ಚಿಕ್ಕಬಳ್ಳಾಪುರ[ಡಿ03]: ಚಿಕ್ಕಬಳ್ಳಾಪುರ ಉಪಚುನಾವಣೆ ಹಿನ್ನೆಲೆಯಲ್ಲಿ ಮಂಚೇನಹಳ್ಳಿ ಸಮೀಪ ನಿರ್ಮಿಸಿರುವ ಚೆಕ್‌ಪೋಸ್ಟ್‌ನಲ್ಲಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರ ಕಾರು ಪರಿಶೀಲಿಸಲು ಮುಂದಾದ ಅಧಿಕಾರಿಗೆ ಸಿದ್ದರಾಮಯ್ಯ ಅವರು ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡ ಘಟನೆ ಸೋಮವಾರ ನಡೆದಿದೆ.

ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಆಂಜಿನಪ್ಪ ಪರ ಪ್ರಚಾರದಲ್ಲಿ ಭಾಗವಹಿಸಲು ಸಿದ್ದರಾಮಯ್ಯ ಆಗಮಿಸಿದ್ದರು. ಮಂಚೇನಹಳ್ಳಿಯಲ್ಲಿ ಪ್ರಚಾರ ಮುಗಿಸಿ ಚಿಕ್ಕಬಳ್ಳಾಪುರಕ್ಕೆ ಬರುವ ವೇಳೆ ಚೆಕ್‌ಪೋಸ್ಟ್‌ನಲ್ಲಿ ಕರ್ತವ್ಯದಲ್ಲಿದ್ದ ಅಧಿಕಾರಿ ಸಿದ್ದರಾಮಯ್ಯ ಅವರ ಕಾರು ಪರಿಶೀಲನೆಗೆ ಮುಂದಾಗಿದ್ದಾರೆ.

ಈ ಸಂದರ್ಭದಲ್ಲಿ ಸಿದ್ದರಾಮಯ್ಯ, ಏಯ್‌ ಬಾರಯ್ಯಾ, ಯಾರದಾದರೂ ಏನಾದರೂ ಹಿಡಿದಿದ್ದೀರಾ ಎಂದು ಪ್ರಶ್ನಿಸಿದರು. ಇದಕ್ಕೆ ಚುನಾವಣಾಧಿಕಾರಿ ಪ್ರತಿಕ್ರಿಯಿಸಿ ಹೌದು ಸರ್‌ .5 ಲಕ್ಷ ನಗದು ಸಿಕ್ಕಿದೆ ಎಂದರು. ಸಿಕ್ಕಿರುವುದು ಯಾರಿಗೆ ಸೇರಿದ ಹಣ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರೆ, ಚುನಾವಣಾಧಿಕಾರಿ ಯಾರೋ ಗ್ರಾನೈಟ್‌ ಅವರಿಗೆ ಸೇರಿದ್ದು ಸರ್‌ ಎಂದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ಸುಧಾಕರ್‌ ಅವರದ್ದು ಯಾವುದಾದರೂ ಹಿಡಿದಿದ್ದೀರಾ ಎಂದು ಕೇಳಿದಾಗ, ಇಲ್ಲ ಯಾವುದು ಬಂದಿಲ್ಲ ಸರ್‌ ಎಂದರು. ಇದರಿಂದ ಸಿಡಿಮಿಡಿಗೊಂಡ ಸಿದ್ದರಾಮಯ್ಯ ನಡಿ ನಡಿ, ನನ್ನ ಗಾಡೀಲಿ ಏನಿದೆ ಮಣ್ಣಂಗಟ್ಟಿಎಂದು ಹೇಳುವ ಮೂಲಕ ಪರಿಶೀಲನೆಗೂ ಕಾಯದೆ ಮುಂದೆ ನಡೆದರು.