ಮುಖ್ಯಮಂತ್ರಿ ನಿವಾಸಕ್ಕೆ ಭೇಟಿ ನೀಡಿದ ಸಚಿವ ಜಮೀರ್ ಅಹ್ಮದ್ ಖಾನ್, ದಾವಣಗೆರೆ ದಕ್ಷಿಣ ಕ್ಷೇತ್ರದ ಟಿಕೆಟ್ ಹಂಚಿಕೆ ಕುರಿತು ತಮ್ಮ ಮೇಲಿನ ಆರೋಪಗಳನ್ನು ತಳ್ಳಿಹಾಕಿದ್ದಾರೆ. ಕೆಪಿಸಿಸಿ ಸಭೆಯಲ್ಲಿ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡುವಂತೆ ಬಹಿರಂಗವಾಗಿ ಮನವಿ ಮಾಡಿದ್ದಾಗಿ ಸ್ಪಷ್ಟಪಡಿಸಿದ ಅವರು, ಪಕ್ಷದ ಅಭ್ಯರ್ಥಿಯ ಗೆಲುವಿನ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು.
ಬೆಂಗಳೂರು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿರುವ ಬೆಳವಣಿಗೆಯೊಂದರಲ್ಲಿ, ಮುಖ್ಯಮಂತ್ರಿ ನಿವಾಸಕ್ಕೆ ಸಚಿವರ ಸರಣಿ ಭೇಟಿ ಗಮನ ಸೆಳೆಯಿತು. ಜಮೀರ್ ಅಹ್ಮದ್ ಖಾನ್, ಪ್ರಿಯಾಂಕ್ ಖರ್ಗೆ ಹಾಗೂ ಹೆಚ್ ಸಿ ಮಹದೇವಪ್ಪ ಅವರು ಮುಖ್ಯಮಂತ್ರಿ ನಿವಾಸಕ್ಕೆ ಭೇಟಿ ನೀಡಿದ್ದು, ದಾವಣಗೆರೆ ದಕ್ಷಿಣ ಕ್ಷೇತ್ರದ ಬೆಳವಣಿಗೆಗಳ ಕುರಿತ ಚರ್ಚೆಗೆ ವೇದಿಕೆಯಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಜಮೀರ್ ಅಹ್ಮದ್ ಖಾನ್, ತಮ್ಮ ವಿರುದ್ಧ ಕೇಳಿಬರುತ್ತಿರುವ ಆರೋಪಗಳನ್ನು ತಳ್ಳಿ ಹಾಕಿದರು. ನಾನು ಯಾವುದೇ ವಿಷಯದಲ್ಲೂ ಮುಚ್ಚುಮರೆ ಮಾಡಿಲ್ಲ. ಕೆಪಿಸಿಸಿ ಸಭೆಯಲ್ಲಿ ನಾನು ಓಪನ್ ಆಗಿಯೇ ನನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದೇನೆ. ಜಬ್ಬಾರ್ ಅವರ ಹೆಸರನ್ನು ನೇರವಾಗಿ ಹೇಳಿಲ್ಲ. ಜಬ್ಬಾರ್ ಸೇರಿ ಏಳು ಮಂದಿ ಮುಸ್ಲಿಂ ಮುಖಂಡರು ಅರ್ಜಿ ಸಲ್ಲಿಸಿದ್ದರು. ಅವರಲ್ಲಿ ಯಾರಿಗಾದರೂ ಟಿಕೆಟ್ ನೀಡಬಹುದು ಎಂದು ನಾನು ಹೇಳಿದ್ದೆ ಎಂದರು.
ದಾವಣಗೆರೆ ದಕ್ಷಿಣ ಕ್ಷೇತ್ರದ ರಾಜಕೀಯ ದಂಗಲ್ ಕುರಿತು ಪ್ರತಿಕ್ರಿಯಿಸಿದ ಅವರು, ಜಬ್ಬಾರ್ ಅವರು ರಾಜೀನಾಮೆ ನೀಡಿದ್ದಾರೆ ಎಂಬುದು ನನಗೆ ನಂತರ ತಿಳಿದುಬಂದಿದೆ. ಆ ಸಮಯದಲ್ಲಿ ನಾನು ಅಲ್ಲಿರಲಿಲ್ಲ. ನಸೀರ್ ಅವರನ್ನು ಕೈಬಿಟ್ಟ ವಿಚಾರವೂ ನನಗೆ ಸ್ಪಷ್ಟವಾಗಿಲ್ಲ. ಈ ಬಗ್ಗೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ವಿಚಾರಿಸುತ್ತೇನೆ ಎಂದರು.
ಅಲ್ಪಸಂಖ್ಯಾತರಲ್ಲಿ ಅಸಮಾಧಾನ ಇರುವುದನ್ನು ಒಪ್ಪಿಕೊಂಡ ಜಮೀರ್, ಮುಸ್ಲಿಂ ಸಮುದಾಯದವರಿಗೆ ಟಿಕೆಟ್ ನೀಡಿಲ್ಲ ಎಂಬ ಅಸಮಾಧಾನ ಇತ್ತು. ಆದರೆ ನಂತರ ಪಕ್ಷದ ಅಭ್ಯರ್ಥಿಯಾಗಿ ಸಮರ್ಥ ವ್ಯಕ್ತಿಗೆ ಅವಕಾಶ ನೀಡಲಾಗಿದೆ. ಈಗ ನಾವು ಅಲ್ಲಿ ಗೆಲುವು ಸಾಧಿಸುತ್ತೇವೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.
ತಮ್ಮ ನಾಯಕತ್ವದ ಬಗ್ಗೆ ಮಾತನಾಡಿದ ಅವರು ನಾನು ಯಾವ ಸಮುದಾಯದ ಸುಪ್ರೀಂ ಲೀಡರ್ ಅಲ್ಲ. ನಾನು ಕೇವಲ ಕಾಂಗ್ರೆಸ್ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಸೇವೆ ಮಾಡುತ್ತಿದ್ದೇನೆ. ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ಕೇಳಿದ್ದರಲ್ಲಿ ಯಾವುದೇ ತಪ್ಪಿಲ್ಲ. ಇದು ಕ್ಲೋಸ್ ಡೋರ್ ಸಭೆ ಅಲ್ಲ, ಎಲ್ಲರ ಮುಂದೆಯೇ ಹೇಳಿದ್ದೇನೆ. ಕಳೆದ 20ರಂದು ಡಿಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ, ದಾವಣಗೆರೆಯ ಎಲ್ಲಾ ಮುಖಂಡರು ಹಾಗೂ ಅಲ್ಪಸಂಖ್ಯಾತ ಪ್ರತಿನಿಧಿಗಳು ಉಪಸ್ಥಿತರಿದ್ದರು. ಅಲ್ಲಿ ನಾನು ಸ್ಪಷ್ಟವಾಗಿ ಮುಸ್ಲಿಂ ಅಭ್ಯರ್ಥಿಗೆ ಅವಕಾಶ ನೀಡುವಂತೆ ಮನವಿ ಮಾಡಿದ್ದೆ. ಏಳು ಮಂದಿ ಅರ್ಜಿ ಹಾಕಿರುವುದರಿಂದ ಯಾರಿಗಾದರೂ ಟಿಕೆಟ್ ನೀಡಿ, ನಾವು ಗೆಲ್ಲಿಸಿಕೊಂಡು ಬರುತ್ತೇವೆ ಎಂದು ಹೇಳಿದ್ದೆ. ಅಗತ್ಯವಿದ್ದರೆ ನಾನು ರಾಜೀನಾಮೆ ನೀಡಲು ಸಹ ಸಿದ್ಧನೆಂದು ತಿಳಿಸಿದ್ದೆ ಎಂದರು.
ಜಬ್ಬಾರ್ ಅವರಿಗೆ ಈಗಾಗಲೇ ಎಂಎಲ್ಸಿ ಸ್ಥಾನವಿದೆ
ಜಬ್ಬಾರ್ ಅವರಿಗೆ ಟಿಕೆಟ್ ನೀಡುವ ವಿಚಾರದಲ್ಲಿ ಹೈಕಮಾಂಡ್‌ನ ನಿರ್ಧಾರವೇ ಅಂತಿಮವಾಗಿದ್ದು, ಜಬ್ಬಾರ್ ಅವರಿಗೆ ಈಗಾಗಲೇ ಎಂಎಲ್ಸಿ ಸ್ಥಾನವಿದೆ. ಆದ್ದರಿಂದ ಅವರಿಗೆ ಟಿಕೆಟ್ ನೀಡದ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದುಬಂದ ನಂತರ, ಬೇರೆ ಅರ್ಹ ಅಭ್ಯರ್ಥಿಗೆ ಅವಕಾಶ ನೀಡುವಂತೆ ನಾವು ಸೂಚಿಸಿದ್ದೇವೆ ಎಂದು ವಿವರಿಸಿದರು.
ಪಕ್ಷ ವಿರೋಧಿ ಚಟುವಟಿಕೆಗಳ ಆರೋಪಗಳ ಬಗ್ಗೆ ಮಾತನಾಡಿದ ಜಮೀರ್, ಜಬ್ಬಾರ್ ಅವರು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಮಲ್ಲಿಕಾರ್ಜುನ್ ಅವರ ಮನೆಗೆ ಭೇಟಿ ನೀಡಿದರೂ, ತಮ್ಮ ಮನೆಗೆ ಬರಲಿಲ್ಲ ಎಂಬ ಬೇಸರದಿಂದ ಅವರು ದೂರ ಉಳಿದಿದ್ದಾರೆ. ಜೊತೆಗೆ ಆರೋಗ್ಯ ಸಮಸ್ಯೆಯೂ ಕಾರಣವಾಗಿದೆ ಎಂದು ಹೇಳಿದ್ದಾರೆ ಎಂದರು. ನಜೀರ್ ಅಹ್ಮದ್ ಅವರ ವಿಚಾರದಲ್ಲೂ ಸ್ಪಷ್ಟನೆ ನೀಡಿದ ಜಮೀರ್ ಅವರಿಗೆ ಬಾಗಲಕೋಟೆ ಜಿಲ್ಲೆಯಲ್ಲಿ ಜವಾಬ್ದಾರಿ ನೀಡಲಾಗಿತ್ತು. ಅವರು ದಾವಣಗೆರೆಗೆ ಬರಲು ಯತ್ನಿಸಿದಾಗ, ಅವರಿಗೆ ನೀಡಲಾದ ಜವಾಬ್ದಾರಿಯನ್ನು ಮೊದಲು ನಿರ್ವಹಿಸಲು ಸೂಚಿಸಲಾಗಿದೆ ಎಂದು ಹೇಳಿದರು.
ತಮ್ಮ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಜಕೀಯದಲ್ಲಿ ಇಂತಹ ಸಂಗತಿಗಳು ಸಾಮಾನ್ಯ. ಪ್ರತಿಯೊಬ್ಬರೂ ತಮ್ಮ ಮಟ್ಟಿಗೆ ಪ್ರಯತ್ನ ಮಾಡುತ್ತಾರೆ. ಅದರಲ್ಲಿ ತಪ್ಪೇನಿಲ್ಲ. ಯಾರಾದರೂ ಮಂತ್ರಿಯಾಗಲಿ, ನನಗೆ ಸಂತೋಷವೇ ಎಂದು ಸಮಾಧಾನದಿಂದ ಹೇಳಿದರು. ಇದಲ್ಲದೆ ನಾವೆಲ್ಲರೂ ಒಗ್ಗಟ್ಟಿನಿಂದ ಇದ್ದೇವೆ. ದಾವಣಗೆರೆ ಕ್ಷೇತ್ರದಲ್ಲಿ ಎರಡೂ ಸ್ಥಾನಗಳನ್ನು ಗೆಲ್ಲುವ ವಿಶ್ವಾಸ ನಮ್ಮಲ್ಲಿದೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.
ನಾನು ಕೇರಳ ಹೋಗಿದ್ದೆ
ನಾನು ಮಂತ್ರಿ ಆಗ್ಬೇಕು ಅಂತ ಆಸೆ ಇತ್ತು. ನಾನು ಮಂತ್ರಿ ಆಗಿದ್ದೇನೆ. ಅವರು ಯಾರಿಗೆ ಹೇಳಿದ್ದಾರೆ ಅಂತ ಗೊತ್ತಿಲ್ಲ. ಲೋಕಲ್ ಲೀಡರ್ಸ್‌ಗೆ ಹೇಳಿದ್ದಾರಾ ಯಾರಿಗೆ ಹೇಳಿದ್ದಾರೆ ಗೊತ್ತಿಲ್ಲ. ಹೆಸರು ಹೇಳಬೇಕಲ್ವಾ ಇಂಥವರು ಮಾಡಿದ್ದಾರೆ ಅಂತ. ನನ್ನ ಕೆಲಸವನ್ನು ನಾನು ನಿಭಾಯಿಸಿದ್ದೇನೆ, ದಾವಣಗೆರೆ ಹೋಗಿದ್ದೇನೆ. 7ನೇ ತಾರೀಕಿನ ತನಕ ಕೇರಳ ಹಾಕಿದ್ರು. ಆದ್ರೆ ಮುಖ್ಯಮಂತ್ರಿಗಳು ಜಮೀರ್ ಐದನೇ ತಾರೀಕು ಬರ್ತಾರೆ ಅಂತ ಹೇಳಿಬಿಟ್ಟಿದ್ರು ಹಾಗಾಗಿ ಹೋಗಿದ್ದೆ. ವೇಣುಗೋಪಾಲ್ ಅವರಿಗೆ ರಿಕ್ವೆಸ್ಟ್ ಮಾಡಿಕೊಂಡು ದಾವಣಗೆರೆಗೆ ಹೋಗಿದ್ದೇನೆ. ಜಮೀರ್ ವಿರುದ್ಧ ಷಡ್ಯಂತ್ರ ನಡೆಯುತ್ತಿದೆಯಾ ಎಂಬ ಪ್ರಶ್ನೆ. ರಾಜಕೀಯದಲ್ಲಿ ಇದೆಲ್ಲ ಸಹಜ. ಅವರವರ ಪ್ರಯತ್ನ ಅವರು ಮಾಡುತ್ತಾರೆ. ಎಲ್ಲರೂ ಅವರ ಪ್ರಯತ್ನವನ್ನು ಮಾಡುತ್ತಾರೆ ಮಾಡಲಿ ಆಗಲಿ ಸಂತೋಷ. ಅವರು ಮಂತ್ರಿ ಆದರೆ ನನಗೂ ಸಂತೋಷ. ಒಟ್ಟಾರೆ, ದಾವಣಗೆರೆ ದಕ್ಷಿಣ ಕ್ಷೇತ್ರದ ಟಿಕೆಟ್ ಹಂಚಿಕೆ ಹಾಗೂ ಅಲ್ಪಸಂಖ್ಯಾತ ರಾಜಕೀಯದ ಸುತ್ತ ಉದ್ಭವಿಸಿರುವ ಚರ್ಚೆಗಳು ರಾಜ್ಯ ರಾಜಕೀಯದಲ್ಲಿ ಮತ್ತಷ್ಟು ಚುರುಕು ಪಡೆದುಕೊಂಡಿವೆ.


