ಎಚ್ಡಿಕೆ, ರೇವಣ್ಣ ಪ್ರತಿಷ್ಠೆ ಕ್ಷೇತ್ರದಲ್ಲಿ ಕೈ, ಕಮಲ ಪೈಪೋಟಿ: ಪ್ರಾಬಲ್ಯ ಮೆರೆಯಲು ಬಿಜೆಪಿ ರಣತಂತ್ರ
ಒಂದು ಕಾಲದಲ್ಲಿ ಜಿಲ್ಲೆಯ 7 ಕ್ಷೇತ್ರಗಳ ಪೈಕಿ 5 ಕ್ಷೇತ್ರಗಳಲ್ಲಿ ಗೆದ್ದು, ಬಿಜೆಪಿ ಕೀರ್ತಿ ಪತಾಕೆ ಹಾರಿಸಿತ್ತು. ಆದರೆ, ಬಿ.ಬಿ.ಶಿವಪ್ಪ ಅವರು ಬಿಜೆಪಿ ತೊರೆದ ನಂತರ ದುರ್ಬಲವಾಗಿ ಏಳರಲ್ಲಿ ಒಂದು ಸ್ಥಾನವನ್ನು ಗಳಿಸಲೂ ಸಾಧ್ಯವಾಗದೆ, ಬಿಜೆಪಿ ಸೊರಗಿತು.
ಎಚ್.ಟಿ.ಮೋಹನ್ ಕುಮಾರ್
ಹಾಸನ (ಮೇ.08): ಒಂದು ಕಾಲದಲ್ಲಿ ಜಿಲ್ಲೆಯ 7 ಕ್ಷೇತ್ರಗಳ ಪೈಕಿ 5 ಕ್ಷೇತ್ರಗಳಲ್ಲಿ ಗೆದ್ದು, ಬಿಜೆಪಿ ಕೀರ್ತಿ ಪತಾಕೆ ಹಾರಿಸಿತ್ತು. ಆದರೆ, ಬಿ.ಬಿ.ಶಿವಪ್ಪ ಅವರು ಬಿಜೆಪಿ ತೊರೆದ ನಂತರ ದುರ್ಬಲವಾಗಿ ಏಳರಲ್ಲಿ ಒಂದು ಸ್ಥಾನವನ್ನು ಗಳಿಸಲೂ ಸಾಧ್ಯವಾಗದೆ, ಬಿಜೆಪಿ ಸೊರಗಿತು. 2018ರ ಚುನಾವಣೆಯಲ್ಲಿ ಹಾಸನದಲ್ಲಿ ಪ್ರೀತಂ ಜೆ. ಗೌಡ ಗೆಲ್ಲುವವರೆಗೂ ಬಿಜೆಪಿಗೆ ಇದೇ ಸ್ಥಿತಿ ಮುಂದುವರಿದಿತ್ತು. ಹಾಗೆಯೇ, ಹೊಳೆನರಸೀಪುರ, ಹಾಸನ, ಅರಸೀಕೆರೆ, ಬೇಲೂರು, ಚನ್ನರಾಯಪಟ್ಟಣಗಳಲ್ಲಿ ಕಾಂಗ್ರೆಸ್ ಕೂಡ ತನ್ನ ಶಾಸಕರನ್ನು ಹೊಂದಿತ್ತು. ಎಚ್.ಸಿ.ಶ್ರೀಕಂಠಯ್ಯ ಹಾಗೂ ಜಿ.ಪುಟ್ಟಸ್ವಾಮಿಗೌಡರ ಕಾಲಾನಂತರದಲ್ಲಿ ಕಾಂಗ್ರೆಸ್ ಕೂಡ ದುರ್ಬಲವಾಯಿತು. ಬಳಿಕ, ಜೆಡಿಎಸ್‌ನದೇ ಅಧಿಪತ್ಯ. 2018ರ ಚುನಾವಣೆಯಲ್ಲಿ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳಲ್ಲಿ ಹಾಸನ ಹೊರತುಪಡಿಸಿ ಉಳಿದೆಲ್ಲವನ್ನೂ ಜೆಡಿಎಸ್ ತನ್ನದಾಗಿಸಿಕೊಂಡಿದೆ. ಹೀಗಾಗಿ, ಈ ಬಾರಿ ಜೆಡಿಎಸ್, ತನ್ನ ಅಧಿಪತ್ಯ ಉಳಿಸಿಕೊಳ್ಳುವ ಧಾವಂತದಲ್ಲಿದ್ದರೆ, ಕಾಂಗ್ರೆಸ್ ಹಾಗೂ ಬಿಜೆಪಿ ಹೆಚ್ಚಿನ ಸ್ಥಾನಗಳನ್ನು ಪಡೆದುಕೊಳ್ಳುವ ಆತುರದಲ್ಲಿವೆ.
ಹಾಸನ
ಪ್ರೀತಂಗೌಡಗೆ ಟಕ್ಕರ್ ಕೊಡಲು ಸ್ವರೂಪ್ ಸಜ್ಜು: ಕಳೆದ 5 ವರ್ಷಗಳಿಂದ ಹಾಸನದಲ್ಲಿ ಬಿಜೆಪಿ ಶಾಸಕ ಪ್ರೀತಂ ಗೌಡ ತಮ್ಮ ಅಧಿಪತ್ಯ ಸ್ಥಾಪಿಸಿದ್ದಾರೆ. ಈ ಬಾರಿ ಈ ಕ್ಷೇತ್ರವನ್ನು ಹೇಗಾದರೂ ಮಾಡಿ ತನ್ನ ತೆಕ್ಕೆಗೆ ತೆಗೆದುಕೊಳ್ಳಬೇಕೆನ್ನುವ ಹಠ ಜೆಡಿಎಸ್‌ನದು. ಇದು ದೇವೇಗೌಡರ ಕುಟುಂಬದ ಆಂತರಿಕ ಕಲಹಕ್ಕೂ ಕಾರಣವಾಯಿತು. ಭವಾನಿ ರೇವಣ್ಣನವರು ಇಲ್ಲಿಂದ ಸ್ಪರ್ಧಿಸುವುದಾಗಿ ಬಹಿರಂಗವಾಗಿ ಘೋಷಿಸಿದರು. ಆದರೆ, ಮಾಜಿ ಸಿಎಂ ಕುಮಾರಸ್ವಾಮಿಯವರು ಸಾಮಾನ್ಯ ಕಾರ್ಯಕರ್ತನನ್ನು ನಿಲ್ಲಿಸುವ ಹಠಕ್ಕೆ ಬಿದ್ದರು. ತೀವ್ರ ಹಣಾಹಣಿ ನಂತರ ಸ್ವರೂಪ್‌ಗೆ ಜೆಡಿಎಸ್ ಟಿಕೆಟ್ ನೀಡಿದೆ. ಬಳಿಕ, ಎಲ್ಲಾ ಅಸಮಾಧಾನ ಬದಿಗಿಟ್ಟು, ಸ್ವರೂಪ್ ಅವರನ್ನು ಗೆಲ್ಲಿಸಿಕೊಳ್ಳಲೇಬೇಕೆಂದು ಎಚ್.ಡಿ.ರೇವಣ್ಣ ಕುಟುಂಬದವರು ಶತಾಯಗತಾಯ ಪ್ರಯತ್ನ ಮಾಡುತ್ತಿದ್ದಾರೆ. ಪ್ರೀತಂ ಗೌಡರು ಕ್ಷೇತ್ರದ ಅಭಿವೃದ್ಧಿ ಮುಂದಿಟ್ಟುಕೊಂಡು ಮತಯಾಚಿಸುತ್ತಿದ್ದಾರೆ. ಬನವಾಸಿ ರಂಗಸ್ವಾಮಿ, ಇಲ್ಲಿನ ಕಾಂಗ್ರೆಸ್ ಅಭ್ಯರ್ಥಿ. ಇಲ್ಲಿ ಬಿಜೆಪಿ ಹಾಗೂ ಜೆಡಿಎಸ್ ನಡುವೆಯೇ ನೇರ ಫೈಟ್.
ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಮಣಿಸಲು ಸಾಮ್ರಾಟ್ ಅಶೋಕಾಸ್ತ್ರ ಪ್ರಯೋಗ
ಹೊಳೆನರಸೀಪುರ
ರೇವಣ್ಣ ಅಧಿಪತ್ಯಕ್ಕೆ ಶ್ರೇಯಸ್ ಸವಾಲ್: ಇದು ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರ ತವರು ಕ್ಷೇತ್ರ. ಈ ಬಾರಿಯೂ ಅವರು ಜೆಡಿಎಸ್ ಅಭ್ಯರ್ಥಿ. ಕಾಂಗ್ರೆಸ್‌ನಿಂದ ಮಾಜಿ ಸಚಿವ ಜಿ.ಪುಟ್ಟಸ್ವಾಮಿಗೌಡರ ಮೊಮ್ಮಗ ಶ್ರೇಯಸ್ ಪಟೇಲ್ ಕಣಕ್ಕೆ ಇಳಿದಿದ್ದು, ಅವರು ಜೆಡಿಎಸ್‌ನ ಎಚ್.ಡಿ.ರೇವಣ್ಣ ಅವರಿಗೆ ಭಾರೀ ಪೈಪೋಟಿ ನೀಡುತ್ತಿದ್ದಾರೆ. ಕ್ಷೇತ್ರದ ಕೆಲ ಭಾಗಗಳಲ್ಲಿ ರೇವಣ್ಣ ಅವರ ಸರ್ವಾಧಿಕಾರಿ ಧೋರಣೆ ಬಗ್ಗೆ ಅಸಮಾಧಾನ ಇದೆ. ಹಾಗೆಯೇ, ಜಿ.ಪುಟ್ಟಸ್ವಾಮಿಗೌಡರ ಮೊಮ್ಮಗ ಎನ್ನುವ ಅನುಕಂಪವೂ ಇದೆ. ಇದು ಕಾಂಗ್ರೆಸ್‌ಗೆ ಪ್ಲಸ್ ಪಾಯಿಂಟ್. ಬಿಜೆಪಿಯಿಂದ ದೇವರಾಜ ಗೌಡ ಕಣದಲ್ಲಿದ್ದಾರೆ. ಶ್ರೇಯಸ್ ಅವರು ರೇವಣ್ಣಗೆ ಎಷ್ಟರ ಮಟ್ಟಿಗೆ ಫೈಟ್ ನೀಡಬಲ್ಲರು ಎಂಬುದೇ ಈಗಿನ ಪ್ರಶ್ನೆ.
ಅರಕಲಗೂಡು
ಜೆಡಿಎಸ್ ಅಭ್ಯರ್ಥಿಗೆ ಪಕ್ಷೇತರ ಅಭ್ಯರ್ಥಿ ಸವಾಲ್: ಇಲ್ಲಿ ಕೃಷ್ಣೇಗೌಡರು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಆಗಿದ್ದರು. ಆದರೆ, ಕಾಂಗ್ರೆಸ್ ಟಿಕೆಟ್ ಸಿಕ್ಕಿದ್ದು ಹೊಸಮುಖ ಶ್ರೀಧರ್ ಗೌಡಗೆ. ಹೀಗಾಗಿ, ಕೃಷ್ಣೇಗೌಡರು ಇಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ. ಈ ಹಿಂದೆ ಕಾಂಗ್ರೆಸ್‌ನಲ್ಲಿ ಸಚಿವರಾಗಿದ್ದ ಎ.ಮಂಜು ಅವರು ನಂತರ ಬಿಜೆಪಿಗೆ ಹೋಗಿ ಇದೀಗ ಜೆಡಿಎಸ್ ಅಭ್ಯರ್ಥಿಯಾಗಿದ್ದಾರೆ. ಬಿಜೆಪಿಯಿಂದ ಯೋಗಾ ರಮೇಶ್ ಕಣದಲ್ಲಿದ್ದಾರೆ. ಈ ಮಧ್ಯೆ, ಎ.ಮಂಜು ಅವರು ಎಲ್ಲಾ ಪಕ್ಷಗಳನ್ನು ಸುತ್ತಿಕೊಂಡು ಬಂದು ತಮ್ಮ ಕಡು ವಿರೋಧಿಯಾಗಿದ್ದ ಜೆಡಿಎಸ್ ಸೇರಿರುವುದು ಕ್ಷೇತ್ರದ ಜನರಲ್ಲಿ ಭಾರೀ ಅಸಮಾಧಾನ ಉಂಟು ಮಾಡಿದೆ. ಆದಾಗ್ಯೂ, ಇಲ್ಲಿ ಜೆಡಿಎಸ್ ಹಾಗೂ ಪಕ್ಷೇತರ ಅಭ್ಯರ್ಥಿ ಕೃಷ್ಣೇಗೌಡರ ನಡುವೆ ನೇರ ಹಣಾಹಣಿ ಇದೆ.
ಆಲೂರು-ಸಕಲೇಶಪುರ
ಬಿಜೆಪಿಯಿಂದ ಹೊಸಮುಖ ಕಣಕ್ಕೆ: ಇಲ್ಲಿ ಜೆಡಿಎಸ್ ಶಾಸಕ ಎಚ್.ಕೆ.ಕುಮಾರಸ್ವಾಮಿ, ಈ ಬಾರಿಯೂ ಜೆಡಿಎಸ್ ಅಭ್ಯರ್ಥಿ. ಅವರು ಸರಿಯಾಗಿ ಕೆಲಸ ಮಾಡಿಲ್ಲ ಎನ್ನುವ ಆರೋಪ ಹಾಗೂ ಅಸಮಾಧಾನ ಕ್ಷೇತ್ರದಲ್ಲಿದೆ. ಆದರೂ ಅವರ ಸೌಮ್ಯ ಸ್ವಭಾವ ಹಾಗೂ ಸ್ಥಳೀಯರಿಗೆ ಲಭ್ಯತೆ ಹಾಗೂ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಗುಣದಿಂದಾಗಿ ಜನ ಮನ್ನಣೆ ಗಳಿಸಿದ್ದಾರೆ. ಕಾಂಗ್ರೆಸ್‌ನಿಂದ ಮುರುಳು ಮೋಹನ್ ಕಣದಲ್ಲಿದ್ದಾರೆ. ಇವರು ಸ್ಥಳೀಯರಲ್ಲ, ತಮಿಳುನಾಡು ಮೂಲದವರು ಎನ್ನುವ ಅಸಮಾಧಾನ ಕಾಂಗ್ರೆಸ್‌ನ ಸ್ಥಳೀಯ ನಾಯಕರಿಂದಲೇ ವ್ಯಕ್ತವಾಗುತ್ತಿದೆ. ಇನ್ನು, ಬಿಜೆಪಿಯ ಸಿಮೆಂಟ್ ಮಂಜು ಇದೇ ಕ್ಷೇತ್ರದವರಾದರೂ ರಾಜಕೀಯಕ್ಕೆ ಹೊಸಮುಖ. ಹಾಸನ ಶಾಸಕ ಪ್ರೀತಂ ಗೌಡರ ಬೆಂಬಲದೊಂದಿಗೆ ಚುನಾವಣಾ ಕಣಕ್ಕಿಳಿದಿದ್ದಾರೆ. ಹೀಗಾಗಿ, ಇಲ್ಲಿ ತ್ರಿಕೋನ ಸ್ಪರ್ಧೆ ಇದೆ.
ಬೇಲೂರು
ಕಾಂಗ್ರೆಸ್‌ಗೆ ಸಮಾಧಾನಿತರ ಸಂಕಟ: ಕಾಂಗ್ರೆಸ್‌ನಿಂದ ಇಲ್ಲಿ ಸ್ಥಳೀಯರಾದ ಕೃಷ್ಣೇಗೌಡ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಅವರನ್ನು ಬಿಟ್ಟು ವರಿಷ್ಠರು ಬಿ.ಶಿವರಾಂಗೆ ಟಿಕೆಟ್ ನೀಡಿದ್ದಾರೆ. ಹೀಗಾಗಿ, ಸ್ಥಳೀಯರ ಬೆಂಬಲ ಬಿ.ಶಿವರಾಂಗೆ ಸಿಗುವುದು ಕಷ್ಟಎನ್ನಲಾಗುತ್ತಿದೆ. ಇನ್ನು ಜೆಡಿಎಸ್ ಅಭ್ಯರ್ಥಿ ಲಿಂಗೇಶ್, ಹಾಲಿ ಶಾಸಕರಾದರೂ ನಿರೀಕ್ಷಿತ ಮಟ್ಟದಲ್ಲಿ ಕೆಲಸ ಮಾಡಿಲ್ಲ, ರೇವಣ್ಣ ಕುಟುಂಬದ ಹಿಡಿತದಲ್ಲೇ ಕೆಲಸ ಮಾಡುತ್ತಾರೆ ಎನ್ನುವ ಅಸಮಾಧಾನ ಕ್ಷೇತ್ರದ ಜನರಲ್ಲಿದೆ. ಬಿಜೆಪಿಯಿಂದ ಎಚ್.ಕೆ.ಸುರೇಶ್ ಅವರು ಕಣದಲ್ಲಿದ್ದು, ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಆದರೆ, ತ್ರಿಕೋನ ಸ್ಪರ್ಧೆ ಇದೆ.
ಅರಸೀಕೆರೆ
ಶಿವಲಿಂಗೇಗೌಡರನ್ನು ಮಣಿಸಲು ಜೆಡಿಎಸ್ ಪಣ: ಹಾಲಿ ಶಾಸಕ ಕೆ.ಎಂ.ಶಿವಲಿಂಗೇಗೌಡ ಒಂದರ್ಥದಲ್ಲಿ ಇಲ್ಲಿ ಅನಭಿಷಿಕ್ತ ದೊರೆ. ಅವರು ಈವರೆಗೆ ಜೆಡಿಎಸ್‌ನಿಂದ ನಿಂತು ಗೆದ್ದಿದ್ದರು. ಆದರೆ, ಜೆಡಿಎಸ್‌ನ ಕುಟುಂಬ ರಾಜಕಾರಣದಿಂದ ಬೇಸತ್ತು, ಈ ಬಾರಿ ಕಾಂಗ್ರೆಸ್ ಸೇರಿ, ಕಾಂಗ್ರೆಸ್‌ನಿಂದ ಅಭ್ಯರ್ಥಿಯಾಗಿದ್ದಾರೆ. ಶಿವಲಿಂಗೇಗೌಡರನ್ನು ಸೋಲಿಸಲು ಜೆಡಿಎಸ್ ಪಣ ತೊಟ್ಟಿದೆ. ಹೀಗಾಗಿ, ಗೆಲುವು ಅವರಿಗೆ ಪ್ರತಿಷ್ಠೆಯಾಗಿದೆ. ಬಿಜೆಪಿಯಿಂದ ಟಿಕೆಟ್ ಆಕಾಂಕ್ಷಿಯಾಗಿದ್ದ ಎನ್.ಆರ್.ಸಂತೋಷ್, ಟಿಕೆಟ್ ಸಿಗದ ಕಾರಣ ಬಿಜೆಪಿ ತೊರೆದು ಜೆಡಿಎಸ್‌ಗೆ ಹೋಗಿದ್ದಾರೆ. ಅವರೀಗ ಜೆಡಿಎಸ್ ಅಭ್ಯರ್ಥಿ. ಹೀಗಾಗಿ, ಇವರು ಅಧಿಕಾರಕ್ಕಾಗಿ ಎಲ್ಲಿಗೆ ಬೇಕಾದರೂ ವಲಸೆ ಹೋಗುತ್ತಾರೆ ಎನ್ನುವ ಅಭಿಪ್ರಾಯ ಇಲ್ಲಿನ ಜನರದ್ದಾಗಿದೆ. ಇನ್ನು, ಇದೇ ಕ್ಷೇತ್ರದವರಾದ ಜಿವಿಟಿ ಬಸವರಾಜು, ಬಿಜೆಪಿ ಅಭ್ಯರ್ಥಿ.
ಲಿಂಗಾಯತ ಸಮಾಜ ಸಮುದ್ರ ಇದ್ದಂತೆ: ಕಾಂಗ್ರೆಸ್ ವಿರುದ್ಧ ಬೊಮ್ಮಾಯಿ ವಾಗ್ದಾಳಿ
ಶ್ರವಣಬೆಳಗೊಳ
ಬಾಲಕೃಷ್ಣರನ್ನು ಮಣಿಸಲು ಕಾಂಗ್ರೆಸ್, ಬಿಜೆಪಿ ತಂತ್ರ: ಶಾಸಕ ಸಿ.ಎನ್.ಬಾಲಕೃಷ್ಣ ಅವರು ಮತ್ತೊಮ್ಮೆ ಜೆಡಿಎಸ್‌ನಿಂದ ಕಣಕ್ಕೆ ಇಳಿದಿದ್ದಾರೆ. ಇವರಿಗೆ ಪ್ರತಿಸ್ಪರ್ಧಿಗಳಾಗಿ ಬಿಜೆಪಿಯಿಂದ ಚಿದಾನಂದ ಹಾಗೂ ಕಾಂಗ್ರೆಸ್‌ನಿಂದ ಎಂ.ಎ.ಗೋಪಾಲಸ್ವಾಮಿ ಕಣದಲ್ಲಿದ್ದಾರೆ. 2013ರಿಂದ ಬಾಲಕೃಷ್ಣ ಅವರು ಇಲ್ಲಿ ಶಾಸಕರಾಗಿದ್ದು, ಈ ಬಾರಿಯೂ ಗೆಲ್ಲುವ ಉತ್ಸಾಹದಲ್ಲಿ ಇದ್ದಾರೆ. ಅವರನ್ನು ಮಣಿಸಲು ಕಾಂಗ್ರೆಸ್ ಹಾಗೂ ಬಿಜೆಪಿ ರಣತಂತ್ರ ರೂಪಿಸಿವೆ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.