ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಆಪರೇಷನ್ ಕಮಲದ ಆಡಿಯೋ ಭಾರೀ ಸದ್ದು ಮಾಡುತ್ತಿದೆ. ಈ ಆಡಿಯೋ ಬಗ್ಗೆ ತನಿಖೆಯಾಗಬೇಕೆಂದು ಮಾಜಿ ಸಿಎಂ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹಾಗೂ ಜೆಡಿಎಸ್ ಶಾಸಕನ ಪುತ್ರ ಶರಣುಗೌಡ ನಡುವಿನ ಸಂಭಾಷಣೆಯ ಆಡಿಯೋ ಕ್ಲಿಪ್ಪನ್ನು ಕಳೆದ ಶುಕ್ರವಾರ ಬಜೆಟ್ ಮಂಡನೆಗೆ ಮುನ್ನ ಸಿಎಂ ಎಚ್ ಡಿ ಕುಮಾರಸ್ವಾಮಿ  ಬಿಡುಗಡೆ ಮಾಡಿದ್ದರು.

ಮೊದಲು ಆಪರೇಷನ್ ಕಮಲ, ಹಾಗೂ ಆಡಿಯೋ ಕ್ಲಿಪ್ ಆರೋಪಗಳನ್ನು ನಿರಾಕರಿಸಿದ್ದ ಯಡ್ಡಿಯೂರಪ್ಪ, ಅದು ಸತ್ಯವಾದಲ್ಲಿ ತಾನು ರಾಜಕೀಯ ನಿವೃತ್ತಿ ಘೋಷಿಸುವುದಾಗಿ ಪ್ರತಿಕ್ರಿಯಿಸದ್ದರು.

ಭಾನುವಾರ ‘ಆಡಿಯೋ’ ರಾಜಕಾರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ತಾನು ಶರಣುಗೌಡನ ಜೊತೆ ಮಾತನಾಡಿರುವುದು ಹೌದು ಎಂದು ಯಡಿಯೂರಪ್ಪ ಒಪ್ಪಿಕೊಂಡಿದ್ದರು.ಆದರೆ ಆ ಆಡಿಯೋ ಕ್ಲಿಪ್ ಸಾಚಾವಲ್ಲ. ಅದನ್ನು ತಿರುಚಿ, ತಮಗೆ ಬೇಕಾದ ರೀತಿಯಲ್ಲಿ ಸಂಭಾಷಣೆಯನ್ನು ಸಿದ್ಧಪಡಿಸಲಾಗಿದೆ ಎಂದು ಅವರು ಹೇಳಿದ್ದರು.

ಇದೀಗ ಆಪರೇಷನ್ ಕಮಲ  ಆಡಿಯೋ ಕ್ಲಿಪ್ ಬಗ್ಗೆ ಟ್ವೀಟ್ ಮಾಡಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಈ ಬಗ್ಗೆ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ.