ಬೆಂಗಳೂರು(ಅ.13): ಕಾಂಗ್ರೆಸ್‌ನ ರಾಷ್ಟ್ರೀಯ ವಕ್ತಾರೆಯಾಗಿದ್ದ ಖುಷ್ಬೂ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿ, ಬಿಜೆಪಿ ಪಾಳಯ ಸೇರಿಕೊಂಡಿದ್ದಾರೆ. ಇವರ ರಾಜೀನಾಮೆ ಕರ್ನಾಟಕ ಕಾಂಗ್ರೆಸ್‌ ವಲಯದ ಮೇಲೂ ಪ್ರಾವ ಬೀರಬಹುದಾ ಎಂಬ ಪ್ರಶ್ನೆ ಸದ್ಯ ಕೆಪಿಸಿಸಿ ನಾಯಕರನ್ನು ಕಾಡಲಾರಂಭಿಸಿದೆ. ಕೈ ನಾಯಕರ ಈ ಚಿಂತೆಗೆ ಕಾರಣವೂ ಇದೆ.

ಹೌದು ಕೆಲವು ರಾಜಕೀಯ ವಿಶ್ಲೇಷಕರ ಅನ್ವಯ ಮಾಜಿ ಶಾಸಕ ಮತ್ತು ಸಚಿವ ರೋಶನ್ ಬೇಗ್ ಕಾಂಗ್ರೆಸ್‌ ಕಾರ್ಯ ವೈಖರಿಯಿಂದ ಬೇಸತ್ತಿದ್ದರು. ಅಲ್ಲದೇ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಒಂದೇ ಒಂದು ಸ್ಥಾನ ಗೆದ್ದಿದ್ದಕ್ಕಾಗಿ ಬಹಿರಂಗವಾಗಿಯೇ ಕಾಂಗ್ರೆಸ್ ನಾಯಕರ ವಿರುದ್ಧ ಹರಿಹಾಯ್ದಿದ್ದರು ಹಾಗೂ ಆಗಿನ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕರ್ನಾಟಕದ ಉಸ್ತುವಾರಿ ಕೆ ಸಿ ವೇಣುಗೋಪಾಲ್ ವಿರುದ್ಧವೂ ಕಿಡಿ ಕಾರಿದ್ದರು. ಈ ಸಂಬಂಧ ಅವರಿಗೆ ಶೋಕಾಸ್ ನೋಟಿಸ್ ಕೂಡ  ನೀಡಲಾಗಿತ್ತು, ಆದರೆ ನೊಟೀಸ್ ಗೆ ಉತ್ತರಿಸಿದ ಕಾರಣ ಅವರನ್ನು ಪಕ್ಷದಿಂದ ಅಮಾನತು ಗೊಳಿಸಲಾಗಿತ್ತು.

ಇನ್ನು ಕೆಲ ನಾಯಕರು, ಪಕ್ಷ ಬಿಟ್ಟ 14 ಮಂದಿ ಅತೃಪ್ತ ಶಾಸಕರಿಂದಾಗಿ ಕರ್ನಾಟಕದಲ್ಲಿದ್ದ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮೈತ್ರಿ ಸರ್ಕಾರ ಬೀಳಲು ಕಾರಣ ಎಂದರು. ಹೀಗಿರುವಾಗ ಖುಷ್ಬೂರಂತಹ ಶಾಸಕರು ಪಕ್ಷದೊಳಗಿರುವ ಅನುಮಾನ, ಹತಾಶೆ ಮತ್ತು ನಿರುತ್ಸಾಹವೇ ಆ ಅತೃಪ್ತರು ಪಕ್ಷ ಬಿಡಲು ಕಾರಣ ಎಂದು ಹೇಳಿದ್ದರು. ಇಂತಹ ಪರಿಸ್ಥಿತಿಯಲ್ಲಿ ಖುಷ್ಬೂ ಮಾತುಗಳನ್ನು ಸಮರ್ಥಿಸಿಕೊಂಡಿದ್ದ ಕಾಂಗ್ರೆಸ್ ನಾಯಕರೊಬ್ಬರು ಈ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ಪರಿಹರಿಸಬೇಕಿದೆ. ಇಲ್ಲವಾದಲ್ಲಿ ಪಕ್ಷದ ಅನೇಕ ನಿಷ್ಠಾವಂತ ಕಾರ್ಯಕರ್ತರು ಹೊರ ನಡೆಯಬಹುದು ಎಂದಿದ್ದರು. ಅಲ್ಲದೇ ಕಳೆದ ವರ್ಷ ಕಾಂಗ್ರೆಸ್‌ ಬಿಟ್ಟು ಬಿಜೆಪಿಗೆ ಸೇರ್ಪಡೆಗೊಂಡ ಟಾಮ್ ವಡಕ್ಕನ್ ಕೂಡಾ ಕಾಂಗ್ರೆಸ್‌ನ ಪದಾಧಿಕಾರಿಗಳಿಂದ ಬೇಸತ್ತಿದ್ದರು ಎನ್ನಲಾಗಿದೆ.

ಆದರೆ ಕೆಪಿಸಿಸಿ ಕಾರ್ಯಕಾರಿ ಅಧ್ಯಕ್ಷ ಈಶ್ವರ್ ಖಂಡ್ರೆ ಮಾತ್ರ ಪಕ್ಷದ ಪದಾಧಿಕಾರಿಗಳ ಮೇಲಿನ ಅಸಮಾಧಾನ, ಹೀಗೆ ಪಕ್ಷದಿಂದ ಹೊರ ಹೋಗಲು ಕಾರಣವಲ್ಲ. ಒಂದು ವೇಳೆ ಇಂತಹ ಸಮಸ್ಯೆ ಇದ್ದರೆ ಅವುಗಳನ್ನು ಆಂತರಿಕವಾಗಿ ಚರ್ಚಿಸಿ ಬಗೆಹರಿಸಬೇಕು ಎಂದಿದ್ದಾರೆ. ಅಲ್ಲದೇ ಈ ನಾಯಕರು ಅದ್ಯಾವುದೋ ಒತ್ತಡದಿಂದ ಪಕ್ಷ ಬಿಟ್ಟಂತೆ ಕಾಣುತ್ತದೆ. ಈಗ ಅವರ ಸಿದ್ಧಾಂತ ಎಲ್ಲಿದೆ? ಇದು ಜನರ ನಂಬಿಕೆಗೆ ದ್ರೋಹವಲ್ಲವೇ?' ಎಂದು ಪ್ರಶ್ನಿಸಿದ್ದಾರೆ.