Asianet Suvarna News Asianet Suvarna News

ಕಾಂಗ್ರೆಸ್ ಮುಖಂಡರಿಗೆ ಡಿ.ಕೆ.ಶಿವಕುಮಾರ್ ಸವಾಲ್

ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿದೆ. ಇದೇ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸವಾಲ್ ಹಾಕಿದ್ದಾರೆ. 

KPCC President DK Shivakumar Challenge To Congress Leaders snr
Author
Bengaluru, First Published Dec 5, 2020, 9:04 AM IST

ಬೆಂಗಳೂರು (ಡಿ.05):  ‘ಗ್ರಾಮ ಪಂಚಾಯ್ತಿ ಚುನಾವಣೆಯನ್ನು ಗಂಭೀರ ಹಾಗೂ ಜವಾಬ್ದಾರಿಯುತವಾಗಿ ತೆಗೆದುಕೊಂಡು ಕೆಲಸ ಮಾಡಬೇಕು. ಯಾರು ತಮ್ಮ ಬೂತ್‌ನಲ್ಲಿ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿಗೆ ಮುನ್ನಡೆ ಕೊಡಿಸುತ್ತೀರೋ ಅವರೇ ನಾಯಕರು. ನಿಮ್ಮ ನಾಯಕತ್ವ ಹಾಗೂ ಶಕ್ತಿ ಸಾಬೀತುಪಡಿಸಿ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಕಾಂಗ್ರೆಸ್‌ ಕಾರ್ಯಕರ್ತರು ಹಾಗೂ ಮುಖಂಡರಿಗೆ ಕರೆ ನೀಡಿದ್ದಾರೆ.

ಈ ಬಗ್ಗೆ ವಿಡಿಯೋ ಸಂದೇಶ ಬಿಡುಗಡೆ ಮಾಡಿರುವ ಅವರು, ಚುನಾವಣೆ ಪಕ್ಷಾತೀತವಾಗಿದ್ದರೂ ಪಕ್ಷದ ಸಿದ್ಧಾಂತದ ಅಡಿಯೇ ಕಾರ್ಯಕರ್ತರು ಕೆಲಸ ಮಾಡಬೇಕು. ಕಾಂಗ್ರೆಸ್‌ ಪಕ್ಷದ ನಿರಂತರ ಹೋರಾಟದಿಂದ ಗ್ರಾಮ ಪಂಚಾಯ್ತಿ ಚುನಾವಣೆ ನಡೆಸಲು ಹೈಕೋರ್ಟ್‌ ಆದೇಶ ನೀಡಿದೆ. ಶಾಸಕರು, ಸಂಸದರಿಗೆ ಇಲ್ಲದ ಅಧಿಕಾರ ಗ್ರಾಮ ಪಂಚಾಯ್ತಿಗಳಿಗೆ ಇದೆ. 27 ಇಲಾಖೆಗಳಿಂದ ನೇರವಾಗಿ ಸಹಾಯ ಮಾಡುವ ಅವಕಾಶ ಇದೆ. ಹೀಗಾಗಿ ಚುನಾವಣೆಯನ್ನು ಬಹಳ ಜವಾಬ್ದಾರಿಯುತವಾಗಿ ತೆಗೆದುಕೊಳ್ಳಬೇಕು ಎಂದು ಸೂಚಿಸಿದರು.

ಪ್ರತಾಪ್ ರಾಜೀನಾಮೆ : ಮನವೊಲಿಸಿದ ಸಿದ್ದರಾಮಯ್ಯ?

‘ನಿಮ್ಮ ಊರು ಹಾಗೂ ಪಕ್ಷದ ಅಭಿವೃದ್ಧಿಗೆ ಈ ಚುನಾವಣೆ ಅಡಿಪಾಯವಾಗಲಿದೆ. ಎಲ್ಲಾ ಕಾರ್ಯಕರ್ತರು, ಮುಖಂಡರು ಚುನಾವಣೆಯನ್ನು ಸಮರ್ಥವಾಗಿ ಎದುರಿಸಬೇಕು. ನಿಮ್ಮೆಲ್ಲರ ಕೆಲಸ, ಹೋರಾಟವನ್ನು ಪಕ್ಷ ಸೂಕ್ಷ್ಮವಾಗಿ ಗಮನಿಸುತ್ತಿದೆ. ಯಾರು ಪಕ್ಷದ ಅಭ್ಯರ್ಥಿಗೆ ಲೀಡ್‌ ಕೊಡಿಸುತ್ತೀರೋ ಅವರೇ ನಾಯಕರು’ ಎಂದು ಹೇಳಿದರು.

ಇದಕ್ಕೂ ಮೊದಲು ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟಿರುವ ನಾವು ಗ್ರಾಮ ಪಂಚಾಯ್ತಿ ಚುನಾವಣೆ ನಡೆಯಬೇಕೆಂದು ನ್ಯಾಯಾಲಯದ ಮೆಟ್ಟಿಲೇರಿದ್ದೆವು. ನಮ್ಮ ಅರ್ಜಿಯನ್ನು ನ್ಯಾಯಾಲಯ ಗೌರವಿಸಿ ಚುನಾವಣೆಗೆ ಆದೇಶಿಸಿದೆ. ಈ ಚುನಾವಣೆ ಪಕ್ಷಾತೀತವಾಗಿದ್ದರೂ ನಾವು ನಮ್ಮ ಕಾರ್ಯಕರ್ತರಿಗೆ ಸಂದೇಶ ನೀಡುತ್ತೇವೆ. ಇದಕ್ಕಾಗಿಯೇ ಡಿ.6ರಂದು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ಸಿಂಗ್‌ ಸುರ್ಜೇವಾಲಾ ಅವರು ಬೆಂಗಳೂರಿಗೆ ಬಂದು ನಮ್ಮ ನಾಯಕರಿಗೆ ಮಾರ್ಗದರ್ಶನ ನೀಡಲಿದ್ದಾರೆ ಎಂದರು.

ಡಿ.ಜೆ.ಹಳ್ಳಿ ಗಲಭೆ ಪ್ರಕರಣದಲ್ಲಿ ಬಿಬಿಎಂಪಿ ಮಾಜಿ ಸದಸ್ಯ ಜಾಕಿರ್‌ ಹುಸೇನ್‌ ಅವರ ಬಂಧನದ ವಿಚಾರವನ್ನು ಪತ್ರಿಕೆಗಳಲ್ಲಿ ನೋಡಿ ತಿಳಿದುಕೊಂಡಿದ್ದೇನೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆದು ನಂತರ ಪ್ರತಿಕ್ರಿಯೆ ನೀಡುತ್ತೇನೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Follow Us:
Download App:
  • android
  • ios