ತುಮಕೂರು, (ಜ.06): ವಿಧಾನ ಪರಿಷತ್ ಸದಸ್ಯ ಎಂಟಿಬಿ ನಾಗರಾಜ್​, ಆರ್​​.ಶಂಕರ್ ಹಾಗೂ ಶಾಸಕ ಮುನಿರತ್ನ ಅವರಿಗೆ ಸಚಿವ ಸ್ಥಾನ ನೀಡಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಗೃಹ ಸಚಿವ ಅಮಿತ್ ಶಾ ಅನುಮತಿ ನೀಡಿದ್ದಾರೆ. ಸಂಕ್ರಾತಿ ಬಳಿಕ ಸಂಪುಟ ವಿಸ್ತರಣೆಯಾಗಲಿದೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ತಿಳಿಸಿದ್ದಾರೆ.

ತುಮಕೂರಿನಲ್ಲಿ ಇಂದು (ಬುಧವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಜೊತೆ ಕೈ ಜೋಡಿಸಿದವರಿಗೆ ಸಚಿವ ಸ್ಥಾನ ಕೊಡಲು ನಮ್ಮ ಮುಖ್ಯಮಂತ್ರಿಗಳು ಒಪ್ಪಿಗೆ ನೀಡಿದ್ದಾರೆ. ಜೊತೆಗೆ ರಾಷ್ಟ್ರೀಯ ಅಧ್ಯಕ್ಷರು, ಪ್ರಧಾನ ಮಂತ್ರಿಗಳು ಎಲ್ಲರೂ ಒಪ್ಪಿದ್ದಾರೆ. ಸಚಿವ ಸ್ಥಾನ ಕೊಡಲು ಯಾವುದೇ ಸಮಸ್ಯೆಯಿಲ್ಲ. ಸಚಿವ ಸ್ಥಾನ ನೀಡುವಂತೆ ನಾವೂ ಕೂಡ ಹೇಳಿದ್ದೇವೆ. ಸರ್ಕಾರ ರಚನೆಯಲ್ಲಿ ಕೈಜೋಡಿಸಿದವರಿಗೆ ಸಚಿವ ಸ್ಥಾನ ನೀಡುವುದು ಖಚಿತ ಎಂದು ಸ್ಪಷ್ಟಪಡಿಸಿದರು.

ಸಭೆ ಬಳಿಕ ರಾಜ್ಯ ಬಿಜೆಪಿ ಉಸ್ತುವಾರಿ ಮಹತ್ವದ ಘೋಷಣೆ: ಸಿಎಂ, ಸಚಿವಾಕಾಂಕ್ಷಿಗಳಿಗೆ ಬಿಗ್ ಶಾಕ್

ಧನುರ್ಮಾಸದ ಹಿನ್ನೆಲೆಯಲ್ಲಿ ಸಂಪುಟ ವಿಸ್ತರಣೆಗೆ ಕಾಲಾವಕಾಶ ಕೂಡಿ ಬಂದಿಲ್ಲ. ಸಂಕ್ರಾಂತಿ ನಂತರ ಮಾಡಬಹುದು ಅಥವಾ ಸಂಕ್ರಾಂತಿ ಮುಂಚೆನೆ  ಮಾಡಬಹುದು.‌ ಅದು ಮುಖ್ಯಮಂತ್ರಿಗಳ ವಿವೆಚನೆಗೆ ಬಿಟ್ಟಿದ್ದು ಎಂದು ಸ್ಪಷ್ಟಪಡಿಸಿದರು.

ಕುರುಬ ಸಮುದಾಯವನ್ನು ಎಸ್.ಟಿ. ಪಟ್ಟಿಗೆ ಸೇರಿಸುವ ಸಂಬಂಧ ಸಮಾಜದ ಮುಖಂಡರು, ರಾಜಕೀಯ ನಾಯಕರ ಒತ್ತಾಯವಿದೆ.ಈ ಸಂಬಂಧ ಕೇಂದ್ರ ನಾಯಕರ ಜತೆಗೂ ಸಾಕಷ್ಟು ಮಾತುಕತೆ ನಡೆಸಲಾಗಿದೆ. ನಮ್ಮ ಸಮಾಜದ ಹಿರಿಯ ಮುಖಂಡರ ಜತೆ ನಾವಿದ್ದೇವೆ ವಿಪಕ್ಷ ನಾಯಕ ಸಿದ್ದರಾಮಯ್ಯ ಕುರುಬ ಹೋರಾಟಕ್ಕೆ ಬೆಂಬಲ ನೀಡಿಲ್ಲ ಎನ್ನುವ ವಿಚಾರವನ್ನು ಅವರನ್ನೇ ಪ್ರಶ್ನಿಸಬೇಕು ಎಂದರು.

ಕುರುಬ ಜಾತಿಯನ್ನು ಎಸ್.ಟಿ ಪಟ್ಟಿಗೆ ಸೇರಿಸುವ ವಿಚಾರಕ್ಕೆ ಆರ್.ಎಸ್.ಎಸ್ ಕೈವಾಡದ ಆರೋಪ ಸತ್ಯಕ್ಕೆ ದೂರವಾದದ್ದು. ನಾವು ನಮ್ಮ ಹಕ್ಕನ್ನು ಪ್ರತಿಪಾದಿಸುತ್ತಿದ್ದೇವೆ. ಮೀಸಲಾತಿ ಸಿಗುವವರೆಗೆ ಹೋರಾಡುತ್ತೇವೆ ಎಂದು ಹೇಳಿದರು.