ರಾಜ್ಯಸಭೆ ಚುನಾವಣೆ ರೋಚಕ ಘಟ್ಟಕ್ಕೆ, ಎಲ್ಲ ಪಕ್ಷಗಳಿಗೂ ಅಡ್ಡಮತ ಭೀತಿ!

  • 4 ಸ್ಥಾನಗಳಿಗೆ 6 ಮಂದಿ ನಾಮಪತ್ರ ಸಲ್ಲಿಕೆ
  •  ಪರಸ್ಪರರ ಶಾಸಕರನ್ನು ಸೆಳೆಯಲು ಪ್ರಯತ್ನ
  • ಜೆಡಿಎಸ್‌ನಲ್ಲಿ ಅಸಮಾಧಾನಿತ ಶಾಸಕರ ಸಂಖ್ಯೆ ಹೆಚ್ಚು
     
Karnataka Politics 6 candidates contest for 4 seat in rajya sabha election 2022 party face cross vote ckm

ಬೆಂಗಳೂರು (ಜೂ.01): ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಆರು ನಾಮಪತ್ರ ಸಲ್ಲಿಕೆಯಾಗುವ ಮೂಲಕ ಚುನಾವಣೆ ಕುತೂಹಲದ ಘಟ್ಟತಲುಪಿದ್ದು, ಮೂರೂ ಪ್ರಮುಖ ರಾಜಕೀಯ ಪಕ್ಷಗಳಿಗೆ ಅಡ್ಡ ಮತದಾನವಾಗುವ ಭೀತಿ ಎದುರಾಗಿದೆ. ಈಗಾಗಲೇ ತೆರೆಮರೆಯಲ್ಲಿ ಶಾಸಕರನ್ನು ಸೆಳೆಯುವ ಪ್ರಯತ್ನ ಆರಂಭವಾಗಿದ್ದು, ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್‌ ಎರಡೂ ಜೆಡಿಎಸ್‌ನ ಶಾಸಕರಿಗೆ ಬಲೆ ಬೀಸಿವೆ ಎಂಬ ಮಾತು ಕೇಳಿಬಂದಿದೆ.

ಇದರಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯ ಲೆಕ್ಕಾಚಾರ ಅಡಗಿರಲಿದೆ. ಅಂದರೆ, ಮುಂದಿನ ಚುನಾವಣೆಯಲ್ಲಿ ಒಂದು ಪಕ್ಷ ತೊರೆದು ಬೇರೊಂದು ಪಕ್ಷಕ್ಕೆ ಹಾರುವವರು ಈಗಲೇ ತಮ್ಮ ನಿಷ್ಠೆ ಪ್ರದರ್ಶಿಸುವ ನಿರೀಕ್ಷೆಯಿದೆ. ಜೆಡಿಎಸ್‌ನಲ್ಲಿ ಅಸಮಾಧಾನಿತ ಶಾಸಕರ ಸಂಖ್ಯೆ ಹೆಚ್ಚಾಗಿರುವುದರಿಂದ ಅಂಥವರು ಈಗ ಪಕ್ಷದ ಸೂಚನೆ ಉಲ್ಲಂಘಿಸಿ ತಮ್ಮ ಒಲವಿನ ಪಕ್ಷದೆಡೆಗೆ ವಿಶ್ವಾಸ ತೋರಬಹುದು ಎನ್ನಲಾಗುತ್ತಿದೆ. ಒಂದು ವೇಳೆ ಯಾವುದೇ ಅಡ್ಡ ಮತದಾನ ನಡೆಯದಿದ್ದರೆ ಜೆæಡಿಎಸ್‌ ಅಭ್ಯರ್ಥಿಗೆ ಗೆಲುವು ಸಿಗುವ ಸಾಧ್ಯತೆಯಿದೆ.

Rajya Sabha Election ಜೆಡಿಎಸ್‌ನ ಕುಪೇಂದ್ರ ರೆಡ್ಡಿ ಆಸ್ತಿ 817 ಕೋಟಿ!

ಶುಕ್ರವಾರ ನಾಮಪತ್ರ ವಾಪಸ್‌ ಪಡೆಯಲು ಕೊನೆಯ ದಿನವಾಗಿರುವುದರಿಂದ ಅಂದು ನಾಲ್ಕನೇ ಸ್ಥಾನಕ್ಕೆ ಸ್ಪರ್ಧಿಸಿರುವ ಮೂವರು ಅಭ್ಯರ್ಥಿಗಳ ಪೈಕಿ ಯಾರಾದರೂ ವಾಪಸ್‌ ಪಡೆದಲ್ಲಿ ಕಣದ ಚಿತ್ರಣ ಬದಲಾಗಲಿದೆ. ಅಂದು ಮಧ್ಯಾಹ್ನ 3 ಗಂಟೆ ನಂತರ ರಾಜ್ಯಸಭಾ ಚುನಾವಣೆಯ ಸ್ಪಷ್ಟಚಿತ್ರಣ ಹೊರಬೀಳಲಿದೆ.

ವಿಧಾನಸಭೆಯ ಸಂಖ್ಯಾಬಲದ ಆಧಾರದ ಮೇಲೆ ಬಿಜೆಪಿ ಎರಡು ಮತ್ತು ಕಾಂಗ್ರೆಸ್‌ ಒಂದು ಸ್ಥಾನವನ್ನು ನಿರಾಯಾಸವಾಗಿ ಗೆಲ್ಲಬಹುದಾಗಿದೆ. ನಾಲ್ಕನೇ ಸ್ಥಾನ ಗೆಲ್ಲುವಷ್ಟುಮತಗಳ ಬಲ ಜೆಡಿಎಸ್‌ ಸೇರಿದಂತೆ ಯಾವುದೇ ಪಕ್ಷಕ್ಕೂ ಇಲ್ಲ. ಆದರೂ ಮೂರೂ ಪಕ್ಷಗಳು ಈ ನಾಲ್ಕನೇ ಸ್ಥಾನಕ್ಕೆ ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಅದೃಷ್ಟಪರೀಕ್ಷೆಗಿಳಿದಿವೆ.

ಒಬ್ಬ ಅಭ್ಯರ್ಥಿ ಗೆಲ್ಲುವುದಕ್ಕೆ ಕನಿಷ್ಠ 45 ಮತಗಳ ಅಗತ್ಯವಿದೆ. ಬಿಜೆಪಿಗೆ ತಮ್ಮ ಮೊದಲ ಹಾಗೂ ಎರಡನೆ ಆದ್ಯತೆಯ ಅಭ್ಯರ್ಥಿಗಳಾದ ನಿರ್ಮಲಾ ಸೀತಾರಾಮನ್‌ ಹಾಗೂ ಜಗ್ಗೇಶ್‌ ಅವರನ್ನು ಗೆಲ್ಲಿಸಿಕೊಳ್ಳುವುದು ಮುಖ್ಯ. ಅದೇ ರೀತಿ ಕಾಂಗ್ರೆಸ್‌ಗೆ ಮೊದಲ ಆದ್ಯತೆಯ ಜೈರಾಂ ರಮೇಶ್‌ ಅವರನ್ನು ಗೆಲ್ಲಿಸಿಕೊಳ್ಳುವುದು ಪ್ರತಿಷ್ಠೆಯ ವಿಷಯ. ಬಿಜೆಪಿಗೆ ಲೆಹರ್‌ ಸಿಂಗ್‌ ಸಿರೋಯ ಮತ್ತು ಕಾಂಗ್ರೆಸ್‌ಗೆ ಮನ್ಸೂರ್‌ ಖಾನ್‌ ಹೆಚ್ಚುವರಿ ಅಭ್ಯರ್ಥಿ ಇದ್ದಂತೆ.

ಹೀಗಾಗಿ, ಕನಿಷ್ಠ ಮತಗಳಿಗಿಂತ ಒಂದು ಅಥವಾ ಎರಡು ಮತಗಳನ್ನು ಹೆಚ್ಚಿಗೆ ಇರುವಂತೆ ಆಯಾ ಪಕ್ಷಗಳು ನಿಗದಿ ಮಾಡಲಿವೆ. ಆದ್ಯತೆಯ ಅಭ್ಯರ್ಥಿಗಳಿಗೆ ಬೇಕಾದಷ್ಟುಮತಗಳನ್ನು ನಿಗದಿಪಡಿಸಿದ ಬಳಿಕ ಉಳಿಯುವ ಮತಗಳನ್ನು ಹೆಚ್ಚುವರಿ ಅಭ್ಯರ್ಥಿಗಳಿಗೆ ನೀಡಲಿವೆ. ಆದರೆ, ಜೆಡಿಎಸ್‌ಗೆ ಈ ಸಮಸ್ಯೆ ಇಲ್ಲ. ಒಬ್ಬ ಅಭ್ಯರ್ಥಿ ಗೆಲ್ಲಲು ಬೇಕಾದಷ್ಟುಮತಗಳು ಇಲ್ಲದಿದ್ದರೂ ತನ್ನ ಅಭ್ಯರ್ಥಿಯನ್ನಾಗಿ ಕುಪೇಂದ್ರ ರೆಡ್ಡಿ ಅವರನ್ನು ಕಣಕ್ಕಿಳಿಸಿದೆ. ಆ ಪಕ್ಷದ ಎಲ್ಲ ಮತಗಳೂ ರೆಡ್ಡಿ ಅವರಿಗೇ ಲಭಿಸಬಹುದು.

3ನೇ ಸ್ಥಾನದ ಫೈಟ್‌ನಲ್ಲಿ ಗೆಲುವು ಖಚಿತ ; ಗೆಲುವಿನ ಸೂತ್ರ ಬಿಚ್ಚಿಟ್ಟ ಲೆಹರ್‌ ಸಿಂಗ್

ಮೂರು ಪಕ್ಷಗಳೂ ಮತದಾರರಾಗಿರುವ ತಮ್ಮ ಶಾಸಕರಿಗೆ ವಿಪ್‌ ಜಾರಿಗೊಳಿಸಿ ಪಕ್ಷದ ಅಧಿಕೃತ ಅಭ್ಯರ್ಥಿಗೇ ಮತ ಚಲಾಯಿಸುವಂತೆ ಸೂಚಿಸಲಿವೆ. ಮೇಲಾಗಿ ಇದು ಗೌಪ್ಯ ಮತದಾನವಲ್ಲ. ಚಲಾಯಿಸಿದ ಮತಪತ್ರವನ್ನು ಪೆಟ್ಟಿಗೆಗೆ ಹಾಕುವ ಮೊದಲು ಪಕ್ಷದ ಪ್ರತಿನಿಧಿಗೆ ತೋರಿಸಬೇಕಾಗುತ್ತದೆ. ಯಾರು ಅಡ್ಡ ಮತದಾನ ಮಾಡಿದರೂ ಸ್ಪಷ್ಟವಾಗಿ ಗೊತ್ತಾಗುತ್ತದೆ. ಪಕ್ಷದ ವಿಪ್‌ ಉಲ್ಲಂಘಿಸಿ ಬೇರೊಬ್ಬರಿಗೆ ಮತ ಚಲಾಯಿಸಿದ ಪ್ರಸಂಗಗಳು ಹಿಂದೆ ನಡೆದಿವೆ. ಈ ಬಾರಿಯೂ ಅದೇ ಪುನರಾವರ್ತನೆಯಾಗುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ.

ವಿಧಾನಸಭೆಯಲ್ಲಿ ಬಿಜೆಪಿಯ ಸಂಖ್ಯಾಬಲ 119. ಬಿಎಸ್‌ಪಿ ಶಾಸಕ ಎನ್‌.ಮಹೇಶ್‌ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಪಕ್ಷೇತರ ಶಾಸಕ ನಾಗೇಶ್‌ ಬಿಜೆಪಿ ಜತೆ ಗುರುತಿಸಿಕೊಂಡಿದ್ದಾರೆ. ಹೀಗಾಗಿ, ಸ್ಪೀಕರ್‌ ಅವರನ್ನೂ ಸೇರಿಸಿದರೆ ಬಿಜೆಪಿಯ ಬಲ 122ಕ್ಕೆ ಏರುತ್ತದೆ. ಅದೇ ರೀತಿ ಕಾಂಗ್ರೆಸ್‌ ಸಂಖ್ಯಾಬಲ 69. ಪಕ್ಷೇತರ ಶಾಸಕ ಶರತ್‌ ಬಚ್ಚೇಗೌಡ ಕಾಂಗ್ರೆಸ್‌ ಸೇರ್ಪಡೆಯಾಗಿದ್ದಾರೆ. ಅಲ್ಲಿಗೆ ಕಾಂಗ್ರೆಸ್‌ ಬಲ 70ಕ್ಕೆ ತಲುಪುತ್ತದೆ.

ಕನಿಷ್ಠ ಮತಗಳ ಚಲಾವಣೆ ಲೆಕ್ಕಕ್ಕೆ ಹಿಡಿದರೆ ಬಿಜೆಪಿ ತನ್ನ ಮೊದಲ ಎರಡು ಅಭ್ಯರ್ಥಿಗಳಿಗೆ ತಲಾ 46 ಮತಗಳನ್ನು ಹಂಚಿಕೆ ಮಾಡಿದರೂ ಹೆಚ್ಚುವರಿಯಾಗಿ 30 ಮತಗಳು ಉಳಿಯಲಿವೆ. ಅವುಗಳನ್ನು ಪಕ್ಷದ ಮೂರನೇ ಅಭ್ಯರ್ಥಿ ಲೆಹರ್‌ ಸಿಂಗ್‌ ಸಿರೋಯ ಅವರಿಗೆ ನೀಡಬಹುದಾಗಿದೆ. ಕಾಂಗ್ರೆಸ್‌ ತನ್ನ ಮೊದಲ ಅಭ್ಯರ್ಥಿಗೆ 46 ಮತ ಹಂಚಿಕೆ ಮಾಡಿದರೂ ಹೆಚ್ಚುವರಿಯಾಗಿ 24 ಮತಗಳು ಉಳಿದುಕೊಳ್ಳುತ್ತವೆ. ಅವುಗಳನ್ನು ತನ್ನ ಎರಡನೆಯ ಅಭ್ಯರ್ಥಿ ಮನ್ಸೂರ್‌ ಖಾನ್‌ಗೆ ನೀಡಬಹುದು. ಜೆಡಿಎಸ್‌ ತನ್ನ 32 ಶಾಸಕರ ಮತಗಳನ್ನೂ ಪಕ್ಷದ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಅವರಿಗೇ ನೀಡುವ ಅವಕಾಶವಿದೆ.

ಮೇಲ್ನೋಟಕ್ಕೆ ನೋಡಿದರೆ ನಾಲ್ಕನೇ ಸ್ಥಾನದ ಅಭ್ಯರ್ಥಿಗಳ ಪೈಕಿ ಜೆಡಿಎಸ್‌ ಅಭ್ಯರ್ಥಿಗೆ ಹೆಚ್ಚಿನ ಮತಗಳು ಲಭಿಸುವ ಅವಕಾಶ ಹೆಚ್ಚಿದೆ. ಆದರೆ, ಹಾಗಾಗಲು ಬಿಜೆಪಿ ಮತ್ತು ಕಾಂಗ್ರೆಸ್‌ ಬಿಡುವ ಸಾಧ್ಯತೆ ಕಡಮೆ.

ವಿಧಾನಸಭೆಯ ಬಲಾಬಲ
ಬಿಜೆಪಿ- 119
ಕಾಂಗ್ರೆಸ್‌- 69
ಜೆಡಿಎಸ್‌- 32
ಬಿಎಸ್‌ಪಿ- 01
ಪಕ್ಷೇತರ- 02
ಸ್ಪೀಕರ್‌- 01
ಒಟ್ಟು- 224
 

Latest Videos
Follow Us:
Download App:
  • android
  • ios