ಕಾಂಗ್ರೆಸ್‌ ತನ್ನ ಆಳ್ವಿಕೆ ಇರುವ ರಾಜ್ಯಗಳಲ್ಲಿ ಕೊಟ್ಟ ಭರವಸೆ ಈಡೇರಿಸಿಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಆಪಾದಿಸಿದ್ದಾರೆ. ಪಟ್ಟಣದ ಎ.ವಿ. ಪಾಟೀಲ ಮಂಗಲ ಕಾರ್ಯಾಲಯದಲ್ಲಿ ಬುಧವಾರ ಬಿಜೆಪಿ ಹಮ್ಮಿಕೊಂಡಿದ್ದ ಅಭ್ಯರ್ಥಿ ಸುಭಾಷ ಗುತ್ತೇದಾರ ಪರ ಚುನಾವಣೆ ಪ್ರಚಾರದ ಬೃಹತ್‌ ಮಹಿಳಾ ಸಮಾವೇಶ ಉದ್ಘಾಟಿಸಿ ಮಾತನಾಡಿದರು. 

ಆಳಂದ (ಏ.27): ಕಾಂಗ್ರೆಸ್‌ ತನ್ನ ಆಳ್ವಿಕೆ ಇರುವ ರಾಜ್ಯಗಳಲ್ಲಿ ಕೊಟ್ಟ ಭರವಸೆ ಈಡೇರಿಸಿಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಆಪಾದಿಸಿದ್ದಾರೆ. ಪಟ್ಟಣದ ಎ.ವಿ. ಪಾಟೀಲ ಮಂಗಲ ಕಾರ್ಯಾಲಯದಲ್ಲಿ ಬುಧವಾರ ಬಿಜೆಪಿ ಹಮ್ಮಿಕೊಂಡಿದ್ದ ಅಭ್ಯರ್ಥಿ ಸುಭಾಷ ಗುತ್ತೇದಾರ ಪರ ಚುನಾವಣೆ ಪ್ರಚಾರದ ಬೃಹತ್‌ ಮಹಿಳಾ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ಕೇಂದ್ರ ಸರ್ಕಾರವು ಮಹಿಳೆಯರ ಸಬಲೀಕರಣಕ್ಕಾಗಿ ನೂರಾರು ಯೋಜನೆಗಳನ್ನು ಜಾರಿಗೆ ತಂದು ಅನುಷ್ಠಾನಗೊಳಿಸಿದೆ. ಪ್ರಸ್ತುತ ಬಜೆಟ್‌ನಲ್ಲಿ ಮಹಿಳಾ ಸ್ವಸಹಾಯ ಸಂಘಗಳಿಗೆ ಆದ್ಯತೆ ನೀಡಲಾಗಿದೆ. ಈ ನಿಟ್ಟಿನಲ್ಲಿ ಅವುಗಳಿಗೆ ಸಹಾಯಧನ ನೀಡಿ ಅವು ಉತ್ಪಾದಿಸುವ ಉತ್ಪನ್ನಗಳಿಗೆ ಮಾರುಕಟ್ಟೆಕಲ್ಪಿಸುವ ಭರವಸೆ ನೀಡಿದೆ ಎಂದರು.

ರಾಜ್ಯದಲ್ಲಿ ಡಬಲ್‌ ಇಂಜಿನ್‌ ಸರ್ಕಾರದಿಂದ ಅನೇಕ ಲಾಭಗಳಾಗಿವೆ. ಅಲ್ಲದೇ ಹೊಗೆ ರಹಿತ ಅಡುಗೆ ಮನೆ ಮಾಡಿದ ಕೀರ್ತಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಸಲ್ಲುತ್ತದೆ. ಕಾಂಗ್ರೆಸ್‌ ಪಕ್ಷವು ಕೇವಲ ಭರವಸೆ ನೀಡುತ್ತದೆ. ಅವುಗಳ ಅನುಷ್ಠಾನಕ್ಕೆ ಗಮನಹರಿಸಲ್ಲ ಎಂದು ನುಡಿದರು. ಆಳಂದ ಮತಕ್ಷೇತ್ರದಲ್ಲಿ ಶಾಸಕ ಸುಭಾಷ್‌ ಆರ್‌. ಗುತ್ತೇದಾರ ಅವರು ನಾಲ್ಕು ಬಾರಿ ಶಾಸಕರಾಗಿ ಅನೇಕ ಕೆಲಸಗಳನ್ನು ಮಾಡಿದ್ದಾರೆ. ಈಗ ಅವರು 5ನೇ ಬಾರಿ ಸ್ಪರ್ಧಿಸಿದ್ದು ಅವರಿಗೆ ಮತ್ತೊಮ್ಮೆ ತಮ್ಮ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದರು.

ಅಳೆದು ತೂಗಿ ಯೋಗ್ಯರಿಗೆ ನಿಮ್ಮ ಮತ ನೀಡಿ: ಸಿ.ಟಿ.ರವಿ

ಮಹಿಳಾ ಸಬಲೀಕರಣಕ್ಕೆ ಒತ್ತು: ಪ್ರಧಾನಿ ನರೇಂದ್ರ ಮೋದಿಯವರು ಪ್ರತಿ ಯೋಜನೆ ತಯಾರಿಸುವಾಗ ಇದರಿಂದ ಮಹಿಳೆಯರಿಗೆ ಏನು ಲಾಭವಿದೆ ಎಂದು ಪ್ರಶ್ನೆ ಮಾಡಿ ಖಾತರಿಪಡಿಸಿಕೊಂಡು ಯೋಜನೆ ತಯಾರಿಸುತ್ತಾರೆ. ಇದು ಅವರ ಮಹಿಳಾ ಪರ ನಿಲುವುನ್ನು ಎತ್ತಿ ತೋರಿಸುತ್ತದೆ ಎಂದು ಹೇಳಿದರು. ಜಾಗತಿಕವಾಗಿ ಬೆಳೆಯುತ್ತಿರುವ ಸ್ಟಾರ್ಟಪ್‌ ಉದ್ಯಮದಲ್ಲಿ ಮಹಿಳೆಯರಿಗೆ ಶೇ. 70ರಷ್ಟುಸಿಂಹಪಾಲ ದೊರಕಿದೆ. ಮಹಿಳೆಯರು ಸ್ವಾವಲಂಬಿ ಜೀವನ ಸಾಗಿಸಲು ಮುದ್ರಾ ಯೋಜನೆ ಮೂಲಕ ಧನಸಹಾಯ ನೀಡಲಾಗುತ್ತಿದೆ. ಇದರಿಂದ ದೇಶದ ಕೋಟ್ಯಂತರ ಮಹಿಳೆಯರ ಬಾಳಲ್ಲಿ ಸಂತಸ ಮೂಡಿದೆ. 

ಅಲ್ಲದೆ, ಗ್ರಾಮೀಣ ಭಾರತದಲ್ಲಿ ಶೌಚಾಲಯ ನಿರ್ಮಾಣ ಮಾಡಿ ಬಯಲು ಶೌಚ ಮುಕ್ತ ಭಾರತ ಮಾಡಲು ಯತ್ನಿಸಲಾಗುತ್ತಿದೆ. ಮನೆಯಿಲ್ಲದವರಿಗೆ ಪ್ರಧಾನಮಂತ್ರಿ ಆವಾಸ ಯೋಜನೆಯಲ್ಲಿ ಮನೆ ಕಲ್ಪಿಸಲಾಗಿದೆ ಎಂದರು. ಭಾರತದಲ್ಲಿ ಪುರುಷರಷ್ಟೇ ಸ್ಥಾನಮಾನಗಳನ್ನು ಮಹಿಳೆಯರಿಗೆ ನೀಡಲಾಗಿದೆ. ಭಾರತೀಯ ಜನತಾ ಪಕ್ಷವು ಮಹಿಳೆಯರಿಗೆ ಸಮಾನ ಅವಕಾಶಗಳನ್ನು ನೀಡಿ ಅವರು ಸಮಾಜದಲ್ಲಿ ತಲೆ ಎತ್ತಿ ಬಾಳುವಂತೆ ಮಾಡಿದೆ. ಹೀಗಾಗಿ ಮಹಿಳೆಯರು ಈ ಬಾರಿ ಗೌರವದ ಬದುಕಿಗಾಗಿ ಮತ್ತೆ ಬಿಜೆಪಿಗೆ ಮತ ಚಲಾಯಿಸಬೇಕು ಎಂದು ಮನವಿ ಮಾಡಿದರು.

ಶಾಸಕ ಸುಭಾಷ್‌ ಆರ್‌. ಗುತ್ತೇದಾರ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನತೆ ಒಳಿತಿಗಾಗಿ ಕಾರ್ಯಗಳನ್ನು ಮಾಡಿವೆ. ತಾವು ಕೂಡ ಕ್ಷೇತ್ರದ ಯಾವ ಗ್ರಾಮಗಳನ್ನು ಬಿಡದೇ ಅಭಿವೃದ್ಧಿ ಮಾಡಿ ತೋರಿಸಿದ್ದೇನೆ. ನಾನು ಮಾಡಿರುವ ಕಾಮಗಾರಿಗಳಿಗೂ ಎದುರಾಳಿ ಮಾಡಿರುವ ಕಾಮಗಾರಿಗಳನ್ನು ತುಲನೆ ಮಾಡಿ ಮತ ಚಲಾಯಿಸಬೇಕು ಎಂದು ಮನವಿ ಮಾಡಿದರು.

ವೇದಿಕೆಯಲ್ಲಿ ಜಾಖಂರ್‍ಡ್‌ ಶಾಸಕ ಬಿರಂಜಿ ನಾರಾಯಣ್‌, ಶಾಸಕಿ ಮೀರಾ ಯಾದವ, ಪುರಸಭೆ ಅಧ್ಯಕ್ಷೆ ರಾಜಶ್ರೀ ಶ್ರೀಶೈಲ ಖಜೂರಿ, ಮಾಜಿ ಅಧ್ಯಕ್ಷ ವಿಠ್ಠಲರಾವ್‌ ಪಾಟೀಲ, ಕಲಬುರ್ಗಿ ಬಿಜೆಪಿ ಗ್ರಾಮಾಂತರ ಕಾರ್ಯಾಧ್ಯಕ್ಷ ಅಶೋಕ್‌ ಬಗಲಿ, ಮಂಡಲ ಅಧ್ಯಕ್ಷ ಆನಂದ ಪಾಟೀಲ್‌, ರಾಜ್ಯ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಚೆಂದಮ್ಮ ಪಾಟೀಲ್‌, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಶಶಿಕಲಾ ಟೆಂಗಳಿ, ಮಹಿಳಾ ಗ್ರಾಮಾಂತರ ಅಧ್ಯಕ್ಷ ಭಾರತಿ ಗುನ್ನಾಪುರ, ಚಲನಚಿತ್ರ ನಿರ್ದೇಶಕಿ ಹಾಗೂ ನಿರ್ಮಾಪಕಿ ರೂಪಾ ಐಯರ್‌, ಸುಹಾಸಿನಿ ಎಸ್‌. ಗುತ್ತೇದಾರ, ಶೋಭಾ ಆನಂದ ಗುತ್ತೇದಾರ, ಮಹಿಳಾ ಮೋರ್ಚಾ ಅಧ್ಯಕ್ಷೆ ಸುನಿತಾ ಪೂಜಾರಿ, ಜಿಲ್ಲಾ ಕಾರ್ಯದರ್ಶಿ ಗೌರಿ ಚಿಚಕೋಟಿ, ಜಿಲ್ಲಾ ಉಪಾಧ್ಯಕ್ಷೆ ಸುಜ್ಞಾನಿ ಪೋದ್ದಾರ, ಅಪರ್ಣ ಹೋದಲೂರಕರ್‌ ಇದ್ದರು.

ರಾಘವ ಚೈತನ್ಯ ಶಿವಲಿಂಗ ಭಾವಚಿತ್ರ ಕೊಡುಗೆ: ಆಳಂದದಲ್ಲಿ ಮಹಿಳಾ ಸಮಾವೇಶದಲಿ ಪಾಲ್ಗೊಂಡಿದ್ದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಆಳಂದ ಶಾಸಕರು, ಅಲ್ಲಿನ ಬಿಜೆಪಿ ಸಂಘನೆ ಪರವಾಗಿ ರಾಘವ ಚೈತನ್ಯ ಶಿವಲಿಂಗದ ಭಾವಚಿತ್ರವಿರುವ ಫೋಟೋಫ್ರೇಮ್‌ ಕಾಣಿಕೆ ನೀಡಿ ಗಮನ ಸೆಳೆದರು. ಸಚಿವೆ ನಿರ್ಮಲಾ ತಮ್ಮ ಮಾತಲ್ಲಿಯೂ ಈ ವಿಚಾರ ಪ್ರಸ್ತಾಪಮಾಡಿದರು. ಶಾಸಕ ಗುತ್ತೇದಾರ ಅವರು ಜೀವದ ಹಂಗು ತೊರೆದು ಆಳಂದ ಪಟ್ಟಣದ ರಾಘವ ಚೈತನ್ಯ ಶಿಲಿಂಗದ ಪೂಜೆ ಕೈಗೊಂಡು ಧರ್ಮ ಕಾಯುವ ಕಾರ್ಯ ಮಾಡಿದ್ದಾರೆ. ಅವರಿಗೆ ಈ ಬಾರಿ ಭಾರೀ ಬಹುಮತದಿಂದ ಚುನಾಯಿಸಬೇಕಾಗಿದೆ ಎಂದು ಕರೆ ನೀಡಿದರು. 

ಜನತೆಯ ಪ್ರೀತಿ ವಿಶ್ವಾಸ ಧನ್ಯತಾ ಭಾವನೆ ಮೂಡಿಸಿದೆ: ಸಚಿವ ಸುಧಾಕರ್‌

ರಾಘವ ಚೈತನ್ಯ ಶಿವಲಿಂಗಕ್ಕೆ ಪೂಜೆ, ರುದ್ರಾಭಿಷೇಕ ಸಲ್ಲಿಸುವ ವಿಚಾರವಾಗಿಯೇ ಶಿವರಾತ್ರಿಯ ಸುತ್ತಮುತ್ತ ಅಳಂದದಲ್ಲಿ ವಿವಾದ ಏಳುತ್ತದೆ. ಈ ಬಾರಿ ಕೋರ್ಚ್‌ ಆದೇಶದಂತೆ ಶಿವಲಿಂಗಕ್ಕೆ ಪೂಜೆ ಸಲ್ಲಿಸಲಾಗಿದೆ. ಶಿಲಿಂಗದ ರಕ್ಷಣೆ ವಿಚಾರವಾಗಿ ಶಾಸಕ ಸುಭಾಸ ಗುತ್ತೇದಾರ್‌ ಪ್ರಮುಖವಾಗಿ ಸದನದಲ್ಲಿ ಪ್ರಸ್ತಾಪಿಸಿದ್ದಲ್ಲದೆ ಆಳಂದದಲ್ಲಿ ಶಿವಭಜನ್‌, ಶಿವ ಸಮಾಗಮ ನಡೆಸುವ ಮೂಲಕ ಹಿಂದುಗಳ ಗಮನ ಸೆಳೆದಿದ್ದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.