Asianet Suvarna News Asianet Suvarna News

Assembly Election 2023: ದೇವನಹಳ್ಳಿ ಕ್ಷೇತ್ರದಿಂದ ಮುನಿಯಪ್ಪ ಅಖಾಡಕ್ಕೆ?: ಸಿದ್ದು ಕೋಲಾರ ಸ್ಪರ್ಧೆ ಬೆನ್ನಲ್ಲೇ ಚಿಂತನೆ

Karnataka Assembly Elections 2023: ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕೋಲಾರದಿಂದ ಸ್ಪರ್ಧಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ಕೇಂದ್ರದ ಮಾಜಿ ಸಚಿವ ಕೆ.ಎಚ್‌.ಮುನಿಯಪ್ಪ ಅವರು ದೇವನಹಳ್ಳಿ ಕ್ಷೇತ್ರದಿಂದ ಸ್ಪರ್ಧಿಸುವ ಸಂಭವ ಇದೆ. 

KH Muniyappa is likely to contest from Devanahalli constituency gvd
Author
First Published Nov 15, 2022, 6:41 AM IST

ಬೆಂಗಳೂರು (ನ.15): ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕೋಲಾರದಿಂದ ಸ್ಪರ್ಧಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ಕೇಂದ್ರದ ಮಾಜಿ ಸಚಿವ ಕೆ.ಎಚ್‌.ಮುನಿಯಪ್ಪ ಅವರು ದೇವನಹಳ್ಳಿ ಕ್ಷೇತ್ರದಿಂದ ಸ್ಪರ್ಧಿಸುವ ಸಂಭವ ಇದೆ. ಪರಿಶಿಷ್ಟ ಜಾತಿಗೆ ಮೀಸಲಾಗಿರುವ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು ಎಂದು ಸ್ಥಳೀಯ ಕಾಂಗ್ರೆಸ್ಸಿಗರ ಒತ್ತಾಯವಿದೆ. 

ಹೀಗಾಗಿ ನೆರೆ ಜಿಲ್ಲೆಯವರಾದ ಹಾಗೂ ಸಮುದಾಯದ ಮತ, ವೈಯಕ್ತಿಕ ವರ್ಚಸ್ಸನ್ನೂ ಹೊಂದಿರುವ ಕೆ.ಎಚ್‌.ಮುನಿಯಪ್ಪ ಅವರಿಗೆ ದೇವನಹಳ್ಳಿಯಿಂದ ಸ್ಪರ್ಧಿಸುವಂತೆ ಒತ್ತಡ ಹೆಚ್ಚಾಗಿದೆ. ಇದಕ್ಕೆ ಹೈಕಮಾಂಡ್‌ ಸಹ ಪೂರಕವಾಗಿ ಸ್ಪಂದಿಸಿರುವ ಹಿನ್ನೆಲೆಯಲ್ಲಿ ದೇವನಹಳ್ಳಿಯಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸುವ ಬಗ್ಗೆ ಮುನಿಯಪ್ಪ ಚಿಂತನೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಕ್ಷೇತ್ರದಲ್ಲಿ 2008ರ ಬಳಿಕ ಕಾಂಗ್ರೆಸ್‌ ಅಭ್ಯರ್ಥಿ ಗೆಲುವು ಸಾಧಿಸಿಲ್ಲ. 2008ರಲ್ಲಿ ಕಾಂಗ್ರೆಸ್‌ನಿಂದ ಶಾಸಕರಾಗಿದ್ದ ವೆಂಕಟಸ್ವಾಮಿ ಅವರಿಗೆ 2013 ಹಾಗೂ 18ರಲ್ಲಿ ಅವಕಾಶ ನೀಡಿದ್ದರೂ ಗೆಲುವು ಸಾಧಿಸಿಲ್ಲ. 

ಕೋಲಾರದಲ್ಲಿ ಸಿದ್ದುಗಿರುವ ಸಮಸ್ಯೆ ಶ್ರೀನಿವಾಸ್‌ಗೌಡ: ಎಚ್‌ಡಿಕೆ

ಹೀಗಾಗಿ ಎರಡೂ ಬಾರಿ ಜೆಡಿಎಸ್‌ ಗೆಲುವು ಸಾಧಿಸಿತ್ತು. 2018ಕ್ಕೆ ಹೋಲಿಸಿದರೆ ಕ್ಷೇತ್ರದ ಸನ್ನಿವೇಶ ಸಂಪೂರ್ಣವಾಗಿ ಬದಲಾಗಿದೆ. ಹೀಗಾಗಿ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು ಎಂಬ ಒತ್ತಾಯ ಹೆಚ್ಚಾಗಿದೆ. ಕೆ.ಎಚ್‌.ಮುನಿಯಪ್ಪ ಅವರ ಸಮುದಾಯದ ಮತಗಳು ದೇವನಹಳ್ಳಿಯಲ್ಲಿ ಹೆಚ್ಚಿವೆ. ಜತೆಗೆ ಹಿರಿಯ ನಾಯಕರಾಗಿದ್ದು ಹಲವು ಬಾರಿ ಸಂಸದರಾಗಿ, ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿರುವ ಮುನಿಯಪ್ಪ ಅವರು ಸ್ಪರ್ಧಿಸಿದರೆ ಗೆಲುವು ಸುಲಭವಾಗಲಿದೆ. ಹೀಗಾಗಿ ಅವರೇ ಸ್ಪರ್ಧಿಸಬೇಕು ಎಂದು ಒತ್ತಾಯ ಕೇಳಿ ಬಂದಿದೆ.

ಎಐಸಿಸಿ ಸ್ಟೇರಿಂಗ್‌ ಕಮಿಟಿಗೆ ಕೆ.ಎಚ್‌.ಮುನಿಯಪ್ಪ: ಎಐಸಿಸಿ ಅಧ್ಯಕ್ಷರಾದ ಬೆನ್ನಲೇ ಮಲ್ಲಿಕಾರ್ಜುನ ಖರ್ಗೆ ಹೊಸದಾಗಿ ಪಕ್ಷದ ರಾಷ್ಟ್ರೀಯ ಮಟ್ಟದ ಸ್ಟೇರಿಂಗ್‌ ಕಮಿಟಿ ರಚಿಸಿದ್ದು, ಕೋಲಾರ ಲೋಕಸಭಾ ಕ್ಷೇತ್ರದ ಮಾಜಿ ಸಂಸದರಾದ ಕೆ.ಎಚ್‌.ಮುನಿಯಪ್ಪಗೆ ಸ್ಥಾನ ಕಲ್ಪಿಸಿರುವುದು ಜಿಲ್ಲೆಯ ಅವರ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ. ಸತತ 7 ಬಾರಿ ಸಂಸದರಾಗಿ ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಆಯ್ಕೆಗೊಂಡರೂ ಕಳೆದ 2019ರ ಲೋಕಸಭಾ ಕ್ಷೇತ್ರದಲ್ಲಿ ಕೆ.ಎಚ್‌.ಮುನಿಯಪ್ಪರವರ ಗೆಲುವಿನ ನಾಗಲೋಟಕ್ಕೆ ಬಿಜೆಪಿ ಬ್ರೇಕ್‌ ಹಾಕಿತ್ತು. 

ಬಳಿಕ ಕಾಂಗ್ರೆಸ್‌ ಪಕ್ಷದಲ್ಲಿ ಕೆ.ಎಚ್‌.ಮುನಿಯಪ್ಪ, ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಬಣಗಳು ಸೃಷ್ಟಿಯಾಗಿ ಜಿಲ್ಲೆಯ ಶಿಡ್ಲಘಟ್ಟ, ಚಿಂತಾಮಣಿ ಒಳಪಡುವ ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಸದ್ಯ ಕಾಂಗ್ರೆಸ್‌ ಪರಿಸ್ಥಿತಿ ಮನೆಯೊಂದು ಮೂರು ಬಾಗಿಲು ಎಂಬಂತಾಗಿದೆ.  ಸದ್ಯ ಕೆ.ಎಚ್‌.ಮುನಿಯಪ್ಪ ಹಾಗೂ ಮಾಜಿ ಸ್ಪೀಕರ್‌ ಕೆ.ಆರ್‌.ರಮೇಶ್‌ ಕುಮಾರ್‌ ನಡುವೆ ಬಣ ರಾಜಕೀಯ ತಾರಕ್ಕೇರಿದೆ. ಇದರ ನಡುವೆ ಎಐಸಿಸಿ ಅಧ್ಯಕ್ಷರಾಗಿ ಬುಧವಾರ ಅಷ್ಟೇ ಪದಗ್ರಹಣ ಮಾಡಿದ ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಸ್ಟೇರಿಂಗ್‌ ಕಮಿಟಿ ಹೊಸದಾಗಿ ರಚಿಸಿದ್ದು 47 ಸದಸ್ಯರ ಸ್ಟೇರಿಂಗ್‌ ಕಮಿಟಿಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ಮಾಜಿ ಕೇಂದ್ರ ಸಚಿವ ಕೆ.ಎಚ್‌.ಮುನಿಯಪ್ಪ, ಮಾಜಿ ಸಚಿವರಾದ ಎಚ್‌.ಕೆ.ಪಾಟೀಲ್‌ ಹಾಗೂ ಗೋವಾ ಉಸ್ತುವಾರಿ ಹಾಗೂ ಮಾಜಿ ಸಚಿವ ದಿನೇಶ್‌ ಗುಂಡೂರಾವ್‌ಗೆ ಸ್ಥಾನ ಕಲ್ಪಿಸಲಾಗಿದೆ.

Channapatna: ಮುನಿದ ಮುಖಂಡರ ಮನೆಯ ಕದ ತಟ್ಟಿದ ಎಚ್‌.ಡಿ.ಕುಮಾರಸ್ವಾಮಿ

ರಾಹುಲ್‌ಗಾಂಧಿ ಕರ್ನಾಟಕದಲ್ಲಿ ನಡೆಸಿದ ಭಾರತ್‌ ಜೋಡೋ ಪಾದಯಾತ್ರೆಯಲ್ಲಿ ಕೆ.ಎಚ್‌.ಮುನಿಯಪ್ಪ ಪಾಲ್ಗೊಳ್ಳುವ ಮೂಲಕ ತಾವು ಕಾಂಗ್ರೆಸ್‌ ಬಿಡಲ್ಲ ಎಂಬ ಸಂದೇಶವನ್ನು ತಮ್ಮ ರಾಜಕೀಯ ವಿರೋಧಿಗಳಿಗೆ ರವಾನಿಸಿದ್ದರು. ಈಗ ಖರ್ಗೆ ಕಾಂಗ್ರೆಸ್‌ ಸಾರಥ್ಯ ವಹಿಸಿ ಕೇವಲ ಗಂಟೆಗಳಲ್ಲಿ ಹೊರ ಬಿದ್ದಿರುವ ಸ್ಟೇರಿಂಗ್‌ ಕಮಿಟಿಯಲ್ಲಿ ಮುನಿಯಪ್ಪ ಸ್ಥಾನ ಪಡೆಯುವ ಮೂಲಕ ತಮ್ಮ ರಾಕೀಯ ವಿರೋಧಿಗಳಿಗೆ ಟಕ್ಕರ್‌ ಕೊಟ್ಟಿದ್ದಾರೆ.

Follow Us:
Download App:
  • android
  • ios