ಬಿಜೆಪಿ ಲಿಂಗಾಯತ ವಿರೋಧಿಯಲ್ಲ: ಶೆಟ್ಟರ್ ವಿರುದ್ಧ ಗುಡುಗಿದ ಬಸನಗೌಡ ಯತ್ನಾಳ
ಬಿಜೆಪಿಯಲ್ಲಿ ಇದ್ದುಕೊಂಡೇ ನೀವು ಲಿಂಗಾಯತ ಮತಗಳಿಂದ ಶಾಸಕರಾಗಿದ್ದೀರಿ, ಸಚಿವರಾಗಿದ್ದೀರಿ, ಮುಖ್ಯಮಂತ್ರಿಯೂ ಆಗಿದ್ದೀರಿ, ನಿಮಗೆ ಬಿಜೆಪಿ ಎಲ್ಲ ಅಧಿಕಾರವನ್ನು ಕೊಟ್ಟಿದೆ. ಆದರೆ, ಈಗ ಬಿಜೆಪಿ ಲಿಂಗಾಯತ ವಿರೋಧ ಎಂದು ದೂರಿದರೆ ಹೇಗೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಜಗದೀಶ ಶೆಟ್ಟರ್ ವಿರುದ್ಧ ಗುಡುಗಿದರು.
ವಿಜಯಪುರ (ಏ.18): ಬಿಜೆಪಿಯಲ್ಲಿ ಇದ್ದುಕೊಂಡೇ ನೀವು ಲಿಂಗಾಯತ ಮತಗಳಿಂದ ಶಾಸಕರಾಗಿದ್ದೀರಿ, ಸಚಿವರಾಗಿದ್ದೀರಿ, ಮುಖ್ಯಮಂತ್ರಿಯೂ ಆಗಿದ್ದೀರಿ, ನಿಮಗೆ ಬಿಜೆಪಿ ಎಲ್ಲ ಅಧಿಕಾರವನ್ನು ಕೊಟ್ಟಿದೆ. ಆದರೆ, ಈಗ ಬಿಜೆಪಿ ಲಿಂಗಾಯತ ವಿರೋಧ ಎಂದು ದೂರಿದರೆ ಹೇಗೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಜಗದೀಶ ಶೆಟ್ಟರ್ ವಿರುದ್ಧ ಗುಡುಗಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋಮುವಾದಿ, ವಿದೇಶಿ ಹಣವನ್ನು ಬಳಕೆ ಮಾಡಿ ಮುಸ್ಲಿಂ ರಾಷ್ಟ್ರವನ್ನಾಗಿಸುವ ಗುರಿ ಹೊಂದಿರುವ ಎಸ್‌ಡಿಪಿಐ ಜೊತೆ ಹೊಂದಾಣಿಕೆ ಮಾಡಿಕೊಂಡಿರುವ ಕಾಂಗ್ರೆಸ್ ಜೊತೆ ಹೋಗುವುದದೆಂದರೆ ದೇಶದ್ರೋಹ ಮಾಡಿದಂತೆಯೇ.
ಅಂಥ ಪಕ್ಷದಲ್ಲಿ ಗುರುತಿಸಿಕೊಂಡು ಕಾಂಗ್ರೆಸ್ ಸೇರುತ್ತಿರುವ ನಾಯಕರಿಗೆ ಏನು ಹೇಳಬೇಕು. ಕೆಲವೊಂದು ಮಹತ್ವದ ವಿಷಯ ಬಹಿರಂಗ ಪಡಿಸುತ್ತೇನೆ ಎಂದು ಈಗ ಶೆಟ್ಟರ್ ಹೇಳುತ್ತಿರುವುದು, ಹನಿ ನೀರಾವರಿ ಯೋಜನೆಯಲ್ಲಿ ದೊಡ್ಡಮಟ್ಟದ ಭ್ರಷ್ಟಾಚಾರವಾಗಿದೆ ಎಂದು ಓಲೇಕಾರ್ ಹೇಳುತ್ತಿರುವುದು ಕೇವಲ ಬ್ಲ್ಯಾಕ್‌ಮೇಲ್ ಅಷ್ಟೇ ಎಂದು ವಾಗ್ದಾಳಿ ನಡೆಸಿದರು. ಕೆ.ಎಸ್.ಈಶ್ವರಪ್ಪ ಅವರಿಗೂ ಟಿಕೆಟ್ ನಿರಾಕರಣೆ ಮಾಡಲಾಗಿದೆ. ಆದರೂ ಅವರು ಪಕ್ಷ ಸಂಘಟನೆ ಮಾಡಲು ಮುಂದಾಗಿಲ್ಲವೇ? ಎಂದು ಪ್ರಶ್ನಿಸಿದರು. ನಾನು ಪಕ್ಷವನ್ನು ವಿರೋಧಿಸಿ ಎಂದೂ ಮಾತನಾಡಿಲ್ಲ. ನಾನೇನಿದ್ದರೂ ಸೈದ್ಧಾಂತಿಕ ವಿರೋಧದ ಹಿನ್ನೆಲೆಯಲ್ಲಿ ಬಿಜೆಪಿ ಸರ್ಕಾರವನ್ನು, ಮುಖಂಡರನ್ನು ಟೀಕಿಸಿದ್ದೇನೆ. ಆದರೆ, ಅದರ ಜೊತೆ ಪಕ್ಷದ ಹಿತ ಕಾಯುವ ಕೆಲವನ್ನೂ ಮಾಡಿದ್ದೇನೆ ಎಂದು ಯತ್ನಾಳ ಸ್ಪಷ್ಟಪಡಿಸಿದರು.
ಧಾರ್ಮಿಕ ಸ್ಥಳದಲ್ಲಿ ಚುನಾವಣಾ ಪ್ರಚಾರ ನಡೆಸುವಂತಿಲ್ಲ: ಕಲಬುರಗಿ ಡಿಸಿ ಕಟ್ಟಪ್ಪಣೆ
ನೆರೆ ಬಂದಾಗ ನನ್ನ ಮತಕ್ಷೇತ್ರದ ಜನರ ಕಷ್ಟಕ್ಕೆ ರಾಜ್ಯ ಸರ್ಕಾರ ಸ್ಪಂದನೆ ಮಾಡದೇ ಹೋದಾಗ ಹಾಗೂ ವಿಜಯಪುರ ಮಹಾನಗರ ಪಾಲಿಕೆಗೆ ಅನುದಾನ ಕಡಿತಗೊಳಿಸಿದಾಗ ಜನರ ಧ್ವನಿಯಾಗಿ ನಾನು ಆಳುವ ಪಕ್ಷದಲ್ಲಿಯೇ ಇದ್ದರೂ ಬಿಜೆಪಿ ಸಕ್ರಾವನ್ನು ಯಾವುದೇ ಮುಲಾಜಿಲ್ಲದೇ ಟೀಕಿಸಿ, ಆಕ್ರೋಶ ಹೊರಹಾಕಿದ್ದೇನೆ. ಸರ್ಕಾರದ ವೈಫಲ್ಯಗಳನ್ನು ಬಹಿರಂಗವಾಗಿ ಟೀಕಿಸಿದ್ದೇನೆ. ಇದು ನನ್ನ ಕ್ಷೇತ್ರದ ಹಿತ ಕಾಯಲು ನಾನು ಅನುಸರಿಸಿದ ದಿಟ್ಟಕ್ರಮ. ಆದರೆ ಈಗ ಕೆಲವರು ಟಿಕೆಟ್ ಸಿಗಲಿಲ್ಲ ಎಂಬ ಕಾರಣಕ್ಕೆ ಬಿಜೆಪಿಯನ್ನು ತೊರೆದಿರುವುದಷ್ಟೇ ಅಲ್ಲ. ಬಾಯಿಗೆ ಬಂದಂತೆ ಟೀಕೆ ಮಾಡುತ್ತಿದ್ದಾರೆ. ಇದು ಕುಣಿಯಲು ಬಾರದವರು ನೆಲ ಡೊಂಕು ಎಂದಂತಾಗಿದೆ ಎಂದರು.
ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಆಗಿ ಸಾಕಷ್ಟು ಅಧಿಕಾರ ಅನುಭವಿಸಿದವರೆಲ್ಲ ಪಕ್ಷ ಬಿಟ್ಟು ಹೊರಟಿರುವುದು ಸರಿಯಲ್ಲ. ಇಷ್ಟುದಿನ ಎಲ್ಲ ಅಧಿಕಾರ ಅನುಭವಿಸಿ, ಈಗ ನಮಗೆ ಅನ್ಯಾಯವಾಗಿದೆ ಎಂದು ಬೊಬ್ಬಿರಿದು ಕಾಂಗ್ರೆಸ್ ಪಕ್ಷಕ್ಕೆ ಹೋಗುವುದು ನ್ಯಾಯವೇ, ಅವರು ಮರಳಿ ಬಿಜೆಪಿಗೆ ಬರಬೇಕು ಎಂದು ಸಲಹೆ ನೀಡಿದರು. ಹಾಗೆ ನೋಡಿದರೆ ಬಿಜೆಪಿಯಲ್ಲಿ ನನಗೂ ಅನ್ಯಾಯವಾಗಿದೆ. ಉಪಮುಖ್ಯಮಂತ್ರಿ, ಸಚಿವ ಸ್ಥಾನದಿಂದ ನನ್ನನ್ನೂ ವಂಚಿಸಲಾಗಿದೆ. ಬಿಜೆಪಿಯಿಂದ ಉಚ್ಚಾಟಿಸುವ ಬೆದರಿಕೆಯನ್ನೂ ಒಡ್ಡಲಾಗಿತ್ತು. ಆದಾಗ್ಯೂ, ಬಿಜೆಪಿ ನಾಯಕರ ಬಗ್ಗೆ ಹಗುರವಾಗಿ ಮಾತನಾಡಿದರೆ ಸೂಕ್ತ ಉತ್ತರ ನೀಡಬೇಕಾಗುತ್ತದೆ ಎಂದರು.
ಬಿಜೆಪಿಯನ್ನು ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ 130 ಅಭ್ಯರ್ಥಿಗಳು ಆಯ್ಕೆಯಾಗುತ್ತಾರೆ. ಬಿಜೆಪಿ ಸ್ಪಷ್ಟಬಹುಮತದೊಂದಿಗೆ ಸರ್ಕಾರವನ್ನು ರಚಿಸುತ್ತದೆ. ಅನ್ಯ ಪಕ್ಷಗಳಿಂದ ಸ್ಪರ್ಧಿಸಿ ಸೋತವರ ಠೇವಣಿ ಜಪ್ತಿಯಾಗುತ್ತದೆ ಎಂದರು. ಯೋಗಿ ಆದಿತ್ಯನಾಥ ಮಾದರಿಯಲ್ಲಿ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಮತ್ತೆ ಅಸ್ತಿತ್ವಕ್ಕೆ ಬರುತ್ತದೆ. ನಮ್ಮಲ್ಲಿಯೇ ಕೆಲವರು ಮತ ರಾಜಕಾರಣಕ್ಕಾಗಿ ನಮಾಜ್ ಮಾಡಲು ಹೋಗುತ್ತಾರೆ. ಆದರೆ, ಹಿಂದುತ್ವದ ಆಧರದ ಮೇಲೆ ಚುನಾವಣೆಗೆ ಹೋದರೆ ಮಾತ್ರ ಗೆಲುವು ಸಾಧ್ಯವಿದೆ ಎಂಬುದನ್ನು ಅವರು ನೆನಪಿನಲ್ಲಿ ಇಟ್ಟುಕೊಳ್ಳಬೇಕು ಎಂದರು.
ಬ್ಯಾಡಗಿ, ಬಾಗಲಕೋಟೆ ಸೇರಿದಂತೆ ಹಲವಾರು ಭಾಗಗಳಲ್ಲಿ ಪಕ್ಷದ ಪರ ಪ್ರಚಾರ ಮಾಡಲು ನಾನು ಹೋಗುತ್ತಿದ್ದೇನೆ. ಹಾಗಾಗಿ, ನಾನು ಈ ಬಾರಿ ನನ್ನ ಕ್ಷೇತ್ರದಲ್ಲಿ ಸರಳವಾಗಿ ಪ್ರಚಾರ ಮಾಡುವೆ. ಅಬ್ಬರದ ಪ್ರಚಾರವನ್ನೂ ಮಾಡುವುದಿಲ್ಲ, ನಾನು ಮಾಡಿರುವ ಅಭಿವೃದ್ಧಿ ಕಾರ್ಯಗಳೇ ನನಗೆ ಶ್ರೀರಕ್ಷೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ವಿಡಿಎ ಅಧ್ಯಕ್ಷ ಪರಶುರಾಮಸಿಂಗ್ ರಜಪೂತ, ಪಾಲಿಕೆ ಸದಸ್ಯರಾದ ಶಿವರುದ್ರ ಬಾಗಲಕೋಟ, ಕಿರಣ ಪಾಟೀಲ, ಬಿಜೆಪಿ ಮಾಧ್ಯಮ ಪ್ರಮುಖ ವಿಜಯ ಜೋಶಿ ಮುಂತಾದವರು ಇದ್ದರು.
ಮುಗ್ಧ ಮುಸ್ಲಿಮರು ನನ್ನ ಜೊತೆಗಿದ್ದಾರೆ: ನಗರದಲ್ಲಿ ಎದುರಾಳಿ ಬಣದ ನಾಯಕರು ಕಾಂಗ್ರೆಸ್ ಅಭ್ಯರ್ಥಿಯ ವಾಹನ ಉಪಯೋಗಿಸುತ್ತಾರೆ. ನಗರ ಕಾಂಗ್ರೆಸ್ ಅಭ್ಯರ್ಥಿ ಯಾರದ್ದೋ ಜಮೀನು ನುಂಗಿ ನೀರು ಕುಡಿದ್ದಾರೆ. ಅಂಥವರೊಡನೆ ನಮ್ಮ ಎದುರಾಳಿ ಬಣ ಕೈಜೋಡಿಸುತ್ತದೆ. ಇದರಿಂದ ಏನೂ ವ್ಯತ್ಯಾಸ ಆಗುವುದಿಲ್ಲ. ಮುಗ್ಧ ಮುಸ್ಲಿಮರು ನನ್ನ ಜೊತೆ ಇದ್ದಾರೆ. ಕಾಂಗ್ರೆಸ್ ಅಭ್ಯರ್ಥಿಯ ಬಗ್ಗೆ ಮುಸ್ಲಿಮರೇ ಒಲವು ಹೊಂದಿಲ್ಲ, ನನ್ನ ಅವಧಿಯಲ್ಲಿ ಯಾವುದೇ ರೀತಿಯ ಹಿಂದೂ-ಮುಸ್ಲಿಂ ಗಲಾಟೆ ನಡೆದಿಲ್ಲ.
ಪಂಚರತ್ನ ಯೋಜನೆಯೇ ಜೆಡಿಎಸ್ ಅಭ್ಯರ್ಥಿಗಳ ಗೆಲುವಿಗೆ ಸಹಕಾರಿ: ಮಾಲೂರು ಅಭ್ಯರ್ಥಿ ಜಿ.ರಾಮೇಗೌಡ
ಜಾಮೀಯಾ ಮಸೀದಿ ರಸ್ತೆಯಲ್ಲಿ ಉತ್ತಮವಾದ ಅಭಿವೃದ್ಧಿ ಕಾರ್ಯ ಮಾಡಿದ್ದೇನೆ. ಈ ಹಿಂದೆ ಮುಸ್ಲಿಂ ಶಾಸಕರೇ ಅಲ್ಲಿ ಕೆಲಸ ಮಾಡಿರಲಿಲ್ಲ, ವಸತಿ ಸೇರಿದಂತೆ ಹಲವು ಯೋಜನೆಗಳಲ್ಲಿ ಮುಸ್ಲಿಂ ಫಲಾನುಭವಿಗಳು ಕೂಡ ಸಾಕಷ್ಟುಸೌಲಭ್ಯ ಪಡೆದುಕೊಂಡಿದ್ದಾರೆ ಎಂದು ಯತ್ನಾಳ ಹೇಳಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.