* ರಮೇಶ್‌ ಜಾರಕಿಹೊಳಿಗೆ ಸಚಿವ ಸ್ಥಾನ ಸದ್ಯಕ್ಕಿಲ್ಲ?* ವಿಷಯ ಕೋರ್ಟಲ್ಲಿದೆ, ಹಸ್ತಕ್ಷೇಪ ಕಷ್ಟ: ವರಿಷ್ಠರು* ಆದರೂ ಫಡ್ನವೀಸ್‌ ಭೇಟಿಯಾಗಿ ರಮೇಶ್‌ ಲಾಬಿ

 ಬೆಂಗಳೂರು(ಜೂ.22): ಅತ್ಯಾಚಾರ ಆರೋಪ ಪ್ರಕರಣದಲ್ಲಿ ಸಿಲುಕಿರುವ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಮತ್ತೆ ಸಚಿವ ಸ್ಥಾನ ನೀಡುವಂತೆ ಪಕ್ಷದ ನಾಯಕರ ಮೇಲೆ ಒತ್ತಡ ತಂತ್ರ ಅನುಸರಿಸಲು ಮುಂದಾದ ಬೆನ್ನಲ್ಲೇ ಸದ್ಯಕ್ಕೆ ಅದು ಈಡೇರುವುದು ಸಾಧ್ಯವಿಲ್ಲ ಎಂಬ ಮಾತು ಬಿಜೆಪಿ ಪಾಳೆಯದಿಂದ ಬಲವಾಗಿ ಕೇಳಿಬಂದಿದೆ. ಆದರೂ ಮನವೊಲಿಕೆ ಯತ್ನ ಕೈಬಿಡದ ಜಾರಕಿಹೊಳಿ ಅವರು, ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಭೇಟಿ ಮಾಡಿ ‘ಲಾಬಿ’ ಮಾಡಿದ್ದಾರೆ.

ಈ ಪ್ರಕರಣ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿರುವುದರಿಂದ ಮತ್ತು ನ್ಯಾಯಾಲಯದ ನಿಗಾ ಇರುವುದರಿಂದ ತರಾತುರಿಯಲ್ಲಿ ಪ್ರಕರಣ ಇತ್ಯರ್ಥಗೊಳಿಸುವುದು ಕಷ್ಟ. ಮೇಲಾಗಿ ತನಿಖೆ ಇನ್ನೂ ಮುಗಿದಿಲ್ಲ. ಹೀಗಾಗಿ, ಜಾರಕಿಹೊಳಿ ಅವರ ಒತ್ತಡಕ್ಕೆ ಮಣಿದು ಪ್ರಕರಣದಲ್ಲಿ ಹಸ್ತಕ್ಷೇಪ ಮಾಡುವುದು ಸರಿಯಲ್ಲ ಎಂಬ ಅಭಿಪ್ರಾಯ ಪಕ್ಷದಲ್ಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಇದೇ ವೇಳೆ ಮುಂಬೈಗೆ ತೆರಳಿರುವ ರಮೇಶ್‌ ಜಾರಕಿಹೊಳಿ ಅವರು ಸೋಮವಾರ ಮಹಾರಾಷ್ಟ್ರದ ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್‌ ಅವರನ್ನು ಭೇಟಿ ಮಾಡಿ ಕೆಲಕಾಲ ಸಮಾಲೋಚನೆ ನಡೆಸಿದರು. ಮಾತುಕತೆಯ ವಿವರಗಳು ಸ್ಪಷ್ಟವಾಗಿ ಲಭ್ಯವಾಗದಿದ್ದರೂ ತಮಗೆ ಮತ್ತೆ ಸಚಿವ ಸ್ಥಾನ ಪಡೆಯಲು ಬೇಕಾದ ತಂತ್ರಗಾರಿಕೆ ಭಾಗವಾಗಿ ಭೇಟಿ ಮಾಡಿದ್ದರು. ಫಡ್ನವೀಸ್‌ ಮೂಲಕ ಪಕ್ಷದ ವರಿಷ್ಠರ ಮನವೊಲಿಸುವ ಪ್ರಯತ್ನ ನಡೆಸಿದ್ದಾರೆ.

ಹಿಂದಿನ ಜೆಡಿಎಸ್‌ ಮತ್ತು ಕಾಂಗ್ರೆಸ್‌ ನೇತೃತ್ವದ ಸಮ್ಮಿಶ್ರ ಸರ್ಕಾರ ಪತನಗೊಳಿಸುವ ವೇಳೆಯೂ ಜಾರಕಿಹೊಳಿ ಅವರು ಮುಂಬೈನಲ್ಲೇ ತಂತ್ರ ರೂಪಿಸಿದ್ದರು. ಆಗಿನಿಂದಲೇ ದೇವೇಂದ್ರ ಫಡ್ನವೀಸ್‌ ಅವರು ಜಾರಕಿಹೊಳಿಗೆ ಆಪ್ತರಾಗಿದ್ದರು. ಹೀಗಾಗಿ, ಈಗಲೂ ಅವರ ಮೂಲಕವೇ ತಮಗೆ ಎದುರಾಗಿರುವ ಸಂಕಷ್ಟನಿವಾರಿಸಿಕೊಳ್ಳಲು ಮುಂದಾಗಿದ್ದಾರೆ ಎನ್ನಲಾಗಿದೆ.

ಪ್ರಕರಣದ ತನಿಖೆ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಬೇಸರಗೊಂಡಿರುವ ಅವರು ಫಡ್ನವೀಸ್‌ ಬಳಿ ತಮ್ಮ ಪರಿಸ್ಥಿತಿಯನ್ನು ವಿವರಿಸಿರುವ ಜಾರಕಿಹೊಳಿ, ಇದು ಅತ್ಯಾಚಾರ ಪ್ರಕರಣವಲ್ಲ. ಸಮ್ಮತಿಯ ಲೈಂಗಿಕತೆ ನಡೆದಿದೆ. ಆದರೂ ಕಳೆದ ಐದು ತಿಂಗಳಿಂದ ತನಿಖೆ ಮುಗಿಯುತ್ತಿಲ್ಲ. ಉದ್ದೇಶಪೂರ್ವಕವಾಗಿಯೇ ವಿಳಂಬ ಮಾಡುತ್ತಿದ್ದಾರೆ ಎಂದು ಫಡ್ನವೀಸ್‌ ಬಳಿ ಆಪಾದಿಸಿದ್ದಾರೆ ಎಂದು ತಿಳಿದು ಬಂದಿದೆ.

ಶೀಘ್ರದಲ್ಲೇ ಇತ್ಯರ್ಥವಾಗಿ ತಮಗೆ ಸಚಿವ ಸ್ಥಾನ ನೀಡದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಬಗ್ಗೆಯೂ ಅವರು ಇಂಗಿತ ವ್ಯಕ್ತಪಡಿಸಿದ್ದಾರೆ ಎಂದು ಅವರ ಆಪ್ತರು ತಿಳಿಸಿದ್ದಾರೆ.