ಕೆಪಿಸಿಸಿ ಅಧ್ಯಕ್ಷಗಾದಿ ವಿಚಾರದಲ್ಲಿ ಸಚಿವ ರಾಜಣ್ಣ ಹೇಳಿಕೆ ವಿಚಾರ ಸಾರ್ವಜನಿಕವಾಗಿ ಅನಾವಶ್ಯಕ ಚರ್ಚೆಯಾಗುತ್ತಿದೆ. ಇಂಥ ಹೇಳಿಕೆಗಳನ್ನು ಕೊಟ್ಟರೆ ಯಾವುದೇ ಪ್ರಯೋಜನವಿಲ್ಲ. ಏನೇ ಇದ್ದರೂ ಹೈಕಮಾಂಡ್ ಮಟ್ಟದಲ್ಲೇ ಅದೆಲ್ಲಾ ತೀರ್ಮಾನವಾಗಬೇಕು ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಮಂಗಳೂರು (ಫೆ.18): ಕರ್ನಾಟಕ ಪ್ರದೇಶ ಕಾಂಗ್ರೆಸ್ (ಕೆಪಿಸಿಸಿ) ಅಧ್ಯಕ್ಷ ಸ್ಥಾನಕ್ಕೆ ಸಚಿವ ರಾಜಣ್ಣ ಆಸೆಪಟ್ಟರೆ ತಪ್ಪಿಲ್ಲ. ಆದರೆ ಪಕ್ಷ ಏನು ತೀರ್ಮಾನ ತೆಗೆದುಕೊಳ್ಳುತ್ತದೋ ಅದನ್ನು ಎಲ್ಲರೂ ಒಪ್ಪುತ್ತಾರೆ. ಆದರೆ ಹೈಕಮಾಂಡ್ ಎಲ್ಲೂ ಈ ಬಗ್ಗೆ ಹೇಳಿಕೆ ಕೊಡದಂತೆ ಹೇಳಿದೆ. ಅದನ್ನು ಕೇಳಿಯಾದರೂ ಅವರು ಶಿಸ್ತಿನಿಂದ ಇರಲಿ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಮಂಗಳೂರಲ್ಲಿ ಸುದ್ದಿಗಾರರಲ್ಲಿ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷಗಾದಿ ವಿಚಾರದಲ್ಲಿ ಸಚಿವ ರಾಜಣ್ಣ ಹೇಳಿಕೆ ವಿಚಾರ ಸಾರ್ವಜನಿಕವಾಗಿ ಅನಾವಶ್ಯಕ ಚರ್ಚೆಯಾಗುತ್ತಿದೆ. ಇಂಥ ಹೇಳಿಕೆಗಳನ್ನು ಕೊಟ್ಟರೆ ಯಾವುದೇ ಪ್ರಯೋಜನವಿಲ್ಲ. ಏನೇ ಇದ್ದರೂ ಹೈಕಮಾಂಡ್ ಮಟ್ಟದಲ್ಲೇ ಅದೆಲ್ಲಾ ತೀರ್ಮಾನವಾಗಬೇಕು. ಯಾರಿಗೆ ಏನೇ ವಿಷಯ ಇದ್ದರೂ ಅಲ್ಲಿ ಹೇಳಿಕೊಂಡು ತೀರ್ಮಾನ ಮಾಡಿದರೆ ಉತ್ತಮ. ಅದು ಬಿಟ್ಟು ಹೊರಗಡೆ ಹೇಳುವುದರಿಂದ ನಮ್ಮ ಪಕ್ಷಕ್ಕೂ ಒಳ್ಳೆಯದಲ್ಲ. ಅಭಿಪ್ರಾಯದ ಪ್ರಕಾರ ಈ ತರಹ ಹೇಳಿಕೆ ಕೊಡುವುದನ್ನು ನಿಲ್ಲಿಸಬೇಕು ಎಂದರು.
ಆಸೆಗಳಿದ್ರೇನೆ ಎಲ್ಲರೂ ರಾಜಕೀಯಕ್ಕೆ ಬರೋದು, ಸಿಎಂ ಬದಲಾವಣೆ ಚರ್ಚೆ ಅನಗತ್ಯ: ಸಚಿವ ದಿನೇಶ್ ಗುಂಡೂರಾವ್
ಗಣಿ ಸಚಿವರ ಜೊತೆ ಮಾತು: ದ.ಕ. ಜಿಲ್ಲೆಯ ಹಲವು ಭಾಗಗಳಲ್ಲಿ ಅಕ್ರಮ ಮರಳುಗಾರಿಕೆ ವಿಚಾರ ಈ ವ್ಯವಸ್ಥೆಯಲ್ಲಿ ಇರುವ ಸಮಸ್ಯೆ. ಒಂದು ಕಡೆ ಬೇಡಿಕೆ ಇದೆ, ಮತ್ತೊಂದು ಕಡೆ ಅಧಿಕೃತ ಮರಳು ತೆಗೆಯಲು ಅವಕಾಶ ಕೊಟ್ಟರೂ ತೆಗಿಯುತ್ತಿಲ್ಲ. ಸುಲಭವಾಗಿ ಸಿಗುವ ಮರಳಿನ ಮೇಲೆ ಕೆಲವರ ಕಣ್ಣಿದೆ. ಹಾಗಾಗಿ ಇದು ಇಂದು ನಿನ್ನೆಯ ಸಮಸ್ಯೆ ಅಲ್ಲ. ಎಲ್ಲರೂ ಕೈ ಜೋಡಿಸಿದರೆ ಇದನ್ನು ಸರಿಪಡಿಸಲು ಅವಕಾಶ ಇದೆ. ಈ ಬಗ್ಗೆ ಇಲಾಖೆ ಸಭೆಯಲ್ಲಿ ಅಧಿಕಾರಿಗಳ ಜೊತೆ ಮಾತನಾಡುತ್ತೇನೆ. ಸೇತುವೆ ಹತ್ತಿರವೂ ಮರಳು ಬಿಟ್ಟಿಲ್ಲ ಎಂದರೆ ಮುಂದೆ ಕೋಟ್ಯಂತರ ರು. ನಷ್ಟ ಆಗುತ್ತದೆ. ಜಿಲ್ಲೆಯಲ್ಲಿ ಕರ್ತವ್ಯ ಲೋಪದ ಆರೋಪಕ್ಕೆ ಗುರಿಯಾಗಿರುವ ಗಣಿ ಅಧಿಕಾರಿ ವಿಚಾರವಾಗಿ ಗಣಿ ಇಲಾಖೆ ಸಚಿವರ ಜೊತೆ ಮಾತನಾಡುತ್ತೇನೆ ಎಂದರು.
ಅನಸ್ತೇಷಿಯಾ, ಗೈನೆಕಾಲಜಿ, ಮಕ್ಕಳ ತಜ್ಞರ ವೇತನ ಹೆಚ್ಚಳಕ್ಕೆ ಕ್ರಮ: ರಾಜ್ಯದಲ್ಲಿ ಅನಸ್ತೇಷಿಯಾ, ಗೈನೆಕಾಲಜಿಸ್ಟ್ ಹಾಗೂ ಮಕ್ಕಳ ತಜ್ಞರ ಮಾಸಿಕ ವೇತನ ಹೆಚ್ಚಳಕ್ಕೆ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ಮಂಗಳೂರಿನಲ್ಲಿ ನಡೆದ ಕೆಡಿಪಿ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ ಪ್ರಸ್ತಾಪಿಸಿ, ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಅನಸ್ತೇಷಿಯಾ, ಗೈನೆಕಾಲಜಿಸ್ಟ್ ಹಾಗೂ ಮಕ್ಕಳ ತಜ್ಞರ ಕೊರತೆ ಇದೆ. ಈ ಹುದ್ದೆಗಳ ನೇಮಕಾತಿಗೆ ಯಾರೂ ಮುಂದೆ ಬರುತ್ತಿಲ್ಲ ಎಂದು ಪ್ರಸ್ತಾಪಿಸಿದ್ದರು.
ದಲಿತ ಸಮಾವೇಶ ಬೇಡ ಎಂದು ಯಾರೂ ಹೇಳಿಲ್ಲ: ಸಚಿವ ದಿನೇಶ್ ಗುಂಡೂರಾವ್
ರಾಜ್ಯದ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು ಹಾಗೂ ಸಿಬ್ಬಂದಿಯ ಹಾಜರಾತಿ ಖಾತರಿಗೆ ತಾಂತ್ರಿಕ ಹಾಜರಾತಿ ವ್ಯವಸ್ಥೆ ಜಾರಿಗೊಳಿಸಲು ಉದ್ದೇಶಿಸಲಾಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ಈ ಕುರಿು ಕೆಡಿಪಿ ನಾಮನಿರ್ದೇಶಿತ ಸದಸ್ಯ ಮೆಲ್ವಿನ್ ಡಿಸೋಜಾ ಪ್ರಸ್ತಾಪಿಸಿ, ವೆನ್ಲಾಕ್ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ಲಭ್ಯ ಇದ್ದರೂ ಗ್ರಾಮೀಣ ಭಾಗಗಳ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ವೈದ್ಯರೇ ಸರಿಯಾಗಿ ಬರುತ್ತಿಲ್ಲ ಎಂದು ಗಮನ ಸೆಳೆದಿದ್ದರು.
