Karnataka Assembly Election :ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಮುಂದಿನ ಅಭ್ಯರ್ಥಿ ಘೋಷಣೆ
- ಸಂಕ್ರಾಂತಿ ಬಳಿಕ ಕ್ಷೇತ್ರದಲ್ಲಿ ಚುನಾವಣೆಗೆ ಪಕ್ಷ ಸಂಘಟನೆ
- ಎಚ್‌ಡಿಕೆ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಚಿಕ್ಕಬಳ್ಳಾಪುರದ ಮಾಜಿ ಶಾಸಕ, ಜೆಡಿಎಸ್ ಅಭ್ಯರ್ಥಿ ಕೆ.ಪಿ.ಬಚ್ಚೇಗೌಡ ಘೋಷಣೆ
ಚಿಕ್ಕಬಳ್ಳಾಪುರ (ಡಿ.17): ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ (HD kumaraswamy) ಅವರು ನನ್ನನ್ನು ಚಿಕ್ಕಬಳ್ಳಾಪುರ ಕ್ಷೇತ್ರದ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದಾರೆ. 2021ರ ಜನವರಿ 15ರ ನಂತರ ಮನೆಮನೆಗೆ ತೆರಳಿ ಮತದಾರರ ಒಲವು ಗಳಿಸಲು ಪ್ರಯತ್ನ ಪಡುತ್ತೇವೆ. ನಮಗೆ ಹಣ ಬಲ ಇಲ್ಲ. ಜನಬಲದಿಂದ ಗೆಲ್ಲುತ್ತೇವೆಂದು ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ ಹೇಳಿದರು.
ನಗರದ ಮರಳು ಸಿದ್ದೇಶ್ವರ ದೇವಾಲಯದ ಆವರಣದಲ್ಲಿ ಗುರುವಾರ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ 63ನೇ ಹುಟ್ಟುಹಬ್ಬದ (Birthday) ಪ್ರಯುಕ್ತ ಹಮ್ಮಿಕೊಂಡಿದ್ದ ವಿಶೇಷ ಪೂಜಾ ಕಾರ್ಯಕ್ರಮ ಬಳಿಕ ಕೇಕ್ ಕತ್ತರಿಸಿ ಸಿಹಿ ಹಂಚಿ ಮಾತನಾಡಿ, ರೈತರು (Farmers), ದೀನ ದಲಿತರು, ಕಷ್ಟದಲ್ಲಿರುವವರ ಪರವಾಗಿ ಮಿಡಿಯುವ ಹೃದಯ ಇರುವ ರಾಜಕಾರಣಿ ಇದ್ದಾರೆ ಎಂದರೆ ಇಡೀ ಭರತ ಖಂಡದಲ್ಲಿ ಅದು ಕುಮಾರಸ್ವಾಮಿ ಅವರಾಗಿದ್ದಾರೆ. ಅವರಿಗೆ ಒಳ್ಳೆಯದಾಗಲಿದೆ ಎಂದರು.
2023ರಲ್ಲಿ 123 ವಿಷನ್ ಗುರಿ ಮುಟ್ಟುವ ಸಲುವಾಗಿ ಈಗಾಗಲೆ ಅವರು ಕಾರ್ಯಕ್ರಮ ರೂಪಿಸಿದ್ದಾರೆ. 2023 ಮೇ ತಿಂಗಳಲ್ಲಿ ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸವಿದೆ. ತಮಿಳುನಾಡು, ಆಂಧ್ರ, ಕೇರಳದಲ್ಲಿ (Kerala) ಪ್ರಾದೇಶಿಕ ಪಕ್ಷಗಳು ತಮ್ಮ ರಾಜ್ಯದ ಹಿತ ಕಾಪಾಡುವಲ್ಲಿ ಯಶಸ್ವಿಯಾಗಿದೆ. ಎರಡು ರಾಷ್ಟ್ರೀಯ ಪಕ್ಷಗಳಿಂದ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ. ಈ ಸಂದರ್ಭದಲ್ಲಿ ಪ್ರಾದೇಶಿಕ ಪಕ್ಷದ ಅವಶ್ಯಕತೆ ಹಿಂದೆಗಿಂತಲೂ ಈಗ ರಾಜ್ಯಕ್ಕೆ ಹೆಚ್ಚಾಗಿದೆ ಎಂದರು. ರಾಜ್ಯದಲ್ಲಿ ಎಚ್.ಡಿ.ದೇವೇಗೌಡರ ಗಾಳಿ ಬೀಸಿದ ಸಮಯದಲ್ಲಿ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬಂದರು. ಪ್ರಧಾನಮಂತ್ರಿ ಸಹ ಆದರು. ಜನ ಮನಸ್ಸು ಮಾಡಿದರೆ ಏನು ಬೇಕಾದರು ತೀರ್ಮಾನ ಕೊಡಬಲ್ಲರು, ಬದಲಾವಣೆ ತರಬಲ್ಲರು. ಅಂತಹ ಇತಿಹಾಸ ಮತ್ತೊಮ್ಮೆ 2023ರಲ್ಲಿ ಮತ್ತೆ ರಾಜ್ಯದಲ್ಲಿ ಬರಲಿದೆ ಎಂದರು.
ಪಕ್ಷ ಸತ್ತಿಲ್ಲ:
ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ.ಮುನೇಗೌಡ ಮಾತನಾಡಿ, ವಿಧಾನ ಪರಿಷತ್ತು ಚುನಾವಣೆಯಲ್ಲಿ (MLC Election) ನಮ್ಮ ಪಕ್ಷದ ಅಭ್ಯರ್ಥಿ ಸೋತಿದ್ದಾರೆ ಹೊರತು, ಪಕ್ಷ ಸತ್ತಿಲ್ಲ. ಚಿಕ್ಕಬಳ್ಳಾಪುರ ಕ್ಷೇತ್ರ ಜೆಡಿಎಸ್ ಭದ್ರ ಕೋಟೆ. ಇಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್‌ಗೆ ನೇರ ಹಣಾಹಣಿಯೇ ಹೊರತು, ಬಿಜೆಪಿ ಇಲ್ಲಿ ಇಲ್ಲ. ಅಧಿಕಾರದಲ್ಲಿದ್ದ ಕಾರಣ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿತು. ಸಾಕಷ್ಟುಅಭಿವೃದ್ಧಿ ಮಾಡಿದ್ದೇವೆಂದು ಸುಳ್ಳು ಹೇಳಿ ಇನ್ನು ಬಿಜೆಪಿಯವರು ಜನರನ್ನು ಮರಳು ಮಾಡಲು ಆಗುವುದಿಲ್ಲ. ಕಾಂಗ್ರೆಸ್ನಲ್ಲೂ ಎರಡು ಗುಂಪಾಗುತ್ತಿದೆ. ಬಿಜೆಪಿ ಆಡಳಿತ ಬಗ್ಗೆ ಅಸಮಾಧಾನ ಇದೆ ಎಂದು ತಿಳಿಸಿದ ಅವರು, ವಿಧಾನಪರಿಷತ್ ಚುನಾವಣೆಯಲ್ಲಿ (Election) ಜೆಡಿಎಸ್ ಸೋಲು ಸೋಲಲ್ಲ. ಇದು 2023ರ ಚುನಾವಣೆಯಲ್ಲಿ ಗೆಲುವಿಗೆ ಮೆಟ್ಟಿಲಾಗಲಿದೆಂದರು.
ಪಕ್ಷದ ತಾಲೂಕು ಅಧ್ಯಕ್ಷ ಕೊಳವನಹಳ್ಳಿ ಮುನಿರಾಜು, ನಗರಸಭೆ ಉಪಾಧ್ಯಕ್ಷೆ ವೀಣಾರಾಮು, ಮುಖಂಡರಾದ ಕೆ.ಆರ್.ರೆಡ್ಡಿ, ಮಂಜುನಾಥ, ಶಿಲ್ಪಗೌಡ ಸೇರಿದಂತೆ ಮತ್ತಿತರರು ಇದ್ದರು.
ಈ ಬಾರಿ ವಿಧಾನ ಪರಿಷತ್ತು ಚುನಾವಣೆ ಯಾವ ರೀತಿ ನಡೆಯಿತು ಎಂಬುದು ಎಲ್ಲರಿಗೂ ಗೊತ್ತಿದೆ. ಅದು ಹೇಸಿಗೆ ಮೂಡಿಸುತ್ತದೆ. ಮತವನ್ನು ಪಡೆಯಲು ಪೈಪೋಟಿ ಮೇಲೆ ಹಣ ಹಂಚಿದರು. ಹಣದ ಗೆಲುವೆ ಹೊರತು, ಯಾವುದೇ ಪಕ್ಷದ ಗೆಲುವಲ್ಲ.
- ಕೆ.ಪಿ.ಬಚ್ಚೇಗೌಡ, ಮಾಜಿ ಶಾಸಕ.
- ಸಂಕ್ರಾಂತಿ ಬಳಿಕ ಕ್ಷೇತ್ರದಲ್ಲಿ ಚುನಾವಣೆಗೆ ಪಕ್ಷ ಸಂಘಟನೆ
- ಎಚ್‌ಡಿಕೆ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಚಿಕ್ಕಬಳ್ಳಾಪುರದ ಮಾಜಿ ಶಾಸಕ, ಜೆಡಿಎಸ್ ಅಭ್ಯರ್ಥಿ ಕೆ.ಪಿ.ಬಚ್ಚೇಗೌಡ ಘೋಷಣೆ
- ನಗರದ ಮರಳು ಸಿದ್ದೇಶ್ವರ ದೇವಾಲಯದ ಆವರಣದಲ್ಲಿ ಗುರುವಾರ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ 63ನೇ ಹುಟ್ಟುಹಬ್ಬದ ಪ್ರಯುಕ್ತ ಹಮ್ಮಿಕೊಂಡಿದ್ದ ವಿಶೇಷ ಪೂಜಾ ಕಾರ್ಯಕ್ರಮ