ಹಾಸನ[ಡಿ.12]: ಉಪ ಚುನಾವಣೆ ಫಲಿತಾಂಶದಿಂದ ಜೆಡಿಎಸ್‌ ಮುಗಿದೇ ಹೋಯಿತು ಎಂದು ಬಿಂಬಿಸಲಾಗುತ್ತಿದೆ. ಅದು ಎಂದಿಗೂ ಸಾಧ್ಯವಿಲ್ಲ. ಜೆಡಿಎಸ್‌ ರಾಜಕೀಯ ತಂತ್ರಗಾರಿಕೆ ಈಗ ಆರಂಭವಾಗುತ್ತದೆ. 2023ಕ್ಕೆ ಜೆಡಿಎಸ್‌ ಸ್ವತಂತ್ರವಾಗಿ ಅಧಿಕಾರ ಹಿಡಿದೆ ಹಿಡಿಯುತ್ತದೆ ಎಂದು ಜೆಡಿಎಸ್‌ ಮುಖಂಡ, ಮಾಜಿ ಸಚಿವ ಎಚ್‌.ಡಿ.ರೇವಣ್ಣ ಆತ್ಮವಿಶ್ವಾಸದ ಮಾತುಗಳನ್ನಾಡಿದ್ದಾರೆ.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಉಪ ಚುನಾವಣೆ ಫಲಿತಾಂಶದಿಂದ ದೃತಿಗೆಡುವ ಪ್ರಶ್ನೆಯೇ ಇಲ್ಲ. ಎರಡೂ ರಾಷ್ಟ್ರೀಯ ಪಕ್ಷಗಳನ್ನು ಜನರು ದೂರ ಇರುವ ಕಾಲ ಬಂದೇ ಬರುತ್ತದೆ ಎಂದು ಭವಿಷ್ಯ ನುಡಿದರು.

ಜೆಡಿಎಸ್‌ಗೆ ಮುಖಂಡರ ಕೊರತೆಯಿಲ್ಲ. ಜೆಡಿಎಸ್‌ನಿಂದ ಹೋದ ಹಲವಾರು ಮಂದಿ ಕಾಂಗ್ರೆಸ್‌ ಮತ್ತು ಬಿಜೆಪಿಗಳಲ್ಲಿದ್ದಾರೆ. ಇಂದು ಬಿಜೆಪಿಯಲ್ಲಿ ಇರುವ ಅರ್ಧದಷ್ಟುಮಂದಿ ದೇವೇಗೌಡರ ಕಾರ್ಖಾನೆಯಲ್ಲೇ ಬೆಳೆದವರು ಎಂದು ಅಭಿಪ್ರಾಯಪಟ್ಟರು.

ಬಿಜೆಪಿ 2008ರಲ್ಲಿ ಇದೇ ರೀತಿ ಆಪರೇಷನ್‌ ಕಮಲ ಮಾಡಿದಾಗ 20 ಕ್ಷೇತ್ರಗಳಿಗೆ ಚುನಾವಣೆ ನಡೆದ ಜೆಡಿಎಸ್‌ 6 ಕ್ಷೇತ್ರಗಳಲ್ಲಿ ಗೆದ್ದಿತ್ತು. 2013ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ 120 ಸ್ಥಾನಗಳನ್ನು ಹೊಂದಿದ್ದ ಬಿಜೆಪಿ 40 ಸ್ಥಾನಗಳನ್ನು ಗೆದ್ದಿತ್ತು. ಶೇಕಡಾವಾರು ಮತಗಳಲ್ಲಿ ಜೆಡಿಎಸ್‌ 2 ಸ್ಥಾನಕ್ಕೆ ಬಂತು. 1989ರಲ್ಲಿ 2 ಸ್ಥಾನಗಳನ್ನು ಪಡೆದಿದ್ದ ಜೆಡಿಎಸ್‌ 1996ರ ಚುನಾವಣೆಯಲ್ಲಿ ಜೆಡಿಎಸ್‌ ಅಧಿಕಾರಕ್ಕೆ ಬಂತು. ಹಾಗಾಗಿ ಉಪ ಚುನಾವಣೆ ಫಲಿತಾಂಶವೇ ಅಂತಿಮವಲ್ಲ ಎಂದು ವಿಶ್ಲೇಷಿಸಿದರು.

ಹಣದಿಂದ ಉಪಚುನಾವಣೆ

ರಾಜ್ಯ ಸರ್ಕಾರವನ್ನು ಉಳಿಸುವ ಸಲುವಾಗಿ ಉಪಚುನಾವಣೆಯಲ್ಲಿ ಬಿಜೆಪಿ ಹಣಬಲವನ್ನು ಪ್ರಯೋಗಿಸಿದೆ ಎಂದು ಎಚ್‌.ಡಿ.ರೇವಣ್ಣ ಆರೋಪಿಸಿದ್ದಾರೆ. ಬಿಜೆಪಿ ಮಂತ್ರಿಗಳು, ಸ್ಬಯಂಸೇವಕರು ಹಣ ಹಂಚಿದ್ದಾರೆ. ಕೆ.ಆರ್‌.ಪೇಟೆ ಸೇರಿ ಕೆಲವು ಕಡೆ ಕಾಂಗ್ರೆಸ್‌, ಬಿಜೆಪಿ ಹೊಂದಾಣಿಕೆಯಿಂದ ಜೆಡಿಎಸ್‌ ಹಿನ್ನಡೆಯಾಗಿದೆ. ಇವಿಎಂ ಮತ ಯಂತ್ರದಲ್ಲಿ ದೋಷ ಇರುವುದು ಕಂಡು ಬರುತ್ತಿದೆ.