ಕಾಂಗ್ರೆಸ್‌ಗೆ 6ನೇ ಗ್ಯಾರಂಟಿ ನೆನಪಿಸಿದ ಮಹಿಳೆಯರು, ಸಿಎಂ ಸಿದ್ದು ನೀಡಿದ ಭರವಸೆಯಿಂದ ಅಧಿಕಾರಿಗಳಿಗೆ ಪೀಕಲಾಟ!
ಕೋಲಾರ ಮಹಿಳೆಯರು ಕಾಂಗ್ರೆಸ್ ಸರ್ಕಾರಕ್ಕೆ ಆರನೇ ಗ್ಯಾರಂಟಿ ನೆನಪಿಸಿದ್ದಾರೆ, ಅಧಿಕಾರಕ್ಕೆ ಬಂದರೆ ಸ್ತ್ರೀ ಶಕ್ತಿ ಸಂಘಗಳ ಸಾಲ ಮನ್ನ ಮಾಡುವುದಾಗಿ ಕೊಟ್ಟಿದ್ದ ಆಶ್ವಾಸನೆಯನ್ನು ಈಡೇರಿಸುವಂತೆ ಪಟ್ಟು ಹಿಡಿದಿದ್ದಾರೆ.
ವರದಿ : ದೀಪಕ್, ಏಷಿಯಾನೆಟ್ ಸುವರ್ಣ ನ್ಯೂಸ್,
ಕೋಲಾರ (ಜೂ.14): ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೆ ಕೋಲಾರದ ಮಹಿಳೆಯರು ಆರನೇ ಗ್ಯಾರಂಟಿಯನ್ನು ನೆನಪಿಸಿದ್ದಾರೆ. ಅಧಿಕಾರಕ್ಕೆ ಬಂದರೆ ಸ್ತ್ರೀ ಶಕ್ತಿ ಸಂಘಗಳ ಸಾಲ ಮನ್ನ ಮಾಡುವುದಾಗಿ ಕೊಟ್ಟಿದ್ದ ಆಶ್ವಾಸನೆಯನ್ನು ಈಡೇರಿಸುವಂತೆ ಇಲ್ಲಿನ ಮಹಿಳೆಯರು ಒತ್ತಾಯಿಸಿದ್ದಾರೆ. ಸಾಲ ವಸೂಲಿಗಾಗಿ ಪ್ರಯತ್ನಿಸುತ್ತಿರುವ ಬ್ಯಾಂಕ್ ಸಿಬಂದಿಗೂ ಈ ಬಿಸಿ ತಟ್ಟುತ್ತಿದೆ.
ರಾಜ್ಯದ ಕಾಂಗ್ರೆಸ್ ಸರ್ಕಾರವು ಕೊಟ್ಟಿರುವ ಭರವಸೆಯಂತೆ ಐದು ಗ್ಯಾರಂಟಿಗಳ ಜಾರಿಗೆ ಶ್ರಮಿಸುತ್ತಿದೆ. ಇದರ ಜೊತೆಗೆ ಕೋಲಾರ ಜಿಲ್ಲೆಯಲ್ಲಿ ಚುನಾವಣಾ ಪ್ರಚಾರಕ್ಕೆಂದು ಫೆಬ್ರವರಿ 13 ರಂದು ಚುನಾವಣಾ ಪೂರ್ವದಲ್ಲಿ ಕೋಲಾರ ತಾಲೂಕಿನ ವೇಮಗಲ್ ಗೆ ಬಂದಿದ್ದಾಗ ಸಿಎಂ ಸಿದ್ದರಾಮಯ್ಯ ಕೊಟ್ಟಿದ್ದ ಭರವಸೆಯು ಗ್ಯಾರಂಟಿ ಪಟ್ಟಿಯಲ್ಲಿ ಆರನೆಯದಾಗಿ ಸೇರಿಕೊಂಡಂತೆ ಕಾಣುತ್ತಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಹಕಾರ ಸಂಘಗಳಲ್ಲಿನ ಸ್ತ್ರೀ ಶಕ್ತಿ ಸಂಘಗಳ ಸಾಲ ಮನ್ನ ಮಾಡುವುದಾಗಿ ಅಂದು ಸಿದ್ದರಾಮಯ್ಯ ಘೋಷಿಸಿದ್ದರು.
ಕರ್ನಾಟಕ ಗೃಹ ಜ್ಯೋತಿ ಯೋಜನೆ ಅರ್ಜಿ ಸಲ್ಲಿಕೆ ದಿನಾಂಕ ಮುಂದೂಡಿಕೆ
ಕೋಲಾರ ಜಿಲ್ಲೆಯಲ್ಲಿನ ಸಾವಿರಾರು ಮಹಿಳೆಯರು ಸಹಕಾರಿ ಸಂಘಗಳಲ್ಲಿ ಸಾಲ ಮಾಡಿದ್ದಾರೆ. ಸ್ತ್ರೀ ಶಕ್ತಿ ಸಂಘಗಳ ಮೂಲಕ ಮಹಿಳೆಯರು ಮಾಡಿರುವ ಎಲ್ಲ ಸಾಲವನ್ನು ಮನ್ನ ಮಾಡುವುದಾಗಿ ಸಿದ್ದರಾಮಯ್ಯ ಕೊಟ್ಟಿದ್ದ ಗ್ಯಾರಂಟಿಯನ್ನು ಈಡೇರಿಸುವಂತೆ ಇದೀಗ ಒತ್ತಾಯ ಶುರುವಾಗಿದೆ. ಸಾಲ ವಸೂಲಿಗಾಗಿ ಬರುವ ಬ್ಯಾಂಕ್ ಸಿಬ್ಬಂದಿಗೆ ಮಹಿಳೆಯರ ಪ್ರತಿರೋಧ ಎದುರಾಗುತ್ತಿದೆ.
ಸಾಲದ ಕಂತುಗಳ ವಸೂಲಿಯಿಲ್ಲದೆ ಬ್ಯಾಂಕ್ ಸಿಬಂದಿ ಬರೀಗೈಯಲ್ಲಿ ವಾಪಸ್ಸಾಗುತ್ತಿದ್ದಾರೆ. ಕೇಳೋದಕ್ಕೆ ಹೋದ್ರೆ ನಾಡಿನ ದೊರೆ ಸಿಎಂ ಸಿದ್ದರಾಮಯ್ಯನವರೆ ಸಾಲ ಮನ್ನಾ ಮಾಡ್ತೇವೆ ಅಂತ ಹೇಳಿದ್ದಾರೆ. ಹಾಗಿರುವಾಗ ನಿಮ್ಮದೇನು ಕೆಲಸ, ಏನೂ ಬೇಕಾದ್ರೂ ಮಾಡಿಕೊಳ್ಳಿ ನಾವು ಸಾಲ ಕಟ್ಟೋದಿಲ್ಲ. ಈ ಉದ್ದೇಶದಿಂದಲೇ ನಾವು ಕಾಂಗ್ರೆಸ್ ಗೆ ಮತ ಹಾಕಿದ್ದು ಅಂತ ಅಧಿಕಾರಿಗಳಿಗೆ ಹಾಗೂ ಡಿಸಿಸಿ ಬ್ಯಾಂಕ್ ನ ಸಿಬ್ಬಂದಿಗಳಿಗೆ ಗ್ರಾಮ ಗ್ರಾಮಗಳಲ್ಲಿ ಮಹಿಳೆಯರು ತರಾಟೆಗೆ ತೆಗೆದುಕೊಳ್ತಿದ್ದಾರೆ.
ಕರ್ನಾಟಕದ ಅಕ್ಕಿ ಖರೀದಿ ಒಪ್ಪಂದ ರದ್ದುಗೊಳಿಸಿದ ಕೇಂದ್ರ ಸರ್ಕಾರ: ಜುಲೈ 1ರಿಂದ ಅನ್ನಭಾಗ್ಯ ಯೋಜನೆ ಜಾರಿ ಅನುಮಾನ
ಇನ್ನುಮಹಿಳೆಯರು ಪಟ್ಟು ಹಿಡಿದು ಸಾಲ ಹಿಂದಿರುಗಿಸದಿದ್ದರೆ ಬ್ಯಾಂಕ್ ವ್ಯವಸ್ಥೆಗೆ ಧಕ್ಕೆ ಆಗುತ್ತೆ.ಸ್ತ್ರೀ ಶಕ್ತಿ ಸಂಘಗಳವರು ಕಂತುಗಳನ್ನು ಪಾವತಿಸದಿದ್ದರೆ ಭವಿಷ್ಯದಲ್ಲಿ ಅವರಿಗೇ ಆರ್ಥಿಕ ಹೊರೆಯಾಗುತ್ತೆ. ಸರ್ಕಾರದ ತೀರ್ಮಾನ ಘೋಷಣೆ ಆಗುವರೆಗೂ ಸಾಲ ಪಾವತಿಸುವುದು ಕಾನೂನಿನ ದೃಷ್ಟಿಯಿಂದ ಸೂಕ್ತ ಅಂತ ಸಹಕಾರ ಸಂಘಗಳಿಗೆ ಆರ್ಥಿಕ ನೆರವು ಕೊಟ್ಟಿರುವ ಬ್ಯಾಂಕ್ ನವರು ಹೇಳ್ತಾರೆ.ಆದ್ರೆ ಕಾಂಗ್ರೆಸ್ ನಾಯಕರು ಮಾತ್ರ ಈ ವಿಚಾರ ನಮ್ಮ ಪ್ರಣಾಳಿಕೆಯಲ್ಲಿ ಇಲ್ಲ,ಸಾಲ ಕಟ್ಟಲೇಬೇಕು ಅಂತ ಪಟ್ಟು ಹಿಡಿದಿದ್ದಾರೆ.
ಒಟ್ನಲ್ಲಿ,ಈಗಿನ ಐದು ಗ್ಯಾರಂಟಿಗಳನ್ನು ಈಡೇರಿಸಲು ಕಾಂಗ್ರೆಸ್ ಸರ್ಕಾರ ತಿಣುಕಾಡುತ್ತಿದೆ.ಇದರ ಜೊತೆಗೆ ಸ್ತ್ರೀ ಶಕ್ತಿ ಸಂಘಗಳ ಸಾಲ ಮನ್ನ ಗ್ಯಾರಂಟಿಯನ್ನು ಸಿಎಂ ಸಿದ್ದರಾಮಯ್ಯ ಸರ್ಕಾರ ಗಣನೆಗೆ ತೆಗೆದುಕೊಳ್ಳುತ್ತ,ಇಲ್ಲ ಸಾಲ ಮರುಪಾವತಿ ಮಾಡ್ತೇವೆ ಮಾಡಲೇಬೇಕು ಅಂತ ಪಟ್ಟು ಹಿಡಿಯುತ್ತಾ ಅಂತ ಕಾದು ನೋಡಬೇಕಾಗಿದೆ. ಆದ್ರೆ ಇಬ್ಬರ ಕಿತ್ತಾಟದ ನಡುವೆ ಬ್ಯಾಂಕ್ ನ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಮಾತ್ರ ತಲೆನೋವು ತಂದಿದ್ದು, ಸಾಲ ಕೇಳಲು ಹೋದಾಗ ಮಹಿಳೆಯರಿಂದ ಉಚಿತವಾಗಿ ತರಾಟೆಗೆ ಸಿಲುಕುತ್ತಿದ್ದಾರೆ.