ನವದೆಹಲಿ[ಡಿ.10]: ಕರ್ನಾಟಕ ವಿಧಾನಸಭೆ ಉಪಚುನಾವಣೆಯಲ್ಲಿ ಬಿಜೆಪಿ ಸಾಧಿಸಿರುವ ಭರ್ಜರಿ ಗೆಲುವು ಮಹಾರಾಷ್ಟ್ರದಲ್ಲಿ ಆಗಿದ್ದ ಹಿನ್ನಡೆಯನ್ನು ಕೊಂಚ ಮರೆಯುವಂತೆ ಮಾಡಿದೆ. ಮಹಾರಾಷ್ಟ್ರದ ‘ಅಘಾಡಿ’ (ಮೈತ್ರಿಕೂಟ) ರೀತಿಯಲ್ಲೇ ಕಾಂಗ್ರೆಸ್‌- ಜೆಡಿಎಸ್‌ ಒಗ್ಗೂಡಿ ಕರ್ನಾಟಕದಲ್ಲೂ ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಪ್ರಯತ್ನಕ್ಕೆ ಬ್ರೇಕ್‌ ಹಾಕಿದೆ. ಕಾಂಗ್ರೆಸ್‌ ಆಳ್ವಿಕೆಯ ಮಧ್ಯಪ್ರದೇಶದಂತಹ ರಾಜ್ಯಗಳಲ್ಲೂ ಕರ್ನಾಟಕದ ಮಾದರಿ ಕಾರ್ಯಾಚರಣೆ ನಡೆಸಲು ಬಿಜೆಪಿಗೆ ಹೊಸ ಹುಮ್ಮಸ್ಸನ್ನು ಈ ಫಲಿತಾಂಶ ನೀಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಕರ್ನಾಟಕದಲ್ಲಿ ಕಳೆದ ವರ್ಷ ಇದ್ದಂತಹ ಪರಿಸ್ಥಿತಿ ಈ ವರ್ಷ ಮಹಾರಾಷ್ಟ್ರದಲ್ಲೂ ಸೃಷ್ಟಿಯಾಗಿದೆ. ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಬಿಜೆಪಿಗೆ ಅಧಿಕಾರ ಸಿಕ್ಕಿಲ್ಲ. ಶಿವಸೇನೆ- ಎನ್‌ಸಿಪಿ- ಕಾಂಗ್ರೆಸ್‌ ಅಲ್ಲಿ ಅಧಿಕಾರಕ್ಕೇರಿವೆ. ಐದು ವರ್ಷ ಆಳ್ವಿಕೆ ನಡೆಸಿದ್ದ ರಾಜ್ಯವನ್ನು ಬಿಜೆಪಿ ಕಳೆದುಕೊಂಡಿದೆ. ಇದೀಗ ಉಪಚುನಾವಣೆಯಲ್ಲಿ ಹಿನ್ನಡೆಯಾಗಿದ್ದರೆ ಕರ್ನಾಟಕದಲ್ಲೂ ಬಿಜೆಪಿ ಅಧಿಕಾರ ಕಳೆದುಕೊಳ್ಳುವ ಅಪಾಯಕ್ಕೆ ತುತ್ತಾಗುತ್ತಿತ್ತು. ಆದರೆ ಭರ್ಜರಿ ಜಯ ಅಂತಹ ಆತಂಕವನ್ನು ದೂರ ಮಾಡಿದೆ. ಅಲ್ಲದೆ ಮಹಾರಾಷ್ಟ್ರದಲ್ಲಾದ ಹಿನ್ನಡೆಯನ್ನು ಮರೆಯುವಂತೆ ಮಾಡಿದೆ.

ಮಧ್ಯಪ್ರದೇಶದಲ್ಲಿ ಕಳೆದೊಂದು ವರ್ಷದಿಂದ ಆಡಳಿತ ನಡೆಸುತ್ತಿರುವ ಕಮಲನಾಥ್‌ ನೇತೃತ್ವದ ಕಾಂಗ್ರೆಸ್‌ ಸರ್ಕಾರಕ್ಕೆ ಬಹುಮತವಿಲ್ಲ. ಪಕ್ಷೇತರರು, ಇತರೆ ಪಕ್ಷಗಳ ನೆರವಿನೊಂದಿಗೆ ಕಾಂಗ್ರೆಸ್‌ ಅಧಿಕಾರ ನಡೆಸುತ್ತಿದೆ. ಕರ್ನಾಟಕದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತಂದಿರುವ ಬಿಜೆಪಿ ತನ್ನ ಗುರಿಯನ್ನು ಇನ್ನು ಆ ರಾಜ್ಯದತ್ತ ನೆಡಬಹುದು ಎಂಬ ವಿಶ್ಲೇಷಣೆಗಳೂ ಕೇಳಿಬರತೊಡಗಿವೆ.