ಮೈಸೂರು[ಡಿ.10]: ರಾಜ್ಯದಲ್ಲಿ ನಡೆದ 15 ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಹೀನಾಯವಾಗಿ ಸೋತಿದ್ದರೂ, ತವರು ಜಿಲ್ಲೆಯ ಹುಣಸೂರು ವಿಧಾನಸಭಾ ಕ್ಷೇತ್ರದಲ್ಲಿ ತಮ್ಮ ‘ಶಿಷ್ಯ‘ ನನ್ನು ಗೆಲ್ಲಿಸಿಕೊಳ್ಳುವಲ್ಲಿ ಮಾಜಿ ಮುಖ್ಯಮಂತ್ರಿ, ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಯಶಸ್ವಿಯಾಗಿದ್ದಾರೆ.

ಬಿಜೆಪಿ ಭರ್ಜರಿ ಗೆಲುವಿನ ಹಿಂದಿನ ಕಾರಣ ಏನು?

ಒಳಜಗಳದಿಂದಾಗಿ 1989ರಿಂದಲೂ ಗೆಲವು ಕಾಣದಿದ್ದ ಕಾಂಗ್ರೆಸ್‌ನಲ್ಲಿ 2004ರ ಚುನಾವಣೆಯ ನಂತರ ಎಸ್‌. ಚಿಕ್ಕಮಾದು ಜೆಡಿಎಸ್‌ ಸೇರಿದರು. ನಂತರ ಅಭ್ಯರ್ಥಿಯ ಕೊರತೆ ಕಾಡಿತ್ತು. ಆಗ ಸಿದ್ದರಾಮಯ್ಯ ಅವರು ಎಚ್‌.ಪಿ. ಮಂಜುನಾಥ್‌ಗೆ ಮೊದಲ ಬಾರಿ ಟಿಕೆಟ್‌ ನೀಡಿದರು. ಮಂಜುನಾಥ್‌ ಅವರ ತಂದೆ ಎಚ್‌.ಎನ್‌. ಪ್ರೇಮಕುಮಾರ್‌ ಈ ಹಿಂದೆ ಅಂದರೆ 1983ರ ಸಾರ್ವತ್ರಿಕ ಚುನಾವಣೆ ಹಾಗೂ 1998ರ ಉಪ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯಾಗಿ ಸೋತಿದ್ದರು. ಆರ್ಯವೈಶ್ಯ ಜನಾಂಗಕ್ಕೆ ಸೇರಿದ ಮಂಜುನಾಥ್‌ ಗೆಲ್ಲುವ ಸಾಧ್ಯತೆಯೇ ಇರಲಿಲ್ಲ. ಆದರೆ ಆ ಬಾರಿ ಜೆಡಿಎಸ್‌ ಅಭ್ಯರ್ಥಿಯಾಗಿದ್ದ ಎಸ್‌. ಚಿಕ್ಕಮಾದು ಮತ್ತು ಬಿಜೆಪಿ ಅಭ್ಯರ್ಥಿಯಾಗಿದ್ದ ಜಿ.ಟಿ. ದೇವೇಗೌಡರ ನಡುವಿನ ಇಬ್ಬರ ಜಗಳದಲ್ಲಿ ಮೂರನೇಯವನಿಗೆ ಲಾಭ ಎಂಬಂತೆ ಗೆದ್ದರು. ಇದಕ್ಕೆ ಸಿದ್ದರಾಮಯ್ಯ ಅವರ ಹಿಂದೆ ಬಲವಾಗಿ ನಿಂತಿದ್ದ ‘ಅಹಿಂದ‘ ಮತಗಳು ಕಾರಣವಾಗಿದ್ದವು.

2013ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್‌ ಅಲೆ ಇತ್ತು. ಸಿದ್ದರಾಮಯ್ಯ ಅವರೇ ಮುಂದಿನ ಸಿಎಂ ಎಂದು ಬಿಂಬಿತರಾಗಿದ್ದರು. ಅಲ್ಲದೇ ಕ್ಷೇತ್ರದಿಂದ ವಲಸೆ ಹೋದ ಜಿ.ಟಿ .ದೇವೇಗೌಡ ಹಾಗೂ ಎಸ್‌. ಚಿಕ್ಕಮಾದು ಅವರು ಕ್ರಮವಾಗಿ ಜೆಡಿಎಸ್‌ ಅಭ್ಯರ್ಥಿಯಾಗಿದ್ದ ಕುರುಬ ಜನಾಂಗದ ಕುಮಾರಸ್ವಾಮಿ ಹಾಗೂ ಬಂಡಾಯ ಅಭ್ಯರ್ಥಿಯಾಗಿದ್ದ ಒಕ್ಕಲಿಗ ಜನಾಂಗದ ಸಿ.ಟಿ. ರಾಜಣ್ಣ ಅವರ ಪರ ಇದ್ದರು. ಹೀಗಾಗಿ ಮಂಜುನಾಥ್‌ ಎರಡನೇ ಬಾರಿ ಸುಲಭವಾಗಿ ಗೆದ್ದಿದ್ದರು.

2018ರಲ್ಲಿ ಮೂರನೇ ಬಾರಿ ಮಂಜುನಾಥ್‌ ಅಭ್ಯರ್ಥಿಯಾದರೂ ಗೆಲ್ಲಲಿಲ್ಲ. ಏಕೆಂದರೆ ಜಿ.ಟಿ. ದೇವೇಗೌಡರ ಬೆಂಬಲದಿಂದ ಒಕ್ಕಲಿಗ, ನಾಯಕ ಹಾಗೂ ಅಲ್ಪಮಟ್ಟಿಗೆ ಕುರುಬ ಮತ್ತಿತರ ಜನಾಂಗದವರ ಮತಗಳನ್ನು ಪಡೆದು ವಿಶ್ವನಾಥ್‌ ಗೆದ್ದಿದ್ದರು. ಆದರೆ ವಿಶ್ವನಾಥ್‌ ರಾಜೀನಾಮೆ ನೀಡಿ, ನಂತರ ಅನರ್ಹಗೊಂಡಿದ್ದರಿಂದ ಎದುರಾದ ಈ ಉಪ ಚುನಾವಣೆ ತೀರಾ ಕಠಿಣವಾಗಿತ್ತು. ಏಕೆಂದರೆ ವಿಶ್ವನಾಥ್‌ಗೆ ಆಡಳಿತರೂಢ ಬಿಜೆಪಿಯ ಬೆಂಬಲ ಇತ್ತು. ಸಿಎಂ ಬಿ.ಎಸ್‌. ಯಡಿಯೂರಪ್ಪ ಅವರ ನಾಮಬಲವಿತ್ತು. ಕಾಂಗ್ರೆಸ್‌ನಿಂದ ಬಿಜೆಪಿಗೆ ಮರಳಿದ ಸಿ.ಎಚ್‌. ವಿಜಯಶಂಕರ್‌ ಅವರಲ್ಲದೇ ಸ್ವತಃ ವಿಶ್ವನಾಥ್‌ ಕೂಡಾ ಕುರುಬ ಜನಾಂಗದವರಾಗಿದ್ದು, ನಾಯಕ ಜನಾಂಗದ ಬಿ. ಶ್ರೀರಾಮುಲು, ದಲಿತ ಜನಾಂಗದ ವಿ. ಶ್ರೀನಿವಾಸ ಪ್ರಸಾದ್‌ ಅವರ ಬೆಂಬಲದಿಂದ ದಡ ಸೇರುತ್ತೇನೆ ಎಂದು ಭಾವಿಸಿದ್ದರು.

ನನ್ನ ನೆರವಿಲ್ಲದೇ ಗೆದ್ದ ಮಗನ ಬಗ್ಗೆ ಖುಷಿಯಿದೆ: ಬಚ್ಚೇಗೌಡ!

ಇದಕ್ಕೆ ಪ್ರತಿತಂತ್ರ ಹೂಡಿದ ಸಿದ್ದರಾಮಯ್ಯ ಡಾ.ಎಚ್‌.ಸಿ. ಮಹದೇವಪ್ಪ, ಯು.ಟಿ. ಖಾದರ್‌ ಅವರಿಗೆ ಉಸ್ತುವಾರಿ ನೀಡಿ, ಪುತ್ರ ಹಾಗೂ ವರುಣ ಶಾಸಕ ಡಾ.ಎಸ್‌. ಯತೀಂದ್ರ, ನಾಯಕ ಜನಾಂಗದ ಪ್ರಭಾವಿ ಮುಖಂಡರಾಗಿದ್ದ ದಿವಂಗತ ಎಸ್‌. ಚಿಕ್ಕಮಾದು ಅವರ ಪುತ್ರ ಹಾಗೂ ಎಚ್‌.ಡಿ. ಕೋಟೆ ಶಾಸಕ ಅನಿಲ್‌, ಚಾಮರಾಜನಗರ ಮಾಜಿ ಸಂಸದ ಆರ್‌. ಧ್ರುವನಾರಾಯಣ ಮತ್ತಿತರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಅಲ್ಲದೇ ಕುರುಬ ಜನಾಂಗದವರ ಸಭೆ ನಡೆಸಿ, ಯಾವುದೇ ಕಾರಣಕ್ಕೂ ಮಂಜುನಾಥ್‌ ಕೈಬಿಡಬಾರದು ಎಂದು ಕೋರಿದ್ದರು. ಎರಡು ಸುತ್ತು ಪ್ರಚಾರ ಕೂಡಾ ನಡೆಸಿದ್ದರು. ಇಲ್ಲಿ ಜೆಡಿಎಸ್‌ ಗೆಲ್ಲುವುದಿಲ್ಲ. ಆದ್ದರಿಂದ ಕಾಂಗ್ರೆಸ್‌ಗೆ ಮತ, ಅನರ್ಹ ವಿಶ್ವನಾತ್‌ ಸೋಲಿಸಿ ಎಂದರು.

ಜೆಡಿಎಸ್‌ನಿಂದ ದೂರವಿರುವ ಚಾಮುಂಡೇಶ್ವರಿ ಕ್ಷೇತ್ರದ ಶಾಸಕರೂ ಆದ ಮಾಜಿ ಸಚಿವ ಜಿ.ಟಿ. ದೇವೇಗೌಡರನ್ನು ಸಂಪರ್ಕಿಸಿ, ಬೆಂಬಲ ಕೋರಿದ್ದರು, ಹೀಗಾಗಿ ಕೊನೆಯ ಎರಡು- ಮೂರು ದಿನ ಜಿಟಿಡಿ ಪುತ್ರ ಜಿ.ಡಿ. ಹರೀಶ್‌ಗೌಡ ಅಖಾಡಕ್ಕಿಳಿದರು. ನಂತರ ಪರಿಸ್ಥಿತಿ ಸಂಪೂರ್ಣ ಬದಲಾಗಿ ಹೋಯಿತು. ನಾವು ಗೆಲ್ಲದಿದ್ದರೂ ಪರವಾಗಿಲ್ಲ, ವಿಶ್ವನಾಥ್‌ ಗೆಲ್ಲಬಾರದು ಎಂಬ ಜೆಡಿಎಸ್‌ ತಂತ್ರಗಾರಿಕೆ ಕಾಂಗ್ರೆಸ್‌ಗೆ ವರವಾಯಿತು. ಜೆಡಿಎಸ್‌ ಬೆಂಬಲಿಗರಲ್ಲಿ ಕೆಲವರು ಪಕ್ಷಕ್ಕೆ ಮತ ಚಲಾಯಿಸಿದರೆ, ಮತ್ತೆ ಕೆಲವರು ವಿಶ್ವನಾಥ್‌ ಗೆಲ್ಲಬಾರದು ಎಂದು ಕಾಂಗ್ರೆಸ್‌ಗೆ ಮತ ಹಾಕಿದರು. ಹೀಗಾಗಿ ಎಚ್‌.ಪಿ. ಮಂಜುನಾಥ್‌ ನಿರೀಕ್ಷೆಗೂ ಮೀರಿ, ಭಾರಿ ಅಂತರದಿಂದ ಜಯ ಗಳಿಸಿದರು.

ವಾರದೊಳಗೆ ಸಂಪುಟ ವಿಸ್ತರಣೆ : ಯಾರಿಗೆ ಸಚಿವ ಸ್ಥಾನ?

-ಹುಣಸೂರಿನಿಂದ ಈವರೆಗೆ ಅತಿ ಹೆಚ್ಚು ಅಂದರೆ ನಾಲ್ಕು ಬಾರಿ ಉಪ ಚುನಾವಣೆ. ನಾಲ್ಕು ಬಾರಿಯೂ ರಾಜ್ಯದಲ್ಲಿ ಆಡಳಿತರೂಢ ಪಕ್ಷದ ಅಭ್ಯರ್ಥಿಗಳೇ ಗೆದ್ದಿದ್ದಾರೆ.

1972 ರಲ್ಲಿ ಡಿ. ಕರಿಯಪ್ಪಗೌಡರ ರಾಜೀನಾಮೆಯಿಂದ ಕಾಂಗ್ರೆಸ್‌ನ ಡಿ. ದೇವರಾಜ ಅರಸು ಗೆದ್ದಿದ್ದರು. 1991ರಲ್ಲಿ ಚಂದ್ರಪ್ರಭ ಲೋಕಸಭೆಗೆ ಆಯ್ಕೆಯಾಗಿದ್ದರಿಂದ ನಡೆದಿದ್ದ ಉಪ ಚುನಾವಣೆಯಲ್ಲಿ ಬಿಜೆಪಿಯ ಸಿ.ಎಚ್‌. ವಿಜಯಶಂಕರ್‌ ಸೋತಿದ್ದರು. ಕಾಂಗ್ರೆಸ್‌ನ ಎಸ್‌. ಚಿಕ್ಕಮಾದು ಗೆದ್ದಿದ್ದರು. 1998 ರಲ್ಲಿ ವಿಜಯಶಂಕರ್‌ ಲೋಕಸಭೆಗೆ ಆಯ್ಕೆಯಾಗಿದ್ದರಿಂದ ಜನತಾದಳದ ಜಿ.ಟಿ. ದೇವೇಗೌಡ ಗೆದ್ದಿದ್ದರು. ಬಂಡಾಯ ಅಭ್ಯರ್ಥಿ ವಿ. ಪಾಪಣ್ಣ ಸೋತಿದ್ದರು. ಅಲ್ಲದೇ ಬಿಜೆಪಿ ಬೆಂಬಲಿತ ಲೋಕಶಕ್ತಿಯ ಭಾರತಿ ಅರಸ್‌ ಕೂಡ ಸೋತಿದ್ದರು.

2019ರ ಉಪ ಚುನಾವಣೆಯಲ್ಲಿ ಬಿಜೆಪಿಯ ಎಚ್‌. ವಿಶ್ವನಾಥ್‌ ಸೋತಿದ್ದಾರೆ. 1991ರ ಉಪ ಚುನಾವಣೆಯಲ್ಲೂ ಎರಡನೇ ಸ್ಥಾನ, ಈಗಲೂ ಎರಡನೇ ಸ್ಥಾನ.

ವಿಜಯಶಂಕರ್‌ 1994ರ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದರು. ನಂತರ ಅವರು ಮೈಸೂರಿನಿಂದ ಎರಡು ಬಾರಿ ಸಂಸದರು, ಮೂರು ಬಾರಿ ಸೋತರು. ಹಾಸನದಲ್ಲೂ ಒಮ್ಮೆ ಸೋತರು. 1998ರ ಉಪ ಚುನಾವಣೆಯಲ್ಲಿ ಗೆದ್ದಿದ್ದ ಜಿ.ಟಿ. ದೇವೇಗೌಡರು ಹುಣಸೂರಿನಿಂದ 2004 ರಲ್ಲಿ ಮತ್ತೆ ಗೆದ್ದಿದ್ದರು. ಈಗಾಗಲೇ ಎರಡು ಬಾರಿ ಗೆದ್ದಿದ್ದ ಮಂಜುನಾಥ್‌ ಈ ಉಪ ಚುನಾವಣೆಯಲ್ಲಿ ಗೆದ್ದಿದ್ದಾರೆ.

ಅವಕಾಶ ಮುಕ್ತವಾಗಿಸಿಕೊಂಡ ಅಪ್ಪ- ಮಕ್ಕಳು:

ಜೆಡಿಎಸ್‌ನಿಂದ ದೂರವಾಗಿರುವ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡರು ಹುಣಸೂರಿನಿಂದ ತಮ್ಮ ಪುತ್ರ ಜಿ.ಡಿ. ಹರೀಶ್‌ ಗೌಡರಿಗೆ ಬಿಜೆಪಿ ಟಿಕೆಟ್‌ ಪಡೆಯಲು ಯತ್ನಿಸಿದ್ದರು. ಆದರೆ ಕೊನೆಕ್ಷಣದಲ್ಲಿ ಕೈ ತಪ್ಪಿತ್ತು. ಇದರಿಂದ ತಟಸ್ಥರಾಗಿ ಉಳಿದಿದ್ದ ಅವರು ಕೊನೆಯ ಎರಡು- ಮೂರು ದಿನ ತಮ್ಮ ’ಕೈ‘ ಚ ಳಕ ತೋರಿಸಿದ್ದಾರೆ. ಇದರಿಂದ ಕಾಂಗ್ರೆಸ್‌ ಗೆದ್ದಿದೆ. ಆ ಮೂಲಕ ಅವರು ತಮ್ಮ ಪುತ್ರನಿಗೆ ಮುಂದೆ ಕಾಂಗ್ರೆಸ್‌ ಟಿಕೆಟ್‌ ಪಡೆಯುವುದಕ್ಕೆ ವೇದಿಕೆ ಸಿದ್ಧಪಡಿಸಿಕೊಂಡಿದ್ದಾರೆ ಎನ್ನಬಹುದು.

ಬಿಜೆಪಿಗೆ ಮಹಾರಾಷ್ಟ್ರ ಹಿನ್ನಡೆ ಮರೆಸಿದ ಗೆಲುವು: ಮುಂದಿನ ಗುರಿ?