ಬೆಂಗಳೂರು, (ಜುಲೈ.17): ಕೋವಿಡ್19 ನಿಯಮಗಳನ್ನ ಉಲ್ಲಂಘಿಸುವ ರಾಜಕಾರಣಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕರ್ನಾಟಕ ಹೈಕೋರ್ಟ್, ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.

ರಾಜ್ಯದ ಅನೇಕ ರಾಜಕಾರಣಿಗಳು ಸಾರ್ವಜನಿಕವಾಗಿ ಯಾವುದೇ ಸಾಮಾಜಿಕ ಅಂತರ ಪಾಲನೆ ಮಾಡುತ್ತಿಲ್ಲ, ಮಾಸ್ಕ್ ಧರಿಸುತ್ತಿಲ್ಲ ಎಂಬಿತ್ಯಾದಿ ಆರೋಪಗಳು ಬಹಳಷ್ಟು ಕೇಳಿಬರುತ್ತಲೇ ಇವೆ. ರಾಜ್ಯ ಉಚ್ಚ ನ್ಯಾಯಾಲಯ ಈ ಆರೋಪಗಳನ್ನ ಗಂಭೀರವಾಗಿ ಪರಿಗಣಿಸಿದ್ದು, ಕೊರೋನಾ ನಿಯಮಗಳನ್ನ ಉಲ್ಲಂಘಿಸುವ ರಾಜಕಾರಣಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆದೇಶ ನೀಡಿದೆ.

ಡಿಕೆಶಿ, ಶ್ರೀರಾಮುಲು, ಪರಮೇಶ್ವರ್ ನಾಯ್ಕ್, ರಾಘವೇಂದ್ರ ರಾಜಕುಮಾರ್ ವಿರುದ್ಧ ದೂರು

ಕೊರೋನಾ ಹರಡುವಿಕೆ ಬಗ್ಗೆ ರಾಜಕಾರಣಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆಂದು ಆರೋಪಿಸಿ ವಕೀಲರಿಂದ ಹೈಕೋರ್ಟ್ ಅರ್ಜಿ ಸಲ್ಲಿಕೆಯಾಗಿತ್ತು. ಈ ಹಿಂದೆ ಡಿಕೆ ಶಿವಕುಮಾರ್, ಕಾಂಗ್ರೆಸ್ ಶಾಸಕ ಪರಮೇಶ್ವರ್ ನಾಯ್ಕ್ ಮತ್ತು ಆರೋಗ್ಯ ಸಚಿವ ಶ್ರೀರಾಮುಲು ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ನು ಉಲ್ಲಂಘನೆ ಮಾಡಿದ್ದಾರೆ ಎಂದು ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು.

ಇಂದು (ಶುಕ್ರವಾರ) ಇವೆಲ್ಲಾ ಅರ್ಜಿಗಳನ್ನು ಗಮನಿಸಿದ ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎ.ಎಸ್. ಒಕಾ, ನ್ಯಾ. ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ, ವಿಪತ್ತು ನಿರ್ವಹಣಾ ಕಾಯ್ದೆಯಡಿ ಕ್ರಮಕ್ಕೆ ಸೂಚಿಸಿದೆ. ಎಷ್ಟೇ ಪ್ರಭಾವಿಯಾಗಿದ್ದರೂ ಕಠಿಣ ಕ್ರಮ ಕೈಗೊಳ್ಳಿ ಎಂದು ಕೋರ್ಟ್, ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ.