ಕೇಂದ್ರ ಸರ್ಕಾರದ ಅಗ್ನಿಪಥ ಯೋಜನೆ ಖಂಡಿಸಿ ರಾಜ್ಯ ಯುವ ಕಾಂಗ್ರೆಸ್‌ ಘಟಕವು ಬೆಂಗಳೂರಿನಲ್ಲಿ ಶುಕ್ರವಾರ ‘ಯುವ ಆಕ್ರೋಶ’ ಪ್ರತಿಭಟನಾ ರ್ಯಾಲಿ ನಡೆಸಿದ್ದು, ರಾಜಭವನಕ್ಕೆ ಮುತ್ತಿಗೆ ಹಾಕಲು ಯತ್ನಿಸಿದೆ. 

ಬೆಂಗಳೂರು (ಜೂ.25): ಕೇಂದ್ರ ಸರ್ಕಾರದ ಅಗ್ನಿಪಥ ಯೋಜನೆ ಖಂಡಿಸಿ ರಾಜ್ಯ ಯುವ ಕಾಂಗ್ರೆಸ್‌ ಘಟಕವು ಬೆಂಗಳೂರಿನಲ್ಲಿ ಶುಕ್ರವಾರ ‘ಯುವ ಆಕ್ರೋಶ’ ಪ್ರತಿಭಟನಾ ರ್ಯಾಲಿ ನಡೆಸಿದ್ದು, ರಾಜಭವನಕ್ಕೆ ಮುತ್ತಿಗೆ ಹಾಕಲು ಯತ್ನಿಸಿದೆ. ಈ ವೇಳೆ ರ್ಯಾಲಿಯನ್ನು ತಡೆದ ಪೊಲೀಸರು ಮತ್ತು ಯುವ ಕಾಂಗ್ರೆಸ್‌ ನಾಯಕರ ನಡುವೆ ಭಾರೀ ಮಾತಿನ ಚಕಮಕಿ ನಡೆದು, ಕಾರ್ಯಕರ್ತರು ನೂಕಾಟ ನಡೆಸಿದ್ದರಿಂದ ಹೈಡ್ರಾಮಾವೇ ನಡೆಯಿತು.

ರೇಸ್‌ಕೋರ್ಸ್‌ ರಸ್ತೆಯ ಕಾಂಗ್ರೆಸ್‌ ಭವನದಲ್ಲಿ ಪ್ರತಿಭಟನಾ ಸಮಾವೇಶದ ನಂತರ ರಾಷ್ಟ್ರೀಯ ಯುವ ಕಾಂಗ್ರೆಸ್‌ ಅಧ್ಯಕ್ಷ ಬಿ.ವಿ. ಶ್ರೀನಿವಾಸ್‌ ಸೇರಿದಂತೆ ರಾಜ್ಯ ಯುವ ಕಾಂಗ್ರೆಸ್‌ ನೇತೃತ್ವದಲ್ಲಿ ರಾಜಭವನದತ್ತ ಕಾರ್ಯಕರ್ತರು ರ್ಯಾಲಿ ಹೊರಟರು. ಸೌತ್‌ ರುಚಿಸ್‌ ಹೋಟೆಲ್ ಸರ್ಕಲ್ ಬಳಿ ನೂರಾರು ಸಂಖ್ಯೆಯಲ್ಲಿ ಪೊಲೀಸರು ಜಮಾವಣೆಯಾಗಿ ಬ್ಯಾರಿಕೇಡ್‌ ಹಾಕಿ ಪ್ರತಿಭಟನಾ ರ್ಯಾಲಿ ತಡೆಯಲು ಮುಂದಾದರು. 

ಹಳೇ ಕಥೆ ಸಾಕು.. ಮುಂದೇನು ಮಾಡ್ಬೇಕು ಹೇಳಿ: ಮೊಯ್ಲಿ ಮಾತಿಗೆ ಕಾಂಗ್ರೆಸ್ ಕಾರ್ಯಕರ್ತರ ಅಡ್ಡಿ

ಯುವ ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್‌ ಸೇರಿದಂತೆ ಹಲವರು ಬ್ಯಾರಿಕೇಡ್‌ ತಳ್ಳಿ ರಾರ‍ಯಲಿ ಮುಂದುವರೆಸಲು ಹೋಗುತ್ತಿದ್ದಂತೆ ಪೊಲೀಸರು ಲಾಠಿ ಬೀಸಿದರು. ಈ ವೇಳೆ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಪೊಲೀಸರ ವರ್ತನೆಯಿಂದ ಕೋಪಗೊಂಡ ಕಾರ್ಯಕರ್ತರು ಧರಿಸಿದ್ದ ಅಂಗಿಯನ್ನು ಹರಿದುಕೊಂಡು ಬಿಜೆಪಿ ವಿರುದ್ಧ ಧಿಕ್ಕಾರ ಕೂಗಿದರು. ಬಳಿಕ ಪೊಲೀಸರು ಬಿ.ವಿ. ಶ್ರೀನಿವಾಸ್‌, ಮಹಮದ್‌ ನಲಪಾಡ್‌ ಸೇರಿದಂತೆ ನೂರಾರು ಕಾರ್ಯಕರ್ತರನ್ನು ವಶಕ್ಕೆ ಪಡೆದರು.

ನೀವೇನು ಬಿಜೆಪಿ ದಲ್ಲಾಳಿಯೇ?: ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆಯುವ ಸಂದರ್ಭದಲ್ಲಿ ಯುವ ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಶ್ರೀನಿವಾಸ್‌ ಅವರನ್ನು ಒಂದು ಕಡೆ ಪೊಲೀಸರು ಎಳೆದರೆ, ಮತ್ತೊಂದು ಕಡೆ ಕಾಂಗ್ರೆಸ್‌ ಕಾರ್ಯಕರ್ತರು ಅವರನ್ನು ಕರೆದೊಯ್ಯದಂತೆ ತಡೆಯಲು ಹಿಡಿದುಕೊಂಡರು. ಈ ಸಂದರ್ಭದಲ್ಲಿ ಶ್ರೀನಿವಾಸ್‌ ಅವರು ತೊಟ್ಟಿದ್ದ ಬಟ್ಟೆಗಳು ಹರಿದು ಹೋದವು. ಇದರಿಂದ ಗರಂ ಆದ ಶ್ರೀನಿವಾಸ್‌ ‘ನೀವೇನು ಬಿಜೆಪಿಯ ದಲ್ಲಾಳಿಯೆ’ ಎಂದು ಪೊಲೀಸರೊಬ್ಬರ ವಿರುದ್ಧ ಹರಿಹಾಯ್ದರು.

ಅಗ್ನಿಪಥ್‌ ಯೋಜನೆ ಮೂಲಕ ದೇಶದ ಯುವಕರನ್ನು ಬರ್ಬಾದ್‌ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ಯೋಜನೆಯಲ್ಲಿ ಕೆಲ ವರ್ಷ ಉದ್ಯೋಗ ಮಾಡಿ ಮುಗಿಸಿದ ಬಳಿಕ ಯುವಕರು ಏನು ಮಾಡಬೇಕು? ಬಿಜೆಪಿ ಮಂತ್ರಿ ಹೇಳಿದಂತೆ ಬಿಜೆಪಿ ಕಚೇರಿಯ ಗೇಟ್‌ ಕಾಯಬೇಕೆ? ಅಂತಹ ಹೀನಾಯ ಸ್ಥಿತಿ ನಮ್ಮ ಯುವಕರಿಗೆ ಬಂದಿಲ್ಲ. ಬಿಜೆಪಿಯ ಅಚ್ಛೇ ದಿನ್‌ ನಮಗೆ ಬೇಡ. ಬದಲಾಗಿ ಹಳೆ ದಿನ ಬೇಕು.
-ಬಿ.ವಿ.ಶ್ರೀನಿವಾಸ್‌ ಯುವ ಕಾಂಗ್ರೆಸ್‌ ರಾಷ್ಟ್ರಾಧ್ಯಕ್ಷ

ಬಿಜೆಪಿಯಲ್ಲಿ ತಪ್ಪು ಮಾಡೋರೇ ಇಲ್ಲವೆ, ಅವರ ಮೇಲೆ ದಾಳಿ ಏಕಿಲ್ಲ?: ಜಮೀರ್‌

ಮೋದಿ ಸರ್ಕಾರದ ಅವಧಿಯಲ್ಲಿ ರಸ್ತೆ, ಏರ್‌ಪೋರ್ಚ್‌ ಮಾರಾಟ ಮಾಡಲಾಯಿತು. ಈಗ ಸೇನೆ ಮಾರಾಟ ಮಾಡುತ್ತಿದ್ದಾರೆಯೇ? ನೂರಾರು ಕನಸು ಇಟ್ಟುಕೊಂಡು ದೇಶ ಸೇವೆಗೆ ಬರುವ ಯುವಕರ ಕನಸನ್ನು ನುಚ್ಚುನೂರು ಮಾಡಲಾಗುತ್ತಿದೆ.
-ಮೊಹಮ್ಮದ್‌ ನಲಪಾಡ್‌, ಯುವ ಕಾಂಗ್ರೆಸ್‌ ರಾಜ್ಯಾಧ್ಯಕ್ಷ