* ರಾಜ್ಯಸಭೆ ಚುನಾವಣಾ ಫಲಿತಾಂಶ ಪ್ರಕಟ* ನಿರೀಕ್ಷೆಯಂತೆ ಮೂಡಿಬಂದ ಫಲಿತಾಂಶ* ಕಾಂಗ್ರೆಸ್-ಜೆಡಿಎಸ್ ಹಗ್ಗಾಜಗ್ಗಾಟ ನಡುವೆ ಬಿಜೆಪಿಗೆ ಲಾಭ
ಬೆಂಗಳೂರು, (ಜೂನ್.10): ತೀವ್ರ ಕುತೂಹಲ ಕೆರಳಿಸಿದ್ದ ಕರ್ನಾಟಕ ರಾಜ್ಯಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗಿದೆ. ನಿರೀಕ್ಷೆಯಂತೆ ಬಿಜೆಪಿಯ ಮೂವರು ಅಭ್ಯರ್ಥಿಗಳು ಮತ್ತು ಕಾಂಗ್ರೆಸ್ ಓರ್ವ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.
ಮುಖ್ಯವಾಗಿ ತೀವ್ರ ಜಿದ್ದಾಜಿದ್ದಿಗೆ ಕಾರಣವಾಗಿದ್ದ ನಾಲ್ಕನೇ ಸ್ಥಾನ ಬಿಜೆಪಿ ಪಾಲಾಗಿದ್ದು, ಕಾಂಗ್ರೆಸ್ ಹಾಗೂ ಜೆಡಿಎಸ್‌ಗೆ ಮುಖಭಂಗವಾಗಿದೆ. ಒಂದು ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಜೆಡಿಎಸ್‌ಗೆ ಕಾಂಗ್ರೆಸ್ ಶಾಕ್ ಕೊಟ್ಟಿದೆ. ಅಲ್ಲದೇ ಸಿದ್ದರಾಮಯ್ಯ ಸೋತು ಗೆದ್ದಿದ್ದಾರೆ.
ಅಡ್ಡಮತದಾನ: ಸ್ವಪಕ್ಷ ಶಾಸಕ ಗುಬ್ಬಿ ಶ್ರೀನಿವಾಸ್‌ಗೆ ಬಿಸಿ ಮುಟ್ಟಿಸಿಲು ಮುಂದಾದ ಜೆಡಿಎಸ್...!
ಬಿಜೆಪಿಯಿಂದ ಸ್ಪರ್ಧಿಸಿದ್ದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ಗೆ 46 ಮೊದಲ ಪ್ರಾಶಸ್ತ್ಯದ ಮತಗಳು ಲಭಿಸಿವೆ, ನಟ ಜಗ್ಗೇಶ್‌ಗೆ 44 ಹಾಗೂ ಲೆಹರ್ ಸಿಂಗ್‌ಗೆ 33 ದ್ವಿತೀಯ ಹಾಗೂ ತೃತೀಯ ಪ್ರಾಶಸ್ತ್ಯ ಮತಗಳು ಲಭಿಸಿವೆ.
ಕಾಂಗ್ರೆಸ್ಸಿನಿಂದ ಸ್ಪರ್ಧಿಸಿದ್ದ ಜೈರಾಮ್ ರಮೇಶ್‌ಗೆ ಮೊದಲ ಪ್ರಾಶಸ್ತ್ಯದ 46 ಮತಗಳು ಲಭಿಸಿ ಜಯಗಳಿಸಿದ್ದಾರೆ. ಎರಡನೇ ಆಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಮನ್ಸೂರ್ ಅಲಿಖಾನ್ 25 ಮತಗಳನ್ನು ಪಡೆದು ಸೋಲುಂಡಿದ್ದಾರೆ. ಇನ್ನು ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಕುಪೇಂದ್ರ ರೆಡ್ಡಿಗೆ 30 ಮತಗಳು ಲಭಿಸಿದ್ದು ಪರಾಭವಗೊಂಡಿದ್ದಾರೆ.
ಕೈ-ಜೆಡಿಎಸ್ ಹಗ್ಗಜಗ್ಗಾಟದ ಮಧ್ಯೆ ಬಿಜೆಪಿಗೆ ಲಾಭ
ಹೌದು....ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವಿನ ಹಗ್ಗಜಗ್ಗಾಟದಲ್ಲಿ ನಾಲ್ಕನೇ ಸ್ಥಾನ ಯಾರ ಪಾಲಾಗಲಿದೆ ಎಂಬುದು ತೀವ್ರ ಕುತೂಹಲ ಮೂಡಿಸಿತ್ತು.
ಜೆಡಿಎಸ್ ಅಭ್ಯರ್ಥಿ ಡಿ. ಕುಪೇಂದ್ರ ರೆಡ್ಡಿ ಅವರನ್ನು ಸ್ಪರ್ಧೆಯಿಂದ ನಿವೃತ್ತಿಗೊಳಿಸಿ ತಮ್ಮ ಎರಡನೇ ಅಭ್ಯರ್ಥಿ ಮನ್ಸೂರ್ ಅಲಿಖಾನ್ ಅವರಿಗೆ ಬೆಂಬಲ ನೀಡುವಂತೆ ಕಾಂಗ್ರೆಸ್ ಬೇಡಿಕೆ ಇಟ್ಟಿತ್ತು. ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಸೇರಿದಂತೆ ಕಾಂಗ್ರೆಸ್‌ನ ಹಲವು ನಾಯಕರು ಜೆಡಿಎಸ್ ವರಿಷ್ಠರನ್ನು ಸಂಪರ್ಕಿಸಿ, ಈ ಪ್ರಸ್ತಾವವನ್ನು ಮುಂದಿಟ್ಟಿತ್ತು.
ಕಾಂಗ್ರೆಸ್ ನಮಗೆ ಬೆಂಬಲಿಸಲಿ ಅಂತ ಜೆಡಿಎಸ್, ನಮಗೆ ಬೆಂಬಲಿಸುವಂತೆ ಕಾಂಗ್ರೆಸ್ ಪಟ್ಟು ಹಿಡಿದಿತ್ತು. ಹೀಗೆ ಆರೋಪ-ಪ್ರತ್ಯಾರೋಪಗಳು ನಡೆದಿದ್ದವು. ಹೀಗೆ ಎರಡು ಪಕ್ಷಗಳ ನಡುವೆ ಹಗ್ಗಜಗ್ಗಾಟ ಜೋರಾಗಿದ್ದವು. ಇವರಿಬ್ಬರ ನಡುವೆ ಅಂತಿಮವಾಗಿ ಬಿಜೆಪಿಗೆ ಲಾಭವಾಗಿದ್ದು, ಲೇಹರ್ ಸಿಂಗ್ ಅವರು ನಾಲ್ಕನೇ ಸ್ಥಾನದಿಂದ ಜಯಗಳಿಸಿದ್ದಾರೆ.
ಸೋತು ಗೆದ್ದ ಸಿದ್ದರಾಮಯ್ಯ
ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರ ಪ್ರತಿಷ್ಠೆಯ ಸಮರದಲ್ಲಿ ಅಗತ್ಯ ಸಂಖ್ಯಾಬಲ ಇಲ್ಲದಿದ್ರೂ, ರಾಜಕೀಯದಾಟದಿಂದ ನಾಲ್ಕನೇ ಸ್ಥಾನವನ್ನು ಬಿಜೆಪಿ ಗೆದ್ದುಕೊಂಡಿದೆ.
ಜೆಡಿಎಸ್ ಮಣಿಸುವ ಹಠಕ್ಕೆ ಬಿದ್ದು ಎರಡನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದ ಮಾಜಿ ಸಿಎಂ ಸಿದ್ದರಾಮಯ್ಯ, ಮನ್ಸೂರ್ ಖಾನ್ ಗೆಲ್ಲಿಸಿಕೊಳ್ಳಲಾಗದೇ ಮುಖಭಂಗ ಅನುಭಸಿದ್ದರೂ ಕೂಡ ತಮ್ಮ ಗೇಮ್ ಪ್ಲಾನ್ ಮೂಲಕ ರಾಜಕೀಯ ಚದುರಂಗದಾಟದಲ್ಲಿ ಮೇಲುಗೈ ಸಾಧಿಸಿದ್ದಾರೆ. ಚುನಾವಣೆಗೂ ಮುನ್ನ ಆತ್ಮಸಾಕ್ಷಿ ಅಸ್ತ್ರ ಪ್ರಯೋಗಿಸಿದ ಸಿದ್ದರಾಮಯ್ಯ ಒಂದರ್ಥದಲ್ಲಿ ಗೆದ್ದು ಬೀಗಿದ್ದಾರೆ.
