅಧಿಕಾರವನ್ನು ಹಿಡಿಯಲಿದೆ. ಈಗಾಗಲೇ ಜನರ ನಾಡಿಮಿಡಿತವನ್ನು ಅರಿತಿದ್ದೇನೆ. ರಾಜ್ಯದಲ್ಲಿ ಬದಲಾವಣೆ ರಾಜಕೀಯ ಗಾಳಿ ಬೀಸುತ್ತಿದೆ ಎಂದ ಅವರು, ಬಿಜೆಪಿ-ಜೆಡಿಎಸ್‌ನಿಂದ ಅರ್ಜಿಗಳು ಬಂದಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲವಿಲ್ಲ ಎಂದು ಬಿಜೆಪಿ ನಾಯಕರು ಹೇಳುತ್ತಾರೆ. ಆದರೆ ಈಗಾಗಲೇ ಡಿಜಿಟಲ್ ನೋಂದಣಿ ಮೂಲಕ ಲಕ್ಷಾಂತರ ಮಂದಿ ಬಿಜೆಪಿ ಹಾಗೂ ಜೆಡಿಎಸ್‌ನ ಪಕ್ಷ ವಿರೋಧಿಸಿ ಕಾಂಗ್ರೆಸ್‌ಗೆ ಸದಸ್ಯರಾಗಿದ್ದಾರೆ ಹಾಗೂ ಎರಡು ಪಕ್ಷದ ಮುಖಂಡರು ಕಾಂಗ್ರೆಸ್ ಪಕ್ಷ ಸೇರುವ ಕುರಿತು ಅರ್ಜಿಯನ್ನು ಸಲ್ಲಿಸಿದ್ದಾರೆ. ಆದರೆ ಅವರ ಹೆಸರನ್ನು ಬಹಿರಂಗಪಡಿಸುವುದಿಲ್ಲ ಎಂದು ಡಿ ಕೆ ಶಿವಕುಮಾರ್ ತಿಳಿಸಿದರು.
Karnataka Election ನ.27ಕ್ಕೆ ರಾಜ್ಯ ವಿಧಾನಸಭೆ ಚುನಾವಣೆ: ಡಿಕೆಶಿ ಭವಿಷ್ಯ!
ಹಾಸನ ಜಿಲ್ಲೆಯ ಬಿಜೆಪಿ ಹಾಗೂ ಜೆಡಿಎಸ್‌ನ ಕೆಲ ನಾಯಕರು ಸಹ ಕಾಂಗ್ರೆಸ್ ಪಕ್ಷದಿಂದ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲು ನಮ್ಮ ಪಕ್ಷಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಸ್ಥಳೀಯ ಕಾಂಗ್ರೆಸ್ ನಾಯಕರ ಅಭಿಪ್ರಾಯವನ್ನು ಸಂಗ್ರಹಿಸಿ ಟಿಕೆಟ್ ಹಂಚಿಕೆ ಮಾಡಲಾಗುವುದು ಹಾಗೂ ಆಯಾ ಅಭ್ಯರ್ಥಿಗಳ ಗೆಲುವೆ ಪ್ರಮುಖ ಮಾನದಂಡವಾಗಿದೆ ಎಂದು ತಿಳಿಸಿದರು. ಈ ವೇಳೆ ಕೆಪಿಸಿಸಿ ಕಾರ್ಯಾಧ್ಯಕ್ಷ ಧೃವನಾರಾಯಣ್, ಜಿಲ್ಲಾಧ್ಯಕ್ಷ ಜಾವಗಲ್ ಮಂಜುನಾಥ್, ಮಾಜಿ ಶಾಸಕ ಹೆಚ್.ಕೆ.ಜವರೇಗೌಡ, ಎಮ್.ಎ.ಗೋಪಾಲಸ್ವಾಮಿ, ಬಿ.ಶಿವರಾಂ, ಎಚ್.ಕೆ.ಮಹೇಶ್, ದೇವರಾಜೇಗೌಡ, ಬನವಾಸೆ ರಂಗಸ್ವಾಮಿ ಇತರೆ ಮುಖಂಡರು ಹಾಜರಿದ್ದರು.