ಹಾಸನ[ಡಿ.28]: ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಜನತಾ ಪಕ್ಷ ತೊರೆದು ಕಾಂಗ್ರೆಸ್‌ ಸೇರಲು ಮುಂದಾಗಿದ್ದರು ಎಂದು ತಮ್ಮ ಆತ್ಮಚರಿತ್ರೆಯಲ್ಲಿ ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಉಲ್ಲೇಖಿಸಿರುವ ಬಗ್ಗೆ ಮಾಜಿ ಸಚಿವ ಎಚ್‌.ಡಿ.ರೇವಣ್ಣ ಬೇಸರ ವ್ಯಕ್ತಪಡಿಸಿದ್ದಾರೆ.

ದೇವೇಗೌಡರು ಪ್ರಧಾನಿ ಹುದ್ದೆಯನ್ನೇ ತೊರೆದು ಬಂದವರು. ಅವರು ಯಾವುದಕ್ಕೂ ಆಸೆ ಪಟ್ಟವರಲ್ಲ ಎಂದಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜಕೀಯವಾಗಿ ತೀವ್ರ ಹಿನ್ನಡೆ ಅನುಭವಿಸಿದ್ದ ಎಸ್‌.ಎಂ.ಕೃಷ್ಣ ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿ ಮಾಡಿದವರು ದೇವೇಗೌಡರು ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಮಾಜಿ ಪ್ರಧಾನಿ ನರಸಿಂಹರಾವ್‌ ಅವರು ಅಂದು ಕೃಷ್ಣ ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿ ಮಾಡುವುದು ಬೇಡ ಎಂದಿದ್ದರು. ಆದರೆ, ನರಸಿಂಹರಾವ್‌ ಅವರ ಜತೆ ಮಾತನಾಡಿ ಕೃಷ್ಣರನ್ನು ರಾಜ್ಯಸಭೆಗೆ ಕಳುಹಿಸಲಾಯಿತು ಎಂದರು. ಎಸ್‌.ಎಂ.ಕೃಷ್ಣ ಇದೀಗ ಕಾಂಗ್ರೆಸ್‌ ಬಿಟ್ಟು ಬಿಜೆಪಿ ಸೇರಿದ್ದಾರೆ. ದೇವೇಗೌಡರು ಏನಾದರೂ ಪಕ್ಷಾಂತರ ಮಾಡಿದ್ದಾರಾ? ಎಂದು ಪ್ರಶ್ನಿಸಿದರು.

ಉಪ ಚುನಾವಣೆಯಲ್ಲಿ 12 ಅನರ್ಹ ಶಾಸಕರನ್ನು ಗೆಲ್ಲಿಸಿದ್ದಾರೆ. ಸಮ್ಮಿಶ್ರ ಸರ್ಕಾರ ಉರುಳಿಸಲು ಸಾಥ್‌ ನೀಡಿದ್ದಾರೆ. ಪ್ರಧಾನಿ ಮೋದಿಯವರು, ಕೊನೆಗಾಲದಲ್ಲಿ ಕೃಷ್ಣ ಅವರಿಗೆ ಘನತೆವೆತ್ತ ಹುದ್ದೆಯನ್ನು ನೀಡಲಿ. ಎಲ್ಲವನ್ನೂ ದೇವರು ನೋಡಿಕೊಳ್ಳುತ್ತಾನೆ. ಕೃಷ್ಣ, ತಂದೆ ಸಮಾನ ಅವರ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ ಎಂದರು.