ಡಿಸಿಎಂ ಅಶ್ವತ್ಥನಾರಾಯಣಗೆ ರೇಣುಕಾಚಾರ್ಯ ಸವಾಲು!
ಡಿಸಿಎಂ ಅಶ್ವತ್ಥನಾರಾಯಣಗೆ ರೇಣುಕಾಚಾರ್ಯ ಸವಾಲು| ಪಕ್ಷದ ಬಗ್ಗೆ ಗೌರವ ಇದ್ದರೆ ಸಚಿವ ಸ್ಥಾನ ತ್ಯಾಗ ಮಾಡಿ| ನೀವು ನನಗೆ ಎಚ್ಚರಿಕೆ, ತಿಳಿವಳಿಕೆ ನೀಡುವ ಅಗತ್ಯವಿಲ್ಲ
ಬೆಂಗಳೂರು[ಡಿ.19]: ‘ಉಪಮುಖ್ಯಮಂತ್ರಿ ಹುದ್ದೆಗಳನ್ನು ಕೈಬಿಡಬೇಕು ಎಂಬುದು ಬಹುತೇಕ ಸಾರ್ವಜನಿಕರು ಹಾಗೂ ಪಕ್ಷದ ಮುಖಂಡರ ಅಭಿಪ್ರಾಯ. 3 ಅಲ್ಲದಿದ್ದರೆ 33 ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿಸಿಕೊಳ್ಳಲಿ. ನನಗೆ ಎಚ್ಚರಿಕೆ, ತಿಳಿವಳಿಕೆ ನೀಡಲು ಹೈಕಮಾಂಡ್ ಇದೆ. ಅಶ್ವತ್ಥನಾರಾಯಣ್ ಅವರು ನನಗೆ ನೀತಿಪಾಠ ಹೇಳುವ ಅಗತ್ಯವಿಲ್ಲ’ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ತಿರುಗೇಟು ನೀಡಿದ್ದಾರೆ.
ಪಕ್ಷದ ಬಗ್ಗೆ ನಿಮಗೆ ಗೌರವ ಇದ್ದರೆ ಮೊದಲು ಸಚಿವ ಸ್ಥಾನ ತ್ಯಾಗ ಮಾಡಿ ಎಂದೂ ರೇಣುಕಾಚಾರ್ಯ ಅವರು ಅಶ್ವತ್ಥನಾರಾಯಣ ಅವರಿಗೆ ಬಹಿರಂಗವಾಗಿ ಸವಾಲನ್ನೂ ಎಸೆದಿದ್ದಾರೆ.
ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷಕ್ಕೆ ಗೌರವ ಕೊಡುವುದು ಅವರಿಂದ ಕಲಿಯಬೇಕಿಲ್ಲ. ನಾನು ಬಿಜೆಪಿ ತತ್ವ ಸಿದ್ಧಾಂತ ಒಪ್ಪಿ 1990ರಲ್ಲಿ ರಾಮ ಜನ್ಮಭೂಮಿ ಇಟ್ಟಿಗೆ ಸಂಗ್ರಹದಿಂದ ಬಿಜೆಪಿಯ ಒಡನಾಟ ಬೆಳೆಸಿಕೊಂಡವನು. ಮೂರು ಬಾರಿ ಶಾಸಕನಾಗಿದ್ದೇನೆ. ನಾನು ಸಂಘ ಪರಿವಾರದಿಂದ ಬಂದವನೇ ಹೊರತು ಜನತಾ ಪರಿವಾರದಿಂದ ಬಂದವನಲ್ಲ ಎಂದು ತೀಕ್ಷ$್ಣವಾಗಿ ಹೇಳಿದರು. ನಾಡಿನ ಎಲ್ಲರ ಅನಿಸಿಕೆ, ಜನರ ಭಾವನೆಗಳ ಪರವಾಗಿ ನಾನು ಮಾತನಾಡಿದ್ದೇನೆ. ನಾವು ಹೇಳಬೇಕು ಎಂದುಕೊಂಡಿದ್ದನ್ನು ನೀನು ಹೇಳಿದ್ದೀಯ ಎಂದು ಪಕ್ಷದ ಹಲವು ಶಾಸಕರು, ನಾಯಕರು ಮೆಚ್ಚಿಕೊಂಡಿದ್ದಾರೆ ಎಂದರು.
ಯಡಿಯೂರಪ್ಪ ಬಗ್ಗೆ ನೀವು ಏನೆಲ್ಲ ಮಾತಾಡಿದ್ರಿ:
ನಾನು ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಬಗ್ಗೆ ನಾನು ಅಗೌರವ ತೋರಿಲ್ಲ. ಹಾದಿ ಬೀದಿಯಲ್ಲಿ ಯಾವ ನಾಯಕರ ಬಗ್ಗೆಯೂ ಮಾತನಾಡಿಲ್ಲ. ಒಂದು ವೇಳೆ ಪಕ್ಷ ಅಥವಾ ನಾಯಕರಿಗೆ ಅಗೌರವ ತೋರುವಂತಹ ಮಾತನಾಡಿದ್ದರೆ ನನಗೆ ಎಚ್ಚರಿಕೆ, ತಿಳಿವಳಿಕೆ ನೀಡಲು ಹೈಕಮಾಂಡ್ ಇದೆ. ಆದರೆ, ಬೇರೊಬ್ಬರು ನಾನು ಎಲ್ಲಿ ಮಾತನಾಡಬೇಕು ಹಾಗೂ ಹೇಗೆ ಮಾತನಾಡಬೇಕು ಎಂದು ನೀತಿ ಪಾಠ ಮಾಡುವ ಅಗತ್ಯವಿಲ್ಲ ಎಂದು ರೇಣುಕಾಚಾರ್ಯ ಹೇಳಿದರು.
+++
ಈಗ ನನ್ನ ಬಗ್ಗೆ ಮಾತನಾಡುವವರು (ಅಶ್ವತ್ಥನಾರಾಯಣ) ನಾಲ್ಕು ವರ್ಷಗಳ ಹಿಂದೆ ನಡೆದ ಬಿಬಿಎಂಪಿ ಚುನಾವಣೆಯಲ್ಲಿ ಯಡಿಯೂರಪ್ಪ ಬಗ್ಗೆ ಏನು ಮಾತನಾಡಿದ್ದರು ಎಂಬುದನ್ನು ಮನನ ಮಾಡಿಕೊಳ್ಳಬೇಕು. ಬಿಬಿಎಂಪಿ ಚುನಾವಣೆ ವಿಚಾರ, ಟಿಕೆಟ್ ಕೊಡುವ ಬಗ್ಗೆ ನೀವು ಯಡಿಯೂರಪ್ಪ ಅವರನ್ನು ಬಹಿರಂಗವಾಗಿಯೇ ಪ್ರಶ್ನೆ ಮಾಡಿರಲಿಲ್ಲವೇ ಎಂದು ಅಶ್ವತ್ಥನಾರಾಯಣ್ ಅವರನ್ನು ಪ್ರಶ್ನಿಸಿದರು.
ಕಟೀಲ್ ಭೇಟಿ ಮಾಡಿದ ರೇಣು
ಉಪಮುಖ್ಯಮಂತ್ರಿ ಹುದ್ದೆಗಳನ್ನು ರದ್ದುಪಡಿಸುವುದು ಹಾಗೂ ತಮಗೆ ಸಚಿವ ಸ್ಥಾನ ನೀಡುವುದೂ ಸೇರಿದಂತೆ ವಿವಿಧ ವಿಷಯಗಳನ್ನು ಮುಂದಿಟ್ಟುಕೊಂಡು ರೇಣುಕಾಚಾರ್ಯ ಅವರು ಬುಧವಾರ ಪಕ್ಷದ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಅವರನ್ನು ಭೇಟಿ ಮಾಡಿ ಚರ್ಚಿಸಿದರು.
ಕಳೆದ 2-3 ದಿನಗಳಿಂದ ಬಹಿರಂಗ ಹೇಳಿಕೆ ನೀಡುತ್ತಿದ್ದ ರೇಣುಕಾಚಾರ್ಯ ಅವರು ಈ ಬಗ್ಗೆ ಅಧಿಕೃತವಾಗಿ ರಾಜ್ಯಾಧ್ಯಕ್ಷರ ಬಳಿ ಪ್ರಸ್ತಾಪಿಸಿದ್ದಾರೆ. ರೇಣುಕಾಚಾರ್ಯ ಅವರ ಮಾತುಗಳನ್ನು ಆಲಿಸಿದ ಕಟೀಲ್ ಅವರು ವರಿಷ್ಠರೊಂದಿಗೆ ಚರ್ಚಿಸುವುದಾಗಿ ಭರವಸೆ ನೀಡಿದರು ಎಂದು ತಿಳಿದು ಬಂದಿದೆ.