ಈ ಬಾರಿ ಸಮೀಕ್ಷೆಗಳೆಲ್ಲಾ ಉಲ್ಟಾ ಹೊಡೆಯುತ್ತವೆ: ಎಚ್.ಡಿ.ಕುಮಾರಸ್ವಾಮಿ
ರಾಜ್ಯದಲ್ಲಿ ಕಳೆದೆರಡು ತಿಂಗಳಿಂದ ಬರುತ್ತಿರುವುದು ರಾಷ್ಟ್ರೀಯ ಪಕ್ಷಗಳು ಹಣಕೊಟ್ಟು ಮಾಡಿಸಿರುವ ಸಮೀಕ್ಷೆಗಳು. ಸಮೀಕ್ಷೆಗಳೆಲ್ಲ ಈ ಬಾರಿ ಉಲ್ಟಾಹೊಡೆಯುತ್ತವೆ. ಯಾವುದೇ ಪಕ್ಷಕ್ಕೂ ಸ್ಪಷ್ಟಬಹುಮತ ಸಿಗಲ್ಲ, ಜೆಡಿಎಸ್ ಹೆಚ್ಚಿನ ಸ್ಥಾನ ಗಳಿಸುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಹನೂರು (ಮೇ.07): ರಾಜ್ಯದಲ್ಲಿ ಕಳೆದೆರಡು ತಿಂಗಳಿಂದ ಬರುತ್ತಿರುವುದು ರಾಷ್ಟ್ರೀಯ ಪಕ್ಷಗಳು ಹಣಕೊಟ್ಟು ಮಾಡಿಸಿರುವ ಸಮೀಕ್ಷೆಗಳು. ಸಮೀಕ್ಷೆಗಳೆಲ್ಲ ಈ ಬಾರಿ ಉಲ್ಟಾ ಹೊಡೆಯುತ್ತವೆ. ಯಾವುದೇ ಪಕ್ಷಕ್ಕೂ ಸ್ಪಷ್ಟಬಹುಮತ ಸಿಗಲ್ಲ, ಜೆಡಿಎಸ್ ಹೆಚ್ಚಿನ ಸ್ಥಾನ ಗಳಿಸುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಜಿಲ್ಲೆಯ ಹನೂರಿನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಜನರಿಗೆ ತೊಂದರೆ ಕೊಟ್ಟು ಪ್ರಧಾನಿ ಮೋದಿ ರೋಡ್ ಶೋ ನಡೆಸುತ್ತಿದ್ದು, ಇದರಿಂದ ದುಡಿಯುವ ಜನ ಬೀದಿ ಪಾಲಾಗುತ್ತಿದ್ದಾರೆ. ನೀಟ್ ಪರೀಕ್ಷೆ ಬರೆಯುವ ಮಕ್ಕಳ ಮೇಲೆ ರೋಡ್ ಶೋದಿಂದ ಪರಿಣಾಮ ಬೀರುತ್ತದೆ. ಮನೆ ಬಾಗಿಲು ತೆಗೆಯಬೇಡಿ, ಓಣಿಯಲ್ಲಿ ಓಡಾಡಬೇಡಿ ಅಂತಾರೆ. ಹಾಗಿದ್ದರೆ ರೋಡ್ ಶೋ ಯಾಕೆ ಮಾಡ್ತೀರಾ? ಇದರಿಂದ ಜನರಿಗೆ ತೊಂದರೆಯೇ ಹೊರತು ಬಿಜೆಪಿಗೆ ಲಾಭ ಇಲ್ಲ ಎಂದು ಟಾಂಗ್ ಕೊಟ್ಟರು.
ಕಾಂಗ್ರೆಸ್ ಸಮಾವೇಶದಲ್ಲಿ ‘ಜೈ ಬಜರಂಗ ಬಲಿ’ ಘೋಷಣೆ ಕೂಗಿದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ
2018ರ ಚುನಾವಣೆಯಲ್ಲಿ ನಾನು ಮುಖ್ಯಮಂತ್ರಿಯಾಗಬೇಕೆಂಬ ಕಾರಣಕ್ಕೆ ಜಿಲ್ಲೆಯ ಏಳಕ್ಕೆ ಏಳು ಕ್ಷೇತ್ರಗಳಲ್ಲಿ ಪಕ್ಷವನ್ನು ಅಧಿಕಾರಕ್ಕೆ ತಂದಿರಿ. ಜೆಡಿಎಸ್‌ಗೆ ಸಂಪೂರ್ಣ ಬಹುಮತ ಬಾರದಿದ್ದರೂ ಮುಖ್ಯಮಂತ್ರಿಯಾಗಿ ರೈತರ ಸಾಲಮನ್ನಾ ಮಾಡಿದೆ. ರೈತರು ಆತ್ಮಹತ್ಯೆ ಮಾಡಿಕೊಂಡಿರುವ ಮನೆಗೆ ಭೇಟಿಕೊಟ್ಟು ಪರಿಹಾರ ಕೊಟ್ಟೆಎಂದ ಕುಮಾರಸ್ವಾಮಿ, ಮುಖ್ಯಮಂತ್ರಿಯಾಗಿದ್ದ ವೇಳೆ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಬಜೆಟ್‌ನಲ್ಲಿ 8 ಸಾವಿರ ಕೋಟಿ ರು. ಹಣ ಬಿಡುಗಡೆ ಮಾಡಿಸಿದೆ. ನಂತರ ಬಂದ ಸರ್ಕಾರ ಜಿಲ್ಲೆಯ ಅಭಿವೃದ್ಧಿಯನ್ನು ಮಣ್ಣುಪಾಲು ಮಾಡಿತು ಎಂದು ವಿಷಾದಿಸಿದರು.
ಈ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವನ್ನು ಸೋಲಿಸಲು ಎರಡೂ ರಾಷ್ಟ್ರೀಯ ಪಕ್ಷಗಳು ಕುತಂತ್ರದ ರಾಜಕಾರಣ ಮಾಡುತ್ತಿವೆ. ಮೇಲುಕೋಟೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹಾಕುವುದಿಲ್ಲವಂತೆ. ಇಂತಹ ತಂತ್ರಗಾರಿಕೆ ರಾಜಕಾರಣಗಳಿಗೆ ಜನರು ಮರುಳಾಗೋಲ್ಲ. ಜೆಡಿಎಸ್ ಗೆಲುವಿನ ನಾಗಾಲೋಟ ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದರು. ಕೆ.ಆರ್.ಪೇಟೆ ಕ್ಷೇತ್ರದಲ್ಲಿರುವವರು ದೇವೇಗೌಡರ ಬಗ್ಗೆ ಅಭಿಮಾನ ಇಟ್ಟಿರುವ ಜನ. ಅವರೆಂದಿಗೂ ಗೌಡರಿಗೆ ಮೋಸ ಮಾಡುವುದಿಲ್ಲ. ಕೆ.ಆರ್.ಪೇಟೆ ದೇವೇಗೌಡರ ಮನೆ ಎಂಬ ಮಾತೂ ಇದೆ. ಎಚ್.ಟಿ.ಮಂಜು ಅವರನ್ನು ಅಭ್ಯರ್ಥಿ ಮಾಡುವುದಕ್ಕೆ ಎಲ್ಲರನ್ನೂ ಒಟ್ಟಿಗೆ ಸೇರಿಸುವ ಪ್ರಯತ್ನ ಮಾಡಿದ್ದೆ. ಆದರೆ, ನಮ್ಮವರೇ ಕೆಲವರು ಬೆನ್ನಿಗೆ ಚೂರಿ ಹಾಕಲು ಯತ್ನಿಸಿದ್ದಾರೆ. ಅವರಿಗೆ ಯಾರೂ ಮಾರುಹೋಗಬೇಡಿ ಎಂದು ಕಿವಿಮಾತು ಹೇಳಿದರು.
ಬಡ ಕುಟುಂಬಗಳ ಕಣ್ಣೀರು ಒರೆಸುವ ಉದ್ದೇಶದಿಂದ ಪಂಚರತ್ನ ಯೋಜನೆ ಜಾರಿಗೊಳಿಸುತ್ತಿದ್ದೇವೆ. ಯಾತ್ರೆ ವೇಳೆ ಅಭೂತಪೂರ್ವ ಬೆಂಬಲ ಕೊಟ್ಟಿದ್ದೀರಿ. ಯೋಜನೆಗಳಿಂದ ಪ್ರತಿ ಕುಟುಂಬಕ್ಕೂ ಅನುಕೂಲವಾಗಲಿದೆ. ಚುನಾವಣೆಯಲ್ಲಿ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತೇವೆ ಎಂದು ಭರವಸೆಯ ಮಾತುಗಳನ್ನಾಡಿದರು. ಈಗಾಗಲೇ ನಾನು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದೇನೆ. ನಾನು ಮಾಜಿ ಸಿಎಂ ಆಗಿದ್ದೇನೆ. ಮೂರನೇ ಬಾರಿ ಸಿಎಂ ಆಗೋ ದುರುದ್ದೇಶ ನನಗಿಲ್ಲ. ಬಡವರ ಸೇವೆಯನ್ನು ಗುರಿಯಾಗಿಸಿಕೊಂಡು ಕೆಲಸ ಮಾಡಲು ಬಂದಿದ್ದೇನೆ.
ಹಿಂದೂ ಅಸ್ಮಿತೆಗೆ ಕಾಂಗ್ರೆಸ್ ಏಟು: ಸಿಎಂ ಯೋಗಿ ಆದಿತ್ಯನಾಥ್ ಕಿಡಿ
ನನ್ನ ಈ ಹೋರಾಟ ಸ್ವಾರ್ಥಕ್ಕಲ್ಲ. ನನಗೆ ಯಾವುದೇ ಜಾತಿ, ಮತ, ಧರ್ಮ ಮುಖ್ಯವಲ್ಲ. ಯಾರೇ ಬಡವರು ನನ್ನ ಬಳಿ ಬಂದರೂ ನಿಮ್ಮ ಕಷ್ಟಏನೂಂತ ಕೇಳ್ತೀನಿ. ಯಾರೂ ಜಾತಿಯ ವ್ಯಾಮೋಹಕ್ಕೆ ಮಾರು ಹೋಗಬೇಡಿ. ಕೆಲವರು ನಮ್ಮವರೇ ನಮ್ಮ ಅಭ್ಯರ್ಥಿ ಸೋಲಿಸಲು ಕೈ ಜೋಡಿಸುತ್ತಿದ್ದಾರೆ. ನನಗಾಗಿ ಎಚ್.ಟಿ.ಮಂಜು ಅವರನ್ನು ನಂಬಿ ಗೆಲ್ಲಿಸುವಂತೆ ಮನವಿ ಮಾಡಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.