ಉಡುಪಿ, (ಜ.31): ಬೆಳಗಾವಿ ಲೋಕಸಭಾ ಉಪಚುನಾವಣೆಗೆ ಇನ್ನೂ ದಿನಾಂಕ ನಿಗದಿಯಾಗಿಲ್ಲ. ಆಗಲೇ ಕಾಂಗ್ರೆಸ್ ಹಾಗೂ ಬಿಜೆಪಿ ಭರ್ಜರಿ ತಯಾರಿ ನಡೆಸಿವೆ. ಅದರಲ್ಲೂ ಬಿಜೆಪಿ ಬೆಳಗಾವಿ ಜಿಲ್ಲೆಯ ಮಾಜಿ ಶಾಸಕರೊಬ್ಬರನ್ನು ಸೆಳೆಯಲು ಮುಂದಾಗಿದೆ.

ಹೌದು...ಈ ಬಗ್ಗೆ ಉಡುಪಿಯಲ್ಲಿ ಇಂದು (ಭಾನುವಾರ) ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಮಾತನಾಡಿದ್ದು, ಅರವಿಂದ್ ಪಾಟೀಲ್‌ ಬಿಜೆಪಿಗೆ ಬರಲು ಚರ್ಚೆ ಮಾಡಿದ್ದಾರೆ ಎಂದು ಸ್ಪಷ್ಟಪಡಿಸಿದರು.

 ಪಕ್ಷಕ್ಕೆ ಯಾರೇ ಬಂದರೂ ಸ್ವಾಗತವಿದೆ. ಆದರೆ, ಉಪ ಚುನಾವಣೆಯಲ್ಲಿ ಟಿಕೆಟ್‌ ಯಾರಿಗೆ ಕೊಡಬೇಕು ಎಂಬುದನ್ನು ವರಿಷ್ಠರು ತೀರ್ಮಾನಿಸಲಿದ್ದಾರೆ ಎಂದು ಹೇಳಿದರು.

ಮಾಜಿ ಶಾಸಕ ಶೀಘ್ರವೇ ಬಿಜೆಪಿಗೆ ಸೇರ್ಪಡೆ: ಹೊಸ ಬಾಂಬ್ ಸಿಡಿಸಿದ ಸಚಿವ ಜಾರಕಿಹೊಳಿ

ಶೀಘ್ರ ವಿಧಾನಸಭೆ ಚುನಾವಣೆ ನಡೆಯಲಿದೆ ಎಂಬ ಸಿ.ಎಂ.ಇಬ್ರಾಹಿಂ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಸವದಿ, ಇಬ್ರಾಹಿಂ ದೊಡ್ಡ ಜ್ಞಾನಿಯಲ್ಲ, ಭಾಷಣಕಾರ ಅಷ್ಟೇ. ರಾಜಕೀಯ ಭಾಷಣ ಮಾಡುವಾಗ ಭವಿಷ್ಯ ನುಡಿಯುವುದು ಸಾಮಾನ್ಯ ಎಂದು ವ್ಯಂಗ್ಯವಾಡಿದರು.

ಇದೇ ವೇಳೆ ಮಹಾರಾಷ್ಟ್ರ ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿದ ಸವದಿ, ಶಿವಾಜಿಯ ಮೂಲ ಕರ್ನಾಟಕವಾಗಿದ್ದು, ಅವರ 8ನೇ ತಲೆಮಾರಿನ ಪೂರ್ವಜರು ಗದಗ ಜಿಲ್ಲೆಯಲ್ಲಿ ವಾಸವಿದ್ದರು ಎಂದು ತಿಳಿಸಿದರು.

ಮಹಾರಾಷ್ಟ್ರದಲ್ಲಿ ಮೂರು ಪಕ್ಷಗಳು ಕೂಡಿ ಸರ್ಕಾರ ರಚಿಸಿದ್ದು, ಮನೆಯೊಂದು ಮೂರು ಬಾಗಿಲು ಎಂಬಂತಾಗಿದೆ. ಕೋವಿಡ್‌ ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲವಾಗಿರುವ ಮಹಾರಾಷ್ಟ್ರ ಸರ್ಕಾರ ಅಸ್ಥಿರವಾಗಿದೆ. ಜನರ ಗಮನವನ್ನು ಬೇರೆಡೆ ಸೆಳೆಯಲು ಗಡಿ ವಿವಾದವನ್ನು ಮುನ್ನಲೆಗೆ ತರಲಾಗುತ್ತಿದೆ ಎಂದು ಕಿಡಿಕಾರಿದರು.