* ಭದ್ರಕೋಟೆಯಲ್ಲಿ ಸೋತ ಜೆಡಿಎಸ್* ಮೊದಲ ಬಾರಿ ದಕ್ಷಿಣ ಪದವಿ ಕ್ಷೇತ್ರ ಗೆದ್ದ ಕಾಂಗ್ರೆಸ್* ಕಾಂಗ್ರೆಸ್‌ನ ಮಧುಮಾದೇಗೌಡಗೆ ಜಯ
ಮೈಸೂರು(ಜೂ.17): ಮೈಸೂರು, ಚಾಮರಾಜನಗರ, ಮಂಡ್ಯ ಹಾಗೂ ಹಾಸನ ಜಿಲ್ಲೆಗಳನ್ನೊಳಗೊಂಡ ದಕ್ಷಿಣ ಪದವೀಧರ ಕ್ಷೇತ್ರದಿಂದ ವಿಧಾನ ಪರಿಷತ್‌ಗೆ ನಡೆದ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್ ‘ಭದ್ರಕೋಟೆ’ಯನ್ನು ಕಾಂಗ್ರೆಸ್ ಛಿದ್ರಮಾಡಿ ಇದೇ ಮೊದಲ ಬಾರಿಗೆ ‘ಕೈ’ವಶ ಮಾಡಿಕೊಂಡಿದೆ.
ಈ ಪದವೀಧರ ಕ್ಷೇತ್ರಕ್ಕೆ 1992ಕ್ಕಿಂತ ಮೊದಲು ಕೊಡಗು, ದಕ್ಷಿಣ ಕನ್ನಡ ಜಿಲ್ಲೆಗಳೂ, ಅದಕ್ಕೂ ಮೊದಲು ತುಮಕೂರು ಜಿಲ್ಲೆ ಕೂಡ ಒಳಪಡುತ್ತಿದ್ದವು. ಆಗ ನೈಋುತ್ಯ ಪದವೀಧರ ಕ್ಷೇತ್ರ ಎಂದು ಕರೆಯಲಾಗುತ್ತಿತ್ತು. 70ರ ದಶಕದ ನಂತರ ಈ ಕ್ಷೇತ್ರದಿಂದ ನಡೆದಿರುವ ಚುನಾವಣೆಯಲ್ಲಿ ಜನಸಂಘ, ಬಿಜೆಪಿ, ಜನತಾ ಪರಿವಾರದ ಅಭ್ಯರ್ಥಿಗಳ ನಡುವೆಯೇ ಪೈಪೋಟಿ ಇತ್ತು. ಕಾಂಗ್ರೆಸ್ ಯಾವತ್ತೂ ಗೆದ್ದಿರಲಿಲ್ಲ. 1992ರಲ್ಲಿ ಕ್ಷೇತ್ರವನ್ನು ಮೈಸೂರು, ಮಂಡ್ಯ, ಚಾಮರಾಜನಗರ ಹಾಗೂ ಹಾಸನ ಜಿಲ್ಲೆಗಳಿಗೆ ಸೀಮಿತಗೊಳಿಸಿ, ದಕ್ಷಿಣ ಪದವೀಧರ ಕ್ಷೇತ್ರ ಎಂದು ಪರಿವರ್ತಿಸಲಾಯಿತು. 1992ರಲ್ಲಿ ಬಿಜೆಪಿಯ ಬಿ.ಆರ್.ಕೃಷ್ಣಮೂರ್ತಿ, 1997ರಲ್ಲಿ ಕೃಷ್ಣಮೂರ್ತಿ ಅವರ ನಿಧನದಿಂದಾಗಿ ನ‚ಡೆದ ಉಪ ಚುನಾವಣೆ ಮತ್ತು 1998ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿಯ ಗೋ.ಮಧುಸೂದನ್, 2004ರಲ್ಲಿ ಜೆಡಿಎಸ್‌ನ ಕೆ.ಟಿ. ಶ್ರೀಕಂಠೇಗೌಡ, 2010ರಲ್ಲಿ ಗೋ.ಮಧುಸೂದನ್, 2016ರಲ್ಲಿ ಜೆಡಿಎಸ್‌ನ ಕೆ.ಟಿ.ಶ್ರೀಕಂಠೇಗೌಡ ಗೆದ್ದಿದ್ದರು.
ಈ ಬಾರಿ ಜೆಡಿಎಸ್‌ನಿಂದ ರಾಜ್ಯ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಎಚ್.ಕೆ. ರಾಮು, ಬಿಜೆಪಿಯಿಂದ ಮೈ.ವಿ.ರವಿಶಂಕರ್ ಹಾಗೂ ಕಾಂಗ್ರೆಸ್‌ನಿಂದ ಕಾವೇರಿ ಹೋರಾಟಗಾರ ದಿವಂಗತ ಜಿ. ಮಾದೇಗೌಡರ ಪುತ್ರ ಜಿ.ಎಂ. ಮಧು ಅವರಿಗೆ ಟಿಕೆಟ್ ನೀಡಲಾಗಿತ್ತು. ಜೆಡಿಎಸ್ ಎಂಎಲ್ಸಿ ಮರಿತಿಬ್ಬೇಗೌಡ ಅವರು ಬಹಿರಂಗವಾಗಿಯೇ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ಘೋಷಿಸಿದ್ದು ಮಧು ಅವರ ಗೆಲುವಿಗೆ ಪೂರಕವಾಯಿತು.
ಮಧು ಜಿ.ಮಾದೇಗೌಡ ಗೆಲುವು ಖುಷಿ ತಂದಿದೆ. ನನ್ನ ಬಂಡಾಯದಿಂದ ಎಚ್.ಕೆ.ರಾಮುಗೆ ಸೋಲಾಗಿದೆ ಎನ್ನಲಾರೆ. ನಾನೊಬ್ಬ ಸಾಮಾನ್ಯ ಕಾರ್ಯಕರ್ತ. ನಿಷ್ಠಾವಂತ ಕಾರ್ಯಕರ್ತ ಕೀಲಾರ ಜಯರಾಂ ಅವರಿಗೆ ಟಿಕೆಟ್ ತಪ್ಪಿದ್ದರಿಂದ ಬೇಸರಗೊಂಡು ಕಾಂಗ್ರೆಸ್ ಪರ ಪ್ರಚಾರ ಮಾಡಬೇಕಾಯಿತು. ದಕ್ಷಿಣ ಪದವೀಧರರ ಕ್ಷೇತ್ರದಲ್ಲಿ ಜೆæಡಿಎಸ್ ಅಭ್ಯರ್ಥಿ ಎಚ್.ಕೆ.ರಾಮು ಸೋಲಿನ ಹೊಣೆಯನ್ನು ಪಕ್ಷದ ವರಿಷ್ಠರು, ನಾಯಕರು ಹೊರಬೇಕು.
- ಮರಿತಿಬ್ಬೇಗೌಡ, ಎಂಎಲ್ಸಿ
ನಾನು ನಿರೀಕ್ಷಿಸಿದಷ್ಟುಮತಗಳು ಬರಲಿಲ್ಲ. ನಾನು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆ ಮಾಡಿದ್ದೇನೆ. ಆಡಳಿತ ವಿರೋಧಿ ಅಲೆ ಇದೆ ಎಂದು ಹೇಳಲು ಸಾಧ್ಯವಿಲ್ಲ.
- ಮೈ.ವಿ.ರವಿಶಂಕರ್, ಬಿಜೆಪಿ ಪರಾಜಿತ ಅಭ್ಯರ್ಥಿ
